ಹರ್ಷದ್ ನಲವಾಡೆ ನಿರ್ದೇಶನದ ‘ಫಾಲೋವರ್’ ಕಿರುಚಿತ್ರ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಪಡೆದಿದೆ. ಮೂಲಭೂತವಾದಿ ಯುವಕನ ಜೀವನ ಮತ್ತು ಅವನನ್ನು ಹಾಗೆ ಮಾಡಲು ಪ್ರೇರೇಪಿಸುವ ಘಟನೆಗಳ ಕುರಿತ ಚಿತ್ರಣ ಕಿರುಚಿತ್ರದ ವಸ್ತು.
ಹರ್ಷದ್ ನಲವಾಡೆ ನಿರ್ದೇಶನದ ‘ಫಾಲೋವರ್ಸ್’ ಕಿರುಚಿತ್ರ ಕನ್ನಡ ಮತ್ತು ಮರಾಠಿ ಭಾಷೆಗಳಲ್ಲಿ ತಯಾರಾಗಿದೆ. ತಮ್ಮ ಮೊದಲ ಚಿತ್ರದಲ್ಲೇ ಹರ್ಷದ್ ಸವಾಲಿನ ಹಾಗೂ ಸೂಕ್ಷ್ಮ ವಿಚಾರಗಳನ್ನು ಹೇಳಹೊರಟಿದ್ದಾರೆ. ಬೆಳಗಾವಿಯಲ್ಲಿ ಮರಾಠಿ ರಾಜಕೀಯ ನಾಯಕರೊಬ್ಬರಿಗಾಗಿ ಕೆಲಸ ಮಾಡುವ ಮೂಲಭೂತವಾದಿ ಯುವಕನ ಜೀವನ ಮತ್ತು ಅವನನ್ನು ಹಾಗೆ ಮಾಡಲು ಪ್ರೇರೇಪಿಸುವ ಘಟನೆಗಳ ಕುರಿತು ಕಿರುಚಿತ್ರದಲ್ಲಿ ಹೇಳಲಾಗಿದೆ. ಈ ಕಿರುಚಿತ್ರವು ಹಲವು ಅಂತಾರಾಷ್ಟ್ರೀಯ ಸಿನಿಮಾ ಉತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಸದ್ಯ ನಡೆಯುತ್ತಿರುವ ‘ಮುಂಬೈ ಫಿಲ್ಮ್ ಫೆಸ್ಟಿವಲ್’ನಲ್ಲೂ ಪ್ರದರ್ಶನ ಕಂಡಿದ್ದು, ವಿಮರ್ಶಕರಿಂದ ಮೆಚ್ಚುಗೆ ಪಡೆದಿದೆ. ಈ ಕಿರುಚಿತ್ರದಲ್ಲಿ ಡೊನ್ನಾ ಮುಂಶಿ, ಸುದೀಪ್ ಬಿಲಾವರ್, ಅತುಲ್ ದೇಶಮುಖ್, ರಘು ಪ್ರಕಾಶ್, ಹೃಶಿಕೇಶ್ ಸಾಂಗ್ಲಿಕರ್, ಶಾಲಿನಿ ಚೌಗುಲೆ, ಮಂದಾರ ಜಾತಪ್, ಅಮಿತ್ ದೇವ್ರುಶಿ, ಉಮೇಶ್ ತೇಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಗಡಿ ಹಾಗೂ ಭಾಷೆ ವಿಚಾರಕ್ಕೆ ಕರ್ನಾಟಕ ಹಾಗೂ ಮಹಾರಾಷ್ಟ್ರದ ಮಧ್ಯೆ ಸಮಸ್ಯೆ ಮೊದಲಿಂದಲೂ ಇದೆ. ಬೆಳಗಾವಿಯಲ್ಲಿ ಮರಾಠಿ ಮಾತನಾಡುವರ ಸಂಖ್ಯೆ ಹೆಚ್ಚಿದೆ. ಹೀಗಾಗಿ, ಬೆಳಗಾವಿ ತಮ್ಮ ರಾಜ್ಯಕ್ಕೆ ಸೇರಬೇಕು ಎಂಬುದು ಮಹಾರಾಷ್ಟ್ರದ ಹಲವರ ಅಭಿಪ್ರಾಯ. ಆದರೆ ಬೆಳಗಾವಿ ನಮ್ಮದು ಎಂದು ಕರ್ನಾಟಕದವರು ಹೇಳುತ್ತಲೇ ಬರುತ್ತಿದ್ದಾರೆ. ಈ ಎಲ್ಲಾ ವಿಚಾರಗಳನ್ನು ಸಿನಿಮಾದಲ್ಲಿ ಹೇಳಲಾಗಿದೆ. ಈ ಕಿರುಚಿತ್ರದಲ್ಲಿ ಸ್ನೇಹದ ಕುರಿತು ಸಂಗತಿಗಳಿವೆ. ರಾಜಕೀಯ ನಾಯಕರು, ಸೂಕ್ಷ್ಮ ವಿಚಾರಗಳನ್ನು ಹೇಗೆ ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಾರೆ ಎಂದು ಸಹ ಚಿತ್ರದಲ್ಲಿ ಹೇಳಲಾಗಿದೆ. ‘ಈ ರೀತಿಯ ಸೂಕ್ಷ್ಮ ವಿಚಾರದ ಕಥೆ ಮಾಡುವಾಗ ಯಾರೊಬ್ಬರೂ ಹಣ ಹೂಡಲು ಮುಂದೆ ಬರುವುದಿಲ್ಲ. ಸಿನಿಮಾ ವಿವಾದಕ್ಕೆ ಎಡೆ ಮಾಡಿಕೊಡಬಹುದು ಎಂಬ ಭಯ ಇರುತ್ತದೆ. ಹೀಗಾಗಿ, ಜನರಿಂದ ಹಣ ಸಂಗ್ರಹಿಸಿ ಮಾಡಲಾಗಿದೆ’ ಎಂದು ಚಿತ್ರತಂಡ ಹೇಳಿಕೊಂಡಿದೆ. ಕ್ರೌಂಡ್‌ಫಂಡ್‌ನಿಂದ ನಿರ್ದೇಶಕರಿಗೆ ಆರ್ಥಿಕ ಸಹಾಯ ಆಗಿದ್ದು, ಅವರು ಅಂದುಕೊಂಡ ರೀತಿಯಲ್ಲಿ ಕಥೆ ಹೇಳಲು ಅವಕಾಶ ಸಿಕ್ಕಿದೆ.