ಯುಗಾದಿ ಹಬ್ಬದ ದಿನ ಸಾಕಷ್ಟು ಚಿತ್ರತಂಡಗಳು ಉಡುಗೊರೆಯಾಗಿ ತಮ್ಮ ಸಿನಿಮಾಗಳ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿವೆ. ಝೈದ್ ಖಾನ್ ಅಭಿನಯದ 2ನೇ ಚಿತ್ರದ ಟೈಟಲ್‌ ಹಾಗೂ ಫಸ್ಟ್‌ಲುಕ್‌ ಪೋಸ್ಟರ್‌ ಸಹ ರಿಲೀಸ್‌ ಆಗಿದೆ.

‘ಬನಾರಸ್’ ಚಿತ್ರದ ಮೂಲಕ ನಂತರ ಝೈದ್ ಖಾನ್ ನಾಯಕನಾಗಿ ಚಂದನವನಕ್ಕೆ ಕಾಲಿಟ್ಟಿದ್ದರು. ಈಗ ಇದೇ ನಟ 2ನೇ ಸಿನಿಮಾಗೆ ಸಜ್ಜಾಗಿದ್ದಾರೆ. ಜಯತೀರ್ಥ ನಿರ್ದೇಶನದ ‘ಬನಾರಸ್’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಮೊದಲ ಸಿನಿಮಾದಲ್ಲಿ ಝೈದ್ ಖಾನ್ ಭರವಸೆ ಮೂಡಿಸಿದ್ದರು. ಇದಾದ ನಂತರ ಈ ಯುವ ನಟ ಮತ್ತೆ ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಕಾತುರಕ್ಕೆ ಕೆಲವು ದಿನಗಳ ಹಿಂದಷ್ಟೇ ತೆರೆ ಬಿದ್ದಿತ್ತು. ವಿಶೇಷವಾದ ಪೋಸ್ಟರ್‌ ಮೂಲಕ ಝೈದ್ ಖಾನ್ ಅಭಿನಯದ 2ನೇ ಸಿನಿಮಾ ಪ್ರಕಟಿಸಲಾಗಿತ್ತು. ಈಗ ಇದೇ ಚಿತ್ರತಂಡ ಹೊಸ ಪೋಸ್ಟರ್‌ ಅನ್ನು ಯುಗಾದಿ ಹಬ್ಬದ ದಿನ ರಿಲೀಸ್‌ ಮಾಡಿ ಸುದ್ದಿಯಾಗಿದೆ.

‘ಉಪಾಧ್ಯಕ್ಷ’ ಚಿತ್ರದ ನಿರ್ದೇಶಕ ಅನಿಲ್ ಕುಮಾರ್ ನಿರ್ದೇಶನದಲ್ಲಿ ಝೈದ್ ಖಾನ್ ನಟಿಸುತ್ತಿರೋ ವಿಷಯ ಬಹಿರಂಗವಾಗಿತ್ತು. ಆದರೆ, ಸಿನಿಮಾ ಟೈಟಲ್‌ ರಿವೀಲ್‌ ಆಗಿರಲಿಲ್ಲ. ಹೀಗಾಗಿ ಚಿತ್ರದ ಶೀರ್ಷಿಕೆ ಏನಿರಬಹುದು ಅಂತ ಯೋಚಿಸುವಂತಾಗಿತ್ತು. ಈಗ ಆ ಕುತೂಹಲಕ್ಕೆ ತೆರೆ ಬಿದ್ದಿದೆ. ಬಹುನಿರೀಕ್ಷಿತ ಚಿತ್ರಕ್ಕೆ ‘ಕಲ್ಟ್’ ಎಂದು ಹೆಸರಿಡಲಾಗಿದೆ. ಸಿನಿಮಾದ ಟೈಟಲ್‌ ಜೊತೆಗೆ ನಾಯಕನ Raw ಲುಕ್‌ ಇರುವ ಪೋಸ್ಟರ್‌ ರಿಲೀಸ್‌ ಆಗಿದ್ದು, ಚರ್ಚೆಗೆ ಕಾರಣವಾಗಿದೆ.

ನಿರ್ದೇಶಕ ಅನಿಲ್ ಕುಮಾರ್ ಮಾತನಾಡಿ, ”ನಮ್ಮ ಚಿತ್ರಕ್ಕೆ ‘ಕಲ್ಟ್’ ಎಂದು ಹೆಸರಿಡಲಾಗಿದೆ. ಕಲ್ಟಿಸಂ ಎಂಬ ಶಬ್ದವನ್ನು ಈಗಿನ ಯುವಜನತೆ ಕಲ್ಟ್ ಎಂದು ಹೆಚ್ಚಾಗಿ ಬಳಸುತ್ತಾರೆ. ಸಮಾಜಿಕ ಜಾಲತಾಣಗಳಲ್ಲಿ ಈ ಪದ ಹೆಚ್ಚು ಪ್ರಚಲಿತವಾಗಿದೆ. ಚಿತ್ರ ಕೂಡ ಯುವಜನತೆಗೆ ಹತ್ತಿರವಾಗಿರಲಿದೆ‌‌. ಹಾಗಾಗಿ ಚಿತ್ರಕ್ಕೆ ‘ಕಲ್ಟ್’ ಶೀರ್ಷಿಕೆ ಇಡಲಾಗಿದೆ‌. ಶೀರ್ಷಿಕೆ ಹಾಗೂ ಫಸ್ಟ್ ಲುಕ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ‘ಬನಾರಸ್’ ಚಿತ್ರದಲ್ಲಿ ಮುಗ್ಧ ಹುಡುಗನಾಗಿ ಕಾಣಿಸಿಕೊಂಡಿದ್ದ ಝೈದ್ ಖಾನ್, ಈ ಸಿನಿಮಾದಲ್ಲಿ ಮಾಸ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ‌‌. ಸದ್ಯದಲ್ಲೇ ‘ಕಲ್ಟ್’ ಸೆಟ್ಟೇರಲಿದೆ. ಅದ್ದೂರಿ ಮುಹೂರ್ತದೊಂದಿಗೆ ಚಿತ್ರಕ್ಕೆ ಚಾಲನೆ ಸಿಗಲಿದೆ” ಎಂದು ಖುಷಿ ಹಂಚಿಕೊಂಡಿದ್ದಾರೆ. ಆಶ್ರಿತ್ ಸಿನಿಮಾಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, ಜೆ ಎಸ್ ವಾಲಿ ಅವರ ಛಾಯಾಗ್ರಹಣ, ಅರ್ಜುನ್ ಜನ್ಯ ಸಂಗೀತ ಸಂಯೋಜನೆ, ಕೆ ಎಂ ಪ್ರಕಾಶ್ ಸಂಕಲನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

LEAVE A REPLY

Connect with

Please enter your comment!
Please enter your name here