ಹೇಮಂತ್‌ ಹೆಗಡೆ ಕತೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ‘ನಮ್‌ ನಾಣಿ ಮದ್ವೆ ಪ್ರಸಂಗ’ ಸಿನಿಮಾ ಸೆಟ್ಟೇರಿದೆ. “ಮಲೆನಾಡಿನಲ್ಲಿ ಕೃಷಿ ಮಾಡುವ ಹುಡುಗರಿಗೆ ಮದುವೆಗೆ ಹುಡುಗಿ ಸಿಗುವುದಿಲ್ಲ. ಈ ಸಮಸ್ಯೆಯನ್ನು ತಿಳಿಹಾಸ್ಯದೊಂದಿಗೆ ನಿರೂಪಿಸುತ್ತಿದ್ದೇನೆ” ಎನ್ನುತ್ತಾರೆ ನಿರ್ದೇಶಕ ಹೇಮಂತ್‌ ಹೆಗಡೆ.

“ಎರಡು ವರ್ಷಗಳ ನಂತರ ಮತ್ತೆ ಚಿತ್ರ ಮಾಡುತ್ತಿದ್ದೇನೆ. ಇದು ಮಲೆನಾಡು ಹುಡುಗನ ಕಥೆ ಇದು. ಮಲೆನಾಡಿನಲ್ಲಿ ಕೃಷಿ ಮಾಡುವ ಹುಡುಗರಿಗೆ ಹುಡುಗಿ ಸಿಗುವುದಿಲ್ಲ. ಜ್ವಲಂತ ಸಮಸ್ಯೆಯೊಂದನ್ನು ಇಟ್ಟುಕೊಂಡು, ಅದನ್ನು ಹಾಸ್ಯದ ಮೂಲಕ ಹೇಳುವುದಕ್ಕೆ ಹೊರಟಿದ್ದೇನೆ. ನನ್ನ ಸ್ವಂತ ಕಸಿನ್​ ಮದುವೆಯಾಗುವುದಕ್ಕೆ ಕಾಶ್ಮೀರದವರೆಗೂ ಹೋಗಿ ಬಂದ. ಸಾಮಾಜಿಕ ಸಂದೇಶವಿರುವ ಸುಂದರ ಚಿತ್ರ ಇದಾಗಲಿದೆ. ನನ್ನ ಪಾತ್ರದಲ್ಲಿ ಜನ ತಮ್ಮನ್ನು ತಾವು ಕಂಡುಕೊಳ್ಳುತ್ತಾರೆ” ಎಂದರು ಹೇಮಂತ್ ಹೆಗಡೆ. ಅವರು ‘ನಮ್‌ ನಾಣಿ ಮದ್ವೆ ಪ್ರಸಂಗ’ ಸಿನಿಮಾದ ನಾಯಕನಟ ಮತ್ತು ನಿರ್ದೇಶಕ. ಕತೆ, ಚಿತ್ರಕಥೆ ಮತ್ತು ಸಂಭಾಷಣೆ ಹೊಣೆಯನ್ನೂ ಹೊತ್ತಿದ್ದಾರೆ. ಸಿನಿಮಾ ಮತ್ತು ಕಿರುತೆರೆ ನಿರ್ದೇಶಕ ಟಿ.ಎನ್​. ಸೀತಾರಾಂ ಈ ಚಿತ್ರಕ್ಕೆ ಚಾಲನೆ ನೀಡಿದರು.

“ನನ್ನ ‘ಮಾಯಾಮೃಗ’ ಧಾರಾವಾಹಿಯಲ್ಲಿ ಹೇಮಂತ್​ ಅವರಿಂದ ಒಂದು ಪಾತ್ರ ಮಾಡಿಸಿದ್ದೆ. ಆ ನಂತರ ಅವರ ಪಾತ್ರ ಬಹಳ ಜನಪ್ರಿಯವಾಯಿತು. ‘ಮತದಾನ’ ಚಿತ್ರ ಮಾಡುವಾಗ ನನಗೆ ಸೌಮ್ಯ ಮುಖದ ಹೀರೋ ಬೇಕಾಗಿತ್ತು. ಆಗ ನಾನು ಆಯ್ಕೆ ಮಾಡಿಕೊಂಡಿದ್ದು ಹೇಮಂತ್​ ಅವರನ್ನು. ‘ಮಾಯಾಮೃಗ’ದಲ್ಲಿ ಹೇಮಂತ್​ ಪಾತ್ರ ಮದುವೆಗಾಗಿ ಬಹಳ ಕಷ್ಟಪಡುತ್ತದೆ. ಇದರಲ್ಲೂ ಮದುವೆಗಾಗಿ ಕಷ್ಟಪಡುವ ಪಾತ್ರ ಎಂದು ಕೇಳಿದ್ದೇನೆ. ನಟನೆ ಮಾಡುವಾಗ ದುರಂತ ಪಾತ್ರಗಳನ್ನು ಮಾಡಿದರೂ, ನಿರ್ದೇಶನ ಮಾಡುವಾಗ ಅವರು ಹಾಸ್ಯಮಯ ಚಿತ್ರಗಳನ್ನೇ ಮಾಡುತ್ತಾರೆ, ಜನರನ್ನು ನಗಿಸುವುದಕ್ಕೆ ಪ್ರಯತ್ನ ಮಾಡುತ್ತಾರೆ. ನಗು ಮತ್ತು ವಿಷಾದದ ನಡುವೆ ನಾಣಿಯ ಮದುವೆ ಮಾಡಿಸುವುದಕ್ಕೆ ಅವರು ಹೊರಟಿದ್ದಾರೆ. ಚಿತ್ರ ಯಶಸ್ವಿಯಾಗಲಿ” ಎಂದು ಹಾರೈಸಿದರು ಟಿ.ಎನ್.ಸೀತಾರಾಂ.

ರಂಗಭೂಮಿ, ಸಿನಿಮಾ ನಟ ರಾಜೇಶ್‌ ನಟರಂಗ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. “ನನಗೆ ಗೊತ್ತಿಲ್ಲ. ಫೋನ್​ ಮಾಡಿ ಒಂದು ಪಾತ್ರ ಮಾಡಬೇಕು ಎಂದ. ನಮ್ಮಿಬ್ಬರದ್ದು ಹಳೆಯ ಪರಿಚಯ. 30 ವರ್ಷಗಳಿಂದ ಸ್ನೇಹಿತರು. ಬೇರೆ ಬೇರೆ ಹಂತಗಳಲ್ಲಿ, ವೇದಿಕೆಗಳಲ್ಲಿ ಕೆಲಸ ಮಾಡಿದ್ದೇವೆ. ಅವನ ನಿರ್ದೇಶನದಲ್ಲಿ ಅಭಿನಯಿಸಿರಲಿಲ್ಲ. ಈ ಚಿತ್ರದಲ್ಲಿ ನಟಿಸುವುದಕ್ಕೆ ಕೇಳಿದಾಗ, ತಕ್ಷಣ ಒಪ್ಪಿದೆ. ಅವನ ಮೇಲೆ ನಂಬಿಕೆ ಇದೆ. ಚಿತ್ರತಂಡಕ್ಕೆ ಒಳ್ಳೆಯದಾಗಲಿ” ಎಂದರು ರಾಜೇಶ್ ನಟರಂಗ. ಹೇಮಂತ್ ಹೆಗಡೆ ಅವರಿಗೆ ನಾಯಕಿಯರಾಗಿ ಶ್ರೇಯಾ ವಸಂತ್​ ಮತ್ತು ಶ್ರುತಿ ನಂದೀಶ್​ ನಟಿಸುತ್ತಿದ್ದಾರೆ. ಶರತ್​ ಲೋಹಿತಾಶ್ವ, ನಾರಾಯಣಸ್ವಾಮಿ ಮತ್ತು ರಿತೇಶ್​ ಗೌಡ ಪ್ರಮುಖ ಪಾತ್ರಗಳಲ್ಲಿದ್ದಾರೆ. ಶಿರಸಿ ಸುತ್ತಮುತ್ತ ಒಂದೇ ಹಂತದ 30 ದಿನಗಳ ಚಿತ್ರೀಕರಣ ನಡೆಯಲಿದೆ.

LEAVE A REPLY

Connect with

Please enter your comment!
Please enter your name here