ನೂತನ ವರ್ಷದಲ್ಲಿ ನೆಟ್‌ಫ್ಲಿಕ್ಸ್‌ ವೈವಿಧ್ಯಮಯ ವೆಬ್‌ ಸರಣಿಗಳನ್ನು ರೂಪಿಸಲಿದೆ. ನೆಟ್‌ಫ್ಲಿಕ್ಸ್‌ ವರದಿ ಪ್ರಕಾರ ಈ ಪಟ್ಟಿಯಲ್ಲಿ 25 ಕೊರಿಯನ್‌ ಡ್ರಾಮಾ ಸರಣಿಗಳೇ ಇರಲಿವೆ. ಇದು ‘Squid Game’ ಸರಣಿಯ ದೊಡ್ಡ ಯಶಸ್ಸಿನ ನಂತರದ ಯೋಜನೆ.

ಕಳೆದ ವರ್ಷ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಆದ ಸ್ಕ್ವಿಟ್‌ ಗೇಮ್‌, ಹೆಲ್‌ಬೌಂಡ್‌, ವಿನ್ಸೆನ್ಝೊ ಕೊರಿಯನ್‌ ಡ್ರಾಮಾಗಳು ದೊಡ್ಡ ಸಂಖ್ಯೆಯಲ್ಲಿ ವೀಕ್ಷಣೆ ಪಡೆದವು. ಈ ಹಿನ್ನೆಲೆಯಲ್ಲಿ 2022ಕ್ಕೆ ನೆಟ್‌ಫ್ಲಿಕ್ಸ್‌ 25 ವಿನೂತನ ಕೊರಿಯನ್‌ ಡ್ರಾಮಾಗಳನ್ನು ರೂಪಿಸಲು ಸಿದ್ಧತೆ ನಡೆಸಿದೆ. ಈ ಓಟಿಟಿ ಪ್ಲಾಟ್‌ಫಾರ್ಮ್‌ ಬಿಡುಗಡೆ ಮಾಡಿರುವ ವರದಿಯಂತೆ ಕೊರಿಯನ್‌ ಶೋಗಳು ಜಗತ್ತಿನಾದ್ಯಂತ ದೊಡ್ಡ ಸಂಖ್ಯೆಯಲ್ಲಿ ವೀಕ್ಷಕರನ್ನು ತಲುಪಿವೆ. ‘Squid Game’ ಸರಣಿ 94 ದೇಶಗಳಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಶೋಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ವಿಶೇಷವೆಂದರೆ ಈ ಪೈಕಿ ಶೇ.95ರಷ್ಟು ವೀಕ್ಷಕರು ಕೊರಿಯಾದ ಹೊರಗಿನವರು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ನೆಟ್‌ಫ್ಲಿಕ್ಸ್‌ ಕೊರಿಯನ್‌ ಕಂಟೆಂಟ್‌ಗೆ ಮಣೆ ಹಾಕಲು ಯೋಜನೆ ರೂಪಿಸಿದೆ.

ನೆಟ್‌ಫ್ಲಿಕ್ಸ್‌ ಕೊರಿಯಾ ಕಂಟೆಂಟ್‌ ವಿಭಾಗದ ಮುಖ್ಯಸ್ಥ ಡಾನ್‌ ಕಾಂಗ್‌ ಈ ಬಗ್ಗೆ ಮಾತನಾಡಿದ್ದು, “2016ರಿಂದ 2021ರವರೆಗೆ ನಾವು ಸುಮಾರು 130 ಕೊರಿಯನ್‌ ಸರಣಿಗಳನ್ನು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್‌ ಮಾಡಿದ್ದೇವೆ. 2019ಕ್ಕೆ ಹೋಲಿಸಿದರೆ ಕೊರಿಯನ್‌ ಕಂಟೆಂಟ್‌ಗೆ 2021ರಲ್ಲಿ ಆರು ಪಟ್ಟು ವೀಕ್ಷಕರ ಸಂಖ್ಯೆ ಹೆಚ್ಚಾಗಿದೆ. ಜಗತ್ತಿನ ವಿವಿಧ ದೇಶಗಳ ಜನರು ಕೊರಿಯನ್‌ ಕಂಟೆಂಟ್‌ಗೆ ಮನಸೋತಿದ್ದಾರೆ. ಉತ್ತಮ ಗುಣಮಟ್ಟದ ಕೊರಿಯನ್‌ ಕಂಟೆಂಟ್‌, ಅವರ ವೈವಿಧ್ಯಮಯ ಕತೆಗಳು, ನಿರೂಪಣೆ ಶೈಲಿ ಓಟಿಟಿ ವೀಕ್ಷಕರಿಗೆ ಇಷ್ಟವಾಗುತ್ತಿದೆ. ಪ್ರತಿಭಾವಂತ, ಸೃಜನಶೀಲ ಕೊರಿಯನ್‌ ಕಂಟೆಂಟ್‌ ಕ್ರಿಯೇಟರ್‌ಗಳ ಜೊತೆ ನಾವು ಕೆಲಸ ಮಾಡಲು ಉತ್ಸುಕರಾಗಿದ್ದೇವೆ” ಎಂದಿದ್ದಾರೆ.

ಜನಪ್ರಿಯ ಸ್ಪಾನಿಷ್‌ ಸರಣಿಯ ಕೊರಿಯನ್‌ ಅಡಾಪ್ಟೇಷನ್‌ ‘ಮನೀ ಹೀಸ್ಟ್‌: ಕೊರಿಯಾ ಜಾಯಿಂಟ್‌ ಎಕನಾಮಿಕ್‌ ಏರಿಯಾ’, ಸಿಯೋಲ್‌ ಒಲಂಪಿಕ್‌ ಗೇಮ್ಸ್‌ ಕುರಿತ ಆಕ್ಷನ್‌ ಡ್ರಾಮಾ ‘ಸಿಯೋಲ್‌ ವೈಬ್‌’, ಫ್ಯಾಂಟಸಿ ಡ್ರಾಮಾ ‘ದಿ ಸೌಂಡ್‌ ಆಫ್‌ ಮ್ಯಾಜಿಕ್‌’, ಡೈಸ್ಟೋಪಿಯನ್‌ ಡ್ರಾಮಾ ‘ಬ್ಲಾಕ್‌ ನೈಟ್‌’ ಸೇರಿದಂತೆ ಹಲವು ಕೊರಿಯನ್‌ ಕಂಟೆಂಟ್‌ ತಯಾರಾಗಲಿವೆ. ಈ ಶೋಗಳಲ್ಲಿ ಕೊರಿಯಾದ ಜನಪ್ರಿಯ ನಟ – ನಟಿಯರು, ಗಾಯಕರು ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ದೊಡ್ಡ ವೀಕ್ಷಕ ಬಳಗವನ್ನು ತಲುಪುವುದು ನೆಟ್‌ಫ್ಲಿಕ್ಸ್‌ನ ಮಹತ್ವಾಕಾಂಕ್ಷೆಯ ಯೋಜನೆ.

LEAVE A REPLY

Connect with

Please enter your comment!
Please enter your name here