ಅಮೇರಿಕ ಮತ್ತು ಹಾಲಿವುಡ್ ತನ್ನ ಐತಿಹಾಸಿಕ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ‘ಕಿಲ್ಲರ್ಸ್ ಆಫ್ ದ ಫ್ಲವರ್ ಮೂನ್’ ಒಂದು ಪ್ರಾಮಾಣಿಕ ಪ್ರಯತ್ನ. ಜೊತೆಗೆ, ಜಗತ್ತಿನೆಲ್ಲಡೆಯ ವಸಾಹತುಶಾಹಿಯ ಕರಾಳ ಅಧ್ಯಾಯವನ್ನೂ ನೆನಪಿಸುತ್ತದೆ. ಸ್ಕೋರ್ಸೆಸಿ ಮತ್ತು ರಾಬರ್ಟ್ ಡಿ ನಿರೋರಂತಹ ಲಿವಿಂಗ್ ಲೆಂಜೆಡ್‌ಗಳು ಒಂದಾಗಿರುವ ಚಿತ್ರವೊಂದನ್ನು ದೊಡ್ಡ ತೆರೆಯ ಮೇಲೆ ನೋಡುವ ಅನುಭವವೇ ಅನನ್ಯ ಮತ್ತು ಅದನ್ನು ಸಮರ್ಥಿಸುವಂತಹ ಹಲವು ದೃಶ್ಯಗಳೂ ಸಿನಿಮಾದಲ್ಲಿದೆ.
‘ಕಿಲ್ಲರ್ಸ್ ಆಫ್ ದ ಫ್ಲವರ್ ಮೂನ್’ ಚಿತ್ರದ ಆರಂಭದಲ್ಲಿ ಅಮೆರಿಕಾದ ಮೂಲ ನಿವಾಸಿ ಸಮುದಾಯ ಒಸೇಜ್ ತಮ್ಮ ಸಾಂಪ್ರದಾಯಿಕ ವಾದ್ಯವೊಂದನ್ನು ವಿಧಿವತ್ತಾಗಿ ನೆಲದಲ್ಲಿ ಹೂತು ಅಂತ್ಯಸಂಸ್ಕಾರ ನೆರವೇರಿಸುತ್ತದೆ. ಅದಕ್ಕೆ ಮೊದಲು ಸಮುದಾಯದ ಮುಖಂಡ ಮಾತನಾಡಿ, ‘ಇನ್ನು ಮುಂದೆ ನಮ್ಮ ಮಕ್ಕಳ ಭಾಷೆ ಬದಲಾಗುತ್ತದೆ. ಅವರು ಬಿಳಿಯರ ನಡೆ ನುಡೆಗಳನ್ನು ಕಲಿಯುತ್ತಾರೆ. ನಮ್ಮ ಸಂಸ್ಕೃತಿ ನಿಧಾನವಾಗಿ ಕಣ್ಮರೆಯಾಗುತ್ತದೆ’ ಎನ್ನುತ್ತಾನೆ. ಕೃಷಿ ಮಾಡುತ್ತಾ, ಜಾನುವಾರುಗಳನ್ನು ಸಾಕುತ್ತಿದ್ದ ಓಸೇಜ್ ಸಮುದಾಯದ ಭೂಮಿಯಲ್ಲಿ 19ನೇ ಶತಮಾನದ ಕೊನೆಯ ಭಾಗದಲ್ಲಿ ತೈಲ ನಿಕ್ಷೇಪಗಳು ಪತ್ತೆಯಾಗುತ್ತವೆ. ಅದು ತರಲಿರುವ ಕ್ಷಿಪ್ರ ಬದಲಾವಣೆಗಳನ್ನು ಊಹಿಸಿ ಓಸೇಜ್ ಮೂಲ ನಿವಾಸಿಗಳು ನಡೆಸುವ ಈ ಸಾಂಕೇತಿಕ ಅಂತ್ಯಕ್ರಿಯೆಯ ದೃಶ್ಯ ಮುಂದೆ ನಡೆಯುವ ಕತೆಗೆ ಮುನ್ನುಡಿಯಂತಿದೆ.
19ನೇ ಶತಮಾನದಲ್ಲಿ ಅಮೇರಿಕ ಸರ್ಕಾರ ಈಗಿನ ಕ್ಯಾನ್ಸಸ್ ಪ್ರದೇಶದಿಂದ ಒಸೇಜ್ ಸಮುದಾಯವನ್ನು ಒಕ್ಕಲೆಬ್ಬಿಸಿ, ಇಂಡಿಯನ್ ಪ್ರದೇಶ ಎಂದು ಗುರುತಿಸಲಾದ ಈಗಿನ ಓಕ್ಲಹೋಮ್‌ದತ್ತ ತಳ್ಳುತ್ತದೆ. ಯಾರಿಗೂ ಬೇಡವಾಗಿದ್ದ ಈ ಪ್ರದೇಶದಲ್ಲಿ ತೈಲ ನಿಕ್ಷೇಪಗಳು ಪತ್ತೆಯಾದ ಕೂಡಲೇ ನೆಲಕ್ಕೆ ಚಿನ್ನದ ಬೆಲೆ ಬರುತ್ತದೆ. ತಮ್ಮ ನೆಲದೊಳಗಿನ ಖನಿಜ ಸಂಪತ್ತಿನ ಒಡೆತನವನ್ನು ಉಳಿಸಿಕೊಂಡ ಓಸೇಜ್ ಸಮುದಾಯ ರಾತ್ರೋ ರಾತ್ರಿ ಶ್ರೀಮಂತವಾಗುತ್ತದೆ. ಸರ್ಕಾರ ಅವರಿಗೆ ಬರುವ ತೈಲ ಆದಾಯದ ನಿರ್ವಹಣೆಗೆ ಪ್ರತಿನಿಧಿಗಳನ್ನು ನೇಮಿಸುತ್ತದೆ. ಆದರೆ, ಹಣದೊಂದಿಗೆ, ಹೆಣದ ರಾಶಿಯೂ ಸುರಿಯುತ್ತದೆ. ಹಲವಾರು ಶ್ರೀಮಂತ ಇಂಡಿಯನ್ಸ್‌ಗಳು ಸಂಶಯಾಸ್ಪದವಾಗಿ ಸಾಯುತ್ತಾರೆ ಅಥವಾ ಕೊಲೆಯಾಗುತ್ತಾರೆ. ಮಾರ್ಟಿನ್ ಸ್ಕೋರ್ಸೆಸಿ ನಿರ್ದೇಶನದ ‘ಕಿಲ್ಲರ್ಸ್ ಆಫ್ ದ ಫ್ಲವರ್ ಮೂನ್’, ಅಮೇರಿಕನ್ ಬಿಳಿಯರ ದುರಾಸೆಯಿಂದಾಗಿ ನಡೆದ ಈ ಸರಣಿ ಕೊಲೆಗಳ ಕುರಿತು 2017ರಲ್ಲಿ ಡೇವಿಡ್ ಗ್ರ್ಯಾನ್ ಬರೆದ ಪುಸ್ತಕವನ್ನು ಆಧರಿಸಿದೆ.
ಈ ಕಪ್ಪು ಬಂಗಾರದ ಬೆನ್ನು ಹತ್ತಿ ಓಸೇಜ್ ನೆಲಕ್ಕೆ ಬಂದ ಹಲವಾರು ಅಮೇರಿಕನ್ ವೈಟ್ಸ್‌ಗಳ ಪೈಕಿ ಒಬ್ಬ ಅರ್ನೆಸ್ಟ್ ಬಕ್‌ಹಾರ್ಟ್ (ಲಿಯನಾರ್ಡೋ ಡಿ ಕ್ಯಾಪ್ರಿಯೋ). ಆತನ ಮಾವ ಅಲ್ಲಿನ ಇಂಡಿಯನ್ಸ್‌ಗಳು ಗೌರವಿಸುವ, ಅವರೊಂದಿಗೆ ಸ್ನೇಹ ಸಂಬಂಧ ಹೊಂದಿರುವ, ಖ್ಯಾತ ವ್ಯಕ್ತಿ ವಿಲಿಯಮ್ ಹೇಲ್ (ರಾಬರ್ಟ್ ಡಿ ನಿರೋ). ಮೊದಲನೇ ವಿಶ್ವಯುದ್ಧದಿಂದ ಆಗಷ್ಟೇ ಮರಳಿದ್ದ ಅರ್ನೆಸ್ಟ್, ಅಲ್ಲಿನ ಶ್ರೀಮಂತ ಇಂಡಿಯನ್ ಮೋಲೀ ಕೈಲ್‌ಳ ಟ್ಯಾಕ್ಸಿ ಚಾಲಕನಾಗುತ್ತಾನೆ. ಅವಳನ್ನೇ ಪ್ರೀತಿಸಿ, ತನ್ನ ಮಾವನ ಒತ್ತಾಸೆಯಂತೆ ಆಕೆಯನ್ನೇ ಮದುವೆಯಾಗುತ್ತಾನೆ. ಮುಂದೆ ಕೈಲ್ ಕುಟುಂಬದ ಸದಸ್ಯರು ಒಬ್ಬೊಬ್ಬರಾಗಿ ಕಾಯಿಲೆಯಿಂದಲೋ, ಕೊಲೆಯಾಗಿಯೋ ಸಾಯುತ್ತಾ ಹೋಗುತ್ತಾರೆ. ಸಿನಿಮಾ ಈ ಕೊಲೆಗಳ ಹಿನ್ನೆಲೆ, ತನಿಖೆ, ಫಲಿತಾಂಶಗಳನ್ನು ಹೇಳುತ್ತದೆಯಾದರೂ, ಮುಖ್ಯವಾಗಿ ವೈಟ್ ಗಿಲ್ಟ್ (ಬಿಳಿಯರ ಅಪರಾಧಿಭಾವದ) ದೃಷ್ಟಿಕೋನದಲ್ಲಿ, ದೌರ್ಜನ್ಯಕ್ಕೆ ಒಳಗಾದ ಒಂದು ಇಂಡಿಯನ್ ಸಮುದಾಯದ ಕತೆ ಹೇಳುತ್ತದೆ.
ಮೂಲ ಪುಸ್ತಕ ಪತ್ತೇದಾರಿ ಶೈಲಿಯಲ್ಲಿದ್ದರೂ, ಸಿನಿಮಾ ಕೊಲೆ, ತನಿಖೆಗಳನ್ನು ಸಸ್ಪೆನ್ಸ್ ಅಂಶವಾಗಿ ಬಳಸಿಲ್ಲ. ಸ್ಕೋರ್ಸೆಸಿ ತಮ್ಮ ನಿರೂಪಣಾ ಶೈಲಿಯಲ್ಲಿ ಸಾಧ್ಯವಾದಷ್ಟು ಸೂಕ್ಷ್ಮತೆ ಕಾಯ್ದುಕೊಳ್ಳಲು ಯತ್ನಿಸಿದ್ದಾರೆ. ಅಂದರೆ, ಒಂದು ದುರಂತವನ್ನು ರೋಚಕ ಪತ್ತೇದಾರಿಯಾಗಿಸಿಲ್ಲ. ಥ್ರಿಲ್ಲರ್ ಸಿನಿಮಾವಾಗಿಸಿಲ್ಲ. ಜೊತೆಗೆ, ಇಂತಹ ಒಂದು ಕತೆ ಅಮೇರಿಕನ್ ವೈಟ್ಸ್ ದೃಷ್ಟಿಕೋನದಿಂದ ನಿರೂಪಿತವಾಗುವುದನ್ನು ತಡೆಯಲೂ ಕೂಡ ಯತ್ನಿಸಿದ್ದಾರೆ. ಅರ್ನ್ಸೆಸ್ಟ್ ಮೂಲಕ ಕತೆ ಮುಂದೆ ಸಾಗುತ್ತದೆಯಾದರೂ, ಸಾಧ್ಯವಾದ ಕಡೆ ಅಮೇರಿಕನ್ ಇಂಡಿಯನ್ಸ್‌ಗಳ ಕಣ್ಣಿಂದಲೂ ನೋಡಲು ಯತ್ನಿಸಿದ್ದಾರೆ. ಆದರೆ ಹೀಗೆ, ಮಾಡುವಾಗ ಅದು ಅಪ್ರಾಪ್ರಿಯೇಶನ್ ಎನಿಸುವ ಅಪಾಯವೂ ಇರುವುದರಿಂದ ಸ್ಕೋರ್ಸೆಸಿ ಸಾಧಿಸ ಹೊರಟಿರುವುದು ಎರಡು ಅಲುಗಿನ ಕತ್ತಿಯ ಮೇಲಿನ ನಡಿಗೆಯಂತಿದೆ. ಅವರು ಹೆಚ್ಚೇನೂ ಗಾಯಗೊಳ್ಳದೆ ಈ ನಡಿಗೆಯನ್ನು ಪೂರೈಸಿದ್ದಾರೆ ಎಂಬುದೇ ಹೆಗ್ಗಳಿಕೆ.
ಸ್ಕೋರ್ಸೆಸಿ ಇಲ್ಲಿ ಹಲವು ನಿರೂಪಣಾ ತಂತ್ರಗಳನ್ನು ಬಳಸಿದ್ದಾರೆ. ಚಿತ್ರ ಬಣ್ಣದಲ್ಲಿದ್ದರೂ, ಇವೆಲ್ಲಾ ನೈಜ ಘಟನೆಗಳು ಎಂಬುದನ್ನು ನೆನಪಿಸಲು ಕಪ್ಪು ಬಿಳುಪಿನ ಆರ್ಕೈವಲ್ ರೀತಿಯ ದೃಶ್ಯಗಳನ್ನು ಚಿತ್ರದುದ್ದಕ್ಕೂ ಬಳಸಿದ್ದಾರೆ. ಮೋಲೀ ಕೈಲ್ ನಿರೂಪಣೆಯ ಸಾಲುಗಳೂ ಅಲ್ಲಲ್ಲಿ ಇವೆ. ಕೊನೆಯಲ್ಲಿ ರೇಡಿಯೋ ಕಾರ್ಯಕ್ರಮದ ರೀತಿಯಲ್ಲಿ ಕತೆಯನ್ನು ಹೇಳಿರುವ ವಿಧಾನವೂ ಹೊಸದಾಗಿದೆ. ಚಿತ್ರದಲ್ಲಿ ಪ್ರತಿಭಾವಂತ ಕಲಾವಿದರ ದಂಡೇ ಇದೆ. ಇದೇ ಮೊದಲ ಬಾರಿಗೆ ಸ್ಕೋರ್ಸೆಸಿ ಸಿನಿಮಾವೊಂದರಲ್ಲಿ ಅವರ ಅಚ್ಚುಮೆಚ್ಚಿನ ಇಬ್ಬರೂ ನಟರು ಒಂದಾಗಿ ನಟಿಸಿದ್ದಾರೆ. ಲಿಯನಾರ್ಡೋ ಡಿ ಕ್ಯಾಪ್ರಿಯೋ ನಟಿಸಿರುವ ಅರ್ನೆಸ್ಟ್ ಬಕ್‌ಹಾರ್ಟ್ ಪಾತ್ರ ಸಂಕೀರ್ಣವಾಗಿದೆ. ಅರ್ನೆಸ್ಟ್ ಖಂಡಿತಾ ಹೀರೋ ಅಲ್ಲ, ಹಾಗಂತ ಶಕ್ತಿಶಾಲಿ ವಿಲನ್ ಕೂಡ ಅಲ್ಲ. ಇತರರ ಮಾತಿಗೆ ಸುಲಭವಾಗಿ ಬೀಳುವ, ಹೆಚ್ಚು ಯೋಚನಾ ಶಕ್ತಿ ಇಲ್ಲದ, ದುರ್ಬಲ ವ್ಯಕ್ತಿಯ ಪಾತ್ರದಲ್ಲಿ ಡಿ ಕ್ಯಾಪ್ರಿಯೋ ಗಮನ ಸೆಳೆಯುತ್ತಾರೆ. ನೈತಿಕತೆ, ಪ್ರೀತಿ ಮತ್ತು ದುರಾಸೆಯ ನಡುವೆ ಸಿಲುಕಿ ನರಳುವ ಈ ಪಾತ್ರದ ದ್ವಂದ್ವಗಳನ್ನು ಅವರು ಸಮರ್ಥವಾಗಿ ಅಭಿವ್ಯಕ್ತಿಸಿದ್ದಾರೆ.
ಇನ್ನು 80 ವರ್ಷದ ರಾಬರ್ಟ್ ಡಿ ನಿರೋ ತಮ್ಮ ಪ್ರತಿಭೆಗೆ ಮುಪ್ಪಿಲ್ಲ ಎಂಬುದನ್ನು ನಿರೂಪಿಸುವಂತೆ ನಟಿಸಿದ್ದಾರೆ. ಅವರ ವಿಲಿಯಮ್ ಹೇಲ್ (ಕಿಂಗ್) ಪಾತ್ರದ ಒಳ ಅಂತರಂಗ ನಿಧಾನವಾಗಿ ತೆರೆಯ ಮೇಲೆ ಬಿಚ್ಚಿಕೊಳ್ಳುತ್ತಾ ಹೋದಂತೆ, ಬೆಚ್ಚುವಂತಾಗುತ್ತದೆ. ಅದು ಒಳ್ಳೆಯ ವ್ಯಕ್ತಿಯೊಬ್ಬನ ಕೆಟ್ಟ ವ್ಯಕ್ತಿತ್ವದ ಒಳ ಸುಳಿವುಗಳು ಬಯಲಾಗುವಾಗ ಉಂಟಾಗುವ ಒಂದು ಬಾರಿಯ ಆಘಾತವಲ್ಲ. ಚಿತ್ರದುದ್ದಕ್ಕೂ, ಆತನ ಸ್ನೇಹಮಯ, ಪರೋಪಕಾರಿ ವ್ಯಕ್ತಿತ್ವ ಮತ್ತು ಆತನ ಅಂತರಂಗದೊಳಗಿನ ಕೆಟ್ಟ ಯೋಜನೆಗಳು ಪರ್ಯಾಯವಾಗಿ ಪ್ರಕಟವಾಗುವ ರೀತಿ. ಮತ್ತು ತನ್ನ ವ್ಯಕ್ತಿತ್ವದ ನಿಜ ಮುಖದ ಅನಾವರಣವಾದಾಗಲೂ ಆತ ಶಾಂತವಾಗಿ, ಯಾವುದೇ ಅಪರಾಧಿ ಭಾವವಿಲ್ಲದೆ, ಆತ್ಮ ವಿಶ್ವಾಸದಿಂದ ಇರುವ ರೀತಿ ವಿಶೇಷವಾಗಿ ಕಾಡುತ್ತದೆ. ಬಹಿರಂಗ ಕ್ರೌರ್ಯ, ದ್ವೇಶಗಳಿಗಿಂತ, ಮೃದು ವ್ಯಕ್ತಿತ್ವದ ಕಪಟತನ, ಆತ ತಣ್ಣಗಿನ ದನಿಯಲ್ಲಿ, ‘ನಾಳೆ ಅಡುಗೆ ಏನು ಮಾಡೋಣ’ ಎಂಬಂತಹ ಮಾಮೂಲು ಭಾವದಲ್ಲಿ ಕೊಲೆ ಪಿತೂರಿಗಳನ್ನು ಯೋಜಿಸುವ ರೀತಿಯಿಂದಾಗಿ ವಸಾಹತುಶಾಹಿಗಳ ಪ್ರಾತಿನಿಧಿಕ ಪಾತ್ರದಂತೆ ಕಂಡುಬರುತ್ತದೆ. ಸ್ಕೋರ್ಸೆಸೆ ಸೃಷ್ಚಿಸಿರುವ ಇಂತಹ ಹಲವು ಐಕಾನಿಕ್ ಖಳ ಪಾತ್ರಗಳ ಸಾಲಿಗೆ ಕಿಂಗ್ ಕೂಡ ಸೇರುತ್ತದೆ.
ಆದರೆ, ಇಬ್ಬರನ್ನೂ ಮೀರಿಸುವಂತೆ ಅದ್ಭುತವಾಗಿ ನಟಿಸಿರುವುದು ಲಿಲೀ ಗ್ಲಾಡ್‌ಸ್ಟೋನ್. ಶಾಂತ, ಪ್ರಬುದ್ದ ಮೋಲಿ ಕೈಲ್ ಪಾತ್ರಕ್ಕೆ ಇಂಡಿಯನ್ ಮೂಲದ ಲಿಲೀ ಅತ್ಯಂತ ಸಮರ್ಪಕ ಆಯ್ಕೆಯಾಗಿದ್ದಾರೆ. ಮೋಲಿ ಪಾತ್ರಕ್ಕೆ ಇನ್ನೂ ಹೆಚ್ಚಿನ ಆದ್ಯತೆ ಸಿಗಬೇಕಿತ್ತು ಎನಿಸಿದರೂ, ಲಿಲೀ ಚಿತ್ರದಲ್ಲಿ ಮಿಂಚುತ್ತಾರೆ. ಚಿತ್ರದ ಆರಂಭದಲ್ಲಿ ಕೈಲ್ ಸಹೋದರಿಯರು ಅಮೇರಿಕನ್ ವೈಟ್ ಯುವಕರ ಬಗ್ಗೆ ನಗುತ್ತಾ ಹರಟುವ ದೃಶ್ಯವೊಂದಿದೆ. ಇದು ಬೆಕಾಡೆಲ್ ಟೆಸ್ಟ್ ದೃಷ್ಚಿಯಿಂದ ತೇರ್ಗಡೆ ಹೊಂದದಿದ್ದರೂ, ಇಂಡಿಯನ್ಸ್ ಅನ್ನು ಕೇವಲ ವಿಕ್ಟಿಮ್‌ಗಳಾಗಿ ನೋಡದೆ, ಅವರ ಸಹಜ ಮಾನವೀಯ ಮುಖವನ್ನು ತೋರಿಸುವ ಹಗುರವಾದ ದೃಶ್ಯಗಳು ಚಿತ್ರದಲ್ಲಿ ಕಡಿಮೆ ಇರುವುದರಿಂದ ಈ ದೃಶ್ಯ ಮುಖ್ಯವಾಗುತ್ತದೆ. ಅದರಲ್ಲಿ, ಮೋಲಿ ತನ್ನನ್ನು ಒಲಿಸಿಕೊಳ್ಳಲು ನೋಡುತ್ತಿರುವ ಅರ್ನೆಸ್ಟ್ ಬಗ್ಗೆ ಮಾತನಾಡುತ್ತಾ ಆತನೂ ಕೂಡ ಇತರ ಎಲ್ಲಾ ಅಮೇರಿಕನ್ ಯುವಕರಂತೆ ತನ್ನಲ್ಲಿರುವ ಹಣಕ್ಕಾಗಿ ತನ್ನ ಹಿಂದೆ ಬಿದ್ದಿದ್ದಾನೆ ಎಂಬುದನ್ನು ಒಪ್ಪುತ್ತಾಳೆ. ಆದರೂ ಆತನ ಪ್ರಯತ್ನಗಳಲ್ಲಿ ಒಲವು, ಪ್ರಾಮಾಣಿಕತೆಯನ್ನು ನೋಡಲು ಬಯಸುತ್ತಾಳೆ. ಅಂತಹ ಮೋಲಿ ಮುಂದೆ ದುರ್ಬಲಳಾಗುತ್ತಾ ತನ್ನ ಗಂಡನನ್ನು ಕಣ್ಣು ಮುಚ್ಚಿ ನಂಬುತ್ತಾಳೆಂಬುದು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಹೀಗಾಗಿ, ಅವಳ ವ್ಯಕ್ತಿತ್ವದ ಇತರ ಆಯಾಮಗಳನ್ನು ತೋರಿಸುವ ದೃಶ್ಯಗಳು ಅಗತ್ಯವಿತ್ತೆಂದು ಅನಿಸುತ್ತದೆ.
ಚಿತ್ರದಲ್ಲಿ ಕಾಡುವ ಮತ್ತೊಂದು ಅಂಶ ಅದರ ಸಂಗೀತ. ಇಂಡಿಯನ್ ಮೂಲದ ರಾಬಿ ರಾಬರ್ಸನ್ ಸಂಗೀತ ನಿರ್ದೇಶನದ ಕೊನೆಯ ಚಿತ್ರವಾಗಿ ‘ಕಿಲ್ಲರ್ಸ್ ಆಫ್ ದ ಫ್ಲವರ್ ಮೂನ್’ ಸದಾ ನೆನಪಿನಲ್ಲಿ ಉಳಿಯಲಿದೆ. ಎಲ್ಲಿಯೂ ಅಬ್ಬರವೆನಿಸದೆ, ಚಿತ್ರದ ವಿಷಯಕ್ಕೆ ಸರಿಹೊಂದುವ, ಕಾಡುವ ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಚಿತ್ರಕ್ಕೊಂದು ಅಥೆಂಟಿಸಿಟಿ ನೀಡಿದೆ. ಮಾರ್ಟಿನ್ ಸ್ಕೋರ್ಸೆಸಿ ಅವರ ಹಿಂದಿನ ‘ದಿ ಐರಿಶ್ ಮ್ಯಾನ್’ ಚಿತ್ರದಂತೆ ಇದೂ ಕೂಡ ಮೂರೂವರೆ ಗಂಟೆ ದೀರ್ಘವಾದ ಚಿತ್ರ. ಇನ್ನೂ ಸಣ್ಣದಾಗಿ ಕತೆ ಹೇಳಲು ಸಾಧ್ಯವಿತ್ತಾ ಎಂದರೆ ಖಂಡಿತಾ ಸಾಧ್ಯ. ಆದರೆ, ಅಗತ್ಯವಿತ್ತೇ ಎಂದರೆ ನಾನಂತೂ ಖಂಡಿತಾ ಅಗತ್ಯವಿರಲಿಲ್ಲ ಎನ್ನುತ್ತೇನೆ. ಚಿತ್ರವನ್ನು ಸಣ್ಣದಾಗಿಸುವ ಯತ್ನದಲ್ಲಿ ಅದರ ಆಳ ಮತ್ತು ಹಲವು ಪದರಗಳು ಹಾಳಾಗುವ ಸಾಧ್ಯತೆ ಹೆಚ್ಚಾಗಿದೆ. ಚಿತ್ರದ ನಿರೂಪಣಾ ಶೈಲಿಯೂ ಹಲವು ಬಾರಿ ಒಟಿಟಿಗಳಿಗೆ ಹೊಂದುವಂತಿದೆ. ಆದರೂ, ಸ್ಕೋರ್ಸೆಸಿ ಮತ್ತು ರಾಬರ್ಟ್ ಡಿ ನಿರೋರಂತಹ ಲಿವಿಂಗ್ ಲೆಂಜೆಡ್‌ಗಳು ಒಂದಾಗಿರುವ ಚಿತ್ರವೊಂದನ್ನು ದೊಡ್ಡ ತೆರೆಯ ಮೇಲೆ ನೋಡುವ ಅನುಭವವೇ ಅನನ್ಯ ಮತ್ತು ಅದನ್ನು ಸಮರ್ಥಿಸುವಂತಹ ಹಲವು ದೃಶ್ಯಗಳೂ ಸಿನಿಮಾದಲ್ಲಿದೆ.
ಒಟ್ಟಿನಲ್ಲಿ ಅಮೇರಿಕ ಮತ್ತು ಹಾಲಿವುಡ್ ತನ್ನ ಐತಿಹಾಸಿಕ ತಪ್ಪುಗಳನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ‘ಕಿಲ್ಲರ್ಸ್ ಆಫ್ ದ ಫ್ಲವರ್ ಮೂನ್’ ಒಂದು ಪ್ರಾಮಾಣಿಕ ಪ್ರಯತ್ನ. ಜೊತೆಗೆ, ಜಗತ್ತಿನೆಲ್ಲಡೆಯ ವಸಾಹತುಶಾಹಿಯ ಕರಾಳ ಅಧ್ಯಾಯವನ್ನೂ ನೆನಪಿಸುತ್ತದೆ. ಎಷ್ಟೇ ಹಣ ಗಳಿಸಿ ಶ್ರೀಮಂತರಾದರೂ ಅಮೇರಿಕಾದ ಮೂಲ ನಿವಾಸಿಗಳಿಗೆ, ಬಿಳಿಯರ ದಾಳಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ಸತ್ಯ ಮತ್ತಷ್ಟು ಕಾಡುತ್ತದೆ.