‘ಗರುಡ’ ಸಿನಿಮಾ ಮೂಲಕ ಭರವಸೆ ಮೂಡಿಸಿದ್ದ ನಟ ಸಿದ್ದಾರ್ಥ್‌ ಮಹೇಶ್‌ ಹೊಸ ಸಿನಿಮಾಗೆ ಸಿದ್ಧತೆ ನಡೆಸಿದ್ದಾರೆ. ಈ ಬಾರಿ ನಟನೆ ಜೊತೆ ನಿರ್ದೇಶನದ ಹೊಣೆಯೂ ಅವರದೆ. ಹಿಂದಿನ ತಮ್ಮ ಎರಡೂ ಚಿತ್ರಗಳಿಗೆ ಕತೆ ರಚಿಸಿದ್ದ ಅವರು ಈ ಬಾರಿ ನಿರ್ದೇಶನದ ಜವಾಬ್ದಾರಿಯನ್ನೂ ತೆಗೆದುಕೊಂಡಿದ್ದಾರೆ.

ನಟ ಸಿದ್ದಾರ್ಥ್‌ ಮಹೇಶ್‌ ಈ ಹಿಂದೆ ‘ನನ್ನ ಸಿಪಾಯಿ’, ‘ಗರುಡ’ ಚಿತ್ರಗಳಲ್ಲಿ ನಾಯಕನಟನಾಗಿ ಅಭಿನಯಿಸಿದ್ದರು. ಈ ಚಿತ್ರಗಳಿಗೆ ಕತೆ ರಚಿಸಿದ್ದಲ್ಲದೆ ಚಿತ್ರದುದ್ದಕ್ಕೂ ತೊಡಗಿಸಿಕೊಂಡಿದ್ದರು. ದೊಡ್ಡ ಬಜೆಟ್‌ನಲ್ಲಿ ತಯಾರಾಗಿದ್ದ ಅವರ ‘ಗರುಡ’ ಸಿನಿಮಾ ಸದ್ದು ಮಾಡಿತ್ತು. ಆದರೆ ಬಾಕ್ಸ್‌ ಆಫೀಸ್‌ನಲ್ಲಿ ಸಿನಿಮಾ ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ನಟನಾಗಿ ಭರವಸೆ ಮೂಡಿಸಿರುವ ಸಿದ್ದಾರ್ಥ್‌ ಮಹೇಶ್‌ ಈಗ ನೂತನ ಸಿನಿಮಾಗೆ ಸಜ್ಜಾಗುತ್ತಿದ್ದಾರೆ. ಈ ಬಾರಿ ನಟನೆ ಜೊತೆ ಕತೆ ಮತ್ತು ನಿರ್ದೇಶನದ ಹೊಣೆಯೂ ಅವರದೆ ಎನ್ನುವುದು ವಿಶೇಷ. ‘ಸಿನಿಮಾ ನಿರ್ದೇಶನ ನನ್ನ ಬಹುಕಾಲದ ಕನಸು. ಈಗ ನಿರ್ದೇಶನಕ್ಕೆ ಸಮಯ ಕೂಡಿಬಂದಿದೆ. ಒಂದೊಳ್ಳೆಯ ಕತೆ ಮಾಡಿಕೊಂಡು ತೆರೆಗೆ ಬರಲಿದ್ದೇನೆ. ಹಿಂದಿನ ಎರಡೂ ಪಾತ್ರಗಳಿಗಿಂತ ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ’ ಎನ್ನುತ್ತಾರವರು.

ಅತಶ್ರೀ ಮೀಡಿಯಾ ಕ್ರಿಯೇಷನ್ಸ್ ಮತ್ತು ಆರೇಂಜ್ ಪಿಕ್ಸೆಲ್ಸ್ ನಡಿ ಸಿದ್ದಾರ್ಥ್ ಮಹೇಶ್ ಸ್ನೇಹಿತರಾಗಿರುವ ಎಸ್ ಚಂದನ್ ಈ ಸಿನಿಮಾ ನಿರ್ಮಿಸಲಿದ್ದಾರೆ. ತಮಿಳು ಸಿನಿಮಾ ನಿರ್ಮಿಸಿದ್ದ ಚಂದನ್ ಅವರಿಗೆ ಕನ್ನಡದಲ್ಲಿದು ಮೊದಲ ಪ್ರಯತ್ನ. ತಾವೇ ನಿರ್ದೇಶನ ಮಾಡಬೇಕೆಂದು ಹೊರಟಿರುವ ಸಿದ್ದಾರ್ಥ್‌ ಬೆನ್ನಿಗೆ ನಿಂತಿದ್ದಾರೆ. ಪ್ರೀ ಪ್ರೊಡಕ್ಷನ್‌ ಕೆಲಸಗಳು ಕೊನೆಯ ಹಂತದಲ್ಲಿದ್ದು, ಶೀಘ್ರದಲ್ಲೇ ಮತ್ತಷ್ಟು ಅಪ್ ಡೇಟ್ ನೀಡಲು ಚಿತ್ರತಂಡ ಸಜ್ಜಾಗಿದೆ. ಸಿದ್ದಾರ್ಥ್ ಮಹೇಶ್ ನಟಿಸಿ ನಿರ್ದೇಶಿಸಲಿರುವ ಸಿನಿಮಾದಲ್ಲಿ ಪ್ರೇಮಕತೆಯ ಜೊತೆ ಆಕ್ಷನ್ ಇರಲಿದೆ. ಮಲ್ಟಿಮೀಡಿಯಾದಲ್ಲಿ ಪರಿಣತಿ ಪಡೆದಿದ್ದಾರೆ ಸಿದ್ದಾರ್ಥ್‌. ಇದು ಸಿನಿಮಾ ನಿರ್ದೇಶನಕ್ಕೆ ನೆರವಾಗಲಿದೆ ಎನ್ನುತ್ತಾರವರು. ಮುಂದಿನ ದಿನಗಳಲ್ಲಿ ಚಿತ್ರದ ನಾಯಕಿ ಹಾಗೂ ಇತರೆ ತಾಂತ್ರಿಕ ವಿಷಯಗಳ ಬಗ್ಗೆ ಮಾಹಿತಿ ನೀಡುವುದಾಗಿ ಹೇಳುತ್ತಾರೆ.

Previous article‘ಕೆಂಡದ ಸೆರಗು’ ವೀಡಿಯೋ ಸಾಂಗ್‌ ಬಿಡುಗಡೆ | ರಾಕಿ ಸೋಮ್ಲಿ ನಿರ್ದೇಶನದ ಸಿನಿಮಾ
Next article‘ದಯಾ’ ಟ್ರೈಲರ್‌ | ಜೆ ಡಿ ಚಕ್ರವರ್ತಿ – ರಮ್ಯಾ ನಂಬೀಸನ್‌ ತೆಲುಗು ವೆಬ್‌ ಸರಣಿ

LEAVE A REPLY

Connect with

Please enter your comment!
Please enter your name here