ಪ್ರತಿಮೆಗಳಲ್ಲಿ, ತುಂಬಾ ಮನಕ್ಕೆ ತಟ್ಟುವುದು ಶಿವನ ಪಾತ್ರ, ಹರಿಯ ಪಾತ್ರ, ಕೊನೆಗೆ you dig your own grave ಅನ್ನುವ metaphor ಕೂಡ, ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ‘ಗರುಡ ಗಮನ ವೃಷಭ ವಾಹನ’ ಸಿನಿಮಾ ಕುರಿತ ಶೈಲಜಾ ಸಂತೋಷ್‌ ಅವರ ವಿಶ್ಲೇಷಣೆ.

“ಆ ಸಿನೆಮಾ ನೋಡುದು ಬೇಡ, ಬರೀ ಪೆಟ್ಟು ಎಂಥ ಸಾವು ಮಾರಾಯರೇ” ಅಂದವರು ಒಬ್ರು. “ನೀವು ನೋಡುದಲ್ಲ, ಅದು ಪೊಟ್ಟು ಸಿನೆಮಾ ಬರೀ ಕೊಳಕು ಭಾಷೆ, ಕಥೆ ಇಲ್ಲ” ಅಂತ ಅಂದ್ರು ಇನ್ನೊಬ್ರು. ಈ ಪೆಟ್ಟು ಮತ್ತು ಪೊಟ್ಟು ಶಬ್ದಗಳ ಅರ್ಥ ಹುಡುಕುವಾಗ ಬಂತು ನನ್ನ ಅತ್ಯಾಪ್ತ ವಿದ್ಯಾರ್ಥಿನಿಯ ಕರೆ. ಮಾತು  ಸಿನೆಮಾ ಕಡೆ ಹೊರಳಿದಾಗ, “ಏನನ್ನಾದರೂ ಮಿಸ್ ಮಾಡಿ, ಈ ಸಿನೆಮಾವನ್ನಲ್ಲ. ಅಥೆಂಟಿಕ್ ಮಂಗಳೂರು ಜೀವನ ತೋರಿಸೋ ರಿಯಲಿಸ್ಟಿಕ್ ಸಿನೆಮಾ, ನೋಡಲೇಬೇಕು ನೀವು” ಅನ್ನೋ ಒತ್ತಾಯ.  ಬುದ್ಧಿವಂತೆ ಹುಡುಗಿ, ಸತ್ಯ ಹೇಳಿರ್ತಾಳೆ ಅನ್ನೋ ನನ್ನ ನಂಬಿಕೆ. ಆದ್ರೂ ನೋಡಬೇಕಾ, ಬೇಡ್ವಾ, ದ್ವಂದ್ವದಲ್ಲೆ ಸಿನೆಮಾ ನೋಡೋಕೆ ಹೋದೆ.

ಯಾವ ರೀತಿಯಲ್ಲೂ ಆಕರ್ಷಣೆ ಹುಟ್ಟಿಸದ ಹೀರೋ, ತೀರ ಸಾಮಾನ್ಯವಾಗಿರುವ ಒಂದು ಶರ್ಟ್, ಪಂಚೆ ಹಾಕಿಕೊಂಡು, ಇಷ್ಟುದ್ದ ಟ್ರಿಮ್ ಮಾಡಿರದ ಕೆಟ್ಟದಾಗಿ ಬೆಳೆಸಿದ ಗಡ್ಡ ಇಟ್ಟುಕೊಂಡ, ಬೋಳು ತಲೆಯ ಈ ಕಡ್ಡಿ ಪೈಲ್ವಾನ್, ಕಾಲಿಗೊಂದು ಚಪ್ಪಲಿ ಇಲ್ದೆ ಇದ್ರೂ, ಹೀರೋ ಇಮೇಜ್ ಇಲ್ದೆ ಇದ್ರೂ, ಹೀರೋಯಿನ್ ಇಲ್ಲದೆ ಇದ್ರೂ ಪ್ರತಿ ಫ್ರೇಮ್‌ನಲ್ಲೂ ಈ ಪಾಟಿ ಕಣ್ಣು ಒದ್ದೆ ಆಗೋ ಥರ ಕಥೆ ಬರೆದು, ನಿರ್ದೇಶನ ಮಾಡಿ, ಅಭಿನಯ ಮಾಡಿ ಹೃದಯವನ್ನ, ಕಣ್ಣುಗಳನ್ನು, ಆರ್ದ್ರವನ್ನಾಗಿಸಿ, ಥಿಯೇಟರ್‌ನಿಂದ ಹೊರಬಂದಾಗ ಪಕ್ಕದಲ್ಲಿ ಹಾದು ಹೋದ ಒಂದು ಬೈಕ್ ಶಬ್ದಕ್ಕೆ, ಒಮ್ಮೆ ಬೆಚ್ಚಿ ಬೀಳುವಂತೆ ಮಾಡಿದ ಸಿನೆಮಾ ಅಂದ್ರೆ ಅಬ್ಬಬ್ಬಾ ಇದಪ್ಪಾ ಅನ್ನಿಸಿಬಿಡ್ತು. ಹೌದು… ನಾನು ಹೇಳ್ತಿರೋದು ರಾಜ್ ಶೆಟ್ಟಿ ಅನ್ನೋ ಅಪ್ಪಟ ದೇಸಿ ದೈತ್ಯ ಕನ್ನಡ ಪ್ರತಿಭೆಯ ‘ಗರುಡ ಗಮನ ವೃಷಭ ವಾಹನ’ ಸಿನೆಮಾ ಬಗ್ಗೆ.

ಟೈಟಲ್ ಹೇಳೋ ತರ ಇದು ಹರಿ ಮತ್ತು ಶಿವನ ಕಥೆ.  ಕಪಟ ನಾಟಕ ಸೂತ್ರಧಾರಿ ಹರಿಯೂ, ಅವನ ಸಂರಕ್ಷಣೆಗೆ  ಪ್ರತಿ ಭಾರಿಯೂ ಧಾವಿಸುವ ಲಯಕರ್ತ ಶಿವನ ಕಥೆ. ಬಾಲ್ಯದಲ್ಲಿ ನಡೆದ ಅನಾಹುತಗಳ ದಾಳಿಯಿಂದ ಒಬ್ಬರಿಗೊಬ್ಬರು ಆತುಗೊಂಡು ಬೆಳೆದರೂ, ದೊಡ್ಡವರಾದ ಮೇಲೆ, ಶಿವ ವಿಚಕ್ಷಣ, ಕಲ್ಲು ಹೃದಯಿ, ಕೊಲೆ ಪಾತಕಿ. ಹರಿ, ಈ ಕೊಲೆ ಪಾತಕಿಯನ್ನು ಹದ್ದು ಬಸ್ತಿನಲ್ಲಿಟ್ಟು, ಜೊತೆಗೆ ಸಾಗುವ ಜೊತೆಗಾರ. ರಾಜ್ ಶೆಟ್ಟಿಯ ಈ ಕಥೆ ಯಾಕೆ ವಿಭಿನ್ನವಾಗಿದೆ ಅಂದ್ರೆ, ಈ ಸಿನೆಮಾದ ಕಥೆ ಭೂಗತ ಜಗತ್ತಿನ ಕಥೆ ಅಲ್ಲ, ಒಂದು ಕೊಲೆಯ ಸುತ್ತ ಹೆಣೆದ ಥ್ರಿಲ್ಲರ್ ಇದಲ್ಲ. ಇಲ್ಲಿ ಬಾಲ್ಯದಲ್ಲಿ ಕ್ರೌರ್ಯ ಅನುಭವಿಸಿದ, ತಿರಸ್ಕಾರ ಮತ್ತು ನಿರಾಕರಣೆಗೆ ಒಳಗಾಗಿ, ತೀವ್ರ ಅನಾಥ ಪ್ರಜ್ಞೆ, ಏಕಾಂಗಿತನ, ಕೀಳರಿಮೆ, ನೋವು, ಸೋಲು, ಹತಾಶೆ, ಜಿಗುಪ್ಸೆ ಅನುಭವಿಸುತ್ತಾ, ಇಡೀ ಪ್ರಪಂಚದಲ್ಲಿ ತನ್ನವರು ಯಾರೂ ಇಲ್ಲದೆ ಒಂಟಿತನವನ್ನ ಅನುಭವಿಸುವ ಒಬ್ಬ ಬಾಲಕ, ಹೆಸರಿಲ್ಲದ ಶಿವ ಮತ್ತು ಅವನ ಹೃದಯವನ್ನು ಸ್ಪರ್ಶಿಸಿ, ಕರುಣೆ, ಪ್ರೀತಿಯಿಂದ ಕೈ ಹಿಡಿಯುವ ಹರಿ ಈ ಕಥೆಯ ಕೇಂದ್ರ ಬಿಂದುಗಳು. ಇದು ಇವರಿಬ್ಬರ ಬದುಕಿನಲ್ಲಿ ಸಂಭವಿಸುವ ತಿರುವುಗಳು, ಅರಳುವ ಮುನ್ನ ಬಾಡುವ ಬದುಕಿನಲ್ಲಿ ನಡೆಯುವ ಘಟನಾವಳಿಗಳ ಸುತ್ತ ಹೆಣೆದ ಕಥೆ. ಈ ಕಥೆ ಒಂದೆಡೆ, ಪ್ರೀತಿ, ಸ್ನೇಹ, ಪ್ರಾಮಾಣಿಕತೆ, ವಿವೇಕ, ಪಾಪ ಪ್ರಜ್ಞೆ, ನಂಬಿಕೆಯನ್ನೂ, ಇನ್ನೊಂದೆಡೆ, ಮೋಸ, ಕಪಟತನ, ವಂಚನೆ, ಮದ, ಮೋಹ, ಗರ್ವ, ದುರ್ಬಲತೆ, ಅಹಂ ಮೊದಲಾದ ಮಾನವ ಭಾವನೆಗಳನ್ನೂ, ಮೌಲ್ಯಗಳನ್ನೂ ಒರೆಗೆ ಹಚ್ಚಿ, ಕಲ್ಲಿನಂತಹ ಮನುಷ್ಯನ ಒಳಗೆ ಹೃದಯವನ್ನೂ, ಮೃದು ಹೃದಯದೊಳಗೆ ಅಡಗಿರುವ ರಕ್ಕಸತನವನ್ನೂ, ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸುತ್ತಾ, ಪೂರಕ ಎಂಬಂತೆ ಭೂಗತ ಜಗದ ಕಥಾ ಹಂದರವನ್ನು ಸೃಷ್ಟಿ ಮಾಡಿಕೊಳ್ಳುತ್ತಾ ಮುಂದೆ ಸಾಗುತ್ತದೆ.

ಹಾಗಂತ, ಶಿವನಂತೆ ಬಾಲ್ಯದಲ್ಲಿ ಕ್ರೌರ್ಯಕ್ಕೆ ತುತ್ತಾದ ಮಕ್ಕಳೆಲ್ಲ ಕೊಲೆಗಡುಕರು, ಸಮಾಜ ಬಾಹಿರ ಚಟುವಟಿಕೆಗಳಲ್ಲೇ ಜೀವನ ಸಾಗಿಸುತ್ತಾರೆ ಅನ್ನುವಂತಿಲ್ಲ. ನಮ್ಮ ದೇಶದಲ್ಲಿ ಒಂದು ಅಂದಾಜಿನಂತೆ ಸರಿ ಸುಮಾರು 400,000ಕ್ಕೂ ಹೆಚ್ಚು ಮಕ್ಕಳು ಬೀದಿ ಮಕ್ಕಳು. ಇವೆಲ್ಲ ಮಕ್ಕಳೂ ಶೋಷಿತರು. ಇವರ ಬದುಕು ಹಕ್ಕುಗಳೆ ಇರದ ಕತ್ತಲೆಯ ಕೂಪ. ತಮಗಾದ ಅನ್ಯಾಯವನ್ನು ಅವಡುಗಚ್ಚಿ ಸಹಿಸಿ ಬೆಳೆಯುವ, ಒಡಲಲ್ಲಿ ರೋಶಾಗ್ನಿಯ ಪರ್ವತವನ್ನೇ ಬಚ್ಚಿಟ್ಟುಕೊಂಡು ಬೆಳೆಯುವ ಈ ಹೆಸರೇ ಇಲ್ಲದ ಶಿವ ಮತ್ತು ಶಿವೆಯರು ಮುಂದೆ ಕ್ರಿಮಿನಲ್ಸ್ ಆಗ್ತಾರ… ಅಥವಾ ಆಗುತ್ತಾರೆ ಮುಂತಾದ ಅಂಶಗಳು ನಮ್ಮ ಊಹೆಗೂ ನಿಲುಕದ್ದು. ಕ್ರಿಮಿನಲ್ ಸೈಕಾಲಜಿ ಮತ್ತು ಸೋಶಿಯಾಲಜಿ ತಜ್ಞರ ಹತ್ತೆಂಟು ಸಿದ್ದಾಂತಗಳಿಗೂ ಈ ವಿಷಯದಲ್ಲಿ  ಒಂದು ತಾರ್ಕಿಕ ಒಪ್ಪಂದಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಇಂತಹ ದುರ್ಬಲರ ಮನಸ್ಥಿತಿಯ ಬಗ್ಗೆ ರಾಜ್ ಶೆಟ್ಟಿ ಅವರಿಗೆ ಆಸಕ್ತಿ ಇದೆ, ಅವರ ಓದು ಮತ್ತು ಅಧ್ಯಯನ ಬಹಳ ಸಹಾಯ ಮಾಡಿದೆ ಅನ್ನೋದು ಸಿನೆಮಾ ನೋಡಿದಾಗ ತಿಳಿಯುತ್ತೆ. ಹೇಳಿ ಕೇಳಿ ಅವರು, ಪ್ರತಿಷ್ಠಿತ ರೋಷಿನಿ ನಿಲಯದ ಸೋಷಿಯಲ್ ವರ್ಕ್ ಪದವೀಧರರು. ಈ ಪ್ರಬಲವಾದ ಹಿನ್ನೆಲೆ ಸಾಕು, ಈ ವಿಭಿನ್ನ ಸಂವೇದನೆಯ ಚಿತ್ರ ರೂಪುಗೊಳ್ಳಲು ಸಾಧ್ಯವಾಗಿದೆ ಅನ್ನಲು.

ಕರಾವಳಿಯಲ್ಲಿ, ಯಕ್ಷಗಾನ, ಹುಲಿವೇಷ, ದೈವ ಮತ್ತು ದೇವಸ್ಥಾನಗಳು, ಚಂಡೆ ವಾದನ, ಭೂತದ ಕೋಲಗಳು, ಭಜನೆ, ಕಂಬಳ, ಕ್ರಿಕೆಟ್ ಆಟ ಒಂದೇ ಎರಡೇ. ಜನ ಜೀವನದಲ್ಲಿ ಹಾಸು ಹೊಕ್ಕಾದ, ಜನಪದೀಯ ಅಂಶಗಳನ್ನು ಒಳಗೊಂಡ, ಪೌರಾಣಿಕ ಕಥೆಗಳ ಒಳಗೆ ಅಡಕ ವಾಗಿರುವ, ಹೇರಳವಾಗಿ ಈ ಕಲಾ ಪ್ರಾಕಾರಗಳಲ್ಲಿ ಲಭ್ಯವಿರುವ, ಪ್ರತಿಮೆಗಳ ಬಳಕೆ ಈ ಚಿತ್ರದ ವಿಶೇಷತೆ. ಇವೆಲ್ಲವನ್ನೂ ಬಳಸಿಕೊಂಡ ರೀತಿ ಅದ್ಭುತ. ಎಲ್ಲಿಯೂ ಅತಿರೇಕವಿಲ್ಲ. ಭೂಗತ ಜಗದ ಚಿತ್ರವಿಚಿತ್ರ ಪಾತ್ರಗಳು, ಅತೀ ಶ್ರೀಮಂತಿಕೆ, ಪಾತ್ರಕ್ಕೆ ಒಪ್ಪದ ಭಾಷೆ, ಅತಿರೇಕದ ಕಿರುಚಾಟ, ಪೊಲೀಸ್ ಹೆಸರಿನಲ್ಲಿ ಬೂಟಾಟಿಕೆ, ಹಾಸ್ಯದ ಹೆಸರಿನ ಅಪಹಾಸ್ಯ ಯಾವುದೂ ಇಲ್ಲ, ಆದರೆ, ಪ್ರತಿ ಪಾತ್ರದಲ್ಲಿ, ಸೂಕ್ಷ್ಮ ಸಂವೇದನೆ,  ಭೂಗತ ಜಗತ್ತಿನ  ಭಯ ಮಿಶ್ರಿತ ಬದುಕಿನ ಅನಿಶ್ಚಿತತೆ, ಸೋಲು, ಕಳವಳ, ಮಾಡಿದ ಪಾಪ ಕಳೆದು ಕೊಳ್ಳಬೇಕೆನ್ನುವ ಹಪಾ ಹಪಿತನ, ಒಳ್ಳೆಯವನಾಗಬೇಕು ಅಂದುಕೊಳ್ಳುವ ದೂರದ ಕನಸು, ಭದ್ರತೆಯ ಆಸೆ, ಕುಟುಂಬ ರಕ್ಷಣೆಯ ಕಳವಳ.. ಹೀಗೆ ಪ್ರತಿ ಪಾತ್ರದ ಭಾವನೆಗಳಿಗೆ ನ್ಯಾಯ ಒದಗಿಸಿರುವುದು ನಿರ್ದೇಶಕನ ಜಾಣ್ಮೆ.

ಪ್ರತಿಮೆಗಳಲ್ಲಿ, ತುಂಬಾ ಮನಕ್ಕೆ ತಟ್ಟುವುದು ಶಿವನ ಪಾತ್ರ, ಹರಿಯ ಪಾತ್ರ, ಕೊನೆಗೆ you dig your own grave ಅನ್ನುವ metaphor ಕೂಡ, ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಇಲ್ಲಿ ಪ್ರತಿ ಕಲಾವಿದ ಕೂಡ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆದ್ರೆ ಪ್ರತೀ ಫ್ರೇಮ್ ನಲ್ಲೂ, ರಿಷಭ್ ಶೆಟ್ಟಿ ಮತ್ತು ರಾಜ್ ಶೆಟ್ಟಿ, ತಮ್ಮ ಅಭಿನಯದಿಂದ ಪ್ರೇಕ್ಷಕರನ್ನು ಆವರಿಸಿಕೊಂಡು ಬಿಡ್ತಾರೆ. ಯಾವುದೇ ಚಿತ್ರದ ಜೀವಾಳ, ಸಶಕ್ತ ಹಿನ್ನೆಲೆ ಸಂಗೀತ. ಇಲ್ಲಿ ಅನಾವಶ್ಯಕ ಮಾತೇ ಇಲ್ಲ. ನಿಶ್ಯಬ್ಧ ಮತ್ತು ಶಬ್ದಗಳ ನಡುವೆ, ಒಂದು ಸೀನ್ ಆರಂಭಗೊಳ್ಳುವ ಮೊದಲೇ ಪ್ರೇಕ್ಷಕನ ಮನದಲ್ಲಿ ಫಿಯರ್ psychosis ಹುಟ್ಟಿಸಲು ಮಿಧುನ್ ಮುಕುಂದನ್ ಸಮರ್ಥರಾಗಿದ್ದಾರೆ. ಹೊಂದದ, ಅತಿರೇಕದ ಸಂಗೀತವನ್ನು ಬಳಸದೆ, ಕರಾವಳಿಯಲ್ಲಿ ಎಲ್ಲೆಲ್ಲೂ ಕೇಳುವ ಭಕ್ತಿ ಸಂಗೀತವನ್ನೆ ಅಲ್ಲಲ್ಲಿ ಬಳಸಿಕೊಂಡಿದ್ದು  ಕೂಡ ವಿಶೇಷ ಪ್ರಯತ್ನ.

ಕರಾವಳಿಯಲ್ಲಿ ಹಾಗಾದ್ರೆ ಐದು ನಿಮಿಷ ಬಸ್ ಹೊರಡಲು ತಡವಾಗಿದ್ದಕ್ಕೆ ಕಂಡಕ್ಟರ್‌ಗೆ ಹೊಡೀತಾರ? ಒಂದು ಕ್ರಿಕೆಟ್ ಆಟ ದ್ವೇಷದ ಪ್ರತೀಕಾರದ ಮೈದಾನವೆ? ಕೇಬಲ್ ಮಾಫಿಯಾ ಹೀಗೂ ಇದೆಯಾ, ಅರೆರೆ ಹುಲಿ ವೇಷದ ಹಿಂದೆ ಕೆಟ್ಟ ಹಫ್ತಾ ಪ್ರಕರಣಗಳಿವೆಯೇ? ಒಬ್ಬ ಕರ್ತವ್ಯದ ಮೇಲಿರುವ ಪೊಲೀಸ್ ಅಧಿಕಾರಿಗೆ ಶಾಸಕ ಹೊಡೀತಾನಾ? ನಮ್ಮ ಜೈಲಿನ ಅವ್ಯವಸ್ಥೆ ಹೀಗಾ? ಕರಾವಳಿಯಲ್ಲಿ ಇಷ್ಟೊಂದು ಡ್ರಗ್ಸ್ ಇದೆಯಾ? ಕೆಲಸವಿಲ್ಲದೆ ಅಲೆಯುತ್ತ, ಕಾಟ ಕೊಡುವ ಪುಂಡರು ಇಷ್ಟು ಜನರೇ….  ಇದು ಬರೀ ಕರಾವಳಿಯ ನಗ್ನ ಸತ್ಯ ಅಲ್ಲ. ಇದು ಪ್ರತಿ ಹಳ್ಳಿಗೂ, ಪಟ್ಟಣಕ್ಕೂ ಇಂದು ಅಂಟಿಕೊಳ್ಳುತ್ತಾ ಇರುವ ಮನುಷ್ಯ ರ ವರ್ತನೆಗಳ ಮೊತ್ತ, ಶಾಪ. ದಾಸರ ‘ಹುಟ್ಟಿ ಸಲೆ ಬೇಡ ಇನ್ನೂ, ಪುಟ್ಟಿ ಸಿದಕೆ ಪಾಲಿಸಿನ್ನು, ಇಷ್ಟು ಮಾತ್ರ ಬೇಡಿಕೊಂಬೆ ಶ್ರೀ ಕೃಷ್ಣ’… ಹಾಡು ಯಾಕೋ ನೆನಪಾಯ್ತು. ಕಣ್ಣುಗಳು ತೇವವಾದ ಕ್ಷಣಗಳು…

If not anything, ಶಿವನ ಹುಲಿ ವೇಷದ ಕುಣಿತ ಒಂದು ಸಾಕು ಈ ಸಿನೆಮಾ ನೋಡಲು.! ಅಥವಾ ಕೊನೆಯಲ್ಲಿ ರಾಜ್ ಶೆಟ್ಟಿ ನೀಡುವ ಒಂದು ಸೋಷಿಯಲ್ ಮೆಸೇಜ್‌ಗಾಗಿ ಈ ಸಿನೆಮಾ ನೋಡಿ. ನಾವು ನಮ್ಮ ಮಕ್ಕಳನ್ನು ಎಂತಾ ವಾತಾವರಣದಲ್ಲಿ, ಎಂತಾ ಪರಿಸ್ಥಿತಿಯಲ್ಲಿ ಬೆಳೆಸುತ್ತಿದ್ದೇವೆ… ಈ ಪ್ರಶ್ನೆ ಹೊತ್ತು ಹೊರ ಬಂದಾಗ ಮನಸ್ಸು ಭಾರವಾಗಿತ್ತು. ಪೆಟ್ಟು ಮತ್ತು ಪೊಟ್ಟು ಅಂದವರಿಗೆ ಎರಡು ಏಟು ಅಷ್ಟೇ. ನಮ್ಮ ಊರಿನವರು ಅಂದಾಗ ನಾನು ಹೆಚ್ಚೇ ಬರೆದೆ. ಒಂದು ಸಮರ್ಥ ಸಿನೆಮಾ ಪಡೆ ಹಾಗೂ ಅದ್ಭುತ ಪ್ರತಿಭೆಗಳು ಇಲ್ಲಿ ಬೆಳೆದಿವೆ ಅನ್ನೋ ಹೆಮ್ಮೆ. ಸಿನೆಮಾದ ಕುರಿತ ಹೊಗಳಿಕೆಯ ನಡುವೆ ಒಂದು ಅನಿಸಿಕೆ. ಕರಾವಳಿಯವರಿಗೆ ಈ ಸಿನೆಮಾ ಅರ್ಥ ಆಗುತ್ತೆ. ಆದ್ರೆ ಇಲ್ಲಿ ಬಳಸಿದ ಪ್ರಾದೇಶಿಕ ಭಾಷಾ ಪ್ರಭೇದ ಫಾಲೋ ಮಾಡಲು ಬೇರೆಯವರಿಗೆ ಕಷ್ಟ ಆಗಬಹುದು..  ಕನ್ನಡದ ಫೌಲ್ ಭಾಷೆಯಂತೂ ಸಾಯಿಸಿತು. ಆದ್ರೆ ಅದು ಇಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ಭಾಷೆ ಅಂತ ತಿಳಿಯಿತು. ಒಟ್ಟಲ್ಲಿ ಈ ಸಿನೆಮಾ ಎಲ್ಲ ತರದಲ್ಲೂ ವಿಶೇಷ ಅನುಭವ ನೀಡಿತು. ಹ್ಯಾಟ್ಸ್ ಆಫ್ ರಾಜ್ ಶೆಟ್ಟಿ ಮತ್ತು ತಂಡ.

1 COMMENT

  1. ಉತ್ತಮ ವಿಮರ್ಶೆ. ಒಂದು ಚಿತ್ರವನ್ನು ಮನರಂಜನೆಯ ಹಂತದಲ್ಲಿ ಮೀರಿ ಹೇಗೆ ಕಲೆ ಮತ್ತು ಚಿಂತನೆಗಳನ್ನು ಬಳಸಿ ಉಪಯೋಗಿಸಬಹುದು ಎಂಬುದನ್ನು ಹೇಗೆ ಚಿತ್ರತಂಡ ಸಾಧಿಸಿದೆ ಎಂಬುದನ್ನು ಅಷ್ಟೇ ಆಳವಾದ ಅರ್ಥೈಕೆಯಲ್ಲಿ ಈ ವಿಮರ್ಶೆ ತೋರ್ಪಡಿಸುತ್ತಿದೆ. ಇಂತಹ ಚಿತ್ರಗಳು ಮಾತ್ರವಲ್ಲ, ಇಂತಹ ಉತ್ತಮ ವಿಮರ್ಶೆಗಳೂ ಇಂದಿನ ಕಲಾಲೋಕಕ್ಕೆ ಅವಶ್ಯಕವೆನಿಸಿದೆ. ಒಮ್ಮೆ ಹಿರಿಯ ನಟಿ ಜಯಾ ಬಚ್ಚನ್ ಇಂದಿನ ಯುಗದಲ್ಲಿ ನಾವು ಉತ್ತಮ ವಿಮರ್ಶೆಗಳನ್ನೇ ನೋಡುತ್ತಿಲ್ಲ” ಎಂದು. ಅವರು ಕನ್ನಡದಲ್ಲಿ ಇದನ್ನು ಓದಿದ್ದರೆ ಖಂಡಿತ ಸಂತೋಷಿಸುತ್ತಿದ್ದರು.

LEAVE A REPLY

Connect with

Please enter your comment!
Please enter your name here