ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದ ಟ್ರೈಲರ್‌ ಬಿಡುಗಡೆಯಾಗಿದೆ. 1960ರ ದಶಕದ ಈ ಕಥೆಗೆ ರೆಟ್ರೊ ಕಾಲದ ಮೆರುಗು ಮೆತ್ತಿಕೊಂಡಿರುವುದನ್ನು ಕಾಣಬಹುದು.

ಮುಂಬೈನ ಕಾಮಾಟಿಪುರದ ಕತ್ತಲ ಜಗತ್ತಿನಲ್ಲಿ ಅಮಾಯಕ ವೇಶ್ಯೆಯೊಬ್ಬಳು ಡಾನ್‌ ಆಗಿ ಬೆಳೆದ ರೋಚಕ ಕಥಾಹಂದರವನ್ನು ಗಂಗೂಬಾಯಿ ಕಾಠಿಯಾವಾಡಿ ಚಿತ್ರವು ಒಳಗೊಂಡಿದೆ. ಗಂಗೂಬಾಯಿಯ ಪಾತ್ರದಲ್ಲಿ ಆಲಿಯಾ ಮಿಂಚಿದ್ದಾರೆ. ಶ್ವೇತವಸ್ತ್ರದಾರಿ ಆಲಿಯಾ ಈ ಟ್ರೈಲರ್‌ನಲ್ಲಿ ವೇಶ್ಯೆ, ಗ್ಯಾಂಗ್‌ಸ್ಟರ್‌, ರಾಜಕಾರಣಿ ಹಾಗೂ ಸಮಾಜಸೇವಕಿಯ ಪಾತ್ರಗಳಲ್ಲಿ ಕಂಡುಬಂದಿದ್ದಾರೆ.

ಕಾಮಾಟಿಪುರದ ಮಹಿಳೆಯರ ಹಕ್ಕು ಹಾಗೂ ಮಕ್ಕಳ ಶಿಕ್ಷಣದ ಬಗ್ಗೆ ಮಾತನಾಡುವ ಆಲಿಯಾ ಪ್ರೇಕ್ಷಕರಲ್ಲಿ ಹೊಸದೊಂದು ಅನುಭವವನ್ನೇ ನೀಡಲಿದ್ದಾರೆ ಎಂಬುದಕ್ಕೆ ಈ ಟ್ರೈಲರ್‌ ಸಾಕ್ಷಿಯಾಗಿದೆ. ಗಂಗೂಬಾಯಿಯ ಸಹಾಯಕ್ಕೆ ನಿಂತಿದ್ದ, ಅಂದಿನ ಡಾನ್‌ ಕರೀಂ ಲಾಲ್‌ ಪಾತ್ರದಲ್ಲಿ ಅಜಯ್‌ ದೇವಗನ್‌ ನಟಿಸಿದ್ದಾರೆ. ಅವರು ಕಾಣಿಸಿಕೊಂಡಿರುವ ಕೆಲವೇ ಕ್ಷಣಗಳಲ್ಲಿ ದೊಡ್ಡದೊಂದು ಕಂಪನವನ್ನೇ ಸೃಷ್ಟಿಸಿದ್ದಾರೆ. ವಿಜಯ್ ರಾಜ್‌ ಅವರು ರಜಿಯಾ ಬಾಯಿ ಪಾತ್ರವನ್ನು ನಿರ್ವಹಿಸಿದ್ದಾರೆ. ಶಾಂತನು ಮಹೇಶ್ವರಿ, ಇಂದಿರಾ ತಿವಾರಿ ಮತ್ತು ಸೀಮಾ ಪಹ್ವಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ತೆರೆ ಮೇಲೆ ವೈಭವವನ್ನು ಸೃಷ್ಟಿಸುವುದಕ್ಕೆ ಹೆಸರುವಾಸಿಯಾಗಿರುವ ಸಂಜಯ್‌ ಲೀಲಾ ಬನ್ಸಾಲಿ ಅವರು ಈ ಚಿತ್ರದಲ್ಲೂ ವೈಭವದ ಹಂಗಿಗೆ ಬಿದ್ದಂತಿದೆ. ಬೃಹದಾಕಾರದ ಸೆಟ್‌ಗಳು, ಮೈನವಿರೇಳಿಸುವ ಹಿನ್ನೆಲೆ ಸಂಗೀತ, ವರ್ಣಮಯ ಭಿತ್ತಿಗಳು ಇಲ್ಲಿಯೂ ಪ್ರವಹಿಸಿವೆ.

ಮುಂಬೈ ಮಾಫಿಯಾ ಕ್ವೀನ್ ಗಂಗೂಬಾಯಿ ಕಾಠಿಯಾವಾಡಿ ಯಾರು ಗೊತ್ತೇ?

ಗಂಗೂಬಾಯಿ ಕಾಠಿಯಾವಾಡಿ ಕುರಿತ ಪ್ರಶ್ನೆಗಳು ಪ್ರೇಕ್ಷಕರಲ್ಲಿ ಕಾಡುವುದು ಸಹಜ. ಈಕೆ ಗುಜರಾತ್‌ನ ಕಾಠಿಯಾವಾಡಿ ಎಂಬ ಊರಿನವಳು. ತಂದೆಯ ಹೆಸರು ಹರಜೀವನದಾಸ್‌. ಅಕೌಂಟೆಂಟ್‌ ಮಗಳಾದ ಗಂಗೂಬಾಯಿಗೆ ಚಿಕ್ಕಂದಿನಿಂದಲೂ ಹಿಂದಿ ಚಿತ್ರರಂಗದೆಡೆಗೆ ಸೆಳೆತವಿರುತ್ತದೆ. ಆ ಸೆಳೆತವನ್ನು ಬೆನ್ನತ್ತಿದ ಗಂಗೂಬಾಯಿ ಇನ್ನೂ ಹದಿನೆಂಟು ತುಂಬುವುದರೊಳಗೆ ವ್ಯಕ್ತಿಯೊಬ್ಬನೊಂದಿಗೆ ಮುಂಬೈ ಮಹಾನಗರಕ್ಕೆ ಪಲಾಯನಗೈಯ್ಯುತ್ತಾಳೆ. ನಂಬಿದ ವ್ಯಕ್ತಿಯು ಗಂಗೂಬಾಯಿಯನ್ನು ಕಾಮಾಟಿಪುರವೆಂಬ ತೃಷೆಯ ಸಮುದ್ರಕ್ಕೆ ಎಸೆದು ಹೋಗಿಬಿಡುತ್ತಾನೆ. ಕೇವಲ ₹ 500ಕ್ಕೆ ವೇಶ್ಯಾಗೃಹವೊಂದಕ್ಕೆ ಮಾರಾಟವಾಗುತ್ತಾಳೆ ಗಂಗೂಬಾಯಿ.

ಬೇಡವಾದ ವೇಶ್ಯಾವೃತ್ತಿಗೆ ಗಂಗೂಬಾಯಿ ಅನಿವಾರ್ಯವಾಗಿ ತೆರೆದುಕೊಳ್ಳುತ್ತಾಳೆ. ಪಾತಕ ಲೋಕದ ಬಹುತೇಕ ವ್ಯಕ್ತಿಗಳು ಈಕೆಯ ಗ್ರಾಹಕರಾಗಿರುತ್ತಾರೆ. 1960ರ ದಶಕದಲ್ಲಿ ಗ್ಯಾಂಗ್‌ಸ್ಟರ್‌ನಿಂದ ಗಂಗೂಬಾಯಿ ಪದೇಪದೇ ಅತ್ಯಾಚಾರಕ್ಕೆ ಒಳಗಾಗುತ್ತಾಳೆ. ದೈಹಿಕ ಹಿಂಸೆ ಅನುಭವಿಸುತ್ತಾಳೆ. ಮಾನಸಿಕವಾಗಿ ಜರ್ಜರಿತವಾಗುತ್ತಾಳೆ. ಆಗಲೇ ಅವಳು, ಡಾನ್‌ ಕರೀಂ ಲಾಲ್‌ನನ್ನು ಭೇಟಿಯಾಗಿ ತನ್ನ ನೋವನ್ನು ಹೇಳಿಕೊಳ್ಳುತ್ತಾಳೆ. ಆಗ ಕರೀಂ ಲಾಲ್‌ನಿಂದ ಸಹಾಯ ದೊರಕುತ್ತದೆ. ಡಾನ್‌ ಒಬ್ಬ ಆಕೆಯ ಬೆನ್ನಿಗೆ ನಿಲ್ಲುತ್ತಾನೆ. ಅವರಿಬ್ಬರ ನಡುವೆ ಸಹೋದರ ಸಂಬಂಧ ಬೆಳೆಯುತ್ತದೆ. ಗಂಗೂಬಾಯಿ ಆತನಿಗೆ ‘ರಾಕಿಬಾಯಿ’ ಎಂದೇ ಕರೆಯುತ್ತಿದ್ದಳಂತೆ.

ಭೂಗತ ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದ ಕರೀಂ ಲಾಲ್‌ ಕಾಮಾಟಿಪುರದ ವ್ಯವಹಾರಗಳನ್ನು, ವ್ಯಾಜ್ಯಗಳನ್ನು ನೋಡಿಕೊಳ್ಳಲು ಗಂಗೂಬಾಯಿಗೆ ಹೇಳುತ್ತಾನೆ. ಕಾಮಾಟಿಪುರದ ಉಸ್ತುವಾರಿಯನ್ನೇ ಆಕೆಗೆ ವಹಿಸಿಬಿಡುತ್ತಾನೆ.

ರೀಲ್‌ ಮತ್ತು ರಿಯಲ್‌ ಗಂಗೂಭಾಯಿ ಕಾಠಿಯಾವಾಡಿ

ಪ್ರೇಮಿಸಿದ ವ್ಯಕ್ತಿಯ ವಂಚನೆಯಿಂದಾಗಿ ವೇಶ್ಯೆಯಾಗಿದ್ದ ಯುವತಿಯೊಬ್ಬಳು ‘ಮುಂಬೈ ಮಾಫಿಯಾದ ಕ್ವೀನ್‌’ ಆಗಿ ಬದಲಾಗುತ್ತಾಳೆ. ಕೇವಲ ಭೂಗತ ವ್ಯವಹಾರಗಳಿಗೆ ಸೀಮಿತವಾಗಿರದೇ ಗಂಗೂಭಾಯಿ ಸಮಾಜಸೇವಕಿಯಾಗಿ ಬದಲಾಗುತ್ತಾಳೆ. ಕಾಮಾಟಿಪುರದ ಮಹಿಳೆಯರ ಭದ್ರತೆ, ಮಕ್ಕಳ ಶಿಕ್ಷಣ ಹಾಗೂ ಬದುಕುವ ಹಕ್ಕುಗಳಿಗಾಗಿ ಹೋರಾಡುತ್ತಾಳೆ. ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಳ್ಳುತ್ತಾಳೆ. ವೇಶ್ಯಾವಾಟಿಕೆ ನಿರ್ಮೂಲನೆ, ಅನಾಥ ಮಕ್ಕಳ ರಕ್ಷಣೆಗೆ ತನ್ನನ್ನು ತಾನು ಮುಡಿಪಾಗಿಡುತ್ತಾಳೆ. ವೇಶ್ಯೆಯಾಗಿದ್ದ ಗಂಗೂಬಾಯಿ ನಾಯಕಿಯಾಗಿ ಬೆಳೆದುನಿಲ್ಲುತ್ತಾಳೆ.

ಕಾಮಾಟಿಪುರದ ಲೈಂಗಿಕ ವ್ಯವಹಾರಗಳಲ್ಲಿ ತೊಡಗಿಕೊಂಡಿರುವ ಸಾವಿರಾರು ಕಾರ್ಯಕರ್ತೆಯರ ಬಳಿ ಇಂದಿಗೂ ಗಂಗೂಬಾಯಿಯ ಫೋಟೊಗಳಿವೆ. ಇದೇ ಪ್ರದೇಶದಲ್ಲಿ ತಮ್ಮ ನೆಚ್ಚಿನ ನಾಯಕಿಯ ಪ್ರತಿಮೆಯನ್ನೂ ಅವರು ಸ್ಥಾಪಿಸಿದ್ದಾರೆ.

ಖ್ಯಾತ ಪತ್ರಕರ್ತ ಹುಸೇನ್‌ ಜೈದಿ ಪುಸ್ತಕದಲ್ಲಿ ಗಂಗೂಬಾಯಿಯ ಚರಿತ್ರೆ

‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರವು ಹುಸೇನ್‌ ಜೈದಿ ಅವರ ಪುಸ್ತಕವನ್ನು ಆಧರಿಸಿದೆ. ‘ಮಾಫಿಯಾ ಕ್ವೀನ್ಸ್‌ ಆಫ್‌ ಮುಂಬೈ’ ಪುಸ್ತಕದಲ್ಲಿ ಗಂಗೂಬಾಯಿ ಜೀವನ ವೃತ್ತಾಂತವಿದೆ. ಜೈದಿ ಅವರು ‘ಬ್ಲ್ಯಾಕ್‌ ಫ್ರೈಡೇ’, ‘ದೊಂಗ್ರಿ ಟು ದುಬೈ’, ‘ಬೈಕುಲ್ಲಾ ಟು ಬ್ಯಾಂಕಾಕ್‌’ ಪುಸ್ತಕಗಳನ್ನು ರಚಿಸಿದ್ದಾರೆ. ಇವರ ಪುಸ್ತಕಗಳ ಆಧರಿಸಿ ‘ಬ್ಲ್ಯಾಕ್‌ ಫ್ರೈಡೇ’ ಮತ್ತು ‘ಶೂಟ್‌ ಔಟ್‌ ಎಟ್‌ ವಡಾಲಾ’ ಸಿನಿಮಾಗಳು ಈಗಾಗಲೇ ಮೂಡಿಬಂದಿವೆ.

ಕಾಮಾಟಿಪುರದ ವೇಶ್ಯೆಯರ ಜೊತೆ ಕಾಲ ಕಳೆದ ಆಲಿಯಾ

ಗಂಗೂಬಾಯಿಯ ಪಾತ್ರದಲ್ಲಿ ನಟಿಸುವುದಕ್ಕೂ ಮುನ್ನ ನಟಿ ಆಲಿಯಾ ಭಟ್‌ ಅವರು ಕಾಮಾಟಿಪುರದ ವೇಶ್ಯೆಯರ ಜೊತೆ ಒಡನಾಡಿದ್ದಾರೆ. ಅವರೊಂದಿಗೆ ಸಮಯ ಕಳೆದಿದ್ದಾರೆ. ಅಲ್ಲಿನ ಭೂಗತ ವ್ಯವಹಾರಗಳು, ವೇಶ್ಯಾವೃತ್ತಿಯ ಸಂಕಷ್ಟಗಳು, ಅಭದ್ರ ಜೀವನ ಶೈಲಿ, ಲೈಂಗಿಕ ಕಾರ್ಯಕರ್ತೆಯರ ಭಾಷೆ, ಮಾತು, ದೈಹಿಕ ನಡುವಳಿಕೆಗಳ ಬಗ್ಗೆ ಆಲಿಯಾ ಸಮೀಪದಿಂದ ಗಮನಿಸಿದ್ದಾರೆಂದು ವರದಿಯಾಗಿದೆ.

ಇದು ಅಪ್ಪಟ ಬನ್ಸಾಲಿ ಚಿತ್ರ…

ಇತಿಹಾಸದ ಸಾಗರದಲ್ಲಿ ಬೆಚ್ಚಗೆ ಮಲಗಿರುವ ಅಲೆಗಳನ್ನು ಬಡಿದೆಬ್ಬಿಸಲು ಬನ್ಸಾಲಿಯಂತಹ ನಿರ್ದೇಶಕರು ತವಕಿಸುತ್ತಲೇ ಇರುತ್ತಾರೆ. ಈ ತವಕದಿಂದ ಮಿಳಿತವಾದ ತಂತ್ರವನ್ನೇ ಗಂಗೂಬಾಯಿ ಚಿತ್ರದಲ್ಲೂ ಬನ್ಸಾಲಿ ಬಳಸಿಕೊಂಡಿದ್ದಾರೆ ಎಂಬುದಂತೂ ಮತ್ತೊಮ್ಮೆ ಸಾಬೀತಾಗಿದೆ. ಫೆಬ್ರುವರಿ 25ರಂದು ‘ಗಂಗೂಬಾಯಿ ಕಾಠಿಯಾವಾಡಿ’ ತೆರೆಗೆ ಬರಲಿದೆ. ಪ್ರತಿಷ್ಠಿತ ಬರ್ಲಿನ್‌ ಅಂತರರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ ಈ ಚಿತ್ರವನ್ನು ಪ್ರದರ್ಶಿಸಲಾಗುತ್ತದೆ. ಸಂಜಯ್‌ ಲೀಲಾ ಬನ್ಸಾಲಿ ಮತ್ತು ಡಾ.ಜಯಂತಿಲಾಲ್‌ ಗಾಡಾ ಚಿತ್ರವನ್ನು ನಿರ್ಮಿಸಿದ್ದಾರೆ.

LEAVE A REPLY

Connect with

Please enter your comment!
Please enter your name here