‘ದೇವ್ರಾಣೆಗೂ ನಮ್ದು PAN INDIA ಸಿನಿಮಾ ಅಲ್ಲ. ನಮ್ದು ‘ಬರೀ’ ಸಿನಿಮಾ!’ – ಇಂಥದ್ದೊಂದು ಒಕ್ಕಣಿಯೊಂದಿಗೆ ‘ತೋತಾಪುರಿ’ ಪೋಸ್ಟರ್ ಬಿಡುಗಡೆಯಾಗಿದೆ. ಜಗ್ಗೇಶ್ ನಟನೆಯ ಈ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎನ್ನುವುದು ಹೊಸ ಸುದ್ದಿ.
ವಿಜಯಪ್ರಸಾದ್ ನಿರ್ದೇಶನದಲ್ಲಿ ಜಗ್ಗೇಶ್ ನಟಿಸುತ್ತಿರುವ ‘ತೋತಾಪುರಿ’ ಚಿತ್ರತಂಡದಿಂದ ಹೊಸ ಸುದ್ದಿ ಹೊರಬಿದ್ದಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ. ಹಾಗಾಗಿ ‘ತೋತಾಪುರಿ’ ಪ್ಯಾನ್ ಇಂಡಿಯಾ ಚಿತ್ರವಾಗಲಿದೆ. ಆದರೆ ಚಿತ್ರತಂಡ ಇದನ್ನು ಒಪ್ಪುತ್ತಿಲ್ಲ. ‘ದೇವ್ರಾಣೆಗೂ ನಮ್ದು PAN INDIA ಸಿನಿಮಾ ಅಲ್ಲ. ನಮ್ದು ‘ಬರೀ’ ಸಿನಿಮಾ!’ ಎಂದು ಪೋಸ್ಟರ್ ಮೇಲೆ ಹಾಕಿಬಿಟ್ಟಿದ್ದಾರೆ. ಈ ಮೂಲಕ ನಿರ್ದೇಶಕ ವಿಜಯಪ್ರಸಾದ್ ಸಿನಿಪ್ರಿಯರ ತಲೆಗೆ ಹುಳ ಬಿಟ್ಟಿದ್ದಾರೆ. ‘ದೃಷ್ಟಿ ಬಿದ್ರೂ ಪರ್ವಾಗಿಲ್ಲ, ಆದ್ರೆ ವಕ್ರದೃಷ್ಟಿ ಬೀಳ್ದೇ ಇರ್ಲಿ!” ಎನ್ನುವ ಮತ್ತೊಂದು ಒಕ್ಕಣಿಯೂ ಪೋಸ್ಟರ್ ಮೇಲಿದೆ.
‘ನೀರ್ ದೋಸೆ’ ಚಿತ್ರದಲ್ಲಿ ನಿರ್ದೇಶಕ ವಿಜಯಪ್ರಸಾದ್ ಮತ್ತು ನಟ ಜಗ್ಗೇಶ್ ಮೋಡಿ ಮಾಡಿದ್ದರು. ತರ್ಲೆ ಮಾತುಗಳಲ್ಲೇ ಫಿಲಾಸಫಿ ಹೇಳುವ ಪ್ರಯತ್ನಿವಿದು. ‘ತೋತಾಪುರಿ’ ಚಿತ್ರದಲ್ಲೂ ಈ ಶೈಲಿ ಮುಂದುವರೆಯಬಹುದು ಎನ್ನುವುದು ಜಗ್ಗೇಶ್ ಅಭಿಮಾನಿಗಳ ನಿರೀಕ್ಷೆ. ಮೊದಲು ಕನ್ನಡದಲ್ಲಷ್ಟೇ ಎಂದು ಶುರುವಾದ ಸಿನಿಮಾ ಈಗ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಎರಡು ಭಾಗಗಳಲ್ಲಿ ಸಿನಿಮಾ ತೆರೆಕಾಣಲಿದೆ ಎನ್ನುವುದು ಮತ್ತೊಂದು ವಿಶೇಷ. ಹೀಗೆ ಚಿತ್ರದ ಕುರಿತಾಗಿ ಒಂದೊಂದೇ ಹೊಸ ಮಾಹಿತಿಗಳು ಹೊರಬೀಳುತ್ತಿವೆ. ಈಗಾಗಲೇ ಬಿಡುಗಡೆಯಾಗಿರುವ ಪ್ರೊಮೋಷನಲ್ ಟೀಸರ್ ಜನರಿಗೆ ಇಷ್ಟವಾಗಿದೆ. ಈಗ ಪ್ಯಾನ್ ಇಂಡಿಯಾ ಟ್ಯಾಗ್‌ನೊಂದಿಗೆ ಚಿತ್ರದ ಮೇಕಿಂಗ್ ಕೂಡ ಎತ್ತರಕ್ಕೇರಬಹುದು. ಕೆ.ಎ.ಸುರೇಶ್ ನಿರ್ಮಾಣದ ಚಿತ್ರದ ಇತರೆ ಪ್ರಮುಖ ತಾರಾಬಳಗದಲ್ಲಿ ಅದಿತಿ ಪ್ರಭುದೇವ, ಧನಂಜಯ, ಸುಮನ್ ರಂಗನಾಥ್ ನಟಿಸಿದ್ದಾರೆ.