ಕಿರುತೆರೆ ಕಲಾವಿದರ TPL ಪಂದ್ಯಾವಳಿ ಆರಂಭವಾಗುತ್ತಿದೆ. ಆರು ತಂಡಗಳಿಂದ ನೂರಕ್ಕೂ ಹೆಚ್ಚು ಸೆಲೆಬ್ರಿಟಿಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಂದಿನ ಬಾರಿ ಇನ್ನೂ ದೊಡ್ಡ ಮಟ್ಟದಲ್ಲಿ ಪಂದ್ಯಾವಳಿ ಆಯೋಜಿಸುವುದು ಆಯೋಜಕರ ಗುರಿ.
ಎನ್ 1 ಕ್ರಿಕೆಟ್ ಅಕಾಡೆಮಿ ವತಿಯಿಂದ ಟೆಲಿವಿಷನ್ ಪ್ರೀಮಿಯರ್ ಲೀಗ್ – ಟಿಪಿಎಲ್ ಶುರುವಾಗುತ್ತಿದ್ದು, ಇಂದಿನಿಂದ (ಆಗಸ್ಟ್ 18) ಮೂರು ದಿನಗಳ ಕಾಲ ಪಂದ್ಯಾವಳಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜೆರ್ಸಿ ಹಾಗೂ ಟ್ರೋಫಿ ಬಿಡುಗಡೆ ಮಾಡಲಾಯಿತು. ಕಿರುತೆರೆ ಕಲಾವಿದರು ಹಾಗೂ ತಂತ್ರಜ್ಞರು ಈ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗಿಯಾಗಲಿದ್ದಾರೆ. ಆಯೋಜಕರಾದ ಬಿ.ಆರ್.ಸುನಿಲ್ ಕುಮಾರ್ ಮಾತನಾಡಿ, ”ಮೊದಲ ಬಾರಿಗೆ ಟೆಲಿವಿಷನ್ ಪ್ರೀಮಿಯರ್ ಲೀಗ್ ನಡೆಯುತ್ತಿದ್ದು, ಐಪಿಎಲ್ ಮಾದರಿಯಲ್ಲಿ ಪಂದ್ಯಾವಳಿ ಮಾಡಬೇಕೆನ್ನುವ ಕನಸಿದೆ. ಇದು ಮೊದಲ ಹೆಜ್ಜೆಯಷ್ಟೇ. ಮುಂದಿನ ದಿನಗಳಲ್ಲಿ ಇನ್ನೂ ದೊಡ್ಡದಾಗಿ ಪಂದ್ಯಾವಳಿ ಹಮ್ಮಿಕೊಳ್ಳುವ ಗುರಿ ಇದೆ” ಎಂದರು.
ಬೆಂಗಳೂರಿನ ಪೆಸೆಟ್ ಕಾಲೇಜು ಗ್ರೌಂಡ್‌ನಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ, ದಿ ಬುಲ್ ಸ್ಕ್ವಾಡ್, ಭಜರಂಗಿ ಲಯನ್ಸ್, ಏಂಜೆಲ್ XI, ವಿನ್ ಟೈಮ್ ರಾಕರ್ಸ್, ಅಶ್ವ ಸೂರ್ಯ ರೈಡರ್ಸ್, ಸ್ಯಾಂಡಲ್‌ವುಡ್ ಕಿಂಗ್ಸ್ ಹೆಸರಿನ ಆರು ತಂಡಗಳು ಭಾಗಿಯಾಗಲಿದ್ದು, ಒಟ್ಟು 102 ಸೆಲೆಬ್ರಿಟಿಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಆರು ತಂಡಗಳಿಗೂ ಅಂಬಾಸಿಡರ್ ಹಾಗೂ ಓನರ್‌ಗಳಿರಲಿದ್ದಾರೆ. ದಿ ಬುಲ್ ಸ್ಕ್ವಾಡ್ ಟೀಂಗೆ ಶರತ್ ಪದ್ಮನಾಭ್ ನಾಯಕನಾಗಿದ್ದು, ಈ ತಂಡದ ಒಡೆತನವನ್ನು ಮೋನಿಶ್ ಹೊತ್ತುಕೊಂಡಿದ್ದಾರೆ. ಭಜರಂಗಿ ಲಯನ್ಸ್‌ಗೆ ರಂಜಿತ್ ಕುಮಾರ್ ನಾಯಕ- ಮಹೇಶ್ ಗೌಡ ಓನರ್. ಏಂಜಲ್ XI ತಂಡಕ್ಕೆ ಹರ್ಷ ಸಿ.ಎಂ. ಗೌಡ ನಾಯಕ – ಜಗದೀಶ್ ಬಾಬು ಆರ್. ಓನರ್. ವಿನ್ ಟೈಮ್ ರಾಕರ್ಸ್ ತಂಡಕ್ಕೆ ಅರ್ಜುನ್ ಯೋಗಿ ನಾಯಕ – ಅನಿಲ್ ಬಿ.ಆರ್. ಮತ್ತು ದೇವನಾಥ್ ಓನರ್. ಅಶ್ವಸೂರ್ಯ ರೈಡರ್ಸ್ ತಂಡಕ್ಕೆ ಮಂಜು ಪಾವಗಡ ನಾಯಕ – ರಂಜಿತ್ ಕುಮಾರ್ ಓನರ್. ಸ್ಯಾಂಡಲ್‌ವುಡ್ ಕಿಂಗ್ಸ್ ತಂಡಕ್ಕೆ ವಿವಾನ್ ನಾಯಕ – ದೀಪಶ್ರೀ ಮಿಸ್ಟ್ರೀ ಒಡೆತನದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.