ಪದ್ಮಶ್ರೀ ಪುರಸ್ಕೃತ ಪಾಕಶಾಸ್ತ್ರ ಪ್ರವೀಣೆ ತರ್ಲಾ ದಲಾಲ್‌ ಬಯೋಪಿಕ್‌ ಸಿನಿಮಾ ‘ತರ್ಲಾ’ ಟೀಸರ್‌ ಬಿಡುಗಡೆಯಾಗಿದೆ. ಸೆಲೆಬ್ರಿಟಿ ಚೆಫ್‌ನ ಔಟ್ ಅಂಡ್ ಔಟ್ ಫೀಲ್‌ ಗುಡ್‌ ಸ್ಟೋರಿ ಎನ್ನುವ ಸುಳಿವು ಸಿಗುತ್ತದೆ. ಪಿಯೂಷ್‌ ಗುಪ್ತಾ ನಿರ್ದೇಶನದ ಚಿತ್ರದ ಶೀರ್ಷಿಕೆ ಪಾತ್ರದಲ್ಲಿ ಹುಮಾ ಖುರೇಷಿ ನಟಿಸಿದ್ದಾರೆ.

ಭಾರತದ ಮೊಟ್ಟಮೊದಲ ಪಾಕಶಾಸ್ತ್ರ ಪ್ರವೀಣೆ ತರ್ಲಾ ದಲಾಲ್‌ ಬಯೋಪಿಕ್‌ ಸಿನಿಮಾ ‘ತರ್ಲಾ’ ಟೀಸರ್‌ ಬಿಡುಗಡೆಯಾಗಿದೆ. ಪಿಯೂಷ್ ಗುಪ್ತಾ ಚಿತ್ರಕಥೆ ರಚಿಸಿ ನಿರ್ದೇಶಿಸಿರುವ ಸಿನಿಮಾದ ಶೀರ್ಷಿಕೆ ಪಾತ್ರದಲ್ಲಿ ಹುಮಾ ಖುರೇಷಿ ನಟಿಸಿದ್ದಾರೆ. ಸಿನಿಮಾಗೂ, ನಟಿ ಹುಮಾ ಅವರ ವೈಯಕ್ತಿಕ ಬದುಕಿಗೂ ನಂಟು ಇದೆ! ಏಕೆಂದರೆ ಹುಮಾ ಅವರ ಕುಟುಂಬಕ್ಕೆ ಹೋಟೆಲ್‌ ಉದ್ಯಮದ ಹಿನ್ನೆಲೆಯಿದೆ. ಅವರ ತಂದೆ ದೆಹಲಿಯಲ್ಲಿ ಸಲೀಂ ರೆಸ್ಟೋರೆಂಟ್ ಹೊಂದಿದ್ದಾರೆ. ಕಳೆದ ವರ್ಷ ಫಿಲ್ಮ್‌ಫೇರ್‌ ಸಮಾರಂಭದಲ್ಲಿ ಈ ಸಿನಿಮಾ ಕುರಿತು ಮಾತನಾಡಿದ್ದ ಹುಮಾ, ‘ತರ್ಲಾ ದಲಾಲ್ ನನಗೆ ನನ್ನ ಬಾಲ್ಯವನ್ನು ನೆನಪಿಸುತ್ತದೆ. ನಾವು ಚಿಕ್ಕವರಿದ್ದಾಗ ನನ್ನ ತಾಯಿ ಪ್ರಯತ್ನಿಸುತ್ತಿದ್ದ ರೆಸೆಪಿಗಳು ನನಗೆ ನೆನಪಿವೆ. ಈ ವಿಶೇಷ ಪಾತ್ರಕ್ಕಾಗಿ ಎದುರು ನೋಡುತ್ತಿದ್ದೇನೆ’ ಎಂದಿದ್ದರು. ಈ ಸಿನಿಮಾ ನೇರವಾಗಿ ZEE5ನಲ್ಲಿ ಸ್ಟ್ರೀಮ್‌ ಆಗಲಿದೆ.

ಟೀಸರ್, ತರ್ಲಾ ಅವರ ಪತಿ ಮತ್ತು ಕುಟುಂಬವನ್ನು ಒಳಗೊಂಡಿರುವುದರಿಂದ ಆಹಾರದ ಆಚೆಗಿನ ಜೀವನದ ಒಂದು ನೋಟವನ್ನು ನೀಡುತ್ತದೆ. ಸೆಲೆಬ್ರಿಟಿ ಚೆಫ್‌ನ ಔಟ್ ಅಂಡ್ ಔಟ್ ಫೀಲ್‌ ಗುಡ್‌ ಸ್ಟೋರಿಯಾಗಿ ಕಾಣಿಸುತ್ತದೆ. ಹುಮಾ ಪಾತ್ರವನ್ನು ಮಹತ್ವಾಕಾಂಕ್ಷೆಯ ಪಾತ್ರವನ್ನಾಗಿ ಪರಿಚಯಿಸಲಾಗಿದೆ. ಆಕೆ ತನ್ನ ಜೀವನದಲ್ಲಿ ಏನನ್ನಾದರೂ ಹೊಸತನ್ನು ಮಾಡಲು ಬಯಸುತ್ತಾಳೆ. ತನಗೆ ಅಡುಗೆ ಮೇಲಿನ ಪ್ರೀತಿಯನ್ನು ಅರಿತು ಚೆಫ್‌ ಆಗಿ ದೂರದರ್ಶನ ಕಾರ್ಯಕ್ರಮಗಳನ್ನು ನೀಡುವುದರ ಜೊತೆ ಅಡುಗೆ ತರಗತಿಗಳನ್ನು ಆರಂಭಿಸುತ್ತಾಳೆ.

ಈ ಕತೆಯ ರಿಯಲ್‌ ಹಿರೋಯಿನ್‌, ದಿವಂಗತ ತರ್ಲಾ ದಲಾಲ್‌ ಪಾಕಶಾಸ್ತ್ರಕ್ಕೆ ಸಂಬಂಧಿಸಿದಂತೆ ನೂರಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ. ಅವರ ಚೊಚ್ಚಲ ಅಡುಗೆ ಪುಸ್ತಕ ‘ದಿ ಪ್ಲೆಶರ್ಸ್ ಆಫ್ ವೆಜಿಟೇರಿಯನ್ ಕುಕಿಂಗ್’ 1974 ರಲ್ಲಿ ಬಿಡುಗಡೆಯಾಗಿ 10 ಮಿಲಿಯನ್ ಪ್ರತಿಗಳು ಮಾರಾಟವಾಗಿವೆ. Food and More ಎಂಬ ದ್ವೈಮಾಸಿಕ ನಿಯತಕಾಲಿಕೆ ಪ್ರಾರಂಭಿಸಿದ್ದರು. ಪಾಕಶಾಸ್ತ್ರಕ್ಕೆ ಸಂಬಂಧಿಸಿದ ವೆಬ್‌ಸೈಟ್ ಸಹ ನಡೆಸುತ್ತಿದ್ದರು. The Tarla Dalal Show ಮತ್ತು Cook it up with tarla dalal ಅವರ ಎರಡು ಜನಪ್ರಿಯ ಅಡುಗೆ ಶೋಗಳು. 2007ರಲ್ಲಿ ಭಾರತ ಸರ್ಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು. 2013ರ ನವೆಂಬರ್‌ 6ರಂದು ತಮ್ಮ 77ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಅವರು ಅಗಲಿದರು.

LEAVE A REPLY

Connect with

Please enter your comment!
Please enter your name here