ಛಾಯಾಗ್ರಾಹಕಿ ಸವಿತಾ ಸಿಂಗ್ ಚೊಚ್ಚಲ ನಿರ್ದೇಶನದ ‘ಸೋನ್ಸಿ – ಶಾಡೋ ಬರ್ಡ್’ ಹಿಂದಿ ಕಿರುಚಿತ್ರ ಭಾರತದಿಂದ ಆಸ್ಕರ್‌ಗೆ ಅಫಿಷಿಯಲ್ ಎಂಟ್ರಿ ಪಡೆದಿದೆ. ಫ್ರೆಂಚ್ ಲೇಖಕ ಮಾರ್ಸೆಲ್ ಪ್ರೌಸ್ಟ್ ಕೃತಿ ಅವರ ಈ ಕಿರುಚಿತ್ರಕ್ಕೆ ಪ್ರೇರಣೆ.
‘ಸೋನ್ಸಿ – ಶಾಡೋ ಬರ್ಡ್’ ಕಿರುಚಿತ್ರ ಅತ್ಯುತ್ತಮ ಛಾಯಾಗ್ರಹಣಕ್ಕಾಗಿ ರಾಷ್ಟ್ರಪ್ರಶಸ್ತಿ ಗೌರವ ಪಡೆದಿತ್ತು. ಈ ಕಿರುಚಿತ್ರದ ಛಾಯಾಗ್ರಾಹಕಿ ಮತ್ತು ನಿರ್ದೇಶಕಿ ಕವಿತಾ ಸಿಂಗ್. ಇದು ಅವರ ಚೊಚ್ಚಲ ನಿರ್ದೇಶನದ ಕಿರುಚಿತ್ರವೂ ಹೌದು. ರಾಷ್ಟ್ರಪ್ರಶಸ್ತಿ ಪಡೆದಿದ್ದ ಈ ಕಿರುಚಿತ್ರ ಇದೀಗ ಕಿರುಚಿತ್ರ ವಿಭಾಗದಲ್ಲಿ ಆಸ್ಕರ್‌ಗೆ ನಾಮಿನೇಟ್ ಆಗಿದೆ. ಫ್ರೆಂಚ್ ಲೇಖಕ ಮಾರ್ಸೆಲ್ ಪ್ರೌಸ್ಟ್ ಕೃತಿಯೊಂದರ ಪ್ರೇರಣೆಯಿಂದ ಸವಿತಾ ತಯಾರಿಸಿರುವ ಈ ಕಿರುಚಿತ್ರದಲ್ಲಿ ಎಂಟು ವರ್ಷದ ಆರೋಹಿ ರಾಧಾಕೃಷ್ಣನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಳೆ. “ಸುಪ್ತಮನಸ್ಸಿನಲ್ಲಿ ಹುದುಗಿರುವ ಬಾಲ್ಯದ ಕಾಡುವ ನೆನಪುಗಳ ಕುರಿತು ಕಿರುಚಿತ್ರದಲ್ಲಿ ಪ್ರಸ್ತಾಪಿಸಿದ್ದೇನೆ. ಈ ಅನುಭವಗಳು ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವಂಥವು” ಎನ್ನುತ್ತಾರೆ ಕವಿತಾ ಸಿಂಗ್.
ಪುಣೆ ಫಿಲ್ಮ್ ಮತ್ತು ಟೆಲಿವಿಷನ್ ಇನ್‌ಸ್ಟಿಟ್ಯೂಟ್‌ನಲ್ಲಿ ಛಾಯಾಗ್ರಹಣ ಕಲಿತಿದ್ದಾರೆ ಕವಿತಾ ಸಿಂಗ್. ಅಮಿತ್ ದತ್ತಾ ನಿರ್ದೇಶನದ ‘ಕ್ರಮಾಶಾ’ (2007) ಕಿರುಚಿತ್ರದ ಉತ್ತಮ ಛಾಯಾಗ್ರಹಣಕ್ಕಾಗಿ ಕವಿತಾಗೆ ಮೊದಲ ರಾಷ್ಟ್ರಪ್ರಶಸ್ತಿ ಸಿಕ್ಕಿತ್ತು. ರಾಮ್ ಗೋಪಾಲ್ ವರ್ಮಾ ನಿರ್ದೇಶನದ ‘ಫೂಂಕ್’, ‘ಜಲ್‌ಪರಿ’, ‘ಹವಾಯ್‌ಝಾದಾ’ ಸಿನಿಮಾಗಳು ಸೇರಿದಂತೆ ಹತ್ತಾರು ಜಾಹೀರಾತುಗಳಿಗೆ ಅವರು ಛಾಯಾಗ್ರಹಣ ಮಾಡಿದ್ದಾರೆ. ಅಮೇಜಾನ್ ಪ್ರೈಮ್‌ಗೆ ರಾಜಾ ಮೆನನ್ ನಿರ್ದೇಶಿಸುತ್ತಿರುವ ಸರಣಿ ಮತ್ತು ಉಮೇಶ್ ಕುಲಕರ್ಣಿ ನಿರ್ದೇಶನದ ಡಾಕ್ಯುಮೆಂಟರಿ ಸೀರೀಸ್ ‘ಇಂಡಿಯನ್ ಪ್ರಿಡೇಟರ್ಸ್’ ಅವರ ಇತ್ತೀಚಿನ ಛಾಯಾಗ್ರಹಣದ ಪ್ರಾಜೆಕ್ಟ್‌ಗಳು. ಕೋವಿಡ್ ಸಂಕಷ್ಟಗಳನ್ನು ಹೇಳುವ ‘ಶೆಹ್ಟೂಟ್’ ಅವರ ನಿರ್ದೇಶನದ ಇನ್ನೊಂದು ಕಿರುಚಿತ್ರ.