‘ಕಮರೊಟ್ಟು ಚೆಕ್‌ಪೋಸ್ಟ್‌’ ಖ್ಯಾತಿಯ ಪರಮೇಶ್‌ ಚಿತ್ರದ ಸೀಕ್ವೆಲ್‌ ‘ಕಮರೊಟ್ಟು 2’ನೊಂದಿಗೆ ತೆರೆಗೆ ಬರುತ್ತಿದ್ದಾರೆ. ಈ ಹಾರರ್‌ – ಥ್ರಿಲ್ಲರ್‌ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಪ್ರಿಯಾಂಕಾ ಉಪೇಂದ್ರ ಮುಖ್ಯಪಾತ್ರದಲ್ಲಿ ನಟಿಸಿರುವ ಸಿನಿಮಾ ಸದ್ಯದಲ್ಲೇ ತೆರೆಕಾಣಲಿದೆ.

ನಾಲ್ಕು ವರ್ಷಗಳ ಹಿಂದೆ ತೆರೆಕಂಡ ‘ಕಮರೊಟ್ಟು ಚೆಕ್‌ಪೋಸ್ಟ್‌’ ಕಥಾವಸ್ತು ಮತ್ತು ನಿರೂಪಣೆಯಿಂದ ಗಮನ ಸೆಳೆದಿತ್ತು. ಸಿನಿಮಾ ನಿರ್ದೇಶಿಸಿದ್ದ ಪರಮೇಶ್‌ ಇದೀಗ ಸೀಕ್ವೆಲ್‌ ‘ಕಮರೊಟ್ಟು 2’ನೊಂದಿಗೆ ಮರಳಿದ್ದಾರೆ. ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ನಟ ಅಜಯ್‌ ರಾವ್‌ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿ ಅದ್ಯಕ್ಷ ಎನ್‌ ಎಂ ಸುರೇಶ್‌ ಅವರು ಟ್ರೇಲರ್‌ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ ಅಜಯ್‌ ರಾವ್‌, ‘ನನ್ನ ಪ್ರೀತಿಯ ಗೆಳೆಯನಗೋಸ್ಕರ ಇವತ್ತು ನಾನು ಇಲ್ಲಿ ಬಂದಿದ್ದೇನೆ. ನಾನು ಸಿನಿಮಾ ನೋಡಿದ್ದೇನೆ. ತಾಂತ್ರಿಕವಾಗಿ ಚಿತ್ರ ಅದ್ಭುತವಾಗಿ ಮೂಡಿಬಂದಿದೆ. ಪ್ರೇಕ್ಷಕರು ಸೀಟಿನ ತುದಿಯಲ್ಲಿ ಕುಳಿತು ನೋಡುವಂತಹ ಚಿತ್ರವಿದು. ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿರುವ ಪ್ರಿಯಾಂಕಾ ಮೇಡಂ ತುಂಬಾ ಸುಂದರವಾಗಿ ಕಾಣಿಸುತ್ತಾರೆ. ನಾನು ಅವರ ಅಭಿಮಾನಿಯಾದೆ’ ಎನ್ನುತ್ತಾರೆ.

‘ಚಿತ್ರದ ಒಂದೊಂದು ದೃಶ್ಯವೂ ಹಾಲಿವುಡ್‌ ಸಿನಿಮಾದಂತಿದೆ’ ಎಂದು ಮೆಚ್ಚಿಕೊಂಡ ವಾಣಿಜ್ಯ ಮಂಡಳಿ ಅಧ್ಯಕ್ಷ ಸಿನಿಮಾತಂಡಕ್ಕೆ ಶುಭಹಾರೈಸಿದರು. ನಟ, ನಿರ್ಮಾಪಕ ರಾಘವೇಂದ್ರ ರಾಜಕುಮಾರ್‌ ಅವರಿಗೆ ಚಿತ್ರದಲ್ಲಿ ವಿಶೇಷ ಪಾತ್ರವಿದೆ. ನಿರ್ದೇಶಕ ಪರಮೇಶ್‌ ಅವರೊಂದಿಗಿನ ಒಡನಾಟವನ್ನು ನೆನೆದ ಅವರು, ‘ನಿರ್ದೇಶಕ ಪರಮೇಶ್‌ ನನ್ನ ಮನಸ್ಸಿಗೆ ಯಾಕೆ ಹತ್ತಿರ ಅಂದರೆ, ನಮ್ಮ ತಂದೆ ತೀರಿ ಹೋದಾಗ ಅವತ್ತಿನ ದಿನ ಹೇಗಿತ್ತು ಅನ್ನೋದು ನಿಮಗೆ ಗೊತ್ತು. ಸೆಕ್ಷನ್ 144 ಜಾರಿಯಲ್ಲಿತ್ತು. ಅಲ್ಲಿ ಸೆರೆ ಹಿಡಿಯಲು ಕ್ಯಾಮೆರಾಮ್ಯಾನ್ ಪರಮೇಶ್‌ ಬಂದಿದ್ದರು. ಆಗ ನನಗೆ ಪರಿಚಯವಾದರು. ಇಂದು ನಮ್ಮ ಕುಟುಂಬಕ್ಕೆ ಹತ್ತಿರವಾಗಿದ್ದಾರೆ’ ಎಂದರು.

ಇತ್ತೀಚೆಗೆ ಸಾಲು, ಸಾಲು ಥ್ರಿಲ್ಲರ್‌, ಹಾರರ್‌ ಸಿನಿಮಾಗಳಲ್ಲಿ ನಟಿಸುತ್ತಿರುವ ನಟಿ ಪ್ರಿಯಾಂಕಾ ಉಪೇಂದ್ರ ಅವರಿಗೆ ಇದು ಮತ್ತೊಂದು ಅಂಥದ್ದೇ ಜಾನರ್‌ ಸಿನಿಮಾ. ಕುಟುಂಬದ ಎಲ್ಲರೂ ಕುಳಿತು ನೋಡುವಂತಹ ಕತೆಗಳನ್ನೇ ತಾವು ಆಯ್ಕೆ ಮಾಡುವುದಾಗಿ ಹೇಳುತ್ತಾರವರು. ನಿರ್ದೇಶಕ ಪರಮೇಶ್‌ ತಮ್ಮ ಸಿನಿಮಾ ಬಗ್ಗೆ ಮಾತನಾಡಿ, ‘ಚಿತ್ರದ ಕಥೆಗೆ ತ್ರೀ ಡೈಮೆನ್ಷನ್ ರೂಪವಿದ್ದು, ಪ್ರೇಕ್ಷಕರಿಗೆ ಚಿತ್ರದ ಸ್ಕ್ರೀನ್ ಪ್ಲೇ ವಿನೂತನವಾದ ಅನುಭವ ಕೊಡುತ್ತದೆ. ‘ಕಮರೊಟ್ಟು ಚೆಕ್ ಪೋಸ್ಟ್’ ಚಿತ್ರವನ್ನು ನೋಡಿ ಗೆಲ್ಲಿಸಿದ್ದೀರಿ. ಈ ಚಿತ್ರ ಅದಕ್ಕೂ ಮೂರು ಪಟ್ಟು ಮೀರಿ ಅದ್ಬುತವಾಗಿ ಮೂಡಿ ಬಂದಿದೆ’ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ. ಕನಸು ಪಿಕ್ಚರ್ಸ್‌ ಬ್ಯಾನರ್‌ನಡಿ ಪವನ್‌ ಗೌಡ ಚಿತ್ರ ನಿರ್ಮಿಸಿದ್ದಾರೆ. ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ.

LEAVE A REPLY

Connect with

Please enter your comment!
Please enter your name here