ರಂಜಿತ್‌ ರಾವ್‌ ನಿರ್ದೇಶನದ ‘ಪ್ರಾಯಶಃ’ ಕ್ರೈಂ – ಥ್ರಿಲ್ಲರ್‌ ಸಿನಿಮಾ ಮುಂದಿನ ವಾರ ಡಿಸೆಂಬರ್‌ 9ರಂದು ತೆರೆಕಾಣುತ್ತಿದೆ. ಹಾಸ್ಯ ಪಾತ್ರಗಳಲ್ಲೇ ಕಾಣಿಸಿಕೊಂಡಿದ್ದ ನಟ ವಿಜಯ್‌ ಶೋಭರಾಜ್‌ ಇಲ್ಲಿ ಇನ್‌ವೆಸ್ಟಿಗೇಷನ್‌ ಆಫೀಸರ್‌ ಆಗಿ ಗಂಭೀರ ಪಾತ್ರದಲ್ಲಿದ್ದಾರೆ.

“ಸಿನಿಮಾ, ಕಿರುತೆರೆಯಲ್ಲಿ ಇಲ್ಲೀವರೆಗೆ ಹಾಸ್ಯ ಪಾತ್ರಗಳಲ್ಲೇ ಜನರು ನನ್ನನ್ನು ನೋಡಿದ್ದಾರೆ. ‘ಪ್ರಾಯಶಃ’ ಚಿತ್ರದಲ್ಲಿ ಮೊದಲ ಬಾರಿ ಗಂಭೀರ ಪಾತ್ರದಲ್ಲಿ ನಟಿಸಿದ್ದೇನೆ. ನನ್ನ ವೃತ್ತಿ ಬದುಕಿನಲ್ಲೇ ವಿಶಿಷ್ಟವಾದ ಪಾತ್ರವಿದು” ಎನ್ನುತ್ತಾರೆ ನಟ ವಿಜಯ್‌ ಶೋಭರಾಜ್‌. ಚಿತ್ರದಲ್ಲಿ ಅವರು ಇನ್ವೆಸ್ಟಿಗೇಷನ್‌ ಆಫೀಸರ್‌ ಆಗಿ ಕಾಣಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ಒಂದಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದರೂ ಈ ಪಾತ್ರಕ್ಕೆ ಹೆಚ್ಚು ಸ್ಕ್ರೀನ್‌ ಸ್ಪೇಸ್‌ ಇದೆ, ಕ್ರೈಂ – ಥ್ರಿಲ್ಲರ್‌ನಲ್ಲಿ ಬೆಚ್ಚಗಿನ ಪ್ರೀತಿಯ ಕತೆಯೂ ಇದೆ ಎನ್ನುತ್ತಾರವರು. ಈ ಸಿನಿಮಾದ ನಂತರ ಹಾಸ್ಯಕ್ಕೇ ಸೀಮಿತವಾಗಿದ್ದ ತಮ್ಮ ಇಮೇಜು ಬದಲಾಗಲಿದೆ ಎನ್ನುವ ವಿಶ್ವಾಸ ಅವರದು. ಕಿರುತೆರೆ, ಸಿನಿಮಾ ನಂತರ ಇದೀಗ ಅವರು ಕನ್ನಡ ವೆಬ್‌ ಸರಣಿಯೊಂದರಲ್ಲಿ ಪಾತ್ರ ನಿರ್ವಹಿಸಲು ಸಜ್ಜಾಗಿದ್ದಾರೆ.

ಕಿರುತೆರೆಯಲ್ಲಿ ದಶಕಗಳ ಕಾಲ ಬರಹಗಾರ, ನಿರ್ದೇಶಕರಾಗಿ ಕೆಲಸ ಮಾಡಿರುವ ರಂಜಿತ್‌ ರಾವ್‌ ಅವರಿಗೆ ‘ಪ್ರಾಯಶಃ’ ಸ್ವತಂತ್ರ್ಯ ನಿರ್ದೇಶನದ ಮೊದಲ ಸಿನಿಮಾ. ಕತೆ, ಚಿತ್ರಕಥೆ, ಸಂಭಾಷಣೆಯೂ ಅವರದೆ. “ಪ್ರತೀ ಸಂಬಂಧವೂ ತನ್ನದೇ ಆದ ಕತೆ ಹೊಂದಿರುತ್ತದೆ. ನಮ್ಮ ಚಿತ್ರಕಥೆ ಊಹೆ ಮತ್ತು ಸತ್ಯದ ನಡುವಿನ ಎಳೆ. ಸಾಕಷ್ಟು ತಿರುವುಗಳಿದ್ದು, ಸುತ್ತಮುತ್ತಲಿನವರ ಮೇಲೆಯೇ ಅನುಮಾನ ಮೂಡುತ್ತದೆ. ಅಂತಿಮವಾಗಿ ತಪ್ಪು ಯಾರಿಂದಾಗಿದೆ? ಕೃತ್ಯದ ಹಿಂದಿನ ವಾಸ್ತವ ಏನು? ಎನ್ನುವುದೇ ಸಿನಿಮಾ” ಎಂದು ತಮ್ಮ ಸಿನಿಮಾ ಕುರಿತು ಮಾತನಾಡುತ್ತಾರೆ ರಂಜಿತ್‌.

‘ಬಿಗ್‌ಬಾಸ್‌’ ಖ್ಯಾತಿಯ ಶೈನ್‌ ಶೆಟ್ಟಿ ಚಿತ್ರದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಾಹುಲ್‌, ಕೃಷ್ಣಭಟ್‌, ಮಧು ಹೆಗಡೆ, ಸುನೀಲ್‌ ಸಾಗರ್‌, ವಿನೀತ್‌ ಇತರೆ ಪ್ರಮುಖ ಪಾತ್ರಧಾರಿಗಳು. ಬೆಂಗಳೂರು ಮತ್ತು ಮಂಗಳೂರಿನಲ್ಲಿ ಸಿನಿಮಾದ ಚಿತ್ರೀಕರಣ ನಡೆದಿದೆ. ಆರ್ಹ ಕ್ರಿಯೇಷನ್ಸ್‌ ಬ್ಯಾನರ್‌ನಡಿ ತಯಾರಾಗಿರುವ ಸಿನಿಮಾಗೆ ವಿಜಯ್‌ ಕೃಷ್ಣ ಚಿತ್ರಕ್ಕೆ ಸಂಗೀತ, ಪ್ರಶಾಂತ್‌ ಪಾಟೀಲ್‌ ಛಾಯಾಗ್ರಹಣ, ಅಶೋಕ್‌ ಸಂಕಲನವಿದೆ. ಉತ್ಸಾಹಿ ತಂಡದ ಟ್ರೈಲರ್‌ ಮತ್ತು ವೀಡಿಯೋ ಸಾಂಗ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಂದಿನ ವಾರ ಡಿಸೆಂಬರ್‌ 9ರಂದು ಸಿನಿಮಾ ತೆರೆಕಾಣುತ್ತಿದೆ.

LEAVE A REPLY

Connect with

Please enter your comment!
Please enter your name here