ಈ ಕತೆ ನಡೆಯುವುದು ಒಂದು ಪುಟ್ಟ ದ್ವೀಪದಲ್ಲಿ. ಇದು ಬಹಳ ಮುಖ್ಯವಾದ ಕ್ರಿಯೇಟಿವ್ ಚಾಯ್ಸ್. ಒಂದು ಇಕ್ಕಟ್ಟಿನ ಜಾಗದಲ್ಲಿ ಇಕ್ಕಟ್ಟಿನ ಸ್ಥಿತಿ ನಿರ್ಮಿಸಿ ಒಂದಷ್ಟು ಪಾತ್ರಗಳನ್ನ ಬಿಟ್ಟು ‘ನೋಡಣ ಇವಾಗೇನಾಗತ್ತೆ’ ಅನ್ನುವಂತಿದೆ ಮೆಕ್ಡೊನಾ ಅವರ ‘ಅಪ್ರೋಚ್’. ‘ದ ಬ್ಯಾನ್ಶೀಸ್ ಆಫ್ ಇನಿಶೆರಿನ್’ ಇಂಗ್ಲಿಷ್‌ ಸಿನಿಮಾ Disney Hotstarನಲ್ಲಿ ಸ್ಟ್ರೀಮ್‌ ಆಗುತ್ತಿದೆ.

“ನಿನ್ನೆ ತನಕ ನೀನ್ ಇಷ್ಟ ಇದ್ದೆ, ಆದ್ರೆ ಈಗ ನೀನು ಸಪ್ಪೆ ಅನಿಸ್ತಿದೀಯ. ಹಂಗಾಗಿ ನಾವಿಬ್ರೂ ಮಾತಾಡ್ದೆ ಇರೋದೇ ಒಳ್ಳೇದು” ಹಿಂಗಂತ ನಿಮ್ಮ ಒಬ್ಬ ಕುಚಿಕು ಗೆಳೆಯ ಹೇಳಿದ್ರೆ ಹೆಂಗಿರತ್ತೆ? ಕಿತ್ತಾಡಿಲ್ಲ, ವೈಮನಸ್ಯ ಇಲ್ಲ, ಎಂಥದ್ದೂ ಇಲ್ಲ. ಜಸ್ಟ್ ಸಪ್ಪೆ ಅನಿಸ್ತಿದೀರ ಅನ್ನೋ ಕಾರಣ ಕೊಟ್ಟು ಯಾರಾದ್ರೂ ಗೆಳೆತನ ಕಟ್ ಮಾಡಬಹುದಾ? ಅವರಿಷ್ಟ ಕಟ್ ಮಾಡಬಹುದು. ಆದ್ರೆ ನಿಮಗೆ ಅದು ಸಕಾರಣ ಅಂತ ಕನ್ವಿನ್ಸ್ ಆಗಬೇಕಲ್ಲ?

ಬರೀ ಇಷ್ಟೇ ಎಳೆ ಇಟ್ಟುಕೊಂಡು ಐರಿಷ್ ಸಿವಿಲ್ ವಾರ್ ಹಿನ್ನೆಲೆಯಲ್ಲಿ ಒಂದು ಪುಟ್ಟ ದ್ವೀಪದಲ್ಲಿ ಇಬ್ಬರು ಗೆಳೆಯರು, ಒಂದೆರಡು ಕತ್ತೆಗಳು, ಒಂದು ನಾಯಿ ಮತ್ತೊಂದಷ್ಟು ಆಸಕ್ತಿಕರ ಪಾತ್ರಗಳ ಸುತ್ತಾ ನಡೆಯುವ ಘಟನಾವಳಿಗಳೇ ಈ ‘ದ ಬ್ಯಾನ್ಶೀಸ್ ಆಫ್ ಇನಿಶೆರಿನ್’ ಸಿನಿಮಾ. ನೀವು ಈ ಚಿತ್ರದ ಬರಹಗಾರ ಮತ್ತು ನಿರ್ದೇಶಕ ಮಾರ್ಟಿನ್ ಮೆಕ್ಡೊನಾ ಅವರ ಹಿಂದಿನ ಚಿತ್ರಗಳನ್ನು ನೋಡಿದ್ದರೆ ‘ಪ್ಲಾಟ್’ ಅಥವಾ ಕತೆಗಿಂತ ಪಾತ್ರಗಳು ಮತ್ತು ಕತೆ ನಡೆಯುವ ಸ್ಥಳದ ಬಗ್ಗೆ ಅವರು ಹೆಚ್ಚು ತಲೆಕೆಡಿಸಿಕೊಳ್ಳೋದು ನಿಮ್ಮ ಗಮನಕ್ಕೆ ಬರುತ್ತದೆ.

ಮಾರ್ಟಿನ್ ಮೆಕ್ಡೊನಾ ಮೂಲತಃ ನಾಟಕಕಾರರಾಗಿ ತಮ್ಮ ವೃತ್ತಿಜೀವನ ಆರಂಭಿಸಿದ್ದರಿಂದಲೋ ಏನೋ ಇಂತಹ ಕ್ಷುಲ್ಲಕ ಅನಿಸಬಹುದಾದ ಚಿಕ್ಕ ಲೈನ್‌ಗಳೊಂದಿಗೆ ಪಾತ್ರಗಳ ಆಳಕ್ಕೆ ಇಳಿಯೋ ಕಲೆ ಅವರಿಗೆ ಕರಗತವಾಗಿದೆ. ನಾಟಕಕಾರರಾಗಿ ಸಿನಿಮಾಕ್ಕೆ ಬಂದವರು ಅಥವಾ ನಾಟಕಗಳನ್ನು ಆಧರಿಸಿ ಸಿನಿಮಾ ಮಾಡುವ ಬಿಲ್ಲಿ ವೈಲ್ಡರ್ ತರದ ಫಿಲ್ಮ್‌ ಮೇಕರ್‌ಗಳಲ್ಲಿ ನಮಗೆ ಎದ್ದು ಕಾಣುವ ಮೊಟ್ಟ ಮೊದಲ ಅಂಶ ಎಂದರೆ ಬರೀ ಪಾತ್ರಗಳ ನಡುವೆ ನಡೆಯುವ ‘ಡ್ರಾಮಾ’ವನ್ನೇ ನೆಚ್ಚಿಕೊಂಡು ಓಡುವ ನರೇಟಿವ್. ದೊಡ್ಡ ದೊಡ್ಡ ಸೆಟ್ ಪೀಸ್‌ಗಳು, ಆ್ಯಕ್ಷನ್ ಸೀಕ್ವೆನ್ಸ್‌ಗಳು ಅಥವಾ ಒಂದು ಸಸ್ಪೆನ್ಸೋ ಇಲ್ಲಾ ಥ್ರಿಲ್ಲರ್ ಅಂಶಗಳನ್ನು ನೆಚ್ಚಿಕೊಂಡು ಸಾಗುವ ಕಥಾನಕಗಳಿಗೆ ಎದುರಾಗಿ ಇದನ್ನು ಹೋಲಿಸಿದರೆ ಈ ವ್ಯತ್ಯಾಸ ನಿಮಗೆ ಹೆಚ್ಚು ಸ್ಪಷ್ಟವಾಗಿ ಗೋಚರಿಸಲು ಸಾಧ್ಯ. ಸಾಮಾನ್ಯರ ಜೀವನದಲ್ಲಿ ನಡೆಯುವುದೂ ಆಲ್‌ಮೋಸ್ಟ್‌ ಇದೇ. ಮೆಕ್ಡೊನಾ ಅವರ ಆಸಕ್ತಿ ಇರುವುದು ಇಲ್ಲೇ. ಏಕೆಂದರೆ ಮೇಲೆ ಹೆಸರಿಸಿದ ಚಿತ್ರಗಳನ್ನು ಮಾಡಲು ಬೇಕಾದಷ್ಟು ಜನ ಇದ್ದಾರೆ. ಅದಕ್ಕೇ ನಾನೇ ಬೇಕಾಗಿಲ್ಲ ಅನ್ನುವುದು ಅವರ ವಾದ.

ಈ ಕತೆ ನಡೆಯುವುದು ಒಂದು ಪುಟ್ಟ ದ್ವೀಪದಲ್ಲಿ ಅಂತ ಹೇಳಿದ್ನಲ್ಲ. ಇದು ಬಹಳ ಮುಖ್ಯವಾದ ಕ್ರಿಯೇಟಿವ್ ಚಾಯ್ಸ್. ಸರಿ, ನಿನ್ನೆ ನನ್ನನ್ನು ಇಷ್ಟ ಪಡುತ್ತಿದ್ದ ಗೆಳೆಯ ಇವತ್ತು ನೀನು ಬೋರಿಂಗ್ ವ್ಯಕ್ತಿ ಗುರು ಇನ್ಮೇಲೆ ನಿನ್ನ ಸಹವಾಸ ಬೇಡ ಅಂದ್ರೆ ಬೇರೆ ಜಾಗದಲ್ಲಾಗಿದ್ದರೆ ಅವರು ಅವರವರ ದಾರಿ ಹಿಡಿದುಕೊಂಡು ಹೋಗಬಹುದಿತ್ತು. ಆದರೆ ಈ ಚಿಕ್ಕ ದ್ವೀಪದಲ್ಲಿ ಬೆಳಿಗ್ಗೆ ಹೊತ್ತು ಮೂಡಿದರೆ ಒಬ್ಬರ ಮುಖ ಒಬ್ಬರು ನೋಡಲೇಬೇಕು. ಕುಡಿಯಲು, ಮತ್ತೊಬ್ಬರ ಜೊತೆಗೆ ಹರಟಲು ಇನ್ನಿತರ ಸೋಷಿಯಲ್ ಚಟುವಟಿಕೆಗಳಿಗೆಲ್ಲ ಇರುವುದು ಒಂದೇ ಜಾಗ. ಅಲ್ಲಿ ಒಬ್ಬರಿಗೊಬ್ಬರು ಎಡತಾಕಲೇ ಬೇಕು. ಇಂತಹ ಇಕ್ಕಟ್ಟಿನ ಜಾಗದಲ್ಲಿ ಇಂಥದ್ದೊಂದು ಇಕ್ಕಟ್ಟಿನ ಸ್ಥಿತಿ ನಿರ್ಮಿಸಿ ಒಂದಷ್ಟು ಪಾತ್ರಗಳನ್ನ ಬಿಟ್ಟು ‘ನೋಡಣ ಇವಾಗೇನಾಗತ್ತೆ’ ಅನ್ನುವಂತಿದೆ ಮೆಕ್ಡೊನಾ ಅವರ ‘ಅಪ್ರೋಚ್’. ಆದರೆ ಅದು ಬೇಜವಾಬ್ದಾರಿ ಅಥವಾ ಉಡಾಫೆಯದ್ದಲ್ಲ. ಇಲ್ಲಿರುವ ಪ್ರತಿಯೊಂದು ಪಾತ್ರದ ಬಗ್ಗೆಯೂ ಅವರಿಗೆ ಅಕ್ಕರೆಯಿದೆ. ಇತರರಿಗೆ ಸಿಲ್ಲಿ ಅನಿಸಬಹುದಾದ ಪಾತ್ರಗಳ ಆಸೆ, ಉದ್ದೇಶ ಅಥವಾ ನಡವಳಿಕೆಗಳ ಕುರಿತು ಎಂಪಥಿ ಇದೆ.

ಇದಿಷ್ಟು ಕತೆ ನಡೆಯುವ ಸ್ಪೇಸ್ ಬಗೆಯಾದರೆ ಕತೆ ನಡೆಯುವ ಕಾಲ ಎರಡನೇ ಪ್ರಮುಖವಾದ ಕ್ರಿಯೇಟಿವ್ ಚಾಯ್ಸ್. ಇಂಗ್ಲೆಂಡ್ ಪಕ್ಕವೇ ಇರುವ ಮತ್ತೊಂದು ದ್ವೀಪ ರಾಷ್ಟ್ರ ಐರ್ಲೆಂಡ್. ಇದನ್ನ ಬ್ರಿಟಿಷರು ತಮ್ಮ ವಸಾಹತು ಮಾಡಿಕೊಂಡು ಆಳುತ್ತಾ ಇರುತ್ತಾರೆ. ಎಲ್ಲಾ ಕಡೆ ಬ್ರಿಟಿಷರ ವಿರುದ್ಧ ಎದ್ದ ದಂಗೆಯಂತೆ ಇಲ್ಲೂ ಕೂಡಾ ತಮಗೆ ಅವರಿಂದ ಸ್ವಾತಂತ್ರ್ಯ ಬೇಕು ಎಂಬ ಕೂಗು ಎದ್ದೇಳತ್ತೆ. ಆದರೆ ದಕ್ಷಿಣ ಐರ್ಲೆಂಡ್‌ನಲ್ಲಿದ್ದಂತೆ ಉತ್ತರದಲ್ಲಿ ಇದಕ್ಕೆ ತಕ್ಕ ಸಹಕಾರ ಸಿಗುವುದಿಲ್ಲ. ಸಹಕಾರ ಇರಲಿ ನಾವು ಬ್ರಿಟಿಷ್ ಅಧಿಪತ್ಯದಲ್ಲೇ ಇರುತ್ತೇವೆ ಎಂಬ ನಿಲುವಿಗೆ ಬರುತ್ತಾರೆ. ಅಣ್ಣತಮ್ಮರು, ಸ್ನೇಹಿತರು ಮತ್ತು ಬಂಧುಗಳಾಗಿದ್ದವರೇ ಒಬ್ಬರಿಗೊಬ್ಬರು ತಿರುಗಿ ಬೀಳುತ್ತಾರೆ. ಇಂತಹ ಸಂದರ್ಭಗಳನ್ನು ತಮ್ಮ ಲಾಭಕ್ಕಾಗಿ ಉಪಯೋಗಿಸಿಕೊಳ್ಳುವ ರಾಜಕೀಯ ಚತುರರು ಇಂತಹ ಅವಕಾಶಗಳನ್ನು ಇನ್ನೂ ಚೆನ್ನಾಗೇ ಉಪಯೋಗಿಸಿಕೊಳ್ಳುತ್ತಾರೆ. ಸಿಂಪಲ್ಲಾಗಿ ಹೇಳಬೇಕಂದ್ರೆ ಉತ್ತರದವರಿಗೆ ಶಸ್ತ್ರಾಸ್ತ್ರಗಳನ್ನ ಕೊಟ್ಟು ದಕ್ಷಿಣದವರ ಮೇಲೆ ಛೂ ಬಿಡುತ್ತಾರೆ.

ಅಂದಮಾತ್ರಕ್ಕೆ ಮೆಕ್ಡೊನಾ ಅವರ ಉದ್ದೇಶ ಐರಿಶ್ ಸಿವಿಲ್ ವಾರ್ ಬಗ್ಗೆ ವಿಡಂಬನೆ ಮಾಡುವುದಲ್ಲ. ಅವರ ಉದ್ದೇಶ ಇವೆರಡೂ ಪಾತ್ರಗಳ ನಡುವಿನ ಡ್ರಾಮಾವನ್ನು ಕಟ್ಟಿಕೊಡುವುದು. ಆದರೆ ಬೇರಾವುದೇ ಜಾಗದಲ್ಲಿ ಬೇರಾವುದೇ ಕಾಲದಲ್ಲಿ ಹೋಗ್ ಗುರು ಅದೆಂಗೆ ಇದ್ಕಿದ್ದಂಗೆ ಗೆಳೆಯನೊಬ್ಬ ನೀನ್ ಸಪ್ಪೆ ಅನಿಸ್ತಿದೀಯ ಅನ್ನೊ ಕಾರಣಕ್ಕೆ ದೂರ ಹೋಗ್ತಾನೆ ಅನಿಸಬಹುದು. ಆದರೆ ಇವೆರಡೂ ಕ್ರಿಯೇಟಿವ್ ಚಾಯ್ಸ್‌ಗಳನ್ನು ಉಪಯೋಗಿಸಿಕೊಂಡು ಇದನ್ನ ಮೆಕ್ಡೊನಾ ಅವರು ಸಖತ್ ಆರ್ಗ್ಯಾನಿಕ್ ಆಗಿ ನಿರೂಪಿಸುತ್ತಾರೆ. ಮೆಕ್ಡೊನಾ ಮೂಲತಃ ಐರಿಶ್ ಅನ್ನೋದೂ ಒಂದು ಕಾರಣ ಅನ್ನಿ. ಆದರೆ ಒಂದು ಕತೆಯನ್ನು ಸಶಕ್ತವಾಗಿ ನಿರೂಪಿಸೋದಕ್ಕೆ ಕತೆಗಾರ ತನ್ನ ಸುತ್ತಮುತ್ತಲಿನ ಪರಿಸರವನ್ನು (ಅಂದರೆ ಜಾಗ, ಜಾಗದ ಭಾಷೆ, ಅದರ ಇತಿಹಾಸ ಎಲ್ಲಾ ಸೇರಿ) ಎಷ್ಟು ಜಾಣತನದಿಂದ ಬಳಸಿಕೊಳ್ಳಬಹುದು ಅನ್ನೋದಕ್ಕೆ ಇದು ಒಳ್ಳೇ ಉದಾಹರಣೆ. ಬ್ಯಾನ್ಶೀಸ್ ಅನ್ನೋದೂ ಕೂಡಾ ಐರಿಶ್ ಜನರ ಜನಪದವೇ. ತುಂಬಾ ಕಾಂಪ್ಲಿಕೇಟೆಡ್ ಅನಿಸ್ತಾ ಇದ್ಯಾ? ಖಂಡಿತಾ ಇಲ್ಲ. ತುಂಬಾ ಮಜವಾದ, ಮನಸ್ಸಿಗೆ ತಟ್ಟುವಂತಹ ಸುಂದರವಾದ ಸಿನಿಮಾ ‘ದ ಬ್ಯಾನ್ಶೀಸ್ ಆಫ್ ಇನಿಶೆರಿನ್’. Disney Hotstarನಲ್ಲಿ ನೋಡಲು ಸಿಗುತ್ತದೆ.

LEAVE A REPLY

Connect with

Please enter your comment!
Please enter your name here