ಕನ್ನಡದ ಜನಪ್ರಿಯ ಚಿತ್ರನಟ ಪುನೀತ್ ರಾಜಕುಮಾರ್ (46 ವರ್ಷ) ಇಂದು ಹೃದಯಾಘಾತದಿಂದ ಅಗಲಿದ್ದಾರೆ. ಅವರ ಈ ಅಕಾಲಿಕ ನಿಧನ ಕನ್ನಡಿಗರು, ಕನ್ನಡ ಚಿತ್ರರಂಗಕ್ಕೆ ಅಪಾರ ಸಂಕಟ ತಂದೊಡ್ಡಿದೆ.

ಜನಪ್ರಿಯ ನಟ ಪುನೀತ್ ರಾಜಕುಮಾರ್ ಇನ್ನಿಲ್ಲ. ಇಂದು (ಅಕ್ಟೋಬರ್‌ 29) ಬೆಳಗ್ಗೆ ಜಿಮ್‌ನಲ್ಲಿ ವರ್ಕ್‌ಔಟ್ ಮಾಡುತ್ತಿದ್ದಾಗ ಅವರಿಗೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ವಿಕ್ರಮ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಅಗಲಿದ್ದು, ವೈದ್ಯರು ಇದು ತೀವ್ರ ಹೃದಯಾಘಾತ ಎಂದು ಘೋಷಿಸಿದ್ದಾರೆ. ಸಾರ್ವಜನಿಕರ ಅಂತಿಮ ದರ್ಶನಕ್ಕಾಗಿ ಬೆಂಗಳೂರು ಕಂಠೀರವ ಸ್ಟುಡಿಯೋದಲ್ಲಿ ಪುನೀತ್ ಪಾರ್ಥಿವ ಶರೀರವನ್ನು ಇಡಲು ಸರ್ಕಾರ ಸಿದ್ಧತೆ ನಡೆಸಿದೆ.

ವರನಟ ಡಾ.ರಾಜಕುಮಾರ್ ಅವರ ಕಿರಿಯ ಪುತ್ರ ಪುನೀತ್ ರಾಜಕುಮಾರ್ ಬಾಲನಟನಾಗಿಯೇ ಕನ್ನಡಿಗರಿಗೆ ಪ್ರಿಯರಾಗಿದ್ದವರು. ಪ್ರಸ್ತುತ ಕನ್ನಡ ಚಿತ್ರರಂಗದ ಅತ್ಯಂತ ಜನಪ್ರಿಯ ನಾಯಕನಟ. ಬಾಲನಟನಾಗಿ ಬೆಳ್ಳಿತೆರೆಗೆ ಪರಿಚಯವಾದ ಅವರು ‘ಬೆಟ್ಟದ ಹೂವು’ ಸಿನಿಮಾದ ಉತ್ತಮ ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ‘ಅಪ್ಪು’ ಚಿತ್ರದ ಮೂಲಕ ನಾಯಕನಟರಾದ ಪುನೀತ್‌ ಸದಭಿರುಚಿ ಮತ್ತು ಕೌಟುಂಬಿಕ ಚಿತ್ರಗಳ ಹೀರೋ ಎಂದು ಕರೆಸಿಕೊಂಡಿದ್ದರು. ಅಬಾಲವೃದ್ಧರಾದಿಯಾಗಿ ಎಲ್ಲರ ಅಭಿಮಾನ ಸಂಪಾದಿಸಿದ್ದ ನಟ. ಅಭಿನಯದ ಜೊತೆ ಇತ್ತೀಚೆಗೆ ಚಿತ್ರನಿರ್ಮಾಣಕ್ಕೂ ಇಳಿದಿದ್ದರು. ಅವರ ಪಿಆರ್‌ಕೆ ಬ್ಯಾನರ್‌ನಡಿ ಯುವ ಕ್ರಿಯಾಶೀಲ ನಿರ್ದೇಶಕರು ಸಿನಿಮಾ ನಿರ್ದೇಶಿಸಿದ್ದಾರೆ. ಸಾಮಾಜಿಕ ಸೇವಾ ಕಾರ್ಯಕ್ರಮಗಳಲ್ಲೂ ತೊಡಗಿಸಿಕೊಂಡಿದ್ದ ಪುನೀತ್ ತಮ್ಮ ಸರಳ, ಸಜ್ಜನಿಕೆಯ ವ್ಯಕ್ತಿತ್ವದಿಂದಲೂ ಎಲ್ಲರಿಗೂ ಆಪ್ತರಾಗಿದ್ದರು. ತಮ್ಮ ಪ್ರೀತಿಯ ಅಪ್ಪು ಅಗಲಿಕೆಗೆ ಕನ್ನಡಿಗರು ಕಂಬನಿ ಮಿಡಿಯುತ್ತಿದ್ದಾರೆ.

ಎದೆನೋವಿನಿಂದ ಪುನೀತ್ ರಾಜಕುಮಾರ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ನಟ ಶಿವರಾಜಕುಮಾರ್‌ ಸೇರಿದಂತೆ ರಾಜಕುಮಾರ್ ಕುಟುಂಬದ ಸದಸ್ಯರು ಆಸ್ಪತ್ರೆಗೆ ಧಾವಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಇತರೆ ರಾಜಕೀಯ ಮುಖಂಡರು, ಚಿತ್ರರಂಗದ ಪ್ರಮುಖರು ಆಸ್ಪತ್ರೆಗೆ ಆಗಮಿಸಿ ವೈದ್ಯರನ್ನು ಸಂಪರ್ಕಿಸಿ ನಟನ ಆರೋಗ್ಯದ ಬಗ್ಗೆ ಮಾಹಿತಿ ಪಡೆದರು. ಸುದ್ದಿ ತಿಳಿಯುತ್ತಿದ್ದಂತೆ ನಟನ ಚೇತರಿಕೆಗಾಗಿ ಕನ್ನಡಿಗರು ಹಾರೈಸಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಅವರ ಚೇತರಿಕೆಗೆ ಹಾರೈಕೆಯ ಸಂದೇಶಗಳನ್ನು ಹಾಕಿದ್ದರು. ಅಂತಿಮವಾಗಿ ಹಾರೈಕೆಗಳು ಫಲಿಸದೆ ಪುನೀತ್ ರಾಜಕುಮಾರ್ ಬಾರದ ಲೋಕಕ್ಕೆ ಹೊರಟುಹೋಗಿದ್ದಾರೆ.

LEAVE A REPLY

Connect with

Please enter your comment!
Please enter your name here