ಈ ಚಿತ್ರ ನೋಡುವಾಗ ‘ದೃಶ್ಯಂ’ ಚಿತ್ರವೇ ನೆನಪಾಗುತ್ತದೆ. ಅದರಲ್ಲೂ ಕೊಲೆಯನ್ನು ಮುಚ್ಚಿಹಾಕಲು ಪ್ರಯತ್ನ ಪಡುವ ಸನ್ನಿವೇಶಗಳಂತೂ ಬಹಳವೇ ‘ದೃಶ್ಯಂ’ ಚಿತ್ರವನ್ನು ಹೋಲುತ್ತವೆ. ಕೊನೆಯ 45 ನಿಮಿಷಗಳಲ್ಲಿ ಅದ್ಭುತ ವೇಗವನ್ನು ಪಡೆಯುತ್ತಾ ಪ್ರಭುದ್ಧ ಅಭಿನಯ ಮತ್ತು ಚಿತ್ರಕಥೆಯೊಂದಿಗೆ ಮನಸ್ಸನ್ನು ಗೆಲುತ್ತದೆ. ‘ಜಾನೇ ಜಾನ್’ ಚಿತ್ರ Netflixನಲ್ಲಿ ಸ್ಟ್ರೀಮ್ ಆಗುತ್ತಿದೆ.
ನಟಿ ಕರೀನಾ ಕಪೂರ್ ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದ ‘ಜಾನೇ ಜಾನ್’ ಚಿತ್ರ Netflixನಲ್ಲಿ ಬಿಡುಗಡೆಯಾಗಿದೆ. ಸುಜಯ್ ಘೋಷ್ ನಿರ್ದೇಶನದ ಚಿತ್ರದಲ್ಲಿ ಕರೀನಾ ಕಪೂರ್, ಜೈದೀಪ್ ಆಹಲವಾತ್, ವಿಜಯ್ ವರ್ಮಾ, ಸೌರಭ್ ಸಚ್‌ದೇವ್ ಮತ್ತು ನೈಶ ಖನ್ನಾ ಮುಖ್ಯಭೂಮಿಕೆಯಲ್ಲಿ ಇದ್ದಾರೆ. ಕೈಗೊ ಹೀಗಷಿನೋ ಅವರ ‘ದ ಡಿವೋಷನ್ ಆಫ್ ಸಸ್ಪೆಕ್ಟ್ ಎಕ್ಸ್’ ಕಾದಂಬರಿಯನ್ನು ಆಧರಿಸಿದ ಚಿತ್ರ ‘ಜಾನೇ ಜಾನ್’. ಜೈದೀಪ್ ಅಹಲವಾತ್ ಮತ್ತು ವಿಜಯ್ ವರ್ಮಾಗೆ ಈ ಚಿತ್ರದಲ್ಲಿ ಬಹಳ ನಿರ್ಣಾಯಕ ಪಾತ್ರಗಳಿವೆ. ಚಿತ್ರ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಲಭ್ಯವಿದೆ.
ಕಲೀಮ್ ಪಾಂಗ್ ಊರಿನಲ್ಲಿ ಮಾಯ ಡಿಸೋಜ ಅಲಿಯಾಸ್ ಸೋನಿಯಾ ಡಿಸೋಜ ಆಕೆಯ ಮಗಳೊಂದಿಗೆ ವಾಸವಾಗಿರುತ್ತಾಳೆ. ಆಕೆ ಸಿಂಗಲ್ ಪೇರೆಂಟ್. ಮಗಳ ಪಾಲನೆ ಪೋಷಣೆಗಾಗಿ ಕೆಫೆಯೊಂದರಲ್ಲಿ ಕೆಲಸ ಮಾಡುತ್ತಿರುತ್ತಾಳೆ. ತನ್ನ ಗಂಡ ಅಜಿತ್‌ನೊಂದಿಗೆ ಮೊದಲಿನಿಂದಲೂ ಭಿನ್ನಾಭಿಪ್ರಾಯ ಇದ್ದ ಕಾರಣ ಮಗಳು ತಾರಾ ಹುಟ್ಟುವುದಕ್ಕಿಂತ ಮೊದಲೇ ಇಬ್ಬರೂ ಬೇರೆಯಾಗಿರುತ್ತಾರೆ. ಮಾಯಾಳ ಪಕ್ಕದ ಮನೆಯಲ್ಲಿ ವಾಸವಾಗಿರುವ ಟೀಚರ್ ನರೇನ್ ವ್ಯಾಸ ಗುಟ್ಟಾಗಿ ಮಾಯಾಳನ್ನು ಇಷ್ಟಪಡುತ್ತಿರುತ್ತಾನೆ ಇದ್ದಕ್ಕಿದ್ದಂತೆ ಒಂದು ದಿನ ಯಾವುದೇ ಸುಳಿವು ನೀಡದೆ ಮಾಯಾಳ ಗಂಡ ಪ್ರತ್ಯಕ್ಷ ಆಗಿಬಿಡುತ್ತಾನೆ. ಅಜಿತ್ ಹಣ ಕೇಳಿ ಬಂದಿದ್ದಾನೆ ಎಂದು ಮಾಯಾ ಅಂದುಕೊಂಡರೆ ಅಜಿತನ ಉದ್ದೇಶಗಳು ಬೇರೆಯೇ ಇರುತ್ತದೆ. ಅನಿವಾರ್ಯವಾಗಿ ಮಾಯಾ ಅಜಿತನನ್ನು ಕೊಲೆ ಮಾಡಬೇಕಾಗುತ್ತದೆ. ತಾರಾ, ಅಮ್ಮನಿಗೆ ನೆರವಾಗುತ್ತಾಳೆ. ಕೊಲೆಯನ್ನು ಮುಚ್ಚಿಹಾಕಲು ಪಕ್ಕದ ಮನೆಯ ನರೇನ್ ಸಹಾಯ ಮಾಡುತ್ತಾನೆ. ಆದರೆ ಮಾಯಾಗೆ ಕೊಲೆ ಮಾಡುವಂತ ಅನಿವಾರ್ಯತೆ ಏನಿತ್ತು? ಮಾಯಾ, ತಾರಾ ಮತ್ತು ನರೇನ್ ಪೊಲೀಸ್ ಕೈಗೆ ಸಿಕ್ಕಿ ಬೀಳುತ್ತಾರಾ ಇತ್ಯಾದಿ ಪ್ರಶ್ನೆಗಳ ಸುತ್ತ ಸುತ್ತುವ ಚಿತ್ರ ‘ಜಾನೇ ಜಾನ್’.
‘ಪಾತಾಲ್ ಲೋಕ್’ ಖ್ಯಾತಿಯ ಜೈದೀಪ್ ಅಹಲವಾತ್ ತಮ್ಮ ಅದ್ಭುತ ಅಭಿನಯದಿಂದ ಮನಸೊರೆಗೊಳ್ಳುತ್ತಾರೆ. ಜೈದೀಪ್‌ರ ಸೂಕ್ಷ್ಮ ಭಾವಾಭಿನಯ ಈ ಕ್ರೈಮ್ ಥ್ರಿಲ್ಲರ್ ಮಾದರಿಯ ಚಿತ್ರಕ್ಕೆ ಹೇಳಿಮಾಡಿಸಿದಂತಿದೆ. ಅವರ ಅಭಿನಯ ಚಿತ್ರದ ರೋಚಕತೆಯನ್ನು ಒಂದು ಹಂತ ಮೇಲಕ್ಕೆ ಒಯ್ದು ನಿಲ್ಲಿಸುತ್ತದೆ. ಕರೀನಾ ಕಪೂರ್ ಅವರ ಅಭಿನಯ ಕೂಡ ಈ ಚಿತ್ರದ ಕಥಾವಸ್ತುವಿಗೆ ಬಹಳ ಪೂರಕವಾಗಿ ಮೂಡಿಬಂದಿದ್ದು ಮುಖ್ಯ ಸನ್ನಿವೇಶಗಳಲ್ಲಿ ಅವರ ಅಭಿನಯ ಚಿತ್ರವನ್ನು ಹಿಡಿದಿಡುವಂತೆ ಮಾಡಿದೆ. ಕೊನೆಯ 40 ನಿಮಿಷಗಳಲ್ಲಂತೂ ಅವರ ಅಭಿನಯ ಬಹಳ ಬಿಗಿಯಾಗಿದ್ದು ಚಿತ್ರದ ಮೆರುಗನ್ನು ಹೆಚ್ಚಿಸುತ್ತದೆ.
ಸಣ್ಣ ಊರಿನ ಹಿನ್ನೆಲೆಯನ್ನು ಬಹಳ ಸುಂದರವಾಗಿ ಕಟ್ಟಿಕೊಡಲಾಗಿದೆ. ಒಂದು ಕ್ರೈಮ್ ಚಿತ್ರಕ್ಕೆ ಬೇಕಾದ ಕಲಾವಂತಿಕೆಯನ್ನು ಮತ್ತು ದೃಶ್ಯಾವಿನ್ಯಾಸವನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿರುವ ಕಲಾನಿರ್ದೇಶನ ತಂಡಕ್ಕೆ ಶಹಭಾಷ್ ಹೇಳಲೇಬೇಕು. ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ವಿಜಯ್ ವರ್ಮಾರ ಅಭಿನಯ ಭೇಷ್ ಎನ್ನುವಂತಿದೆ. ವಿಜಯ್ ವರ್ಮಾ ಎಂದರೆ ಯಾವಾಗಲೂ ಖಳನಟನ ಛಾಯೆಯಿರುವ ಪಾತ್ರಗಳೇ ನೆನಪಾಗುತ್ತಿದ್ದು ಈ ಚಿತ್ರದಲ್ಲಿ ಒಂದು ಧನಾತ್ಮಕ ಪಾತ್ರದಲ್ಲಿ ಕಾಣಿಸಿಕೊಂಡು ಅದ್ಭುತ ಅಭಿನಯ ನೀಡಿದ್ದಾರೆ.
ಆದರೂ ಎಲ್ಲೋ ಒಂದು ಸಣ್ಣ ಹಿನ್ನೆಡೆ ಈ ಚಿತ್ರಕ್ಕೆ ಇರುವುದು ಎಂದರೆ ಎಲ್ಲೋ ನೋಡಿದಂತಿದೆಯಲ್ಲ ಎನಿಸುವುದು. ಏಕೆಂದರೆ ಈ ಚಿತ್ರವನ್ನು ಯಾವ ಕಾದಂಬರಿಯನ್ನು ಆಧರಿಸಿ ಮಾಡಲಾಗಿದೆಯೋ ಅದೇ ಕಾದಂಬರಿಯ ಪ್ರೇರಣೆ ತೆಗೆದುಕೊಂಡು ಮಲಯಾಳಂ ಚಿತ್ರ ‘ದೃಶ್ಯಂ’ ಮಾಡಲಾಗಿತ್ತು. ಹಾಗಾಗಿ ಎಷ್ಟೇ ಬೇಡವೆಂದರೂ ಈ ಚಿತ್ರ ನೋಡುವಾಗ ‘ದೃಶ್ಯಂ’ ಚಿತ್ರವೇ ನೆನಪಾಗುತ್ತದೆ. ಅದರಲ್ಲೂ ಕೊಲೆಯನ್ನು ಮುಚ್ಚಿಹಾಕಲು ಪ್ರಯತ್ನ ಪಡುವ ಸನ್ನಿವೇಶಗಳಂತೂ ಬಹಳವೇ ‘ದೃಶ್ಯಂ’ ಚಿತ್ರವನ್ನು ಹೋಲುತ್ತವೆ. ಮೊದಲನೇ ಅರ್ಧವಂತೂ ಹೆಚ್ಚು ಕಮ್ಮಿ ‘ದೃಶ್ಯಂ’ ಚಿತ್ರಕ್ಕೆ ಬಹಳ ಹೋಲಿಕೆ ಇದೆಯಾದರೂ ‘ಜಾನೇ ಜಾನ್’ ಕೊನೆಯ 45 ನಿಮಿಷಗಳಲ್ಲಿ ಅದ್ಭುತ ವೇಗವನ್ನು ಪಡೆಯುತ್ತಾ ಪ್ರಭುದ್ಧ ಅಭಿನಯ ಮತ್ತು ಚಿತ್ರಕಥೆಯೊಂದಿಗೆ ಮನಸ್ಸನ್ನು ಗೆಲುತ್ತದೆ.
ಮೊದಲನೇ ಅರ್ಧ ಸ್ವಲ್ಪ ವೇಗವಾಗಿ ಇರಬಹುದಿತ್ತು. ಸಂಕಲನ ಸ್ವಲ್ಪ ಚುರುಕಾಗಿ ಇರಬಹುದಿತ್ತು. ಚಿತ್ರದ ಅಂತ್ಯ ಕೂಡ ಒಂದಷ್ಟು ಪ್ರಶ್ನೆಗಳನ್ನು ಬಗೆಹರಿಸದೆ ಮುಗಿದುಬಿಡುತ್ತದೆ. ಮಾಯಾ ಡಿಸೋಜಳ ಗಂಡನ ಪಾತ್ರಕ್ಕೆ ಇನ್ನೂ ಹೆಚ್ಚಿನ ಮಹತ್ವ ನೀಡಬಹುದಿತ್ತು ಎಂದೂ ಅನ್ನಿಸುತ್ತದೆ. ಶೋರ್ ಪೊಲೀಸ್ ನೀಡಿರುವ ಹಿನ್ನೆಲೆ ಸಂಗೀತ ಬಹಳ ಪರಿಣಾಮಕಾರಿಯಾಗಿದೆ. ಅವಿಕ್ ಮುಖ್ಯೋಪಾಧ್ಯಯ ಅವರ ಛಾಯಾಗ್ರಹಣವಂತೂ ಅದ್ಭುತ. ಸಂಭಾಷಣೆ ಕೂಡ ಚುರುಕಾಗಿದ್ದು ಸಂಕಲನ ವಿಭಾಗದಲ್ಲಿ ಮಾತ್ರ ತುಸು ಹಿನ್ನೆಡೆ ಕಂಡುಬರುತ್ತದೆಯಷ್ಟೇ.
ನಿರ್ದೇಶಕರು ಕಲಾವಿದರಿಂದ ಉತ್ತಮ ಅಭಿನಯ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆದರೂ ಚಿತ್ರಕಥೆಯ ವಿಷಯದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡಿದ್ದರೆ ‘ದೃಶ್ಯಂ’ ಚಿತ್ರದ ಹೋಲಿಕೆ ಸ್ವಲ್ಪ ಕಡಿಮೆಯಾಗಿ ಈ ಚಿತ್ರಕ್ಕೆ ಮತ್ತಷ್ಟು ಬಲ ಮತ್ತು ಅನನ್ಯತೆ ಬರುವ ಸಾಧ್ಯತೆ ಇತ್ತು. ಅದೇನೇ ಇರಲಿ ‘ಜಾನೇ ಜಾನ್’ ಚಿತ್ರ ಒಂದು ಉತ್ತಮ ಕ್ರೈಮ್ ಥ್ರಿಲ್ಲರ್ ಎನ್ನಲು ಅಡ್ಡಿಯಿಲ್ಲ. ಕಲಾವಿದರ ಉತ್ತಮ ಅಭಿನಯ ಮತ್ತು ಕೊನೆಯ 40 ನಿಮಿಷಗಳ ಬಿಗಿಯಾದ ನಿರೂಪಣೆ ಮತ್ತು ಛಾಯಾಗ್ರಹಣ ಈ ಚಿತ್ರವನ್ನು ಎತ್ತಿ ಹಿಡಿದಿವೆ. ‘ಜಾನೇ ಜಾನ್’ Netflixನಲ್ಲಿ ಸ್ಟ್ರೀಮ್ ಆಗುತ್ತಿದೆ.