ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ತೆಲುಗು ಸಿನಿಮಾ ಕುರಿತಂತೆ ಕನ್ನಡಿಗರು ಆಕ್ರೋಷ ವ್ಯಕ್ತಪಡಿಸಿದ್ದಾರೆ. ಹೆಸರಿಗಷ್ಟೇ ಕನ್ನಡ ಡಬ್ಬಿಂಗ್ ಅವತರಣಿಕೆ ಸಿದ್ಧವಾಗಿದೆ. ಬೆರಳೆಣಿಕಯಷ್ಟು ಕನ್ನಡ ಶೋ ಕೊಟ್ಟು ಉಳಿದಂತೆ ದೊಡ್ಡ ಸಂಖ್ಯೆಯಲ್ಲಿ ತೆಲುಗು ಅವತರಣಿಕೆ ಬಿಡುಗಡೆ ಮಾಡುತ್ತಿದ್ದಾರೆ ಎನ್ನುವುದು ಆರೋಪ.
ಬಹುನಿರೀಕ್ಷಿತ ‘ಪುಷ್ಪ’ ಸಿನಿಮಾ ನಾಳೆ ಥಿಯೇಟರ್‌ಗೆ ಬರುತ್ತಿದೆ. ಮೂಲ ತೆಲುಗು ಭಾಷೆ ಸೇರಿದಂತೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲೂ ಸಿನಿಮಾ ರಾಜ್ಯದಲ್ಲಿ ತೆರೆಕಾಣುತ್ತಿದೆ. ಥಿಯೇಟರ್ ಬುಕ್ಕಿಂಗ್ ಶುರುವಾಗಿದ್ದು, ಕನ್ನಡ ಅವತರಣಿಕೆಯಲ್ಲಿ ಬೆರಳೆಣಿಕೆಯಷ್ಟೇ ಶೋಗಳನ್ನು ಕೊಟ್ಟಿದ್ದಾರೆ ಎಂದು ಕನ್ನಡಿಗರು ಸೋಷಿಯಲ್ ಮೀಡಿಯಾದಲ್ಲಿ ಚಕಾರ ಎತ್ತಿದ್ದಾರೆ. ಒಂದು ಅಂದಾಜಿನಂತೆ ಮೂಲ ತೆಲುಗು ಭಾಷೆಯಲ್ಲಿ 700ಕ್ಕೂ ಹೆಚ್ಚು ಶೋಗಳೊಂದಿಗೆ ‘ಪುಷ್ಪ’ ತೆರೆಕಾಣುತ್ತಿದೆ. ಆದರೆ ರಾಜ್ಯದಾದ್ಯಂತ ಕನ್ನಡ ಅವತರಣಿಕೆ ರಿಲೀಸ್ ಮಾಡುತ್ತಿರುವುದು ಕೇವಲ 8 ಸ್ಕ್ರಿನ್‌ಗಳಲ್ಲಷ್ಟೆ. ಇನ್ನೂ ವಿಚಿತ್ರವೆಂದರೆ ರಾಜ್ಯದಲ್ಲಿ ಕನ್ನಡಕ್ಕಿಂತ ಮಲಯಾಳಂ ಮತ್ತು ತಮಿಳು ಅವತರಣಿಕೆಗಳೇ ಹೆಚ್ಚಿನ ಸಂಖ್ಯೆಯಲ್ಲಿ ಸ್ಕ್ರಿನ್ ಆಗುತ್ತಿರುವುದು!
ಈ ಬೆಳವಣಿಗೆ ಕನ್ನಡ ಪ್ರೇಮಿಗಳಿಗೆ ಕೋಪ ತರಿಸಿದೆ. ಇಂದು ಬೆಳಗ್ಗೆಯಿಂದ ನೂರಾರು ಸಂಖ್ಯೆಯಲ್ಲಿ ಕನ್ನಡಿಗರು #BoycottPushpaInKarnataka ಎಂದು ಟ್ರೆಂಡ್ ಮಾಡುತ್ತಿದ್ದು ತಮ್ಮ ಕೋಪ ಹೊರಹಾಕಿದ್ದಾರೆ. “ನಾವು ‘ಪುಷ್ಪ’ ಸಿನಿಮಾ ನೋಡೋಲ್ಲ. ಇದು ರಾಜ್ಯದಲ್ಲಿ ತೆಲುಗು ಹೇರಿಕೆಯಲ್ಲದೆ ಮತ್ತೇನಲ್ಲ. ವೃತ್ತಿಪರ ಡಬ್ಬಿಂಗ್ ಮಾಡಿದ್ದರೂ ಕನ್ನಡ ಅವತರಣಿಕೆಯಲ್ಲೇಕೆ ಸಿನಿಮಾ ಬಿಡುಗಡೆ ಮಾಡುತ್ತಿಲ್ಲ?” ಎಂದು ಹಲವರು ವಿತರಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಹಳಷ್ಟು ಕಡೆ ಶೋಗಳು ಸಂಪೂರ್ಣ ಬುಕ್ ಆಗಿಲ್ಲದಿದ್ದರೂ ದೊಡ್ಡ ಸಂಖ್ಯೆಯಲ್ಲಿ ಸ್ಕ್ರಿನ್‌ಗಳಿಗೆ ತೆಲುಗು ಅವತರಣಿಕೆಯನ್ನು ರಿಲೀಸ್ ಮಾಡಲಾಗುತ್ತಿದೆ. “ನಾಮ್ ಕಾ ವಾಸ್ತೇ”ಗಾಗಿ ಕನ್ನಡ ಅವತರಣಿಕೆ ಬಿಡುಗಡೆ ಮಾಡುತ್ತಿದ್ದೀರಿ. ನಿಮಗೆ ಕನ್ನಡದ ಆಸ್ಮಿತೆಗಿಂತ ಮುಖ್ಯವಾಗಿ ಬ್ಯುಸಿನೆಸ್ ಮುಖ್ಯವಾಗಿದೆ. ಈ ಧೋರಣೆ ಖಂಡಿಸಿ ನಾವು ‘ಪುಷ್ಪ’ ಚಿತ್ರವನ್ನು ಬಾಯ್ಕಾಟ್ ಮಾಡುತ್ತಿದ್ದೇವೆ” ಎಂದಿದ್ದಾರೆ.
ಈ ಮಧ್ಯೆ ಕೆಲವರು ಕನ್ನಡ ಮೂಲದ ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಮಾತನಾಡತೊಡಗಿದ್ದಾರೆ. ಯಶ್ ಅವರ ‘ಕೆಜಿಎಫ್2’ ಮತ್ತು ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಚಿತ್ರಗಳ ಕುರಿತು ಪ್ರಸ್ತಾಪವಾಗಿದೆ. “ಈ ಚಿತ್ರಗಳನ್ನು ಮೂಲ ಕನ್ನಡದಲ್ಲಿ ಆಂಧ್ರದಾದ್ಯಂತ ಬಿಡುಗಡೆ ಮಾಡಿದರೆ ನೀವು ಪ್ರೋತ್ಸಾಹ ನೀಡುತ್ತೀರಾ? ನಾವು ಯಾವುದೇ ಭಾಷೆಗಳ ವಿರುದ್ಧವಿಲ್ಲ, ಆದರೆ ನಮ್ಮ ಮಾತೃಭಾಷೆಗೆ ಮನ್ನಣೆ ಬೇಕು. ಹೆಚ್ಚು ಸಂಖ್ಯೆಯಲ್ಲಿ ಕನ್ನಡ ಅವತರಣಿಕೆಯಲ್ಲಿ ‘ಪುಷ್ಪ’ ಚಿತ್ರವನ್ನು ಬಿಡುಗಡೆ ಮಾಡಬೇಕು” ಎಂದು ಹಲವರು ಸೋಷಿಯಲ್ ಮೀಡಿಯಾ ಅಕೌಂಟ್‌ಗಳಲ್ಲಿ ಆಗ್ರಹಿಸಿದ್ದಾರೆ. ತೆಲುಗು ಹೇರಿಕೆಯನ್ನು ತಡೆಯಲು ನಾಳೆ ತೆರೆಕಾಣುತ್ತಿರುವ ಅದಿತಿ ಪ್ರಭುದೇವ ಅಭಿನಯದ ‘ಆನ’ ಕನ್ನಡ ಚಿತ್ರವನ್ನು ಬೆಂಬಲಿಸಿ ಎಂದು ಕೆಲವರು ಕರೆಕೊಟ್ಟಿದ್ದಾರೆ.