ಪ್ರೇಮಕತೆಗಳೇ ಒಂದು ಅರ್ಥದಲ್ಲಿ ಕ್ಲೀಶೆ. ಯಾರದ್ದೋ ಲವ್ ಸ್ಟೋರಿಯನ್ನು ನಾವು ಕೂತು ನೋಡುವುದೇನಿದೆ? ಆದರೆ ಮನರಂಜನೆ ಬೇಕು‌ ಎಂದಾಗ ಇನ್ಯಾರದ್ದೋ ಲವ್ ಸ್ಟೋರಿ ನೋಡುವುದೇ ಸುರಕ್ಷಿತ ಆಯ್ಕೆ. ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಂ ಆಗುತ್ತಿರುವ ‘ಲವ್ ಟ್ಯಾಕ್ಟಿಕ್ಸ್’ ರೊಮ್ಯಾಂಟಿಕ್ ಕಾಮಿಡಿ ಆದ ಕಾರಣ ಲವ್ ಸ್ಟೋರಿ ಇಷ್ಟವಾಗದವರಿಗೂ ಮನರಂಜನೆಯ ಖಾತರಿ ಕೊಡುತ್ತದೆ.

ಹುಡುಗರು ಸರಳ ರೇಖೆಯಂತೆ. ಯಾವುದಕ್ಕೆ ತರಬೇತಿಗೊಳಿಸುತ್ತೇವೋ ಅದೇ ಲೋಕದಲ್ಲಿ ಇರುತ್ತಾರೆ ಎನ್ನುತ್ತಾಳೆ‌ ಆಕೆ. ಹುಡುಗಿಯರು ಕ್ಲಿಷ್ಟ ಸೂತ್ರ, ಅವರಿಗವರೇ ಅರ್ಥವಾಗದಾಗ ನಮ್ಮ ಮೇಲೆ ದೂರು ಹಾಕುತ್ತಾರೆ ಎನ್ನುತ್ತಾನೆ ಈತ. ಯಾವುದೇ‌ ಉತ್ಪನ್ನವನ್ನು ಹುಡುಗಿಯರಿಗೆ ಮಾರಾಟ ಮಾಡುವುದು ಸುಲಭ, ಆದರೆ ಇಲ್ಲಿ ನಾವೇ ಆ‌ ಉತ್ಪನ್ನ ಎಂಬುದು ಗಮನದಲ್ಲಿ ಇರಬೇಕು ಎಂದು ಮಾರ್ಕೆಟಿಂಗ್ ಸೂತ್ರ ಮಾತನಾಡುವ ಈತ ಜಾಹೀರಾತು ಪ್ರಪಂಚದವ. ಬಟ್ಟೆಯೊಳಗೆ ಏನಿದೆ ಎಂದು ಉಟ್ಟ ಬಟ್ಟೆಯೇ ಆಕರ್ಷಿಸಬೇಕು, ಹುಡುಗರು ಬಲೆಗೆ ಬೀಳದೆ‌ ಎಲ್ಲಿಗೆ ಹೋಗುತ್ತಾರೆ ಎನ್ನುವ ಈಕೆ ಫ್ಯಾಶನ್ ಡಿಸೈನರ್. ಸಮಾಜದ ಕೆನೆ ಪದರದಲ್ಲಿ ಇರುವ ಈ ಇಬ್ಬರಿಗೂ ಇರುವುದು ಅಗಾಧ ಆತ್ಮವಿಶ್ವಾಸ. ಇವಳೂ ಈಗಾಗಲೇ ಹಲವು ಹುಡುಗರನ್ನು ಬಲೆಗೆ ಕೆಡವಿದವಳು, ಅವನೂ ಹಲವು ಹೂವುಗಳಿಗೆ ಹಾರಿದ ದುಂಬಿ. ಹುಡುಗಿಯನ್ನು ಪ್ರೇಮ ಬಲೆಗೆ ಬೀಳಿಸಿ ಗೆದ್ದರೆ ಹೊಸ ಜಾಹೀರಾತಿಗೆ ನೀನೇ ಮುಖ್ಯಸ್ಥ ಎಂದು ಸಹೋದ್ಯೋಗಿ ಪಂಥಾಹ್ವಾನ ಮಾಡಿರುತ್ತಾನೆ. ಬರಿ ಬಾಯಿಮಾತಲ್ಲ, ನಿಜಕ್ಕೂ ಬಲೆ ಬೀಸಿಯೇ ಸಾಬೀತುಪಡಿಸುತ್ತೇನೆ ಎಂದು ಇವಳು ಗೆಳತಿಯರ ಎದುರು ಕೊಚ್ಚಿಕೊಂಡಿರುತ್ತಾಳೆ. ಜತೆಗೆ ಆ ಇಡೀ ಪ್ರಕ್ರಿಯೆಯನ್ನು ಹಂತ ಹಂತವಾಗಿ ಪ್ರಕಟಿಸುತ್ತೇನೆ ಎಂದು ತನ್ನ ಬ್ಲಾಗ್‌ನಲ್ಲಿ ಬರೆದುಕೊಳ್ಳುತ್ತಾಳೆ.

ಇದು ‘ಲವ್‌ ಟ್ಯಾಕ್ಟಿಕ್ಸ್’ ಎಂಬ ಟರ್ಕಿಶ್ ಕಾಮಿಡಿಯ ಹೂರಣ. ಟರ್ಕಿ ಮೂಲದ ಸಿನಿಮಾಗಳು ಹೆಚ್ಚಾಗಿ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡೇ ಕಾಣುತ್ತವೆ.‌ ದೀರ್ಘ ಮೌನ, ಮಡುಗಟ್ಟಿದ ಭಾವ, ಅಂತರಾಳದ ನೋವು – ಇವನ್ನೆಲ್ಲ ಟರ್ಕಿಶ್ ನಿರ್ದೇಶಕರು ಪರಿಣಾಮಕಾರಿಯಾಗಿ ಸೆರೆ ಹಿಡಿಯುತ್ತಾರೆ ಎಂಬುದು ವಾಡಿಕೆ. 70ರ ದಶಕದವರೆಗೆ ಅವರ ಸಿನಿಮಾಗಳು ರಾಜಕೀಯ ವಿಚಾರದಲ್ಲೂ ತೀಕ್ಷ್ಣವಾಗಿದ್ದವು. ಆದರೆ ಇಂದು ಅಲ್ಲಿನ ರಾಜಕಾರಣ ಬದಲಾಗಿದೆ, ಬದಲಾದ ರಾಜಕೀಯ ಸನ್ನಿವೇಶದಲ್ಲಿ ಆಳುವವರಿಗೆ ತೊಡಕಾಗದ ವಿಚಾರಗಳೇ‌ ಹೆಚ್ಚಾಗಿ ಸಿನಿಮಾಗಳಿಗೆ ವಸ್ತುವಾಗುತ್ತವೆ. ಸೈದ್ಧಾಂತಿಕವಾಗಿ ತಟಸ್ಥವಾಗಬೇಕಾದಾಗ ಸಿನಿ ಮನಸುಗಳು ಆರಿಸಿಕೊಳ್ಳುವುದು ನಡುದಾರಿ. ಆಸ್ಲಿ ಎಂಬ ಫ್ಯಾಶನ್ ಡಿಸೈನರ್ ಹಾಗೂ ಕೆರೆಮ್ ಎಂಬ ಆ್ಯಡ್ ಕ್ಯಾಂಪೇನರ್ ಪಾತ್ರಗಳ ಮಿಲನದ ‘ಲವ್ ಟ್ಯಾಕ್ಟಿಕ್ಸ್’ ಅದಕ್ಕೆ ಹೊಸ ಉದಾಹರಣೆ. ಯಾವುದೇ ಭಾಷೆಯ ಚಿತ್ರರಂಗ ಗೊಂದಲದ‌ ಪರಿಸ್ಥಿತಿಯಲ್ಲಿ‌ ಸಿಲುಕಿ ಹಾಕಿಕೊಂಡಾಗ ಕಾಮಿಡಿ‌ ಎಂಬುದು‌ ವರ್ಕ್ ಆಗಿಬಿಡುತ್ತದೆ.

ತೊಂಭತ್ತರ ದಶಕದಲ್ಲಿ ಭಾರತ ಸೋವಿಯತ್ ಆರ್ಥಿಕ ನೀತಿಯಿಂದ ಬಿಡಿಸಿಕೊಂಡಿತ್ತಷ್ಟೇ. ಉದಾರೀಕರಣ ಹೊಸ‌ ನೀರಿಗೆ ಕಂದಕ ತೋಡಿದ್ದರೂ ಹರಿವಿನ ಪರಿಯ ಹಿಡಿತ ಸಮಾಜಕ್ಕೆ ಸಿಕ್ಕಿರಲಿಲ್ಲ. ಒಟ್ಟಿನಲ್ಲಿ ಗೊಂದಲದಲ್ಲಿ ಕೂಡಿದ್ದ 90ರ ದಶಕದ ಸಿನಿಮಾ ಎರಡೂ ಬಾಹುಗಳನ್ನು ಚಾಚಿ ಅಪ್ಪಿಕೊಂಡದ್ದು ಕಾಮಿಡಿಯನ್ನು. ಮುಂದಿನ ದಿನಗಳಲ್ಲಿ ಯುರೋಪ್‌ನಲ್ಲಿ ಎಂಥ ಸಿನಿಮಾಗಳು ಬರಲಿವೆ ಎಂಬುದರ ಸೂಚನೆ ಯುರೋಪ್‌ ಮತ್ತು ಏಷ್ಯಾ‌ಗಳೆರಡರಲ್ಲೂ ಮೈ ಚಾಚಿ ನಿಂತ ಟರ್ಕಿ ನೀಡುತ್ತಿದೆ.

‘ಲವ್ ಟ್ಯಾಕ್ಟಿಕ್ಸ್’ ಪಕ್ಕಾ ಮನರಂಜನಾ ಸಿನಿಮಾ. ಮನರಂಜನೆಗೆ ಮೋಸ ಆಗದಂತೆ ಕರಾರುವಾಕ್ಕು ಲೆಕ್ಕಾಚಾರ ಹಾಕಿ ಬರೆಯಲಾದ ಚಿತ್ರಕಥೆ. ಕ್ಲೀಶೆ ಎಂದನಿಸುವ ಸಾಕಷ್ಟು ವಿಚಾರಗಳಿದ್ದೂ ಅವುಗಳಿಗೆ ಹೊಂದುವ ಸನ್ನಿವೇಶ ಸೃಷ್ಟಿಸಲಾಗಿದೆ. ಅವಳೇ ಬಂದು ಇವನನ್ನು ಒಲಿಸಬೇಕು, ಅವನೇ ಮೊದಲಾಗಿ ಇವನನ್ನು ವರಿಸಬೇಕು ಎಂದು ಇಬ್ಬರೂ ಕಾದು ಕೂತಾಗ ಉಂಟಾಗುವ ಸನ್ನಿವೇಶಗಳು ಯಾರೂ ಊಹಿಸದಂತವಲ್ಲ. ಆದರೂ ಮನರಂಜನೆ ಒದಗಿಸಲು ಸೋಲುವುದಿಲ್ಲ. ಆತ ತಾನಾಗಿ ಹುಡುಕಿ ಬರಲಿ ಎಂದು ಟ್ಯಾಕ್ಸಿಯಲ್ಲಿ ಶಾಲು ಬಿಟ್ಟು ಆಸ್ಲಿ ಹೋಗುವಾಗ, ಅದು ವಾಸ್ತವದಲ್ಲಿ ಆಕೆಯ ಬುದ್ಧಿವಂತಿಕೆ ಎಂದು ಕೆರೆನ್ ಗುರುತಿಸುವಾಗ ಮುಂದೇನು ಎಂಬ ಕುತೂಹಲ ನಮ್ಮಲ್ಲಿ ಉಳಿಯುತ್ತದೆ. ಅದನ್ನೆಲ್ಲ ಆಸ್ಲಿ‌ ಬ್ಲಾಗಿನಲ್ಲಿ ಅಪ್‌ಡೇಟ್ ಮಾಡುವುದು, ಕೆರೆನ್ ಗೆಳೆಯರ ಮುಂದೆ‌ ಕೊಚ್ಚಿಕೊಳ್ಳುವುದು – ಎರಡೂ ದೃಶ್ಯಗಳನ್ನು ಒಂದರ ಬೆನ್ನಿಗೆ ಮತ್ತೊಂದಾಗಿ ಹೆಣೆದಿರುವಾಗ ಮೇಲು ಕೀಳಿನ ಆಟದ ಕೂತೂಹಲಕ್ಕೆ ನಾವು ಈಡಾಗುತ್ತೇವೆ.

ಅವನೇ ಮೊದಲು ಕರೆ ಮಾಡಲಿ ಎಂದು ಇವಳು ಕಾಯುವಾಗ, ಕಾಲ್‌ ಮಾಡಿಯೇ ಮಾಡುತ್ತಾನೆ ಎಂದು ಇವ ಕಾಯುವಾಗ, ಕೊನೆಗೆ ಯಾರು ಸೋಲುತ್ತಾರೆ ಎಂದು ನಾವು ಕಾಯುವಾಗ ಇಬ್ಬರಿಗೂ ಬರುವುದು ವೃತ್ತಿಯ ಕರೆ ಎಂಬಲ್ಲಿ ಕಾಮಿಡಿ ಕೆಲಸ ಮಾಡಿದೆ. ಬಲೆಗೆ ಬೀಳಿಸಲು ಇಬ್ಬರೂ ಅವಿರತ ಕೆಲಸ‌ ಮಾಡುವ ಹೊತ್ತಿಗೆ ಬಳಕೆಯಾಗುವ ಟ್ಯಾಕ್ಟಿಕ್ಸ್ ಈರ್ಷ್ಯೆ. ಆದರೆ ಆ ಘಟ್ಟಕ್ಕೆ ತಲುಪುವಷ್ಟರಲ್ಲಿ ಆಕೆ ಹೆಣ್ಣಾಗಿ ಕರಗುತ್ತಾಳೆ, ಈತ ಗಂಡಾಗಿ ಸೋಲುತ್ತಾನೆ. ಪ್ರೀತಿಯ ಸೆಲೆಗೆ ಸಿಕ್ಕಾಗ ಮಾತಾಡುವ ಮೌನ ಸೊಗಸಾಗಿ ಸಿನಿಮಾದ ಸೆರೆಗೆ ಸಿಕ್ಕಿದೆ. ಪಂಥಕ್ಕೆ ಬಿದ್ದಾಗ ಪ್ರೀತಿಯನ್ನು ವಸ್ತುವಾಗಿ ನೋಡುವ ಮನಸುಗಳು ನಿಜಪ್ರೀತಿಯಲ್ಲಿ ಸಿಲುಕಿದಾಗ ಹೃದಯದ ಮಾತಿಗೆ ಹೇಗೆ ಶರಣಾಗುತ್ತಾರೆ ಎಂಬುದು ಕಾಮಿಡಿಗಳ ನಡುವೆ ಪ್ರೇಕ್ಷಕನ ಮನಸ್ಸಿಗೆ ನಾಟುವಂತಿದೆ.

ಅದ್ಯಾವುದೇ ಭಾಷೆಯ ಸಿನಿಮಾವಿರಲಿ, ಚಾಕಚಕ್ಯತೆಯಿಂದ ಹೆಣೆದ ಪ್ರೇಮಕತೆ ಮನರಂಜನೆಗೆ ಮೋಸ ಮಾಡುವುದಿಲ್ಲ ಎಂಬುದನ್ನು ‘ಲವ್ ಟ್ಯಾಕ್ಟಿಕ್ಸ್’ ಸಾಬೀತುಪಡಿಸುತ್ತದೆ. ಏಕೆಂದರೆ ಭಾವಕ್ಕೆ ಗಡಿರೇಖೆಯಿಲ್ಲ ಅಲ್ಲವೇ. ಗಡಿಗಳ ಆಚೆಗಿನ ಪ್ರೇಮಕತೆ ನೋಡುವ ಮನಸಿದ್ದರೆ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಂ ಆಗುತ್ತಿರುವ ಲವ್ ಟ್ಯಾಕ್ಟಿಕ್ಸನ್ನು ನೀವು ಆಚರಣೆಗಲ್ಲ, ನೋಡುವ‌ ಪ್ರಯತ್ನಕ್ಕೆ ಕೈ ಹಾಕಬಹುದು.

LEAVE A REPLY

Connect with

Please enter your comment!
Please enter your name here