ಹಿರಿಯ ನಟ ಸತ್ಯಜಿತ್‌ ತೀವ್ರ ಅನಾರೋಗ್ಯದಿಂದಾಗಿ ಬೋರಿಂಗ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗ್ಯಾಂಗ್ರಿನ್ ಮತ್ತು ವಯೋಸಹಜ ಕೆಲವು ಖಾಯಿಲೆಗಳಿಂದಾಗಿ ಸತ್ಯಜಿತ್ ಇತ್ತೀಚೆಗೆ ನಟನೆಯಿಂದ ದೂರವಾಗಿದ್ದರು.

ಕನ್ನಡದ ಹಿರಿಯ ನಟ ಸತ್ಯಜಿತ್ ಅವರನ್ನು ಮತ್ತೆ ಅನಾರೋಗ್ಯ ಬಾಧಿಸಿದೆ. ಹಾಗಾಗಿ ಅವರನ್ನು ಈಗ ಬೆಂಗಳೂರಿನ ಬೋರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಅವರ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಿದ್ದು, ಅವರ ಪರಿಸ್ಥಿತಿ ಸದ್ಯಕ್ಕೆ ಗಂಭೀರವಾಗಿದೆ ಎಂದು ಸತ್ಯಜಿತ್ ಅವರ ಪುತ್ರ ಹೇಳಿದ್ದಾರೆ. 72 ವರ್ಷ ವಯಸ್ಸಿನ ಸತ್ಯಜಿತ್ ಈ ಹಿಂದೆ ಕೂಡ ಅನಾರೋಗ್ಯಕ್ಕೆ ತುತ್ತಾಗಿದ್ದರು. ಗ್ಯಾಂಗ್ರಿನ್ ಆಗಿದ್ದ ಕಾರಣ ಅವರ ಕಾಲನ್ನು ಕತ್ತರಿಸಲಾಗಿತ್ತು. ಆದರೆ ನಂತರ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿತ್ತು. ಈಗ ಮತ್ತೆ ಸತ್ಯಜಿತ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗ್ಯಾಂಗ್ರಿನ್ ಮತ್ತು ವಯೋಸಹಜ ಕೆಲವು ಖಾಯಿಲೆಗಳಿಂದಾಗಿ ಸತ್ಯಜಿತ್ ಇತ್ತೀಚೆಗೆ ನಟನೆಯಿಂದ ದೂರ ಇರಬೇಕಾಗಿತ್ತು. ಹಾಗಾಗಿ ಅವರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದರು. ಈ ಸಂದರ್ಭದಲ್ಲಿ ಚಿತ್ರೋದ್ಯಮದ ಕೆಲವರು ಅವರಿಗೆ ಸಹಾಯ ಮಾಡಿದ್ದೂ ಉಂಟು. ಆದರೆ, ಈ ಸಂದರ್ಭದಲ್ಲಿ ತಮ್ಮ ಮಗಳಿಂದಾಗಿ ಕೌಟುಂಬಿಕ ವಿಷಯದಲ್ಲಿ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದರು ಸತ್ಯಜಿತ್.

ಸತ್ಯಜಿತ್ ಅವರ ಪುತ್ರಿ, ಹಣಕ್ಕಾಗಿ ಪೀಡಿಸುತ್ತಿದ್ದಾರೆ ಎಂದು ತಂದೆಯ ಮೇಲೆಯೇ ಪೊಲೀಸರಿಗೆ ದೂರು ಕೊಟ್ಟಿದ್ದರು. ಅದಕ್ಕೆ ಪ್ರತಿಯಾಗಿ ಸತ್ಯಜಿತ್, “ನನ್ನ ಆಸ್ತಿ ಮಾರಿ ಅವಳ ಇಚ್ಚೆಯಂತೆ ಅವಳನ್ನು ವಿದೇಶದಲ್ಲಿ ಓದಿಸಿದೆ. ಅವಳಿಗೆ ಎಲ್ಲಾ ಹಣವನ್ನೂ ಖರ್ಚು ಮಾಡಿದೆ. ನನಗೆ ಕೆಲಸ ಸಿಕ್ಕ ಮೇಲೆ ನಿಮ್ಮನ್ನು ನೋಡಿಕೊಳ್ಳುತ್ತೇನೆ ಎಂದವಳು, ಈಗ ನಮ್ಮ ಕಷ್ಟಕ್ಕೆ ಆಗುತ್ತಿಲ್ಲ. ಅಲ್ಲದೆ ನಮ್ಮ ಇಚ್ಛೆಗೆ ವಿರುದ್ಧವಾಗಿ ಮದುವೆ ಆಗಿ ಮನೆ ಕಟ್ಟಿಸಿಕೊಂಡು ಆರಾಮಾಗಿದ್ದಾಳೆ. ಆದರೆ ಅವಳು ಹಣ ಬೇಕು ಎಂದು ಕೇಳಿದಾಗ ಕಣ್ಣು ಮುಚ್ಚಿಕೊಂಡು ಹಣ ವ್ಯಯಿಸಿದೆವು. ಕೂಡಿಟ್ಟ ಹಣದೊಂದಿಗೆ, ಆಸ್ತಿ ಮಾರಿ ಸಹಾಯ ಮಾಡಿದ್ದನ್ನು ಮರೆತಿದ್ದಾಳೆ” ಎಂದು ನೊಂದುಕೊಂಡಿದ್ದರು. ಈಗ ಅದೆಲ್ಲದರ ನಡುವೆ, ಈ ವಯಸ್ಸಿನಲ್ಲಿ ಸತ್ಯಜಿತ್ ಆಸ್ಪತ್ರೆಯಲ್ಲಿ ಸಾವು – ಬದುಕಿನ ನಡುವೆ ಹೋರಾಡುತ್ತಿರುವುದು ನಿಜಕ್ಕೂ ನೋವಿನ ಸಂಗತಿ.

LEAVE A REPLY

Connect with

Please enter your comment!
Please enter your name here