ಅಜಯ್‌ ದೇವಗನ್‌ ಅಭಿನಯದ ಹಿಂದಿ ಸಿನಿಮಾ ‘ಮೈದಾನ್‌’ ಇಷ್ಟೊತ್ತಿಗೆ ರಿಲೀಸ್‌ ಆಗಿ ಬೆಳ್ಳಿತೆರೆ ಮೇಲೆ ಅಬ್ಬರಿಸಬೇಕಿತ್ತು. ಆದರೆ ಸಿನಿಮಾ ರಿಲೀಸ್‌ ಆಗುವ ಕೊನೆ ಕ್ಷಣದಲ್ಲಿ ದೊಡ್ಡ ಆತಂಕವೊಂದು ಚಿತ್ರತಂಡಕ್ಕೆ ಎದುರಾಗಿದೆ.

ಅಜಯ್‌ ದೇವಗನ್‌ ಅಭಿನಯದ ಬಹುನಿರೀಕ್ಷಿತ ಹಿಂದಿ ಸಿನಿಮಾ ‘ಮೈದಾನ್‌’ ಇಂದು (ಏಪ್ರಿಲ್‌ 10) ಅದ್ಧೂರಿಯಾಗಿ ತೆರೆಕಾಣಬೇಕಿತ್ತು. ಆದರೆ, ಸಿನಿಮಾದ ಚಿತ್ರೀಕರಣ ಆರಂಭವಾದಾಗಿನಿಂದಲೂ ಒಂದಲ್ಲಾ ಒಂದು ಅಡೆತಡೆಗಳು ಚಿತ್ರತಂಡಕ್ಕೆ ಎದುರಾಗುತ್ತಲೇ ಇದೆ. ಹೀಗಾಗಿ ಸಿನಿಮಾ ರಿಲೀಸ್‌ ದಿನಾಂಕ ಮುಂದಕ್ಕೆ ಹೋಗುತ್ತಲೇ ಇದೆ. ಈಗಲೂ ಸಹ ಮೈಸೂರಿನ‌ ಪ್ರಿನ್ಸಿಪಾಲ್ ಡಿಸ್ಟ್ರಿಕ್ಟ್ ಮತ್ತು ಸೆಷನ್ಸ್ ಕೋರ್ಟ್ ‘ಮೈದಾನ್‌’ ಸಿನಿಮಾ ಬಿಡುಗಡೆಗೆ ತಡೆ ನೀಡಿದೆ.

ನಿರ್ಮಾಪಕ ಬೋನಿ ಕಪೂರ್‌ ನಿರ್ಮಿಸಿರುವ ಈ ‘ಮೈದಾನ್‌’ ಚಿತ್ರ ಫುಟ್ಬಾಲ್‌ ಕೋಚ್‌ ಸೈಯದ್ ಅಬ್ದುಲ್ ರಹೀಮ್ ಅವರ ಜೀವನದ ಮೇಲೆ ಹೆಣೆದ ಕತೆಯಾಗಿದೆ. ‘ಮೈದಾನ್’ ಸಿನಿಮಾ ಏಪ್ರಿಲ್ 10ರಂದು ರಿಲೀಸ್ ಆಗಬೇಕಿತ್ತು. ಇದಕ್ಕೂ ಮೊದಲೇ ಸಿನಿಮಾಗೆ ತಡೆ ನೀಡಲಾಗಿದೆ. ​​ಮೂಲ ಕತೆ ಕದ್ದಿದ್ದಾರೆ ಎಂದು ಮೈಸೂರಿನ ಸ್ಟೋರಿ ರೈಟರ್ ಅನಿಲ್ ಕುಮಾರ್ ದೂರು ನೀಡಿದ್ದರು. 2018ರಲ್ಲಿ ಈ ಸಿನಿಮಾದ ಕಥೆಯನ್ನು ಲಿಂಕ್ಡ್‌ ಇನ್‌ನಲ್ಲಿ ಪೋಸ್ಟ್‌ ಮಾಡಿದ್ದು, ಅದನ್ನು ನೋಡಿದ ಸುಖದಾಸ್ ಸೂರ್ಯವಂಶಿ ಎಂಬುವವರು ಚರ್ಚಿಸಿದ್ದರಂತೆ. 2019ರ ಫೆಬ್ರವರಿಯಲ್ಲಿ ಸ್ಕ್ರೀನ್‌ ರೈಟರ್ಸ್‌ ಅಸೋಸಿಯೇಷನ್‌ನಲ್ಲಿ ಈ ಕಥೆಯ ಸಾರಾಂಶ ಮತ್ತು ಹೆಸರನ್ನು​ ನೋಂದಣಿ ಮಾಡಿಸಲಾಗಿದೆ. ತನ್ನ ಮೂಲ ಕಥೆಯನ್ನು ಕದ್ದು ‘ಮೈದಾನ್’ ಎಂದು ಹೆಸರಿಟ್ಟಿದ್ದಾರೆ ಎಂದು ಅನಿಲ್‌ ಕುಮಾರ್‌ ದೂರಿನಲ್ಲಿ ಉಲ್ಲೇಖಿಸಿದ್ದರಂತೆ. ಈ ಸಂಬಂಧ ವಿಚಾರಣೆ ನಡೆಸಿರುವ ಮೈಸೂರು‌, ಮೈದಾನ್ ಚಿತ್ರದ ರಿಲೀಸ್‌ಗೆ ತಡೆ ನೀಡಿ ಆದೇಶ ಕೊಟ್ಟಿದೆ.

ಇನ್ನು ಸಿನಿಮಾ ರಿಲೀಸ್‌ಗೆ ಕೋರ್ಟ್‌ ನೀಡಿರುವ ತಡೆ ಕುರಿತಾಗಿ ಚಿತ್ರತಂಡ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಇನ್ನು ಚಿತ್ರಮಂದಿರಗಳಲ್ಲಿ ಇಂದು (ಏ.10) ಸಂಜೆ 6ರಿಂದ ಚಿತ್ರದ ಶೋಗಳಿಗೆ ಟಿಕೆಟ್‌ ಬುಕ್ಕಿಂಗ್‌ ಓಪನ್‌ ಆಗಿದೆ. ಹೀಗಾಗಿ ಇಂದು ಸಂಜೆಯೊಳಗೆ ತಡೆಯನ್ನು ತೆಗೆಯುವಂತೆ ಚಿತ್ರತಂಡ ಕೋರ್ಟ್​ ಮೆಟ್ಟಿಲೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಅಮಿತ್ ರವೀಂದ್ರನಾಥ್ ಶರ್ಮಾ ನಿರ್ದೇಶನ ಮಾಡಿರುವ ‘ಮೈದಾನ್’ ಚಿತ್ರದಲ್ಲಿ ಪ್ರಿಯಾಮಣಿ, ಗಜರಾಜ್ ರಾವ್ ಮತ್ತು ರುದ್ರನೀಲ್ ಘೋಷ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here