ಕೇರಳ ರಾಜ್ಯಪ್ರಶಸ್ತಿಗಳು ಘೋಷಣೆಯಾಗಿದ್ದು, ‘ದಿ ಗ್ರೇಟ್ ಇಂಡಿಯನ್ ಕಿಚನ್’ ಅತ್ಯುತ್ತಮ ಸಿನಿಮಾ ಗೌರವಕ್ಕೆ ಪಾತ್ರವಾಗಿದೆ. ಜಯಸೂರ್ಯ (ವೆಲ್ಲಮ್) ಮತ್ತು ಅನ್ನಾ ಬೆನ್ (ಕಪ್ಪೆಲಾ) ಅತ್ಯುತ್ತಮ ನಟ/ನಟಿ ಪ್ರಶಸ್ತಿ ಪಡೆದಿದ್ದಾರೆ.
ಇಂದು 51ನೇ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾಗಿವೆ. 2020ರಲ್ಲಿ ತೆರೆಕಂಡ ಮಲಯಾಳಂ ಚಿತ್ರಗಳನ್ನು ಪರಿಗಣಿಸಿ ಆಯ್ಕೆ ಮಾಡಲಾದ ಪ್ರಶಸ್ತಿ ಪಟ್ಟಿಯನ್ನು ಸರ್ಕಾರ ಇಂದು ಬಿಡುಗಡೆ ಮಾಡಿದೆ. ‘ವೆಲ್ಲಮ್’ ಚಿತ್ರದ ಉತ್ತಮ ನಟನೆಗೆ ಜಯಸೂರ್ಯ ಮತ್ತು ‘ಕಪ್ಪೆಲಾ’ ಚಿತ್ರದ ಉತ್ತಮ ನಟನೆಗೆ ಅನ್ನಾ ಬೆನ್ ಶ್ರೇಷ್ಠ ನಟ ಮತ್ತು ಶ್ರೇಷ್ಠ ನಟಿ ಗೌರವಗಳಿಗೆ ಪಾತ್ರರಾಗಿದ್ದಾರೆ. ವಿಮರ್ಶಕರು ಮತ್ತು ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದ್ದ ‘ದಿ ಗ್ರೇಟ್ ಇಂಡಿಯನ್ ಕಿಚನ್’ ಶ್ರೇಷ್ಠ ಸಿನಿಮಾ ಆಗಿ ಆಯ್ಕೆಯಾಗಿದೆ. ಈ ಚಿತ್ರದ ಚಿತ್ರಕಥೆಗಾಗಿ ನಿರ್ದೇಶಕ ಜೋ ಬೇಬಿ ಪ್ರಶಸ್ತಿ ಪಡೆದಿರುವುದು ವಿಶೇಷ. ಖ್ಯಾತ ನಟಿ ಸುಹಾಸಿನಿ ಮಣಿರತ್ನಂ ಅಧ್ಯಕ್ಷತೆಯಲ್ಲಿ ರೂಪಿಸಿದ್ದ ಪ್ರಶಸ್ತಿ ಕಮಿಟಿಯಲ್ಲಿ ಕನ್ನಡ ಚಿತ್ರನಿರ್ದೇಶಕ ಪಿ.ಶೇಷಾದ್ರಿ ಅವರು ಕೂಡ ಒಬ್ಬರು ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು. ಒಟ್ಟು ಎಂಬತ್ತು ಸಿನಿಮಾಗಳು ಪ್ರಶಸ್ತಿ ಸುತ್ತಿನಲ್ಲಿದ್ದವು.
ಪ್ರಶಸ್ತಿ ಪಟ್ಟಿ | ಅತ್ಯುತ್ತಮ ನಟ : ಜಯಸೂರ್ಯ (ವೆಲ್ಲಮ್), ಅತ್ಯುತ್ತಮ ನಟಿ : ಅನ್ನಾ ಬೆನ್ (ಕಪ್ಪೆಲ), ಅತ್ಯುತ್ತಮ ಸಿನಿಮಾ : ದಿ ಗ್ರೇಟ್ ಇಂಡಿಯನ್ ಕಿಚನ್ (ನಿರ್ದೇಶನ – ಜೋ ಬೇಬಿ), ಅತ್ಯುತ್ತಮ ಮನರಂಜನಾತ್ಮಕ ಸಿನಿಮಾ : ಅಯ್ಯಪ್ಪನಮ್ ಕೊಶಿಯಂ (ನಿರ್ದೇಶನ : ಸಚಿ), ಅತ್ಯುತ್ತಮ ನಿರ್ದೇಶಕ : ಸಿದ್ಧಾರ್ಥ ಶಿವ (ಎನ್ನಿವರ್), ಅತ್ಯುತ್ತಮ ಚೊಚ್ಚಲ ನಿರ್ದೇಶನ: ಮೊಹಮ್ಮದ್ ಮುಸ್ತಾಫಾ (ಕಪ್ಪೆಲಾ), ಅತ್ಯುತ್ತಮ ಚಿತ್ರಕಥೆ : ಜೋ ಬೇಬಿ (ದಿ ಗ್ರೇಟ್ ಇಂಡಿಯನ್ ಕಿಚನ್), ಅತ್ಯುತ್ತಮ ಸಂಕಲನ : ಮಹೇಶ್ ನಾಯಾಯಣನ್ (ಸಿ ಯೂ ಸೂನ್), ಅತ್ಯುತ್ತಮ ಸಂಗೀತ ನಿರ್ದೇಶಕ : ಎಂ.ಜಯಚಂದ್ರನ್ (ಸೂಫಿಯಂ ಸುಜಾತಯಂ), ಅತ್ಯುತ್ತಮ ಗಾಯಕ : ಶಾಬಾಝ್ ಅಮಾನ್, ಅತ್ಯುತ್ತಮ ಗಾಯಕಿ : ನಿತ್ಯಾ ಮಮ್ಮೆನ್, ಅತ್ಯುತ್ತಮ ಗೀತರಚನೆ : ಅನ್ವರ್ ಅಲಿ