ಭಾರತಿ ಶಂಕರ್ ನಿರ್ದೇಶನದ ‘ನನ್ ಹೆಸ್ರು ಕಿಶೋರ ಏಳ್ ಪಾಸ್ ಎಂಟು’ ಮಕ್ಕಳ ಸಿನಿಮಾ ಈ ವಾರ ತೆರೆಕಾಣಲಿದೆ. ನೈಜ ಘಟನೆಯೊಂದರ ಪ್ರೇರಣೆಯಿಂದ ತಯಾರಾಗಿರುವ ಚಿತ್ರಕ್ಕೆ 2019-20ನೇ ಸಾಲಿನ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ಅತ್ಯುತ್ತಮ ಮಕ್ಕಳ ಸಿನಿಮಾ ಪ್ರಶಸ್ತಿ ಸಂದಿದೆ.

ಭಾರತಿ ಶಂಕರ್ ನಿರ್ದೇಶನದಲ್ಲಿ ತಯಾರಾಗಿರುವ ‘ನನ್ ಹೆಸ್ರು ಕಿಶೋರ ಏಳ್ ಪಾಸ್ ಎಂಟು’ ನೈಜ ಘಟನೆಯೊಂದನ್ನು ಆಧರಿಸಿದ ಸಿನಿಮಾ. “ಕೆಲವು ವರ್ಷಗಳ ಹಿಂದೆ ಗುಲ್ಬರ್ಗದಲ್ಲಿ ಮಕ್ಕಳನ್ನು ಅಪಹರಿಸಿ, ಅವರ ಕಿರು ನಾಲಿಗೆ ಕತ್ತರಿಸಿ ಭಿಕ್ಷೆ ಬೇಡಲು ಕಳುಹಿಸುತ್ತಿದ್ದರು. ಇದನ್ನು ಪತ್ರಿಕೆಯ ಮೂಲಕ ತಿಳಿದ ನಾನು, ನಿರ್ಮಾಪಕರ ಬಳಿ ಈ ವಿಷಯದ ಬಗ್ಗೆ ಸಿನಿಮಾ ಮಾಡೋಣ ಅಂದೆ. ಕಥೆ ಸಿದ್ದ ಮಾಡಿಕೊಳ್ಳಿ ಎಂದರು. ಯುವ ಕಥೆಗಾರ ಸುದೀಪ್ ಶರ್ಮ ಕಥೆ ಬರೆದಿದ್ದಾರೆ. ಕಳೆದ ವರ್ಷವೇ ಚಿತ್ರ ತೆರೆಗೆ ಸಿದ್ಧವಾಗಿತ್ತು. ‘ಡ್ರಾಮ ಜ್ಯೂನಿಯರ್ಸ್’ ರಿಯಾಲಿಟಿ ಶೋ ಖ್ಯಾತಿಯ ಮಕ್ಕಳಾದ ಮಹೇಂದ್ರ (ಕಿಶೋರ ಪಾತ್ರಧಾರಿ), ಅಮಿತ್, ಶಶಿ ಗೌಡ, ಮಂಜುನಾಥ್, ಮಿಥಾಲಿ ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಾಯಕ ಪವನ್ ತೇಜ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ” ಎಂದರು ಭಾರತಿ ಶಂಕರ್‌.

ಮೈಸೂರು ಮೂಲದ ಪಾರ್ಥಸಾರಥಿ ತಮ್ಮ ಪಾಥಿ ಫಿಲಂಸ್‌ ಬ್ಯಾನರ್‌ನಡಿ ಈ ಸಿನಿಮಾ ಮಾಡಿದ್ದಾರೆ. “ಮೈಸೂರಿನವನಾದ ನಾನು ನಟ ವಿಷ್ಣುವರ್ಧನ್ ಅಭಿಮಾನಿ. ಈ ಹಿಂದೆ ‘ಸಿಂಹ ಹಾಕಿದ ಹೆಜ್ಜೆ’ ಚಿತ್ರ ನಿರ್ಮಾಣ ಮಾಡಿದ್ದೆ. ಇದು ಎರಡನೇ ಚಿತ್ರ. ನಿರ್ದೇಶಕರು ಹೇಳಿದ ಕಥೆ ಹಿಡಿಸಿತು. ಕುಟುಂಬ ಸಮೇತ ನೋಡಬಹುದಾದ ಚಿತ್ರ ನಮ್ಮದು” ಎನ್ನುತ್ತಾರವರು. “ನನಗೆ ಎಲ್ಲಾ ಚಿತ್ರಗಳಲ್ಲಿ ಹೆಚ್ಚು ಮಾತಿರುವ ಪಾತ್ರ ಇರುತ್ತದೆ. ಇದರಲ್ಲಿ ಮಾತು ಕಡಿಮೆ. ಹೆಂಡತಿ ಹೇಳುವುದನ್ನು ಕೇಳಿಕೊಂಡಿರುವ ಗಂಡನಾಗಿ ಕಾಣಿಸಿಕೊಳ್ಳುತ್ತಿದ್ದೇನೆ” ಎಂದರು ನಟ ತಬಲನಾಣಿ. ಕಿಶೋರ ಪಾತ್ರಧಾರಿ ಮಹೇಂದ್ರ, ಆತನ ಗೆಳೆಯರಾಗಿ‌ ಅಭಿನಯಿಸಿರುವ ಅಮಿತ್, ಶಶಿಗೌಡ, ಮಿಥಾಲಿ, ಮಂಜುನಾಥ್ ಮುಂತಾದ ಮಕ್ಕಳು ತಮ್ಮ ಪಾತ್ರಗಳ ಬಗ್ಗೆ ಮಾತನಾಡಿದರು. ಈವರೆಗೂ ಮೂರುಸಾವಿರಕ್ಕೂ ಅಧಿಕ ಶಾಲೆಯ ಹಲಿಗೆಗಳಿಗೆ ಉಚಿತವಾಗಿ ಕಪ್ಪು ಬಣ್ಣ ಬಳಿದುಕೊಟ್ಟಿರುವ ಹಾಗೂ ಕರ್ನಾಟಕದ ಕೆಲವು ಊರುಗಳಲ್ಲಿ ಈ ಚಿತ್ರದ ಪ್ತಚಾರದ ಗಾಡಿ ಓಡಿಸುತ್ತಿರುವ ರಂಗಸ್ವಾಮಿ ತಮ್ಮ ಕಾರ್ಯದ ಬಗ್ಗೆ ಮಾತನಾಡಿದರು. ಮಂಜುಕವಿ ಸಂಗೀತ ಸಂಯೋಜನೆ, ಆರ್.ಕೆ.ಶಿವಕುಮಾರ್ ಛಾಯಾಗ್ರಹಣ, ಕೆಂಪರಾಜು ಸಂಕಲನ, ಲೋಕೇಶ್ ಗೌಡ ಸಂಭಾಷಣೆ ಚಿತ್ರಕ್ಕಿದೆ. ಹಿರಿಯ ನಟ ದತ್ತಣ್ಣ, ಸಂಗೀತ, ಶಿವಾಜಿ ಯಾದವ್ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here