ಕುನಾಲ್‌ ಖೇಮು ಅವರು ಇನ್ವೆಸ್ಟಿಗೇಟಿಂಗ್‌ ಆಫೀಸರ್‌ ‘ಅಭಯ್‌ ಪ್ರತಾಪ್‌ ಸಿಂಗ್‌’ ಪಾತ್ರ ನಿರ್ವಹಿಸಿರುವ ‘ಅಭಯ್‌’ ಸೀಸನ್‌ 3 ಟ್ರೈಲರ್‌ ಬಿಡುಗಡೆಯಾಗಿದೆ. ತನುಜ್‌ ವಿರ್ವಾನಿ, ರಾಹುಲ್‌ ದೇವ್‌, ದಿವ್ಯಾ ಅಗರ್‌ವಾಲ್‌, ವಿಜಯ್‌ ರಾಝ್‌ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಸರಣಿ ZEE5ನಲ್ಲಿ ಸ್ಟ್ರೀಮ್‌ ಆಗಲಿದೆ.

ZEE5ನ ಜನಪ್ರಿಯ ವೆಬ್‌ ಸರಣಿ ‘ಅಭಯ್’ 3ನೇ ಸೀಸನ್‌ ಸ್ಟ್ರೀಮಿಂಗ್‌ಗೆ ಸಿದ್ಧವಾಗಿದ್ದು, ಟ್ರೈಲರ್‌ ಬಿಡುಗಡೆಯಾಗಿದೆ. ಕೆನ್‌ ಘೋಷ್‌ ನಿರ್ದೇಶನದ ಸರಣಿಯ 3 ಸೀಸನ್‌ನಲ್ಲಿ ವೀಕ್ಷಕರು ಮತ್ತಷ್ಟು ಕುತೂಹಲಕಾರಿ ಪತ್ತೇದಾರಿ ಕತೆಗಳನ್ನು ನೋಡಬಹುದು. ಈ ಬಾರಿ ಇನ್ನೂ ಹೆಚ್ಚಿನ ಪಾತ್ರಗಳು, ತಾಂತ್ರಿಕ ವೈಭವ ಇರುವ ಸೂಚನೆ ಟ್ರೈಲರ್‌ನಲ್ಲಿ ಸಿಗುತ್ತದೆ. ಮುಗ್ಧ ಜನರನ್ನು ಕೊಲ್ಲುವ ಸರಣಿ ಹಂತಕರ ಸುತ್ತ ಕತೆ ಸಾಗುತ್ತದೆ. ತನುಜ್‌ ವಿರ್ವಾನಿ, ರಾಹುಲ್‌ ದೇವ್‌ ಅವರು ಕೊಲೆಗಾರರಂತೆ ಭಾಸವಾದರೂ ವಿಜಯ್‌ ರಾಝ್‌ ಪಾತ್ರದ ಚಿತ್ರಣ ಗಮನ ಸೆಳೆಯುತ್ತದೆ. ವಿಜಯ್‌ ರಾಝ್‌ ಪಾತ್ರದ ಲುಕ್‌, ಸಂಭಾಷಣೆಗಳು ವಿಶಿಷ್ಟವಾಗಿವೆ.

https://youtu.be/w0ZFFPZD4_s

ಈ ಹಿಂದಿನ ಎರಡು ಸೀಸನ್‌ಗಳಲ್ಲಿ ಸರಣಿಯಲ್ಲಿನ ಕುನಾಲ್‌ ಖೇಮು ನಿರ್ವಹಿಸಿರುವ ಇನ್ವೆಸ್ಟಿಗೇಟಿಂಗ್‌ ‘ಅಭಯ್‌ ಪ್ರತಾಪ್‌ ಸಿಂಗ್‌’ ಪಾತ್ರವನ್ನು ಜನರು ಮೆಚ್ಚಿದ್ದರು. ಈ ಬಾರಿ ಪ್ರತಿಭಾವಂತ ಕಲಾವಿದರಾದ ವಿಜಯ್ ರಾಝ್, ರಾಹುಲ್ ದೇವ್ ಮತ್ತು ವಿದ್ಯಾ ಮಾಲ್ವಾಡೆ ಅವರ ಸೇರ್ಪಡೆಯಿಂದಾಗಿ ನಿರೀಕ್ಷೆ ಹೆಚ್ಚಿದೆ. ಉಳಿದಂತೆ ಕಳೆದೆರೆಡು ಸೀಸನ್‌ಗಳಲ್ಲಿ ನಟಿಸಿದ್ದ ಆಶಾ ನೇಗಿ, ನಿಧಿ ಸಿಂಗ್‌, ರಿತುರಾಗ್‌ ಸಿಂಗ್‌, ಎಲ್ನಾಝ್‌ ನೌರೋಝಿ ಮೂರನೇ ಸೀಸನ್‌ನಲ್ಲೂ ಮುಂದುವರೆಯಲಿದ್ದಾರೆ.

ಸರಣಿಗೆ ಆಯ್ಕೆಯಾದ ಸಂದರ್ಭದಲ್ಲಿ ನಟ ವಿಜಯ್‌ ರಾಝ್‌ ಮಾತನಾಡುತ್ತಾ, “ಕೆನ್‌ ಮತ್ತು ಕುನಾಲ್‌ ಜೋಡಿಯ ಯಶಸ್ವೀ ಸರಣಿಯ ಭಾಗವಾಗಿರುವುದು ಥ್ರಿಲ್‌ ನೀಡಿದೆ. ಹಿಂದೆ ನೋಡಿರದಂಥ ಪಾತ್ರದಲ್ಲಿ ವೀಕ್ಷಕರು ಇಲ್ಲಿ ನನ್ನನ್ನು ನೋಡಲಿದ್ದಾರೆ. ಪಾತ್ರದ ಬಗ್ಗೆ ಹೆಚ್ಚು ರಿವೀಲ್‌ ಮಾಡುವಂತಿಲ್ಲ. ಅಭಯ್‌ ಪಾತ್ರದೊಂದಿಗಿನ ತೀವ್ರ ಹಣಾಹಣಿಗೆ ನನ್ನ ಪಾತ್ರ ಸಾಕ್ಷಿಯಾಗಲಿದೆ” ಎಂದಿದ್ದರು. ಬಾಲಿವುಡ್‌ನ ಮತ್ತೊಬ್ಬ ಪ್ರತಿಭಾವಂತ ನಟ ರಾಹುಲ್‌ ದೇವ್‌ ಕೂಡ ಸರಣಿಯಲ್ಲಿ ನಟಿಸುತ್ತಿರುವ ಕುರಿತು ಎಕ್ಸೈಟ್‌ ಆಗಿದ್ದರು. “ಅಭಯ್‌ ಸರಣಿಗೆ ತನ್ನದೇ ಆದ ಲಾಯಲ್‌ ಆದಂತಹ ನೋಡುಗ ಬಳಗವಿದೆ. ನಿರ್ದೇಶಕ ಕೆನ್‌ ಅಗಾಧ ವಿಶ್ಯುಯೆಲ್‌ ಸೆನ್ಸ್‌ ಇರುವಂತಹ ನಿರ್ದೇಶಕ. ಈ ಸರಣಿಯಲ್ಲಿ ನಟಿಸುತ್ತಿರುವ ಕುರಿತು ಹೆಮ್ಮೆಯಿದ್ದು, ವೀಕ್ಷಕರ ಪ್ರತಿಕ್ರಿಯೆ ಹೇಗಿರಬಹುದು ಎಂದು ಈಗಲೇ ಕುತೂಹಲಿಯಾಗಿದ್ದೇನೆ” ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ZEE5ನಲ್ಲಿ ಸರಣಿ ಸ್ಟ್ರೀಮ್‌ ಆಗಲಿದ್ದು, ಸದ್ಯದಲ್ಲೇ ಸ್ಟ್ರೀಮಿಂಗ್‌ ದಿನಾಂಕ ಘೋಷಣೆಯಾಗಲಿದೆ.

LEAVE A REPLY

Connect with

Please enter your comment!
Please enter your name here