ಪತ್ರಕರ್ತ ಶರಣು ಹುಲ್ಲೂರು ರಚಿಸಿರುವ ‘ನೀನೇ ರಾಜಕುಮಾರ’ ಪುನೀತ್‌ ರಾಜಕುಮಾರ್‌ ಬಯೋಗ್ರಫಿಯನ್ನು ನಟ ಸುದೀಪ್‌ ಇಂದು ಬಿಡುಗಡೆಗೊಳಿಸಿದರು. ಸಾವಣ್ಣ ಪ್ರಕಾಶನ ಪ್ರಕಟಿಸಿರುವ ಕೃತಿಯಲ್ಲಿ ಅಪ್ಪು ಸಿನಿಮಾ, ಬದುಕಿನ ಕುರಿತ ಸಮಗ್ರ ಮಾಹಿತಿ ಇದೆ.

ಪುನೀತ್‌ ರಾಜಕುಮಾರ್‌ ಹೀರೋ ಆಗಿ ನಟಿಸಿರುವ ಕೊನೆಯ ಸಿನಿಮಾ ‘ಜೇಮ್ಸ್‌’ ನಾಡಿದ್ದು ಬಿಡುಗಡೆಯಾಗುತ್ತಿದೆ. ಇಂದು ಪುನೀತ್‌ ಬಯೋಗ್ರಫಿ ‘ನೀನೇ ರಾಜಕುಮಾರ’ ಕೃತಿ ಬಿಡುಗಡೆಯಾಗಿದೆ. ಪತ್ರಕರ್ತ ಶರಣು ಹುಲ್ಲೂರು ರಚಿಸಿರುವ ಕೃತಿಯನ್ನು ನಟ ಸುದೀಪ್‌ ಲೋಕಾರ್ಪಣೆಗೊಳಿಸಿದರು. ಸ್ಯಾಂಡಲ್‌ವುಡ್‌ನ ತಮ್ಮ ಸಮಕಾಲೀನ ನಟನನ್ನು ಸ್ಮರಿಸಿದ ಸುದೀಪ್‌, “ಒಂದೊಳ್ಳೆಯ ಕೃತಿಯ ಮೂಲಕ ಶರಣು ಹುಲ್ಲೂರು ಅವರು ಪುನೀತ್ ಅವರಿಗೆ ನಮನ ಸಲ್ಲಿಸಿದ್ದಾರೆ. ಪುನೀತ್ ಅವರದ್ದು ಪುಸ್ತಕವಾಗುವಂತಹ ವ್ಯಕ್ತಿತ್ವ. ಈ ಕೃತಿ ಅವರ ಜೀವನವನ್ನು ಸೊಗಸಾಗಿ ಹಿಡಿದಿಟ್ಟಿದೆ. ಯಾವತ್ತಿಗೂ ನಾನು ಪುನೀತ್ ಅವರನ್ನು ಮಿಸ್‌ ಮಾಡಿಕೊಳ್ಳುತ್ತೇನೆ” ಎಂದಿದ್ದಾರೆ.

ಸುದೀಪ್ ಅವರ ಕುರಿತು ಶರಣು ಹುಲ್ಲೂರು ರಚಿಸಿದ್ದ ಪುಸ್ತಕವನ್ನು ಎರಡು ವರ್ಷಗಳ ಹಿಂದೆ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದರು. ಪುನೀತ್ ಅವರ ಬಯೋಗ್ರಫಿಯನ್ನು ಇದೀಗ ಸುದೀಪ್ ಅವರು ರಿಲೀಸ್ ಮಾಡಿದ್ದು ಭಾವುಕತೆಗೆ ಸಾಕ್ಷಿಯಾಗಿತ್ತು. ಪುನೀತ್ ಅವರ ಕುರಿತಾಗಿ ಬಂದಂತಹ ಮೊದಲ ಬಯೋಗ್ರಫಿ ಇದಾಗಿದ್ದು, 260ಕ್ಕೂ ಹೆಚ್ಚು ಪುಟಗಳ ಕೃತಿಯಿದು. ಪುನೀತ್ ಅವರ ಖಾಸಗಿ ಜೀವನ, ವೃತ್ತಿ ಜೀವನ, ವಿಶಿಷ್ಟ ಸಂಗತಿಗಳು, ಅಪರೂಪದ ಫೋಟೋಗಳು ಕೃತಿಯಲ್ಲಿವೆ. ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ನಿರ್ಮಾಪಕ ಜಾಕ್ ಮಂಜು ಮತ್ತು ಕುಮಾರ್, ಸಾವಣ್ಣ ಪ್ರಕಾಶನದ ಜಮೀಲ್, ಲೇಖಕ ಶರಣು ಹುಲ್ಲೂರು ಉಪಸ್ಥಿತರಿದ್ದರು.

LEAVE A REPLY

Connect with

Please enter your comment!
Please enter your name here