ಏಕಕಾಲದ ಬಿಡುಗಡೆಯ ವಿಚಾರದಲ್ಲಿ ಇದು ಸುದೀಪ್ ಮತ್ತು ವಿಜಯ್ ನಡುವಿನ ವಾರ್ ಎನ್ನುವಂತೆ ಹಲವರು ಗುಲ್ಲೆಬ್ಬಿಸುತ್ತಿದ್ದಾರೆ. ಆದರೆ ಮೇಲ್ನೋಟಕ್ಕೆ ಅಂಥದ್ದೇನೂ ಕಂಡುಬಂದಿಲ್ಲ.
ದೀಪಾವಳಿಗೆ ಮುನ್ನವೇ ಕನ್ನಡ ಚಿತ್ರರಂಗದಲ್ಲಿ ಪಟಾಕಿ ಸದ್ದು ಜೋರಾಗಿ ಕೇಳಿಬರುವ ದಿನಗಳು ಹತ್ತಿರದಲ್ಲಿವೆ. ಆದರೆ ಇವು ಆಟಂ ಬಾಂಬ್, ಲಕ್ಷ್ಮೀ ಪಟಾಕಿ ಥರ ಒಂದೊಂದೇ ಬಂದು ಸದ್ದು ಮಾಡದೆ, ಸರ ಪಟಾಕಿ ರೀತಿಯಲ್ಲಿ ಒಂದರ ಹಿಂದೊಂದು ಸರಣಿಯಲ್ಲಿ ಬ್ಲ್ಯಾಸ್ಟ್ ಆಗುವ ಬಗ್ಗೆ ಚಿತ್ರರಂಗ ಕೊಂಚ ಆತಂಕಗೊಂಡಿದೆ.ದುನಿಯಾ ವಿಜಯ್ ಅವರ ‘ಸಲಗ’ ಮತ್ತು ಸುದೀಪ್ ಅವರ ‘ಕೋಟಿಗೊಬ್ಬ 3’ ಒಂದೇ ದಿನ ಬಿಡುಗಡೆ ಆಗೋಕೆ ರೆಡಿಯಾಗಿರೋದೇ ಇದಕ್ಕೆ ಕಾರಣ.
ಹೊಸ ಚಿತ್ರಗಳು ಮತ್ತೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿವೆ ಅನ್ನೋದು ಸಂತಸಕ್ಕೆ ಕಾರಣವಾದರೆ, ಹೀಗೆ ದೊಡ್ಡ ದೊಡ್ಡ ಸ್ಟಾರ್ ಗಳ ಚಿತ್ರಗಳು ಒಂದೇ ದಿನ ಬಿಡುಗಡೆ ಆಗುತ್ತಿರೋದು ಎಷ್ಟರ ಮಟ್ಟಿಗೆ ಸರಿ ಅಂತಲೂ ಪ್ರಶ್ನೆಗಳು ಎದ್ದಿವೆ. ಚಿತ್ರರಂಗದಲ್ಲಿ ಸಿನಿಮಾ ಬಿಡುಗಡೆಯ ವಿಷಯದಲ್ಲಿನ ಸ್ಟಾರ್ ವಾರ್ ಹೊಸದಲ್ಲ. ಕೆಲವು ನಟರಂತೂ ಜಿದ್ದಿಗೆ ಬಿದ್ದವರಂತೆ ಇನ್ನೊಬ್ಬ ನಟನ ಸಿನಿಮಾ ಬಿಡುಗಡೆಯ ದಿನವೇ ತಮ್ಮ ಚಿತ್ರ ಬಿಡುಗಡೆ ಮಾಡುತ್ತಾರೆ. ಇದಕ್ಕೆ ಇಡೀ ಭಾರತೀಯ ಚಿತ್ರರಂಗದಲ್ಲೇ ಅನೇಕ ಉದಾಹರಣೆಗಳಿವೆ. ಆದರೆ ‘ಸಲಗ’ ಮತ್ತು ‘ಕೋಟಿಗೊಬ್ಬ 3’ ಚಿತ್ರಗಳ ನಾಯಕರ ನಡುವೆ ಅಂತಹ ಪೈಪೋಟಿ ಇಲ್ಲ. ಇಲ್ಲಿ ಇರೋದು ಸಾಕಷ್ಟು ದಿನಗಳಿಂದ ಡಬ್ಬಾದಲ್ಲೇ ಇದ್ದ ಚಿತ್ರಗಳು ಕರೋನಾ ನಂತರ ಸಿಕ್ಕ ಅವಕಾಶವನ್ನು ಬಾಚಿಕೊಳ್ಳುವ ಆತುರ ಅಷ್ಟೇ. ಅದನ್ನೇ ಎರಡೂ ಚಿತ್ರಗಳ ನಿರ್ಮಾಪಕರು ಮಾಡುತ್ತಿದ್ದಾರೆ.
ಆದರೆ ಈ ಏಕಕಾಲದ ಬಿಡುಗಡೆಯ ವಿಚಾರದಲ್ಲಿ ಇದು ಸುದೀಪ್ ಮತ್ತು ವಿಜಯ್ ನಡುವಿನ ವಾರ್ ಎನ್ನುವಂತೆ ಹಲವರು ಗುಲ್ಲೆಬ್ಬಿಸುತ್ತಿದ್ದಾರೆ. ಆದರೆ ಮೇಲ್ನೋಟಕ್ಕೆ ಅಂಥದ್ದೇನೂ ಕಂಡುಬಂದಿಲ್ಲ. ಈ ವಿಷಯದ ಬಗ್ಗೆ ಶಿವರಾಜ್ ಕುಮಾರ್ ಅವರು ಮಾತನಾಡಿ “ಒಂದೇ ದಿನ ಎರಡು ಚಿತ್ರ ಬಿಡುಗಡೆ ಆಗಿ ಇಬ್ಬರಿಗೂ ತೊಂದರೆ ಆಗೋದು ಸರಿ ಅಲ್ಲ. ಎರಡೂ ಚಿತ್ರಗಳ ನಿರ್ಮಾಪಕರು ಕೊಂಚ ಯೋಚನೆ ಮಾಡಿ ಬಿಡುಗಡೆ ಮಾಡಲಿ” ಎಂದಿದ್ದಾರೆ. ಆದರೆ ಸ್ವತಃ ದುನಿಯಾ ವಿಜಯ್, “ಒಟ್ಟಿಗೇ ಬಿಡುಗಡೆ ಆದರೆ ತೊಂದರೆ ಏನಿದೆ? ಜನ ಎರಡೂ ಚಿತ್ರಗಳನ್ನು ನೋಡಲಿ ಬಿಡಿ” ಎಂದು ಸಹಜವಾಗಿ ಹೇಳಿದ್ದಾರೆ.
ಅದೂ ತಕ್ಕಮಟ್ಟಿಗೆ ನಿಜವೇ. ಅದೆಷ್ಟೋ ಸಿನಿಮಾಗಳು ಒಂದೇ ದಿನವೇ ಬಿಡುಗಡೆ ಆಗಿ ಸೂಪರ್ ಹಿಟ್ ಆದ ಅನೇಕ ಉದಾಹರಣೆಗಳು ನಮ್ಮಲ್ಲಿವೆ. ಕೊನೆಗೂ ಚಿತ್ರದ ಕಂಟೆಂಟ್ ಮುಖ್ಯ ಆಗುತ್ತದೆಯೇ ಹೊರತು ಬಿಡುಗಡೆಯ ದಿನಾಂಕ ಅಲ್ಲ. ಆದರೆ ಕೆಲವು ಮೊದಲಿಂದ ಪಾಲಿಸಿಕೊಂಡು ಬಂದಿರೋ ಸಂಪ್ರದಾಯಗಳ ಮೇಲೆ ನಂಬಿಕೆ ಇರೋ ಜನ ಮಾತ್ರ, ಸಲಗ ಒಂಟಿಯಾಗೇ ಬರಲಿ, ಕೋಟಿಗೊಬ್ಬ ಒಬ್ಬನೇ ಬರಲಿ, ಸಿನಿಮಾ ಬಿಡುಗಡೆಯ ವಿಷಯದಲ್ಲಿ, ಕನ್ನಡದಾ ಮಕ್ಕಳೆಲ್ಲ ಒಂದಾಗಿ ಬರಬೇಡಿ ಅಂತ ಅಪಸ್ವರ ವ್ಯಕ್ತಪಡಿಸ್ತಾ ಇರೋದಂತೂ ನಿಜ. ಆದರೆ ಅವರ ಈ ಮಾತುಗಳು ಎಷ್ಟರ ಮಟ್ಟಿಗೆ ಸರಿ ಅನ್ನೋದು ಎರಡೂ ಚಿತ್ರಗಳು ಬಿಡುಗಡೆ ಆಗಿ ಅವು ಬಾಕ್ಸ್ ಆಫೀಸ್‌ನಲ್ಲಿ ಎಷ್ಟರಮಟ್ಟಿಗೆ ಕಲೆಕ್ಷನ್ ಮಾಡುತ್ತವೆ ಅನ್ನೋದನ್ನು ನೋಡಿದ ಮೇಲೆ ಗೊತ್ತಾಗುತ್ತದೆ.