ಚಿತ್ರದ ಮುಖ್ಯ ಆಕರ್ಷಣೆ ಮತ್ತು ಶಕ್ತಿ ಎಂದರೆ ಸಂಭಾಷಣೆ. ಕಥೆಗೆ ಮತ್ತು ನಿರೂಪಣೆಗೆ ಪೂರಕವಾದ ಹಾಸ್ಯವನ್ನು ನಾಯಕ ಯೋಗಿ ಬಾಬು ಮತ್ತು ನಿರ್ದೇಶಕರು ಸಮರ್ಥವಾಗಿ ನಿಭಾಯಿಸಿದ್ದಾರೆ. ಚಿತ್ರವನ್ನು ಎತ್ತಿಹಿಡಿದಿಡುವ ಅಂಶವೆಂದರೆ ಸಂಭಾಷಣೆಯೇ. ಹಾಸ್ಯದ ಜೊತೆಜೊತೆಗೆ ತಾತ್ವಿಕ ಲೇಪನವುಳ್ಳ ಸಂಭಾಷಣೆಯೂ ಮನಸ್ಸು ಮುಟ್ಟುತ್ತದೆ. ‘ಲಕ್ಕಿ ಮ್ಯಾನ್‌’ ತಮಿಳು ಸಿನಿಮಾ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ದುರದೃಷ್ಟವನ್ನು ಅದೃಷ್ಟವನ್ನಾಗಿ ಪರಿವರ್ತಿಸಿಕೊಳ್ಳಬಲ್ಲ ಸಾಮರ್ಥ್ಯ ಇರುವ ಮನುಷ್ಯನೇ ನಿಜವಾದ ಅದೃಷ್ಟವಂತ ಎನ್ನುವ ಜನಪ್ರಿಯ ನುಡಿಗಟ್ಟು ಒಂದಿದೆ. ಅದೇ ಸಾಲುಗಳನ್ನೇ ಸೂಚಿಸುವಂತಹ ಕಥಾಹಂದರವಿರುವ ಸಿನಿಮಾ ‘ಲಕ್ಕಿ ಮ್ಯಾನ್’. ಯೋಗಿ ಬಾಬು ಮತ್ತು ವೀರಾ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರ ಮನರಂಜನೆಯ ದೃಷ್ಟಿಯಿಂದ ಉತ್ತಮವಾಗಿದ್ದರೂ ಚಿತ್ರ ಮುಗಿದ ಬಳಿಕ ಅಷ್ಟೇನೂ ಕಾಡುವುದಿಲ್ಲ ಎನ್ನುವುದೂ ಹೌದು.

ಲಕ್ಕಿ ಮ್ಯಾನ್ ಏನು ಹೇಳಹೊರಟಿದ್ದಾನೆ ಎಂದು ನೋಡಿದರೆ ಇದು ಹುಟ್ಟಿನಿಂದಲೇ ದುರದೃಷ್ಟವನ್ನು ಹೊತ್ತುಕೊಂಡೇ ಹುಟ್ಟಿದವ ಎಂಬ ಹಣೆಪಟ್ಟಿ ಹೊತ್ತ ಮುರುಗನ್ ಎಂಬುವನ ಕಥೆ. ಮೊದಲಿನಿಂದಲೂ ಬರೀ ದುರದೃಷ್ಟವನ್ನೇ ನೋಡುತ್ತಾ ಬೆಳೆದ ಮುರುಗನ್‌ಗೆ ಆಚಾನಕ್ಕಾಗಿ ಲಕ್ಕಿ ಡ್ರಾ ಒಂದರಲ್ಲಿ ಕಾರು ಬಹುಮಾನವಾಗಿ ದೊರೆತು ತನ್ಮೂಲಕ ಆತನ ಅದೃಷ್ಟದ ಬಾಗಿಲನ್ನು ತೆರೆಯುತ್ತದೆ. ಹೇಗೆ ಆ ಘಟನೆ ಅವನ ಜೀವನದ ಅದೃಷ್ಟದ ದಾರಿಯನ್ನು ರೂಪಿಸುತ್ತಾ ಹೋಗುತ್ತದೆ ಎನ್ನುವುದೇ ಚಿತ್ರದ ತಿರುಳು.

ಬಾಲಾಜಿ ವೇಣುಗೋಪಾಲ್ ಈ ಚಿತ್ರದ ನಿರ್ದೇಶಕರು. ‘ಲಕ್ಕಿ ಮ್ಯಾನ್’ ಚಿತ್ರ ಶುರುವಾಗುವುದೇ ಅದೃಷ್ಟ ದುರಾದೃಷ್ಟಗಳ ಆಟವೆಂದೇ ಹೆಸರಾದ ಕ್ರಿಕೆಟ್ ಆಟದಲ್ಲಿ ಹೇಗೆ ಮುರುಗನ್ ತನ್ನ ದುರದೃಷ್ಟವಂತನ ಪಟ್ಟದಿಂದ ಆಟ ಆಡುವ ಅವಕಾಶವನ್ನು ಕಳೆದುಕೊಳ್ಳುತ್ತಾನೆ ಎಂಬ ದೃಶ್ಯದಿಂದ. ಚಿತ್ರದ ಮುಖ್ಯ ಹಂದರ ಹೀಗೇ ತೆರೆದುಕೊಳ್ಳುತ್ತಾ ಹಠಾತ್ತನೆ ಮುರುಗನ್ ಪಾಲಿಗೆ ಅದೃಷ್ಟದ ರೂಪದಲ್ಲಿ ಕಾರು ಬರುವುದನ್ನು ತೋರಿಸುವುದರ ಮೂಲಕ ಕಥೆಯ ಮತ್ತೊಂದು ಮಜಲನ್ನು ತೆರೆಸಿಡುತ್ತದೆ. ಹೇಗೆ ವ್ಯಕ್ತಿಗಳು ವಸ್ತುಗಳೊಡನೆ ಒಂದು ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಳ್ಳುತ್ತಾರೆ ಎಂಬುದರ ನೈಜ ಚಿತ್ರಣ ಈ ಚಿತ್ರದಲ್ಲಿದೆ.

ಚಿತ್ರ ದಿಢೀರನೆ ತನ್ನ ದುರದೃಷ್ಟದ ಹಾದಿ ಬಿಟ್ಟು ಮುರುಗನ್‌ಗೆ ಕಾರಿನ ರೂಪದಲ್ಲಿ ಒಲಿದ ಅದೃಷ್ಟದ ಹಾದಿಯಲ್ಲಿ ಸಾಗುತ್ತಾ ಆ ಕಾರಣದಿಂದಾಗಿ ಮುರುಗನ್ ಮತ್ತು ಇನ್‌ಸ್ಪೆಕ್ಟರ್‌ ಶಿವಕುಮಾರ್ ನಡುವೆ ಹೇಗೆ ವೈಮನಸ್ಯ ಸೃಷ್ಟಿಯಾಗುತ್ತದೆ ಎಂದು ತೋರಿಸುತ್ತಾ ಹೋಗುತ್ತದೆ. ತಪ್ಪು ಕಲ್ಪನೆ ಮತ್ತು ಅಹಂಕಾರ ಹೇಗೆ ಇವರಿಬ್ಬರ ನಡುವೆ ಕಂದಕವನ್ನು ಜಾಸ್ತಿ ಮಾಡುತ್ತಾ ಹೋಗುತ್ತದೆ ಎನ್ನುವುದನ್ನು ಹೇಳುತ್ತಾ ಹೋಗುತ್ತದೆ. ಇಷ್ಟಕ್ಕೂ ಅದೃಷ್ಟ ಎಂದರೇನು? ಅದನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಅದೃಷ್ಟ ಅನ್ನೋದು ನಿಜಕ್ಕೂ ಇದೆಯೇ ಅಥವಾ ಅದು ನಮ್ಮ ದೃಷ್ಟಿಕೋನಕ್ಕೆ ತಕ್ಕಂತೆ ನಾವು ಮಾಡಿಕೊಳ್ಳುವ ರಾಜಿಯೇ ಎಂಬಿತ್ಯಾದಿ ಪ್ರಶ್ನೆಗಳನ್ನು ಹುಟ್ಟುಹಾಕುತ್ತಲೇ ಚಿತ್ರದಲ್ಲಿ ಮುರುಗನ್ ಜೀವನದಲ್ಲಿ ಬಂದ ಅದೃಷ್ಟಲಕ್ಷ್ಮಿಯನ್ನು ಅವರಿಂದ ದೂರ ಮಾಡಲಾಗುತ್ತದೆ. ಒಲಿದು ಬಂದು ಮತ್ತೆ ತನ್ನಿಂದ ದೂರವಾದ ತನ್ನ ಅದೃಷ್ಟಲಕ್ಷ್ಮಿಯನ್ನು ಮತ್ತೆ ಹುಡುಕುತ್ತಾ ಹೊರಡುವ ಮುರುಗನ್‌ ಆಸಕ್ತಿಕರ ಹುಡುಕಾಟದ ಜಾಡಿನಲ್ಲೇ ಚಿತ್ರ ಸಾಗುತ್ತದೆ. ಅಲ್ಲಲ್ಲಿ ಚಿತ್ರಕತೆ ಎಳೆದಂತಿದೆಯಾದರೂ ಆಸಕ್ತಿದಾಯಕವಾಗಿದೆ.

ಮೊದಲನೇ ಅರ್ಧ ಸರಾಗವಾಗಿ ನೋಡಿಸಿಕೊಂಡು ಹೋದರೂ ಎರಡನೇ ಅರ್ಧ ಅಷ್ಟು ಮೊನಚಾಗಿಲ್ಲ. ಮುರುಗನ್ ಕಾರನ್ನು ಯಾರು ತೆಗೆದುಕೊಂಡರು ಎಂಬ ಅಂಶದ ಮೇಲೆ ಗಮನವನ್ನು ಜಾಸ್ತಿ ಕೊಡದೇ ಕೇವಲ ಅವನು ಅದನ್ನು ಹೇಗೆ ಮರಳಿ ಪಡೆದುಕೊಳ್ಳುತ್ತಾನೆ ಅನ್ನುವುದರ ಮೇಲೆ ಮಾತ್ರ ಜಾಸ್ತಿ ಕೇಂದ್ರೀಕರಿಸಿದ್ದಾರೆ. ಚಿತ್ರದಲ್ಲಿ ಕೊನೆಯಲ್ಲಿ ಹೀಗೇ ಆಗುತ್ತದೆ ಎಂದು ಊಹಿಸಿಬಿಡಬಹುದು. ಎರಡನೇ ಅರ್ಧ ಇನ್ನಷ್ಟು ಚುರುಕಾಗಿರಬಹುದಿತ್ತು.

ಚಿತ್ರದಲ್ಲಿ ಕೆಲವೊಂದು ಹಾಡುಗಳು ಚೆನ್ನಾಗಿದ್ದರೂ ಚಿತ್ರದ ಓಘವನ್ನು ಕಡಿಮೆ ಮಾಡಿವೆ. ಈ ಚಿತ್ರದ ಮುಖ್ಯ ಆಕರ್ಷಣೆ ಮತ್ತು ಶಕ್ತಿ ಎಂದರೆ ಸಂಭಾಷಣೆ. ಕಥೆಗೆ ಮತ್ತು ನಿರೂಪಣೆಗೆ ಪೂರಕವಾದ ಹಾಸ್ಯವನ್ನು ನಾಯಕ ಯೋಗಿ ಬಾಬು ಮತ್ತು ನಿರ್ದೇಶಕರು ಸಮರ್ಥವಾಗಿ ನಿಭಾಯಿಸಿದ್ದಾರೆ. ಚಿತ್ರವನ್ನು ಎತ್ತಿಹಿಡಿದಿಡುವ ಅಂಶವೆಂದರೆ ಸಂಭಾಷಣೆಯೇ. ಹಾಸ್ಯದ ಜೊತೆಜೊತೆಗೆ ತಾತ್ವಿಕ ಲೇಪನವುಳ್ಳ ಸಂಭಾಷಣೆಯೂ ಮನಸ್ಸು ಮುಟ್ಟುತ್ತದೆ. ಸಾಮಾನ್ಯ ನಮ್ಮಲ್ಲಿ ಹಾಸ್ಯನಟರ ಹಣೆಪಟ್ಟಿ ಹೊತ್ತ ನಟರು ನಾಯಕ ಪಾತ್ರಗಳಲ್ಲಿ ಯಶಸ್ವಿಯಾಗಿರುವ ಉದಾಹರಣೆಗಳು ವಿರಳ. ಯೋಗಿ ಬಾಬು ಈ ನಿಟ್ಟಿನಲ್ಲಿ ಪ್ರತ್ಯೇಕವಾಗಿ ನಿಲ್ಲುತ್ತಾರೆ. ವೈವಿಧ್ಯಮಯ ಅಭಿನಯ ಚಾತುರ್ಯದಿಂದ ಮನಸ್ಸನ್ನು ಗೆಲ್ಲುತ್ತಾರೆ. ಒಟ್ಟಾರೆ ಹೇಳಬೇಕೆಂದರೆ ಚಿತ್ರ ನೋಡಿ ಹೊರಬಂದ ಮೇಲೆ ಅಂಥ ಏನೂ ಕಾಡುವಂತಹ ಚಿತ್ರ ಅಲ್ಲದಿದ್ದರೂ ಮನರಂಜನೆಗೆ ಮೋಸವಿಲ್ಲದ ಅಪ್ಪಟ ಲವಲವಿಕೆಯ ಚಿತ್ರ. ‘ಲಕ್ಕಿ ಮ್ಯಾನ್‌’ ತಮಿಳು ಸಿನಿಮಾ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

LEAVE A REPLY

Connect with

Please enter your comment!
Please enter your name here