ಪಶ್ಚಿಮ ಘಟ್ಟದ ದಟ್ಟ ಕಾಡುಗಳ ನಡುವಿನ ಕಳ್ಳಸಾಗಾಣಿಕೆಯ ನೈಜ ಘಟನೆಗಳನ್ನು ಆಧರಿಸಿದ ಸಿನಿಮಾ ‘ಕಾರ್ಗಲ್ ನೈಟ್ಸ್’. ದೇವರಾಜ್ ಪೂಜಾರಿ ನಿರ್ದೇಶನದ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

ಹಳೆಯ ಕಾಲದ ಕತೆಗಳನ್ನು ಸಿನಿಮಾಗಳಲ್ಲಿ ನೋಡೋಕೆ ಒಂಥರಾ ಕುತೂಹಲ ಇರುತ್ತೆ. ಅಂತಹ ಕುತೂಹಲವನ್ನೇ ಬಂಜವಾಳವನ್ನಾಗಿಸಿಕೊಂಡಿರುವ ಒಂದು ಹೊಸಬರ ತಂಡ ಸಾಹಸವೊಂದಕ್ಕೆ ಕೈ ಹಾಕಿದೆ. ಹತ್ತೊಂಬತ್ತನೇ ಶತಮಾನದಲ್ಲಿ ಪಶ್ಚಿಮ ಘಟ್ಟದ ದಟ್ಟ ಕಾಡುಗಳ ನಡುವೆ ನಡೆದ ಕಳ್ಳಸಾಗಾಣಿಕೆಯ ನೈಜವಾದ ಘೋರ ಅನುಭವಗಳನ್ನು ಆಧರಿಸಿ ‘ಕಾರ್ಗಲ್ ನೈಟ್ಸ್’ ಸಿನಿಮಾ ಮಾಡುತ್ತಿದೆ ಈ ತಂಡ. ಚಿತ್ರದಲ್ಲಿ ಪಶ್ಚಿಮ ಘಟ್ಟದ ಭೂಗತ ಲೋಕವನ್ನು ತೋರಿಸುವ ಪ್ರಯತ್ನ ನಿರ್ದೇಶಕ ದೇವರಾಜ್ ಪೂಜಾರಿ ಅವರದ್ದು. ಹರ್ಶಿಲ್ ಕೌಶಿಕ್ ಈ ಚಿತ್ರದ ಮೂಲಕ ನಾಯಕ ನಟರಾಗಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ರಾಗ್ ಯು.ಆರ್.ಎಸ್., ಕಿಶೋರ್, ಪ್ರಶಾಂತ್ ಸಿದ್ದಿ, ನಾಗರಾಜ್ ಬೈಂದೂರ್, ಹರೀಶ್ ಭಟ್ ನೀನಾಸಂ, ಸಂದೀಪ್ ಪರಶುರಾಮ್, ವರುಣ್ ಹೆಗ್ಡೆ, ಅಕ್ಷತಾ ಅಶೋಕ್, ಚಂದ್ರಕಾಂತ್, ರಾಜೇಶ್ ರಾಮಕೃಷ್ಣ, ಶಶಿಧರ್ ಗೌಡ, ಶ್ರೀಗಂಧ್ ನಾಗ್, ನರೇಂದ್ರ ಕಬ್ಬಿನಾಲೆ ಈ ಚಿತ್ರದ ಉಳಿದ ಪಾತ್ರಗಳಲ್ಲಿ ನಟಿಸಿದ್ದಾರೆ.

ಆಗಿನ ಕಾಲದ ಸಾಗರ ತಾಲ್ಲೂಕಿನ ಕಾರ್ಗಲ್‌ನಲ್ಲಿ ನಿಗೂಢವಾಗಿ ನಡೆಯುತ್ತಿದ್ದ ಗಂಧದ ಮರಗಳ ಕಳ್ಳಸಾಗಾಣಿಕೆಯ ಕಥೆಯನ್ನು ಮರುಸೃಷ್ಠಿ ಮಾಡುವುದು ಸುಲಭದ ಕೆಲಸವಲ್ಲ. ಆದರೆ ಅದನ್ನು ಮಲ್ಲಿಕಾರ್ಜುನ್ ಮತ್ತು ಅವರ ತಂಡ ಪ್ರಯತ್ನ ಮಾಡಿದೆ. ಈ ಚಿತ್ರಕ್ಕೆ  ಸುರೇಂದ್ರನಾಥ್ ಬಿ.ಆರ್. ಸಂಗೀತ ನೀಡಿದ್ದಾರೆ. ರೋಷನ್ ಲೋಕೇಶ್ ಅವರ ಸಂಕಲನವಿದೆ. ಸಾಗರ ಹಾಗೂ ಕಾರ್ಗಲ್‌ನಲ್ಲಿ ಸಿಕ್ಕ ಕಳ್ಳಸಾಗಾಣಿಕೆಯ ನೈಜ ಘಟನೆಗಳನ್ನು ಆಧರಿಸಿ ಚಿತ್ರದ ಕತೆ ಬರೆಯಲಾಗಿದೆ. ಓಂಕಾರ್ ಪ್ರೊಡಕ್ಷನ್ ಮತ್ತು ಕಾಳಿಕಾ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಚಿತ್ರದ ಟ್ರೈಲರ್ A2 music YouTube ಚಾನಲ್‌ನಲ್ಲಿ ಬಿಡುಗಡೆಯಾಗಿದೆ. ಗಂಧದ ಕಳ್ಳಸಾಗಣೆ, ಅದರ ಸುತ್ತಲ ಮಾಫಿಯಾ, ರಕ್ತಪಾತದ ಕತೆ ‘ಕಾರ್ಗಲ್‌ ನೈಟ್ಸ್’ ಸಿನಿಮಾದಲ್ಲಿದೆ. ಎರಡು ಬಣಗಳ ನಡುವಿನ ಭೀಕರ ದ್ವೇಷದ ಕತೆಯೂ ಸಿನಿಮಾದಲ್ಲಿದೆ. ಕುತೂಹಲ ಹುಟ್ಟಿಸುವ ಈ ಟ್ರೇಲರ್ ಸದ್ಯಕ್ಕೆ ಸಿನಿಮಾದ ಕತೆಯಲ್ಲಿರುವ ಒಂದು ಗ್ಯಾಂಗ್‌ನ ಬಗ್ಗೆ ಅಷ್ಟೇ ರಿವೀಲ್ ಮಾಡಿದೆ. ಚಿತ್ರದ ಮತ್ತೊಂದು ಗ್ಯಾಂಗ್‌ನ ಟ್ರೇಲರ್‌ ಕೂಡ ಶೀಘ್ರದಲ್ಲಿಯೇ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡದ್ದು. ಈ ಚಿತ್ರವನ್ನು ವೆಬ್‌ ಸರಣಿಯನ್ನಾಗಿಯೂ ರೂಪಿಸುವ ಸೂಚನೆಯನ್ನು ಚಿತ್ರತಂಡ ನೀಡಿದೆ. ಈ ಕುರಿತು ಅವರು ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಿದ್ದಾರೆ.

LEAVE A REPLY

Connect with

Please enter your comment!
Please enter your name here