ಕನ್ನಡ ಸಿನಿಮಾಗಳಿಗೆ ಕೋಟಿಗಟ್ಟಲೇ ಹಣ ಹಾಕುವ ನಿರ್ಮಾಪಕರಿಗೆ ಆ ಹಣ ವಾಪಸ್ ಬರೋಕೆ ಏನೆಲ್ಲಾ ಸರ್ಕಸ್ ಮಾಡಬೇಕು ಅನ್ನೋದು ಗೊತ್ತಿದೆ. ಅವರು ಪಾಪ ಆ ಆತಂಕದಲ್ಲಿದ್ದರೆ, ಆ ಕೋಟಿ ನಿರ್ಮಾಪಕರು ನಿರ್ಮಿಸಿದ ಸ್ಟಾರ್ ನಟರ ಸಿನಿಮಾ ಬೆಂಬಲಿಸುವ ಭರದಲ್ಲಿ ಅಭಿಮಾನಿಗಳು ಮಾತ್ರ ತಮ್ಮ ಹೀರೋ ಮಾರ್ಕೆಟ್ ಹವಾ ತೋರಿಸಲು ಗಾಂಧಿನಗರದಲ್ಲಿ ಸುಳ್ಳು ಸುದ್ದಿ ಹಬ್ಬಿಸೋದು ಕಾಮನ್. ಅಂಥದ್ದೇ ಸುದ್ದಿ ಇದು.
ಒಂದು ಸಿನಿಮಾದಿಂದ ಎಷ್ಟು ಹಣ ಬಂದರೂ ಸಾಲುತಿಲ್ಲವೇ, ಸಾಲುತಿಲ್ಲವೇ, ಸಾಲವಿನ್ನೂ ತೀರುತಿಲ್ಲವೇ ಅಂತ ನಿರ್ಮಾಪಕರು ಪಾಪ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹಾಕಿದ ಹಣ ವಾಪಸ್ ಬರೋದನ್ನೇ ಕಾಯುತ್ತಾ ಕೂತಿರುತ್ತಾರೆ. ಆದರೆ, ಸ್ಟಾರ್ ನಟರ ಅಭಿಮಾನಿಗಳು ಮಾತ್ರ ಹಾಗೇ ಸುಮ್ಮನೇ ಕೂರುವವರಲ್ಲ. ಅವರು ತಮ್ಮ ನಟನ ಮಾರ್ಕೆಟ್ ವ್ಯಾಲ್ಯೂ ಹೆಚ್ಚಿಸಲು ಏನು ಬೇಕಾದರೂ ಹೇಳುತ್ತಾರೆ. ಎಲ್ಲ ಸ್ಟಾರ್ ನಟರ ಅಭಿಮಾನಿಗಳ ವಿಷಯದಲ್ಲೂ ಇದು ಮಾಮೂಲಿ. ಈಗ ‘ಕೋಟಿಗೊಬ್ಬ 3’ ಚಿತ್ರದ ಬಗ್ಗೆಯೂ ಅಂಥದ್ದೇ ಸುದ್ದಿ ಹರಿದಾಡುತ್ತಿದೆ.
ಸುದೀಪ್ ಅಭಿಮಾನಿಗಳು ಈಗಾಗಲೇ ‘ಕೋಟಿಗೊಬ್ಬ3’ ಚಿತ್ರ 70 ಕೋಟಿ ಹಣ ಗಳಿಸಿದೆ. ಬಿಡುಗಡೆಗೆ ಮುನ್ನವೇ ಚಿತ್ರದ ನಿರ್ಮಾಪಕರು ಲಾಭದಲ್ಲಿದ್ದಾರೆ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಇವರ ಪ್ರಕಾರ ಹಿಂದಿ ರೈಟ್ಸ್, ತೆಲುಗು, ತಮಿಳು ರೈಟ್ಸ್, ಓವರ್ ಸೀಸ್ ರೈಟ್ಸ್, ಸೆಟಲೈಟ್ ರೈಟ್ಸ್ ಎಲ್ಲಾ ಸೇರಿ ಕೋಟಿಗೊಬ್ಬ ಬಿಡುಗಡೆಗೆ ಮುನ್ನವೇ 70 ಕೋಟಿ ಹಣ ಮಾಡಿದೆಯಂತೆ. ಆದರೆ ಇದನ್ನು ಕೇಳಿದ ನಿರ್ಮಾಪಕರು ಮಾತ್ರ, “ಇವರಿಗೆಲ್ಲ ಹೀಗೆ ಸುಳ್ಳು ಸುದ್ದಿ ಹಬ್ಬಿಸಲು ಯಾರು ರೈಟ್ಸ್ ಕೊಟ್ಟರು?” ಅಂತ ಗರಂ ಆಗಿ ಕೇಳ್ತಾ ಇದ್ದಾರೆ. ನಿರ್ಮಾಪಕ ಸೂರಪ್ಪ ಬಾಬು, ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವ ಈ ಸುದ್ದಿಯನ್ನು ಅಲ್ಲಗಳೆಯುತ್ತಾ, “ಇದೆಲ್ಲಾ ಸುಳ್ಳು.ನಾನಿನ್ನೂ ಸಾಲದಲ್ಲಿದ್ದೇನೆ. ಈ ಸಿನಿಮಾ ಹಿಟ್ ಆದರೆ ಮಾತ್ರ ನನಗೆ ಒಳ್ಳೆಯ ದಿನಗಳು ಬರಲಿವೆ. ಆದರೆ ಹೀಗೆ ಬಿಡುಗಡೆಗೆ ಮುನ್ನ ಕೇಳಿಬರುತ್ತಿರುವ ಸುದ್ದಿಗಳೆಲ್ಲಾ ಸುಳ್ಳು” ಎಂದಿದ್ದಾರೆ.