ಇಲ್ಲಿಯವರೆಗೆ ನಗರದ ಕತೆಗಳನ್ನು ತೆರೆಗೆ ಅಳವಡಿಸಿದ್ದ ಗೌತಮ್ ಮೆನನ್ ‘ವೇಂದು ಥನಿಂದಾತು ಕಾದು’ ಚಿತ್ರದಲ್ಲಿ ಗ್ರಾಮೀಣ ಪ್ರದೇಶದ ಯುವಕನ ಕತೆ ಹೇಳುತ್ತಿದ್ದಾರೆ. ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಎ.ಆರ್.ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ ಎನ್ನುವುದು ವಿಶೇಷ.
ಗೌತಮ್ ಮೆನನ್ ನಿರ್ದೇಶನದಲ್ಲಿ ಸಿಂಬು ನಟಿಸಿರುವ ‘ವೇಂದು ಥನಿಂದಾತು ಕಾದು’ ತಮಿಳು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಖ್ಯಾತ ತಮಿಳು ಕವಿ ಭಾರತಿಯಾರ್ ಅವರ ಕವಿತೆಯೊಂದರ ಸಾಲು ಚಿತ್ರದ ಶೀರ್ಷಿಕೆಯಾಗಿದೆ. ಆಸ್ಕರ್ ಪುರಸ್ಕೃತ ಎ.ಆರ್.ರೆಹಮಾನ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಟೀಸರ್ ನೋಡಿ ಹೇಳುವುದಾದರೆ, ಹಳ್ಳಿಯ ಯುವಕನ ‘ಮುತ್ತು’ ಪಾತ್ರದಲ್ಲಿ ಸಿಂಬು ನಟಿಸಿದ್ದಾರೆ. ಹಳ್ಳಿಯಲ್ಲಿ ಬದುಕು ಕಷ್ಟವಾಗಿ ಚೆನ್ನೈ ನಗರಕ್ಕೆ ವಲಸೆ ಬರುವ ಆತ ಹೋಟೆಲೊಂದರಲ್ಲಿ ಕೆಲಸಕ್ಕೆ ಸೇರುತ್ತಾನೆ. ಅಲ್ಲಿ ಆತನ ಸ್ವಾಭಿಮಾನಕ್ಕೆ ಧಕ್ಕೆ ಬರುವಂತೆ ಕೆಲವರು ಅವನನ್ನು ನಡೆಸಿಕೊಳ್ಳುತ್ತಾರೆ. ತನ್ನನ್ನು ರಕ್ಷಿಸಿಕೊಳ್ಳಲು ಆತ ಆಯುಧ ಕೈಗೆತ್ತಿಕೊಳ್ಳುತ್ತಾನೆ.
ಟ್ರೈಲರ್ನ ಹಿನ್ನೆಲೆಯಲ್ಲಿ ಎ.ಆರ್.ರೆಹಮಾನ್ ಸಂಗೀತ ಸಂಯೋಜಿಸಿ ಹಾಡಿರುವ ಹಾಡು ಕೇಳಿಸುತ್ತದೆ. ನಾಯಕನಟನ ನೋವನ್ನು ಈ ಹಾಡು ಧ್ವನಿಸುತ್ತದೆ. ನಿರ್ದೇಶಕ ಗೌತಮ್ ಮೆನನ್ ಈ ಹಿಂದೆ ನಿರ್ದೇಶಿಸಿದ್ದು ನಗರ ಕೇಂದ್ರಿತ ಕತೆಗಳನ್ನು. ಈ ಬಾರಿ ಗ್ರಾಮೀಣ ಪ್ರದೇಶದ ಯುವಕನ ಸಂದಿಗ್ಧ, ತುಮುಲಗಳನ್ನು ತೆರೆಗೆ ತರುತ್ತಿದ್ದಾರೆ. ದಶಕದ ಹಿಂದೆ ಸಿಂಬು, ಗೌತಮ್ ಮೆನನ್ ಮತ್ತು ಎ.ಆರ್. ರೆಹಮಾನ್ ಕಾಂಬಿನೇಷನ್ನಲ್ಲಿ ‘ವಿನ್ನೈಥಾಂಡಿ ವರುವಾಯ’ ಸಿನಿಮಾ ಬಂದಿತ್ತು. ಈ ಬಾರಿ ‘ ವೇಂದು ಥನಿಂದಾತು ಕಾದು’ ಚಿತ್ರದೊಂದಿಗೆ ಮತ್ತೊಮ್ಮೆ ಈ ಕಾಂಬಿನೇಷನ್ ಮೋಡಿ ಮಾಡುವುದೇ ಎಂದು ನೋಡಬೇಕು.