ಸ್ಕಿಜೋಫ್ರೇನಿಯಾ ಮತ್ತು ಅದರ ತೀವ್ರ ಪರಿಣಾಮಗಳ ಕುರಿತು ಸಂದೇಶ ಸಾರುವ ‘ಹೈಡ್‌ ಅಂಡ್‌ ಸೀಕ್‌’ Cannes ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಕನ್ನಡತಿ ಕರೆನ್‌ ಕ್ಷಿತಿ ಸುವರ್ಣ ನಿರ್ದೇಶನದ ಈ ಕಿರುಚಿತ್ರ ಈಗಾಗಲೇ ಹಲವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡಿದೆ ಎನ್ನುವುದು ವಿಶೇಷ.

ಕನ್ನಡತಿ ಕರೆನ್ ಕ್ಷಿತಿ ಸುವರ್ಣ ನಿರ್ದೇಶನದ ಹಿಂದಿ ಕಿರು ಚಿತ್ರ ‘ಹೈಡ್ ಅಂಡ್ ಸೀಕ್’ ಪ್ರತಿಷ್ಠಿತ ಕೇನ್ಸ್‌ (Cannes) ವಿಶ್ವ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ‘ಹೈಡ್ ಅಂಡ್ ಸೀಕ್’ ಕಿರುಚಿತ್ರವು ಸ್ಕಿಜೋಫ್ರೇನಿಯಾ ಮತ್ತು ಅದರ ತೀವ್ರ ಪರಿಣಾಮಗಳ ಕುರಿತು ಸಂದೇಶವನ್ನು ಹೊಂದಿರುವ 10 ನಿಮಿಷಗಳ ಕಿರುಚಿತ್ರ (Indie Film). ಪ್ರಸ್ತುತ ಚಾಲ್ತಿಯಲ್ಲಿರುವ ವಿಷಯಗಳು ಚಿತ್ರದ ಕಥಾವಸ್ತು. ಈಗಿನ ದಿನಗಳಲ್ಲಿನ ಖಿನ್ನತೆ, ಒತ್ತಡ ಮತ್ತು ಸ್ಕಿಜೊಫ್ರೇನಿಯಾ ಕುರಿತು ಕಿರುಚಿತ್ರದಲ್ಲಿ ಪ್ರಸ್ತಾಪವಾಗಿದೆ. 20ರ ಹರೆಯದ ಯುವ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ ಅವರು ತಮ್ಮ ಕ್ರಾಫ್ಟ್, ಕಲೆ ಮತ್ತು ಚಲನಚಿತ್ರ ನಿರ್ಮಾಣಕ್ಕಾಗಿ ಮೆಚ್ಚುಗೆ ಪಡೆದಿದ್ದಾರೆ. ಈ ಕಿರುಚಿತ್ರದ ಮೂಲಕ ಆಧುನಿಕ ಪ್ರಪಂಚವನ್ನು ಆವರಿಸಿರುವ ಸ್ಕಿಜೋಫ್ರೇನಿಯಾ ಕುರಿತು ಉತ್ತಮ ಸಂದೇಶ ನೀಡಲು ಯತ್ನಿಸಿದ್ದೇನೆ ಎನ್ನುತ್ತಾರವರು.

ಕೊಲಂಬಿಯನ್ ಇನ್‌ಕ್ಲೂಸಿವ್ ಫೆಸ್ಟಿವಲ್ ಮತ್ತು ಹಲವಾರು ಅರ್ಹತಾ ಚಲನಚಿತ್ರೋತ್ಸವದಲ್ಲಿ ಕೂಡ ಕಿರುಚಿತ್ರದ ಪ್ರದರ್ಶನಗೊಂಡಿದೆ. ಹಲವಾರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ. ಜೊತೆಗೆ ನಿರ್ದೇಶಕಿ ಈ ಕಿರುಚಿತ್ರವನ್ನು ಅಕಾಡೆಮಿ ಮತ್ತು BAFTA ಪ್ರಶಸ್ತಿಗಳಿಗೆ ಕಳುಹಿಸಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. Visica Films PVT LTD ಮತ್ತು FMD Productions ಬ್ಯಾನರ್‌ ಅಡಿಯಲ್ಲಿ ಮೋಹನ್ ಮತ್ತು ಮನು ಗೊರೂರ್ ಕಿರುಚಿತ್ರ ನಿರ್ಮಿಸಿದ್ದಾರೆ. ಅನಿಲ್ ಕುಮಾರ್ ಛಾಯಾಗ್ರಹಣ ನಿರ್ವಹಿಸಿದ್ದು, ರಾಷ್ಟ್ರ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಬಾಪಿ ತುತುಲ್ ಅವರ ಹಿನ್ನೆಲೆ ಸಂಗೀತವಿದೆ.

LEAVE A REPLY

Connect with

Please enter your comment!
Please enter your name here