ಬಾಲಿವುಡ್ ನಟಿ ಕಂಗನಾ ರನಾವತ್ ಮತ್ತೊಂದು ವಿವಾದಾತ್ಮಕ ಹೇಳಿಕೆ ಮೂಲಕ ಸುದ್ದಿಯಾಗಿದ್ದಾರೆ. ನಿನ್ನೆ ಸಂದರ್ಶನವೊಂದರಲ್ಲಿ ಅವರು, “2014ರ ನಂತರದ್ದು ನಿಜವಾದ ಸ್ವಾತಂತ್ರ್ಯ, 1947ರಲ್ಲಿ ಸಿಕ್ಕಿದ್ದು ಭಿಕ್ಷೆ” ಎಂದಿದ್ದರು. ಅವರ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ತಮ್ಮ ವಿಚಿತ್ರ, ನಿರ್ಭಿಡೆಯ ಹೇಳಿಕೆಗಳ ಮೂಲಕ ವಿವಾದಕ್ಕೆ ಈಡಾಗುವುದು ನಟಿ ಕಂಗನಾ ರನಾವತ್‌ರಿಗೆ ಹೊಸದೇನಲ್ಲ. ಆಗಿಂದಾಗ್ಗೆ ಅವರು ಈ ಕಾರಣಕ್ಕಾಗಿ ಸುದ್ದಿಯಲ್ಲಿರುತ್ತಾರೆ. ಸಿನಿಮಾರಂಗಕ್ಕೆ ಸಂಬಂಧಿಸಿದ ಅವರ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದಲ್ಲದೆ, ಇದರಿಂದಾಗಿ ಬಾಲಿವುಡ್‌ನ ಒಂದು ವರ್ಗ ಆಕೆಯಿಂದ ಅಂತರ ಕಾಯ್ದುಕೊಳ್ಳುವಂತಾಗಿದೆ. ನಿನ್ನೆ ಸಂದರ್ಶನವೊಂದರಲ್ಲಿ ಅವರು ರಾಷ್ಟ್ರೀಯತೆಗೆ ಸಂಬಂಧಿಸಿದಂತೆ ಮಾತನಾಡುತ್ತಾ, “2014ರ ನಂತರದ್ದು ನಿಜವಾದ ಸ್ವಾತಂತ್ರ್ಯ, 1947ರಲ್ಲಿ ಸಿಕ್ಕಿದ್ದು ಭಿಕ್ಷೆ” ಎಂದಿದ್ದಾರೆ. ಇದೀಗ ಚರ್ಚೆಗೆ ಈಡು ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ನಟಿಯ ಬಗ್ಗೆ ಹಲವು ಕಾಮೆಂಟ್‌ಗಳು ಹರಿದಾಡುತ್ತಿವೆ.
ಈ ಬಾರಿ ಕಂಗನಾ ರಾಜಕೀಯ ಪ್ರಕ್ಷಗಳ ಕೆಂಗಣ್ಣಿಗೂ ಗುರಿಯಾಗಿದ್ದಾರೆ. ಮೊನ್ನೆಯಷ್ಟೇ ಪ್ರತಿಷ್ಠಿತ ‘ಪದ್ಮಶ್ರೀ’ ಗೌರವ ಪಡೆದ ನಟಿ ಈಗ ವಿವಾದ ಮೈಮೇಲೆ ಎಳೆದುಕೊಂಡು ಕಷ್ಟಕ್ಕೆ ಸಿಲುಕಿದ್ದಾರೆ. ಆಮ್ ಆದ್ಮಿ ಪಕ್ಷ, “ಇದು ದೇಶದ ಜನರ ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆ” ಎಂದು ನಟಿಯ ವಿರುದ್ಧ ದೂರು ದಾಖಲಿಸಿದೆ. “ನಟಿಯ ಹೇಳಿಕೆ ಅವಹೇಳನಕಾರಿ. ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ಸೇನಾನಿಗಳಿಗೆ ಮಾಡಿದ ಅವಮಾನ. ಕೇಂದ್ರ ಸರ್ಕಾರ ಕೂಡಲೇ ಅವರಿಂದ ಪದ್ಮಶ್ರೀ ಗೌರವ ಮರಳಿ ಪಡೆಯಬೇಕು” ಎಂದು ಕಾಂಗ್ರೆಸ್ ಸೇರಿದಂತೆ ಇತರೆ ಕೆಲವು ಪಕ್ಷಗಳು ಒತ್ತಾಯಿಸಿವೆ. ಸೋಷಿಯಲ್ ಮೀಡಿಯಾದಲ್ಲಿ ನಟಿಯ ಹೇಳಿಕೆಗೆ ಪರ-ವಿರೋಧದ ಹೇಳಿಕೆಗಳು ವ್ಯಕ್ತವಾಗುತ್ತಿವೆ. ಬಿಜೆಪಿ ಮುಖಂಡ ವರುಣ್ ಗಾಂಧಿ ಕೂಡ ಕಂಗನಾ ಹೇಳಿಕೆಗೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಇದಕ್ಕೆ ಕಂಗನಾ ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಪ್ರತಿಕ್ರಿಯೆ ಕೊಟ್ಟು ವರುಣ್ ಗಾಂಧಿ ಅವರನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಹಿಂದೆ ಕಂಗನಾ ಸಿನಿಮಾರಂಗಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆಗಳ ಮೂಲಕ ವಿವಾದ ಸೃಷ್ಟಿಸುತ್ತಿದ್ದರು. ಆದರೆ ಈ ಬಾರಿಯ ರಾಜಕೀಯ ಹೇಳಿಕೆ ಖಂಡಿತ ಅವರಿಗೆ ಮುಳುವಾಗಲಿದೆ ಎನ್ನಲಾಗುತ್ತಿದೆ.