ಜನಪ್ರಿಯ ಹಿಂದಿ ಟೀವಿ ಶೋ ‘ಖಿಚಡಿ’ ಯ ಪರೇಖ್ ಕುಟುಂಬವು ‘ಖಿಚಡಿ 2 ಮಿಷನ್ ಪಾಂತುಕಿಸ್ತಾನ್’ ಮೂಲಕ ಮತ್ತೆ ನಮ್ಮ ಮುಂದೆ ಬಂದಿದೆ. 2010ರ ಚಲನಚಿತ್ರ ‘ಖಿಚಡಿ’ಯ ಮುಂದುವರಿದ ಭಾಗವಿದು. ಸಿನಿಮಾದಲ್ಲಿನ ಹಳತಾಗಿರುವ ಜೋಕ್‌ಗಳಿಗೆ ನಗು ಬರುವುದಿಲ್ಲ. ಕೆಲವೊಂದು ಸಂಭಾಷಣೆಗಳು ಕಿರಿಕಿರಿ ಉಂಟು ಮಾಡುತ್ತದೆ. ‘ಖಿಚಡಿ 2-ಮಿಷನ್ ಪಾಂತುಕಿಸ್ತಾನ್’ ZEE5ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಭಾರತೀಯ ಟೆಲಿವಿಷನ್ ಶೋ ‘ಖಿಚಡಿ’ ಯ ಪರೇಖ್ ಕುಟುಂಬವು ‘ಖಿಚಡಿ 2 ಮಿಷನ್ ಪಾಂತುಕಿಸ್ತಾನ್’ ಮೂಲಕ ಮತ್ತೆ ನಮ್ಮ ಮುಂದೆ ಬಂದಿದೆ. 2010ರ ಚಲನಚಿತ್ರ ‘ಖಿಚಡಿ’ಯ ಮುಂದುವರಿದ ಭಾಗ ಇದಾಗಿದ್ದು ಪರೇಖ್ ಕುಟುಂಬ ತಮ್ಮ ಎಡವಟ್ಟು, ಹಾಸ್ಯದ ಮೂಲಕ ನಗು ತರಿಸಲು ಇಲ್ಲಿ ಉತ್ತಮ ಪ್ರಯತ್ನ ಮಾಡಿದೆ. ಹೌದು, ಪ್ರಯತ್ನ ಮಾಡಿದೆ ಅಂತಾನೇ ಹೇಳಬೇಕು. ಯಾಕೆಂದರೆ ಕೆಲವೊಂದು ಜೋಕ್‌ಗಳಿಗೆ ನಗಬೇಕೋ, ಅಳಬೇಕೋ ಎಂದು ಗೊತ್ತಾಗುವುದಿಲ್ಲ. ಕೆಲವೊಂದು ಸಂಭಾಷಣೆಗಳು ಕಿರಿಕಿರಿ ಉಂಟು ಮಾಡುತ್ತದೆ. ಜೀ 5ನಲ್ಲಿ ‘ಖಿಚಡಿ 2-ಮಿಷನ್ ಪಾಂತುಕಿಸ್ತಾನ್’ ಸ್ಟ್ರೀಮ್‌ ಆಗುತ್ತಿದೆ. ಸಮಾಧಾನಕರ ವಿಷಯ ಎಂದರೆ ಕೆಲವೊಂದು ದೃಶ್ಯಗಳನ್ನು ನೀವು ಫಾಸ್ಟ್ ಫಾರ್ವರ್ಡ್ ಮಾಡಿದರೂ ನಷ್ಟ ಅಂತ ಅನಿಸುವುದಿಲ್ಲ.

ಜಮ್ನಾದಾಸ್ ಮಜೇಥಿಯಾ (ಹಿಮಾಂಶು ಪಾತ್ರ) ಮತ್ತು ಆತಿಶ್ ಕಪಾಡಿಯಾ ಜೋಡಿ ನಿರ್ಮಿಸಿದ ‘ಖಿಚಡಿ’ 2002ರಲ್ಲಿ ದೂರದರ್ಶನದಲ್ಲಿ ಜನಪ್ರಿಯತೆ ಗಳಿಸಿತ್ತು. 2010ರಲ್ಲಿ ಇದು ಸಿನಿಮಾ ಕೂಡಾ ಆಯ್ತು. ಈಗ 13 ವರ್ಷಗಳ ನಂತರ ಅತಿಶ್ ಕಪಾಡಿಯಾ ತಮ್ಮ ಎರಡನೇ ಚಿತ್ರ ‘ಖಿಚಡಿ 2 ಮಿಷನ್ ಪಾಂತುಕಿಸ್ತಾನ್’ ಮೂಲಕ ಪರೇಖ್ ಕುಟುಂಬವನ್ನು ತೆರೆಯ ಮೇಲೆ ತಂದಿದ್ದಾರೆ. ಹಂಸಾ (ಸುಪ್ರಿಯಾ ಪಾಠಕ್), ಜಯಶ್ರೀ (ವಂದನಾ ಪಾಠಕ್), ಪ್ರಫುಲ್ (ರಾಜೀವ್ ಮೆಹ್ತಾ), ಬಾಬುಜಿ (ಅನಂಗ್ ದೇಸಾಯಿ) ಮತ್ತು ಹಿಮಾಂಶು (ಜಮ್ನಾದಾಸ್ ಮಜೇಥಿಯಾ) – ಈ ಕುಟುಂಬ ಎಂದಿನಂತೆ ತಮ್ಮ ಹಾಸ್ಯದ ಮೂಲಕ ಮುಂದೆ ಬಂದಿದೆ.

‘ಖಿಚಡಿ 2 – ಮಿಷನ್ ಪಾಂತುಕಿಸ್ತಾನ್’ ಹೆಸರೇ ಹೇಳುವಂತೆ ಪರೇಖ್ ಕುಟುಂಬಕ್ಕೆ ಒಂದು ದೊಡ್ಡ ಜವಾಬ್ದಾರಿ ನೀಡಲಾಗಿದೆ. ಅದೇನಪ್ಪಾ ಎಂದರೆ ಪಾಂತುಕಿಸ್ತಾನ್ ರಾಜನ ಹಿಡಿತದಿಂದ ಭಾರತೀಯ ವಿಜ್ಞಾನಿಯನ್ನು ರಕ್ಷಿಸುವ ಕೆಲಸ. TIA (ಥೋಡಿ ಇಂಟೆಲಿಜೆಂಟ್ ಏಜೆನ್ಸಿ) ಏಜೆಂಟ್ ಕುಶಾಲ್ (ಅನಂತ್ ವಿಧಾತ್) ಇವರಿಗೆ ಅಲ್ಲಿ ಏನೆಲ್ಲ ಮಾಡಬೇಕು ಎಂಬುದರ ಬಗ್ಗೆ ತಿಳಿಸಿಕೊಡುತ್ತಾನೆ. ಪಾಂತುಕಿಸ್ತಾನದ ಸರ್ವಾಧಿಕಾರಿ, ಇಮಾಮ್ ಖಾ ಕೆ ಥೂಕ್ (ರಾಜೀವ್ ಮೆಹ್ತಾ ) ನೋಡಲು ಪ್ರಫುಲ್‌ನಂತೆಯೇ ಇದ್ದಾರೆ. ಆದ್ದರಿಂದ, TIA ಈ ಅಪಾಯಕಾರಿ ಕಾರ್ಯಾಚರಣೆಗೆ ಪರೇಖ್ ಕುಟುಂಬವನ್ನು ಆಯ್ಕೆ ಮಾಡಿದೆ. ಹಂಸಾ, ಹಿಮಾಂಶು, ಜಯಶ್ರೀ ಮತ್ತು ಬಾಬೂಜಿ ಸಾಕ್ಷ್ಯಚಿತ್ರ ನಿರ್ಮಾಪಕರಾಗಿ ಪಾಂತುಕಿಸ್ತಾನ್‌ಗೆ ಪ್ರವೇಶಿಸುವ ಮೂಲಕ ಯೋಜನೆ ಆರಂಭವಾಗುತ್ತದೆ. ಪ್ರಫುಲ್ ಅವರನ್ನು ಪೆಟ್ಟಿಗೆಯಲ್ಲಿ ಮುಚ್ಚಿಟ್ಟು ಪಾಂತುಕಿಸ್ತಾನಕ್ಕೆ ಇವರ ಪ್ರವೇಶ. ಈ ತಂತ್ರದಲ್ಲಿ ಹಿಮಾಂಶು, ರಾಜ ಇಮಾಮ್ ಖಾ ಕೆ ಥೂಕ್‌ಗೆ ಮತ್ತು ಬರಿಸುವ ಊಟವನ್ನು ಬಡಿಸಬೇಕು. ಹೀಗೆ ಮಾಡಿದಾಗ ಪ್ರಫುಲ್ ರಾಜನ ವೇಷಭೂಷಣ ಧರಿಸಿ ಒಳಗೆ ನುಗ್ಗಬೇಕು ಎಂಬುದು ಪ್ಲ್ಯಾನ್.

ಅಲ್ಲಿ ಪ್ರವೇಶಿಸಿದರಷ್ಟೇ ಸಾಲದು. ಇಮಾಮ್ ಖಾ ಕೆ ಥೂಕ್‌ನಿಂದ ಬಂಧಿತರಾಗಿರುವ ವಿಜ್ಞಾನಿ ಮಖನ್‌ವಾಲಾ (ಪರೇಶ್ ಗಣತ್ರ) ಅವರನ್ನು ಕಂಡುಹಿಡಿಯಬೇಕು. ಮಖನ್‌ವಾಲಾ ಅಪಾಯಕಾರಿ ರೋಬೋಟ್ ಅನ್ನು ರಚಿಸಿದ್ದಾರೆ. ಆ ರೋಬೋಟ್ ದುಷ್ಟರ ಕೈಗೆ ಬೀಳದಂತೆ ಪರೇಖ್‌ ಕುಟುಂಬ ನೋಡಬೇಕು. ಇಷ್ಟೆಲ್ಲ ಕೆಲಸಗಳನ್ನು ಮಾಡಲು ಪರೇಖ್ ಕುಟುಂಬಕ್ಕೆ ಸಾಧ್ಯವಾಗುತ್ತದೆಯೇ? ಪಾಂತುಕಿಸ್ತಾನದಲ್ಲಿ ಅವರು ಹೇಗೆ ತಮ್ಮ ಕಾರ್ಯಾಚರಣೆಯನ್ನು ಕಾರ್ಯಗತಗೊಳಿಸುತ್ತಾರೇ ಎಂಬುದೇ ಇಲ್ಲಿನ ಕಥಾವಸ್ತು.

2010ರ ‘ಖಿಚಡಿ’ ಚಲನಚಿತ್ರವು ಅದರ ಹಾಸ್ಯ ಸಂಭಾಷಣೆ ಮತ್ತು ನಟನೆಯಿಂದಾಗಿ ಸ್ವಲ್ಪ ಭಿನ್ನ ಎಂದೆನಿಸಿತ್ತು. ಆದರೆ ‘ಖಿಚಡಿ 2’ ಅದರ ಮುಖ್ಯ ಪಾತ್ರವರ್ಗದ ನಡುವೆ ಸರಿಯಾದ ಕೆಮಿಸ್ಟ್ರಿ ಇಲ್ಲದೆ ಬೋರ್ ಹೊಡಿಸುತ್ತದೆ. ಹಾಸ್ಯದ ಮಾತುಗಳು ಕೇಳಿದರೆ ಅವರು ನಗುತ್ತಾರೆ ಎಂದು ನಗಬೇಕೋ, ಈ ರೀತಿ ಡೈಲಾಗ್ ಬರೆದವರ ಬಗ್ಗೆ ಯೋಚಿಸಿ ನಗಬೇಕೋ ಎಂದು ಪ್ರೇಕ್ಷಕರಿಗೆ ಅನಿಸದೇ ಇರದು. ಆತಿಶ್ ಕಪಾಡಿಯಾ ಮತ್ತು ಸೌರವ್ ಘೋಷ್ ಬರೆದ ಚಿತ್ರಕಥೆ ಎಲ್ಲಿಯೂ ಪ್ರೇಕ್ಷಕರನ್ನು ಹಿಡಿದು ನಿಲ್ಲಿಸುವುದಿಲ್ಲ. ಟೀವಿ ಧಾರಾವಾಹಿಯ ಹಾಸ್ಯವೇ ಬೇರೆ, ಅದು ಸಿನಿಮಾಗೆ ಬಂದಾಗ ಬೇರೆಯೇ ಇರುತ್ತದೆ. ಆದರೆ ಇಲ್ಲಿ ಹಾಸ್ಯ ಎಂದು ಕೆಲವು ಸಂಭಾಷಣೆ ತುರುಕಿ ನಗಿಸುವ ಪ್ರಯತ್ನ ಮಾಡಿ ಪ್ರೇಕ್ಷಕರನ್ನು ಸುಸ್ತು ಬೀಳಿಸಿದ್ದಾರೆ. ಪರೇಖ್‌ ಕುಟುಂಬದ ಅತಿರಂಜಿತ ಸಾಹಸ ಮತ್ತು ಹಲವಾರು ಉಪಕಥೆಗಳು ಖಿಚಡಿಯ ಸ್ವಾದ ಕಡಿಮೆ ಮಾಡಿದೆ.

ಪರೇಖ್‌ಗಳು ಸ್ವಿಸ್ ಆಲ್ಪ್ಸ್‌ಗೆ ಪ್ರಯಾಣಿಸುವುದು , ಹೆಲಿಕಾಪ್ಟರ್ ರೈಡ್‌ಗಳು ಮತ್ತು ಮರುಭೂಮಿಯಲ್ಲಿ ಚೇಸ್‌ಗಳನ್ನು ಮಾಡುತ್ತಾರೆ. ಇದೆಲ್ಲ ನೋಡಲು ಚಂದವೇ. ನಡುವೆ ಬಾಲಿವುಡ್ ಡ್ಯಾನ್ಸ್ ಕೂಡಾ ಇದೆ. ರಂಗು ರಂಗಿನ ಬಣ್ಣಗಳಿಂದ ಕೂಡಿದ ವಸ್ತ್ರಗಳು, ಉತ್ತಮ ಲೊಕೇಷನ್ ಎಲ್ಲವೂ ಇದೆ. ಆದರೆ ಹಾಸ್ಯ ಮಾತ್ರ ಇಲ್ಲಿ ಸಹಿಸಲು ಕಷ್ಟವೇ. ‘ಖಿಚಡಿ 2’ರಲ್ಲಿನ ಅತ್ಯಂತ ಪಂಚ್ ಡೈಲಾಗ್‌ಗಳು ಟಿವಿ ಕಾರ್ಯಕ್ರಮದ ಜನಪ್ರಿಯ ಸಾಲುಗಳೇ. ಹಂಸಾ ಇಂಗ್ಲಿಷ್ ಪದಗಳ ಅರ್ಥವನ್ನು ಕೇಳುತ್ತಿರುವುದು ಎಲ್ಲವೂ ಮೊದಲಿಗೆ ಸಹಿಸಿಕೊಳ್ಳಬಹುದು. ಪದೇ ಪದೇ ಇದು ರುಚಿಸುವುದಿಲ್ಲ. ಸುಪ್ರಿಯಾ ಪಾಠಕ್ ನಟನೆಗೆ ಫುಲ್ ಮಾರ್ಕ್ಸ್ ಕೊಡಬಹುದು.ರಾಜೀವ್ ಮೆಹ್ತಾ ಅವರು ಪ್ರಫುಲ್ ಮತ್ತು ಇಮಾಮ್ ಖಾ ಕೆ ಥೂಕ್ ಅವರ ದ್ವಿಪಾತ್ರವನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸಿದ್ದಾರೆ. ಹಿಮಾಂಶು ಪಾತ್ರದಲ್ಲಿ ಜಮ್ನಾದಾಸ್ ಮಜೇಥಿಯಾ, ಜಯಶ್ರೀಯಾಗಿ ವಂದನಾ ಪಾಠಕ್ ಮತ್ತು ಬಾಬೂಜಿಯಾಗಿ ಅನಂಗ್ ದೇಸಾಯಿ ಗಮನ ಸೆಳೆಯುತ್ತಾರೆ.

ಅತಿಥಿ ಪಾತ್ರಗಳಲ್ಲಿ, ಪ್ರತೀಕ್ ಗಾಂಧಿ ಪೈಲಟ್ ಆಗಿ ಕಾಣಿಸಿಕೊಂಡ ಆರಂಭಿಕ ದೃಶ್ಯವು ಸಿನಿಮಾದ ಸಾರವನ್ನು ಸೆರೆಹಿಡಿಯುತ್ತದೆ. ಇಲ್ಲಿ ಪೈಲಟ್ ಸೈನೈಡ್-ಲೇಪಿತ ಚಟ್ನಿಯನ್ನು ತಿನ್ನುತ್ತಾರೆ. ಚಟ್ನಿಯಲ್ಲಿ ಸೈನೈಡ್ ಏಕೆ ಇತ್ತು? ಏಕೆಂದರೆ ಜಿರಳೆ ಅದರೊಳಗೆ ಬಿದ್ದಿತು! ಹೀಗೆ ಇಲ್ಲಿಂದ ‘ಬಲವಂತದ’ ಹಾಸ್ಯ ಶುರುವಾಗುತ್ತದೆ. ಗುಜರಾತಿಗಳ ವೇಷಭೂಷಣ, ಆಹಾರದ ಮೇಲೆ ಇರುವ ಒಲವು ಎಲ್ಲವನ್ನೂ ಇಲ್ಲಿ ತೋರಿಸಲಾಗಿದೆ. ಸಿನಿಮಾದಲ್ಲಿ ಹಿಮಾಂಶುವಿನ ಪತ್ನಿ ಪರ್ಮಿಂದರ್ ಪಾತ್ರದಲ್ಲಿ ಕೀರ್ತಿ ಕುಲ್ಹಾರಿ ಹಾಗೆ ಬಂದು ಹೀಗೆ ಹೋಗಿಬಿಡುತ್ತಾರೆ. ಪರೇಖ್ ಕುಟುಂಬಕ್ಕೆ ನಟನೆಯ ಪಾಠವನ್ನು ನೀಡುವ ನಿರ್ದೇಶಕಿಯಾಗಿ ಫರಾಹ್ ಖಾನ್ ಬಂದರೂ ‘ಖಿಚಡಿ 2’ ಸರಿಯಾಗಿ ಬೆಂದಿಲ್ಲ ಎಂದೇ ಹೇಳಬಹುದು.

LEAVE A REPLY

Connect with

Please enter your comment!
Please enter your name here