ಭಾರತದ ವೆಬ್ ಸರಣಿಗಳಿಗೆ ಅಂತಾರಾಷ್ಟ್ರೀಯ ಮನ್ನಣೆ ಸಂದಿದೆ. ನಟಿಯರಾದ ಕೊಂಕಣ ಸೇನ್ ಶರ್ಮಾ, ಅಮೃತಾ ಸುಭಾಷ್ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ನಟಿ ಅಮೃತಾ ಸುಭಾಷ್ ತಮ್ಮ ಟ್ವಿಟರ್ ಅಕೌಂಟ್‌ನಲ್ಲಿ ವಿನ್ನಿಂಗ್ ಮೊಮೆಂಟ್ ವಿಡಿಯೋ ಹಂಚಿಕೊಂಡಿದ್ದಾರೆ.
ಏಷ್ಯನ್ ಅಕಾಡೆಮಿ ಕ್ರಿಯೇಟಿವ್ ಅವಾರ್ಡ್ಸ್‌ನಲ್ಲಿ ನಟಿಯರಾದ ಕೊಂಕಣ ಸೇನ್ ಶರ್ಮಾ ಮತ್ತು ಅಮೃತಾ ಸುಭಾಷ್ ಗೌರವಕ್ಕೆ ಪಾತ್ರರಾಗಿದ್ದಾರೆ. ನೆಟ್‌ಫ್ಲಿಕ್ಸ್‌ನ ಆಂಥಾಲಜಿ ಸರಣಿ ‘ಅಜೀಬ್ ದಾಸ್ತಾನ್ಸ್’ನಲ್ಲಿನ ಉತ್ತಮ ನಟನೆಗೆ ನಟಿ ಕೊಂಕಣ ‘ಅತ್ಯುತ್ತಮ ನಟಿ’ ಪ್ರಶಸ್ತಿ ಪಡೆದರೆ, ‘ಬಾಂಬೆ ಬೆಗಮ್ಸ್’ ನೆಟ್‌ಫ್ಲಿಕ್ಸ್ ಸರಣಿಯಲ್ಲಿನ ಅಭಿನಯಕ್ಕಾಗಿ ನಟಿ ಅಮೃತಾ ಸುಭಾಷ್ ‘ಅತ್ಯುತ್ತಮ ಪೋಷಕ ನಟಿ’ ಗೌರವಕ್ಕೆ ಪಾತ್ರರಾಗಿದ್ದಾರೆ. ನಟಿ ಅಮೃತಾ ಸುಭಾಷ್ ಪ್ರಶಸ್ತಿ ಘೋಷಣೆಯಾದ ಸಂದರ್ಭದ ವೀಡಿಯೋವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು, “ಇದು ನನ್ನ ಮೊದಲ ಅಂತಾರಾಷ್ಟ್ರೀಯ ಪ್ರಶಸ್ತಿ! ಬಾಂಬೆ ಬೇಗಮ್ ತಂಡಕ್ಕೆ ಧನ್ಯವಾದ” ಎಂದಿದ್ದಾರೆ.
ಅಮೇಜಾನ್ ಪ್ರೈಮ್ ವೀಡಿಯೋ ಸರಣಿ ‘ಮಿರ್ಜಾಪುರ್ ಸೀಸನ್ 2’ ಅತ್ಯುತ್ತಮ ಒರಿಜಿನಲ್ ಪ್ರೋಗ್ರಾಮ್ ಪ್ರಶಸ್ತಿಗೆ ಪಾತ್ರವಾಗಿದೆ. ‘ಪಗ್ಲೈಟ್’ ಹಿಂದಿ ವೆಬ್ ಸಿನಿಮಾದ ಚಿತ್ರಕಥೆಗಾಗಿ ಉಮೇಶ್ ಬಿಶ್ಟ್ ಪಡೆದಿದ್ದಾರೆ. ಈ ಚಿತ್ರದ ಉತ್ತಮ ಧ್ವನಿಗ್ರಹಣಕ್ಕೂ ಪ್ರಶಸ್ತಿ ಲಭಿಸಿದೆ. ಚಿತ್ರನಿರ್ದೇಶಕ ಹನ್ಸಲ್ ಮೆಹ್ತಾ ಅವರು ಪ್ರಶಸ್ತಿ ಪಡೆದ ಎಲ್ಲರಿಗೂ ತಮ್ಮ ಟ್ವಿಟರ್‌ನಲ್ಲಿ ಅಭಿನಂದನೆ ಸಲ್ಲಿಸಿ ಶುಭಾಶಯ ಕೋರಿದ್ದಾರೆ.