ಕುಂಜುಮೋನ್ ನಿರ್ಮಾಣದಲ್ಲಿ ತಯಾರಾಗಲಿರುವ ‘ಜಂಟಲ್‌ಮ್ಯಾನ್ 2’ ಸಿನಿಮಾಗೆ ಆಸ್ಕರ್ ಪುರಸ್ಕೃತ ಕೀರವಾಣಿ ಸಂಗೀತ ಸಂಯೋಜಿಸಲಿದ್ದಾರೆ. ಎ ಗೋಕುಲ್ ಕೃಷ್ಣ ನಿರ್ದೇಶಿಸಲಿರುವ ಚಿತ್ರ ಸದ್ಯದಲ್ಲೇ ಸೆಟ್ಟೇರಲಿದೆ.
‘ಜಂಟಲ್‌ಮ್ಯಾನ್ 2’ ಕಾಲಿವುಡ್ ಸಿನಿಮಾ ಸೆಟ್ಟೇರುವ ಮಾಹಿತಿ ಸಿಕ್ಕಿದೆ. ಈ ಹಿಂದೆ ‘ಜಂಟಲ್‌ಮ್ಯಾನ್’, ‘ಕಾದಲ್ ದೇಶಂ’ ಸೇರಿದಂತೆ ಹಲವು ಸೂಪರ್‌ಹಿಟ್ ಸಿನಿಮಾಗಳನ್ನು ನಿರ್ಮಿಸಿರುವ ಕೆ ಟಿ ಕುಂಜುಮೋನ್ ‘ಜಂಟಲ್‌ಮ್ಯಾನ್ 2’ ಸಿನಿಮಾ ನಿರ್ಮಿಸಲಿದ್ದಾರೆ. ಈ ಸಿನಿಮಾಗೆ ಆಸ್ಕರ್ ಪುರಸ್ಕೃತ ಸಂಗೀತ ಸಂಯೋಜಕ ಎಂ ಎಂ ಕೀರವಾಣಿ ಅವರು ಸಂಗೀತ ಸಂಯೋಜಿಸಲಿದ್ದಾರೆ ಎನ್ನುವುದು ಅಧಿಕೃತವಾಗಿದೆ. ಹೆಚ್ಚಾಗಿ ತೆಲುಗು ಸಿನಿಮಾಗಳಿಗೆ ಕೆಲಸ ಮಾಡುವ ಕೀರವಾಣಿ ಈ ಹಿಂದೆ ಕೆಲವು ತಮಿಳು ಚಿತ್ರಗಳಿಗೆ ಸಂಗೀತ ನಿರ್ದೇಶಿಸಿದ್ದಿದೆ. ಈಗ ಮತ್ತೆ ಕಾಲಿವುಡ್‌ಗೆ ಮರಳುತ್ತಿದ್ದಾರೆ.
ಎರಡು ತಿಂಗಳ ಹಿಂದೆ ಅಮೆರಿಕದಲ್ಲಿ ನಡೆದ ಆಸ್ಕರ್ ಸಮಾರಂಭಲ್ಲಿ ಭಾಗವಹಿಸಿದ್ದ ಕೀರವಾಣಿ ಪ್ರಶಸ್ತಿ ಪಡೆದಿದ್ದರು. ಅಕಾಡೆಮಿ ಸಮಾರಂಭದ ವೇದಿಕೆಯಲ್ಲಿನ ಅವರ ಮಾತುಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದವು. ಕೀರವಾಣಿ ಭಾರತಕ್ಕೆ ಹಿಂದಿರುಗಿದ ನಂತರ ‘ಜಂಟಲ್‌ಮ್ಯಾನ್ 2’ ನಿರ್ದೇಶಕ ಎ ಗೋಕುಲ್ ಕೃಷ್ಣ ಅವರನ್ನು ಭೇಟಿ ಮಾಡಿ ಚಿತ್ರದ ಬಗ್ಗೆ ಚರ್ಚಿಸಿದ್ದಾರೆ. ಕತೆ ಇಷ್ಟಪಟ್ಟ ಕೀರವಾಣಿ ಚಿತ್ರದ ಸಂಗೀತ ಸಂಯೋಜನೆಯ ಹೊಣೆಗಾರಿಕೆ ಹೊತ್ತಿದ್ದಾರೆ. ಸಿನಿಮಾ ಸದ್ಯ ಪ್ರೀ ಪ್ರೊಡಕ್ಷನ್ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಕಲಾವಿದರು ಹಾಗೂ ತಂತ್ರಜ್ಞರ ಕುರಿತು ಮಾಹಿತಿ ನೀಡುವುದಾಗಿ ಹೇಳುತ್ತಾರೆ ನಿರ್ಮಾಪಕ ಕುಂಜುಮೋನ್.