ಕಿಶೋರ್‌ ಮೇಗಳಮನೆ ನಿರ್ದೇಶನದ ‘ಕಾಂಗರೂ’ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಸಸ್ಪೆನ್ಸ್‌ – ಥ್ರಿಲ್ಲರ್‌ ಕಥಾಹಂದರದ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಆದಿತ್ಯ ಮತ್ತು ರಂಜಿನಿ ರಾಘವನ್‌ ಇದ್ದಾರೆ. ಮೇ 3ರಂದು ಸಿನಿಮಾ ತೆರೆಕಾಣಲಿದೆ.

‘ನಾನೊಂದು ಸಣ್ಣ ಕತೆ ಹೇಳ್ತೀನಿ ಕೇಳಿ…’ ಎಂದು ಹೀರೋ ಹೇಳುವ ಕತೆಯೊಂದಿಗೆ ‘ಕಾಂಗರೂ’ ಸಿನಿಮಾದ ಟ್ರೇಲರ್‌ ಶುರುವಾಗುತ್ತದೆ. ನಿರ್ದೇಶಕ ಕಿಶೋರ್‌ ಮೇಗಳಮನೆ ಹೇಳುವಂತೆ, ಇದೊಂದು ಸಸ್ಪೆನ್ಸ್‌ – ಥ್ರಿಲ್ಲರ್‌ ಜಾನರ್‌ ಸಿನಿಮಾ. ಇದಕ್ಕೆ ಇಂಬು ನೀಡುವಂತೆ ಟ್ರೇಲರ್‌ನಲ್ಲಿ ಕುತೂಹಲಕಾರಿ ಅಂಶಗಳು ಕಾಣಿಸುತ್ತವೆ. ಹೀರೋ ಆದಿತ್ಯ ಚಿತ್ರದಲ್ಲಿ ಪೊಲೀಸ್‌ ಅಧಿಕಾರಿ ಪೃಥ್ವಿ ಪಾತ್ರದಲ್ಲಿ, ನಾಯಕಿ ರಂಜಿನಿ ರಾಘವನ್‌ ಸೈಕಿಯಾಟ್ರಿಸ್ಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ನಟನಾಗಿ ಹೆಚ್ಚು ಗುರುತಿಸಿಕೊಂಡಿರುವ ನಿರ್ದೇಶಕ ಶಿವಮಣಿ ಈ ಚಿತ್ರದಲ್ಲೂ ವಿಶೇಷ ಪಾತ್ರ ನಿರ್ವಹಿಸಿರುವಂತಿದೆ. ಈ ಥ್ರಿಲ್ಲರ್‌ ಕಥಾಹಂದರದಲ್ಲಿ ತಾಯಿ – ಮಗಳ ಸೆಂಟಿಮೆಂಟ್‌ ಕೂಡ ಇದೆ ಎನ್ನುವ ಸುಳಿವು ಸಿಗುತ್ತದೆ. ಸಾಧು ಕೋಕಿಲ ಹಿನ್ನೆಲೆ ಸಂಗೀತ intriguing ಆಗಿದ್ದು, ಟ್ರೇಲರ್‌ನ ಆಕರ್ಷಣೆ ಹೆಚ್ಚಿಸಿದೆ. ‘for those who love their family’ ಎನ್ನುವ ಒಕ್ಕಣಿಯೊಂದಿಗೆ ಟ್ರೇಲರ್‌ ಕೊನೆಯಾಗುತ್ತದೆ.

ಆರೋಹ ಪ್ರೊಡಕ್ಷನ್ಸ್ ಲಾಂಛನದಲ್ಲಿ ಚನ್ನಕೇಶವ ಬಿ ಸಿ, ಕುಣಿಗಲ್, ನರಸಿಂಹಮೂರ್ತಿ ಚಕ್ರಭಾವಿ, ರಮೇಶ್ ಬಂಡೆ, ಸ್ವಾಮಿ ಚಕ್ರಭಾವಿ, ರವಿ ಕೀಲರ ಮಂಡ್ಯ ಹಾಗೂ ಕೆ ಜಿ ಆರ್ ಗೌಡ ಈ ಚಿತ್ರವನ್ನು ನಿರ್ಮಾಣ‌ ಮಾಡಿದ್ದಾರೆ. ನಿರ್ದೇಶಕ ಕಿಶೋರ್‌ ಮೇಗಳಮನೆ ಅವರು ಚಿತ್ರದ ಬಗ್ಗೆ ಮಾತನಾಡಿ, ‘ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ.‌ ಕನ್ನಡದಲ್ಲಿ ಸಾಕಷ್ಟು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳು ಬಂದಿವೆಯಾದರೂ, ನಮ್ಮ ಚಿತ್ರ ಸ್ವಲ್ಪ ವಿಭಿನ್ನ. ಫ್ಯಾಮಿಲಿ ಆಡಿಯನ್ಸ್‌ಗಾಗಿಯೇ ಮಾಡಿರುವ ಕಥೆ ಇದು. ಇನ್ನು ಕಾಂಗರೂ ಮೃದುಸ್ವಭಾವದ ಪ್ರಾಣಿ. ಯಾರ ತಂಟೆಗೂ ಹೋಗುವುದಿಲ್ಲ. ಆದರೆ ತನ್ನ ಮಕ್ಕಳ ತಂಟೆಗೆ ಬಂದರೆ ಅದು ಯಾರನ್ನು ಬಿಡುವುದಿಲ್ಲ. ಇದೇ ಚಿತ್ರದ ಕಥಾಸಾರಾಂಶ. ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ನಮ್ಮ ಚಿತ್ರ ನಿರ್ಮಾಣವಾಗಿದೆ’ ಎನ್ನುತ್ತಾರೆ.

ನಿರ್ದೇಶಕ ಕಿಶೋರ್‌ ಮತ್ತು ಹೀರೋ ಆದಿತ್ಯಾ ಅವರ ಮೊದಲ ಭೇಟಿಯೂ ವಿಶೇಷವಾಗಿದೆ. ಇದನ್ನು ನೆನಪು ಮಾಡಿಕೊಂಡ ಆದಿತ್ಯ, ‘ನಿರ್ದೇಶಕ ಕಿಶೋರ್ ಅವರು ಕತೆ ಕೇಳಿ ಎಂದರು. ನಾನು ಸರಿ ಎಂದೆ. ಆನಂತರ ಕೇಳುವುದು ಬೇಡ ಸರ್ ಸಿನಿಮಾನೇ ತೋರಿಸುತ್ತೇನೆ ಎಂದರು. ನನಗೆ ಆಶ್ಚರ್ಯವಾಯಿತು. ಚಿತ್ರದ ಕಥೆಯನ್ನು ಅನಿಮೇಶನ್ ಮೂಲಕ ತೋರಿಸಿದ ಪ್ರಥಮ ನಿರ್ದೇಶಕ ಇವರೇ ಇರಬಹುದು. ನಾನು ಈ ಚಿತ್ರದಲ್ಲಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರ ಚೆನ್ನಾಗಿ ಬಂದಿದೆ’ ಎಂದರು. ‘ಕನ್ನಡತಿ’ ಖ್ಯಾತಿಯ ನಟಿ ರಂಜಿನಿ ರಾಘವನ್‌ ಚಿತ್ರದಲ್ಲಿ ಮನೋವೈದ್ಯೆ ಪಾತ್ರದಲ್ಲಿ ನಟಿಸಿದ್ದಾರೆ. ಇದು ನಾಯಕಿಯಾಗಿ ಅವರ ಐದನೇ ಸಿನಿಮಾ. ನಾಗೇಂದ್ರ ಅರಸ್, ಅಶ್ವಿನ್ ಹಾಸನ್, ಶುಭಲಕ್ಷ್ಮೀ, ಗೌತಮ್ ಇತರೆ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಿನಿಮಾ ಮೇ 3ರಂದು ಥಿಯೇಟರ್‌ಗೆ ಬರುತ್ತಿದೆ.

LEAVE A REPLY

Connect with

Please enter your comment!
Please enter your name here