‘ಮಿಸ್ ಇಂಡಿಯಾ’ ಹರ್ನಾಝ್ ಸಂಧು ಅವರು 2021ನೇ ಸಾಲಿನ ‘ಮಿಸ್ ಯೂನಿವರ್ಸ್’ ಪಟ್ಟ ಅಲಂಕರಿಸಿದ್ದಾರೆ. ಲಾರಾ ದತ್ತಾ (2000) ಈ ಗೌರವ ಪಡೆದ 21 ವರ್ಷಗಳ ನಂತರ ಭಾರತಕ್ಕೆ ಮತ್ತೊಮ್ಮೆ ಈ ಕಿರೀಟ ಸಿಕ್ಕಿದೆ.
‘ಮಿಸ್ ಇಂಡಿಯಾ’ ಹರ್ನಾಝ್ ಸಂಧು ಇದೀಗ ‘ಮಿಸ್ ಯೂನಿವರ್ಸ್ 2021’. ಇಸ್ರೇಲ್ನ ಈಲಾತ್ನಲ್ಲಿ ಇಂದು ನಡೆದ ಸ್ಪರ್ಧೆಯಲ್ಲಿ ಚಂಡೀಘಡ ಮೂಲದ 21ರ ಹರೆಯದ ಹರ್ನಾಝ್ ಈ ಗೌರವಕ್ಕೆ ಪಾತ್ರರಾದರು. ಈ ಮೊದಲು ಭಾರತದ ಸುಷಿತಾ ಸೇನ್ (1994) ಮತ್ತು ಲಾರಾ ದತ್ತಾ (2000) ‘ಮಿಸ್ ಯೂನಿವರ್ಸ್’ ಪಟ್ಟ ಅಲಂಕರಿಸಿದ್ದರು. 21 ವರ್ಷಗಳ ನಂತರ ಹರ್ನಾಝ್ ಸಂಧು ಭಾರತಕ್ಕೆ ಮತ್ತೊಮ್ಮೆ ಈ ಪ್ರಶಸ್ತಿ ತಂದಿದ್ದಾರೆ. ‘ಮಿಸ್ ಯೂನಿವರ್ಸ್ 2021’ ಘೋಷಿಸುತ್ತಿದ್ದಂತೆ ಬಾಲಿವುಡ್ ಸೇರಿದಂತೆ ಇತರೆ ಕ್ಷೇತ್ರಗಳ ಖ್ಯಾತನಾಮರು ಸೋಷಿಯಲ್ ಮೀಡಿಯಾದಲ್ಲಿ ಹರ್ನಾಝ್ ಅವರಿಗೆ ಅಭಿನಂದಿಸಿ ಸಂದೇಶ ಹಾಕುತ್ತಿದ್ದಾರೆ. ಮಾಜಿ ‘ಮಿಸ್ ಯೂನಿವರ್ಸ್’, ನಟಿ ಲಾರಾ ದತ್ತಾ ಅವರು, “ಅಭಿನಂದನೆಗಳು! ವೆಲ್ಕಮ್ ಟು ದಿ ಕ್ಲಬ್! ನಾವು ಈ ಗೌರವಕ್ಕಾಗಿ 21 ವರ್ಷ ಕಾದಿದ್ದೆವು. ಇದು ನಮಗೆ ಹೆಮ್ಮೆಯ ವಿಷಯ. ಕೋಟ್ಯಂತರ ಜನರ ಕನಸು ನನಸಾಗಿದೆ!” ಎಂದು ಟ್ವೀಟ್ ಮಾಡಿದ್ದಾರೆ.
ಮಾಜಿ ಮಿಸ್ ವರ್ಲ್ಡ್, ನಟಿ ಪ್ರಿಯಾಂಕಾ ಚೋಪ್ರಾ ಅವರು ಹರ್ನಾಝ್ಗೆ ಶುಭ ಕೋರಿ, “ಮತ್ತು ಹೊಸ ಮಿಸ್ ಯೂನಿವರ್ಸ್ ಈಗ ಮಿಸ್ ಇಂಡಿಯಾ! ಅಭಿನಂದನೆಗಳು ಹರ್ನಾಝ್ ಸಂಧು. 21 ವರ್ಷಗಳ ನಂತರ ಈ ಕಿರೀಟವನ್ನು ಭಾರತಕ್ಕೆ ಮತ್ತೊಮ್ಮೆ ತಂದಿದ್ದೀರಿ” ಎಂದಿದ್ದಾರೆ. ನಟಿ ರವೀನಾ ಟಂಡನ್, ಗಾಯಕಿ ಹಿಮಾನ್ಶಿ ಖುರಾನಾ ಸೇರಿದಂತೆ ಹಲವರು ತಮ್ಮ ಸೋಷಿಯಲ್ ಮೀಡಿಯಾ ಹ್ಯಾಂಡಲ್ಗಳಲ್ಲಿ ಹರ್ನಾಝ್ರನ್ನು ಅಭಿನಂದಿಸಿದ್ದಾರೆ. ಕಳೆದ ವರ್ಷ ‘ಮಿಸ್ ಯೂನಿವರ್ಸ್’ ಕಿರೀಟ ತೊಟ್ಟಿದ್ದ ಮೆಕ್ಸಿಕೋದ ಆಂಡ್ರಿಯಾ ಮೆಝಾ ಅವರು ಹರ್ನಾಝ್ರಿಗೆ ಕಿರೀಟ ತೊಡಿಸಿದರು. “ಈ ಗೌರವ ಲಭಿಸಿದ ಸಂದರ್ಭದಲ್ಲಿ ನಾನು ದೇವರನ್ನು ಹಾಗೂ ಪೋಷಕರನ್ನು ಸ್ಮರಿಸುತ್ತೇನೆ. ಪ್ರಯಾಣದುದ್ದಕ್ಕೂ ನನಗೆ ಗೈಡ್ ಮಾಡಿದ ಮಿಸ್ ಇಂಡಿಯಾ ಸಂಸ್ಥೆಗೆ ನಾನು ಆಭಾರಿ. ಈ ಕ್ಷಣಕ್ಕಾಗಿ ಪ್ರಾರ್ಥಿಸಿದ ಎಲ್ಲಾ ಭಾರತೀಯರಿಗೂ ಕೃತಜ್ಞತೆಗಳು” ಎಂದಿದ್ದಾರೆ ಹರ್ನಾಝ್. 2017ರಲ್ಲಿ ಹರ್ನಾಝ್ ‘ಟೈಮ್ಸ್ ಫ್ರೆಶ್ ಫೇಸ್ʼ ಪ್ರಶಸ್ತಿ ಪಡೆದಿದ್ದರು. ಆಗ ಅವರಿಗೆ ಹದಿನೇಳರ ಹರೆಯ. ‘LIVA ಮಿಸ್ ದಿವಾ ಯೂನಿವರ್ಸ್ 2021’ ಗೌರವವೂ ಅವರಿಗೆ ಸಂದಿದೆ. ಪಂಜಾಬಿ ಚಿತ್ರಗಳಲ್ಲಿ ನಟಿಸಿರುವ ಹರ್ನಾಝ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ನಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದಾರೆ.