ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಇತ್ತೀಚೆಗೆ ಅಶ್ಲೀಲ ಚಿತ್ರಗಳ ತಯಾರಿಕೆ ಆರೋಪದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದರು. ಈ ಸಮಯದಲ್ಲಿ ನಟಿ ಶೆರ್ಲಿನ್ ಚೋಪ್ರಾ ಅವರು ರಾಜ್ ಕುಂದ್ರಾ ವಿರುದ್ಧ ಮಾತನಾಡಿ ಹಲವು ಆರೋಪಗಳನ್ನು ಮಾಡಿದ್ದರು. ಈಗ ಪ್ರಕರಣ ಮತ್ತೊಂದು ತಿರುವು ಪಡೆದಿದೆ.

ನಟಿ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ರಾಜ್ ಕುಂದ್ರಾ ದಂಪತಿ ನಟಿ ಶೆರ್ಲಿನ್ ಚೋಪ್ರಾ ವಿರುದ್ಧ 50 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಏಕಾಏಕಿ ಕುಂದ್ರಾ ಮತ್ತು ಶಿಲ್ಪಾ ದಂಪತಿಗಳು ಈ ಕೇಸನ್ನು ಹಾಕಿಲ್ಲ. ಇದಕ್ಕೆ ಮತ್ತೆ ಕುಮ್ಮಕ್ಕು ನೀಡಿದವರು ಸ್ವತಃ ನಟಿ ಶೆರ್ಲಿನ್ ಛೋಪ್ರಾ. ಹೌದು, ಕೆಲವು ದಿನಗಳ ಹಿಂದೆ, ಅಂದರೆ ಅಕ್ಟೋಬರ್ 14ರಂದು, ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ, ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ವಿರುದ್ಧ ಒಂದು ಕೇಸು ದಾಖಲಿಸಿದ್ದರು. ತನ್ನ ವಿರುದ್ಧ ವಂಚನೆ ಮತ್ತು ಮಾನಸಿಕ ಕಿರುಕುಳ ನೀಡಿದ ಆರೋಪದ ಮೇಲೆ ನಟಿ ದೂರು ದಾಖಲಿಸಿದ್ದರು. ಜುಹೂ ಪೊಲೀಸ್ ಠಾಣೆಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದ ಅವರು, “ನಾನು ನನ್ನ ದೂರನ್ನು ಸಲ್ಲಿಸಿದ್ದೇನೆ ಲೈಂಗಿಕ ಕಿರುಕುಳ, ವಂಚನೆ ಮತ್ತು ಕ್ರಿಮಿನಲ್ ಬೆದರಿಕೆಗಾಗಿ ರಾಜ್ ಕುಂದ್ರಾ ವಿರುದ್ಧ ಎಫ್ಐಆರ್ ದಾಖಲಿಸಲು ಈ ದೂರು ನೀಡಲಾಗಿದೆ” ಎಂದಿದ್ದರು.

ದೂರಿಗೆ ಪ್ರತಿ ದೂರು ಎನ್ನುವಂತೆ “ಇದು ಸುಳ್ಳು ದೂರು. ಇದರಿಂದ ನಮ್ಮ ಗೌರವಕ್ಕೆ ಧಕ್ಕೆಯಾಗಿದೆ” ಎಂದು ರಾಜ್ ಕುಂದ್ರಾ ಮತ್ತು ಶಿಲ್ಪಾ ಶೆಟ್ಟಿ ದಂಪತಿ ನಟಿ ಶೆರ್ಲಿನ್‌ ಚೋಪ್ರಾ ಅವರ ಮೇಲೆ 50 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಉದ್ಯಮಿ ರಾಜ್ ಕುಂದ್ರಾ ಅವರನ್ನು ಅಶ್ಲೀಲ ಚಿತ್ರಗಳ ಸೃಷ್ಟಿಯ ಆರೋಪದ ಮೇಲೆ ಜುಲೈ 19ರಂದು ಪೊಲೀಸರು ಬಂಧಿಸಿದ್ದರು. ಕುಂದ್ರಾ ಜೊತೆ ಇತರೆ ಹನ್ನೊಂದು ಮಂದಿಯನ್ನೂ ವಶಕ್ಕೆ ಪಡೆಯಲಾಗಿತ್ತು. ಕೆಲವು ದಿನಗಳ ನಂತರ ಐವತ್ತು ಸಾವಿರ ರೂಗಳ ಶ್ಯೂರಿಟಿಯ ಮೇಲೆ ಈ ಪ್ರಕರಣದಲ್ಲಿ ಮುಂಬೈ ಕೋರ್ಟ್ ಸೆಪ್ಟೆಂಬರ್ 20ರಂದು ರಾಜ್ ಅವರಿಗೆ ಜಾಮೀನು ನೀಡಿತ್ತು. ಇದೀಗ ಶೆರ್ಲಿನ್ ಮೇಲೆ ದೂರು ದಾಖಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಶೆರ್ಲಿನ್ ಯಾವ ರೀತಿ ಪ್ರತಿಕ್ರಿಯಿಸಬಹುದು ಎಂದು ಬಾಲಿವುಡ್ ಕುತೂಹಲದಿಂದ ಎದುರು ನೋಡುತ್ತಿದೆ.

LEAVE A REPLY

Connect with

Please enter your comment!
Please enter your name here