ಒಮಿಕ್ರಾನ್‌ ಆತಂಕದ ಹಿನ್ನೆಲೆಯಲ್ಲಿ ಸರ್ಕಾರ ಜಾರಿಗೊಳಿಸಿರುವ ವೀಕೆಂಡ್‌ ಕರ್ಫ್ಯೂಗೆ ಚಿತ್ರರಂಗದವರಿಂದ ಅಸಮಾಧಾನ ವ್ಯಕ್ತವಾಗಿದೆ. ಇದೀಗಷ್ಟೇ ಚೇತರಿಕೆ ಕಾಣುತ್ತಿರುವ ಸಿನಿಮಾರಂಗಕ್ಕೆ ಇದು ದೊಡ್ಡ ಪೆಟ್ಟು ಎನ್ನುವುದು ಅವರ ಆತಂಕ. ಈ ಕುರಿತು ವಾಣಿಜ್ಯ ಮಂಡಳಿ ನಾಳೆ ತುರ್ತು ಸಭೆ ಕರೆದಿದೆ.

ಕೋವಿಡ್‌ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಕೈಗೊಂಡಿರುವ ನಿರ್ಧಾರಗಳು ಚಿತ್ರರಂಗಕ್ಕೆ ಮಾರಕವಾಗಿ ಪರಿಣಮಿಸಲಿವೆ ಎಂದು ಚಿತ್ರರಂಗದ ಗಣ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಶೇ.50ರಷ್ಟು ಥಿಯೇಟರ್‌ ಆಕ್ಯುಪೆನ್ಸೀ ಜೊತೆಗೆ ಸರ್ಕಾರ ವೀಕೆಂಡ್‌ ಕರ್ಫ್ಯೂ ಜಾರಿ ಮಾಡಿದೆ. ಹೀಗಾಗಿ ವಾರಾಂತ್ಯದಲ್ಲಿ ಥಿಯೇಟರ್‌ಗಳು ಬಂದ್‌ ಆಗಲಿವೆ. ಶೇ.50 ಥಿಯೇಟರ್‌ ಆಕ್ಯುಪೆನ್ಸೀಗೆ ಸಮ್ಮತವಿದ್ದರೂ ವೀಕೆಂಡ್‌ ಕರ್ಫ್ಯೂ ಚಿತ್ರರಂಗಕ್ಕೆ ದುಬಾರಿಯಾಗಲಿದೆ ಎನ್ನುವುದು ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರ ಅಳಲು. ಈ ಬಗ್ಗೆ ಚರ್ಚಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಲು ವಾಣಿಜ್ಯ ಮಂಡಳಿ ನಾಳೆ ಸರ್ವಸದಸ್ಯರ ಸಭೆ ಕರೆದಿದೆ.

“ಕೋವಿಡ್‌ ಮೊದಲೆರೆಡು ಅಲೆಗಳಿಂದಾಗಿ ಸಿನಿಮಾರಂಗ ಸಾಕಷ್ಟು ಸಂಕಷ್ಟಕ್ಕೀಡಾಗಿದೆ. ಕಲಾವಿದರು, ತಂತ್ರಜ್ಞರು, ಕಾರ್ಮಿಕರು ಸೇರಿದಂತೆ ಉದ್ಯಮಕ್ಕೆ ಸಂಬಂಧಿಸಿದ ಎಲ್ಲರ ಮೇಲೂ ಋಣಾತ್ಮಕ ಪರಿಣಾಮಗಳು ಆಗಿವೆ. ಈಗ ಮತ್ತೆ ಕಠಿಣ ಕ್ರಮ ಕೈಗೊಂಡರೆ ಚಿತ್ರೋದ್ಯಮವೇ ನಶಿಸಿಹೋಗುವ ಸಂಭವವಿದೆ. ಈ ಬಗ್ಗೆ ವಾಣಿಜ್ಯ ಮಂಡಳಿ ಸದಸ್ಯರೆಲ್ಲರೂ ಸಭೆಯಲ್ಲಿ ಚರ್ಚಿಸಲಿದ್ದೇವೆ. ನಮ್ಮ ಸಂಕಷ್ಟಗಳನ್ನು ಸರ್ಕಾರಕ್ಕೆ ತಲುಪಿಸಿ ನಿಯಮ ಸಡಿಲಿಸಲು ಮನವಿ ಮಾಡಲಿದ್ದೇವೆ” ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌ ಹೇಳಿದ್ದಾರೆ.

LEAVE A REPLY

Connect with

Please enter your comment!
Please enter your name here