ನಿರ್ದೇಶಕ ದಿನೇಶ್‌ ಬಾಬು ಅವರ ಬಹುನಿರೀಕ್ಷಿತ ‘ಧರ್ಮಭೀರು ನಾಡಪ್ರಭು ಕೆಂಪೇಗೌಡ’ ಸಿನಿಮಾಗೆ ಸಂಕಷ್ಟ ಎದುರಾಗಿದೆ. ನಿರ್ದೇಶಕ ನಾಗಾಭರಣ ಈ ಚಿತ್ರತಂಡದ ವಿರುದ್ಧ ಕೋರ್ಟ್‌ ಮೆಟ್ಟಿಲೇರಿದ್ದು, ಸಿನಿಮಾದ ಕೆಲಸಗಳನ್ನು ನಿಲ್ಲಿಸುವಂತೆ ತಾತ್ಕಾಲಿಕ ತಡೆಯಾಜ್ಞೆ ತಂದಿದ್ದಾರೆ.

ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಬಯೋಪಿಕ್‌ ಮಾಡುತ್ತಿರುವ ಬಗ್ಗೆ ಇತ್ತೀಚೆಗೆ ಪ್ರಕಟಣೆಯೊಂದು ಹೊರಬಿದ್ದಿತ್ತು. ಕನ್ನಡ ಸೇರಿದಂತೆ ಇತರೆ ಭಾಷೆಗಳಲ್ಲಿ 50ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿರುವ ದಿನೇಶ್‌ ಬಾಬು ಅವರು ‘ಧರ್ಮಭೀರು ನಾಡಪ್ರಭು ಕೆಂಪೇಗೌಡ’ ಸಿನಿಮಾಗೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಚಿತ್ರತಂಡ ಈ ಸಿನಿಮಾದ ಟೈಟಲ್‌ ಪೋಸ್ಟರ್‌ ಸಹ ರಿಲೀಸ್‌ ಮಾಡಿತ್ತು. ಈಗ ಈ ಸಿನಿಮಾಗೆ ಸಂಕಷ್ಟ ಎದುರಾಗಿದೆ. ನಿರ್ದೇಶಕ ಟಿ ಎಸ್‌ ನಾಗಾಭರಣ ಅವರು ಈ ಚಿತ್ರತಂಡದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ನಿರ್ದೇಶಕ ಟಿ ಎಸ್‍ ನಾಗಾಭರಣ ಅವರೂ ಸಹ ಕೆಂಪೇಗೌಡರ ಜೀವನವನ್ನು ಆಧರಿಸಿ ಸಿನಿಮಾ ಮಾಡುತ್ತಿದ್ದಾರೆ. ನಟ ಧನಂಜಯ ಅವರು ಕೆಂಪೇಗೌಡರ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಚಿತ್ರೀಕರಣಕ್ಕೆ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಹೀಗಾಗಿ ನಾಗಾಭರಣ ಅವರು ‘ಧರ್ಮಬೀರು ನಾಡಪ್ರಭು ಕೆಂಪೇಗೌಡ’ ನಿರ್ಮಿಸುತ್ತಿರುವ ಚಿತ್ರತಂಡದ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರು ದಾಖಲಿಸಿ, ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ‘ಧರ್ಮಭೀರು ನಾಡಪ್ರಭು ಕೆಂಪೇಗೌಡ’ ಶೀರ್ಷಿಕೆ ಅಥವಾ ಸಿನಿಮಾವನ್ನು ಯಾವುದೇ ರೀತಿಯಲ್ಲಿ ಪ್ರಕಟಿಸಬಾರದು ಎಂದು ಕೇಸ್ ಹಾಕಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ‘ಧರ್ಮಭೀರು ನಾಡಪ್ರಭು ಕೆಂಪೇಗೌಡ’ ಚಿತ್ರಕ್ಕೆ ತಾತ್ಕಾಲಿಕವಾಗಿ ತಡೆಯಾಜ್ಞೆ ವಿಧಿಸಿದೆ.

ವೃತ್ತಿಯಲ್ಲಿ ವೈದ್ಯರಾಗಿರೋ ಕಿರಣ್ ತೋಟಂಬೈಲ್ ‘ಧರ್ಮಭೀರು ನಾಡಪ್ರಭು ಕೆಂಪೇಗೌಡ’ ಸಿನಿಮಾ ನಿರ್ಮಾಣದ ಜೊತೆಗೆ ಸಂಗೀತ ಸಂಯೋಜನೆಯ ಜವಾಬ್ದಾರಿ ಹೊತ್ತಿದ್ದಾರೆ. ಸಿನಿಮಾಗೆ ಧರ್ಮೇಂದ್ರ ಕುಮಾರ್ ಅರೇನಹಳ್ಳಿ ಕಥೆ ಬರೆದರೆ, ಛಾಯಾಗ್ರಹಣದ ಜವಾಬ್ದಾರಿ ಸಂಕೇತ್ ಎಂವೈಎಸ್ ಅವರದ್ದು. ವಿ ನಾಗೇಂದ್ರ ಪ್ರಸಾದ್ ಹಾಗೂ ಸಂತೋಷ್ ನಾಯಕ್ ಸಾಹಿತ್ಯ ಬರೆದಿದ್ದಾರೆ.

LEAVE A REPLY

Connect with

Please enter your comment!
Please enter your name here