ವಿಕ್ರಂ ರವಿಚಂದ್ರನ್‌ ಮತ್ತು ಅದಿತಿ ಪ್ರಭುದೇವ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ‘ಲಬ್‌ ಯು ಅಭಿ’ ವೆಬ್‌ ಸರಣಿ ಇದೇ ಮೇ 19ರಿಂದ JioCinemaದಲ್ಲಿ ಸ್ಟ್ರೀಮ್‌ ಆಗಲಿದೆ. ಕಾಳಿ ವೇಲಾಯುಧಂ ನಿರ್ಮಿಸಿ, ನಿರ್ದೇಶಿಸಿರುವ ಸರಣಿಯಲ್ಲಿ ಸ್ಯಾಂಡಲ್‌ವುಡ್‌ನ ಪ್ರಮುಖರು ನಟಿಸಿದ್ದಾರೆ.

‘ಶಿವ ನಿಮ್ಮನ್ನು ಕಾಡುತ್ತಾನೆ, ನಿಮ್ಮ ಮನಸ್ಸನ್ನು ಚುಚ್ಚುತ್ತಾನೆ. ಯಾಕೆಂದರೆ ಈ ಶಿವ ಎಲ್ಲರೊಳಗೂ ಇದ್ದಾನೆ. ಹಲವು ನಿಗೂಢಗಳನ್ನು ಮನಸ್ಸಿನಲ್ಲಿಟ್ಟುಕೊಂಡು, ಅದನ್ನು ಯಾರೊಂದಿಗೂ ಹಂಚಿಕೊಳ್ಳದ ವ್ಯಕ್ತಿ ಆತ. ಒಂದೊಮ್ಮೆ ಅವನು ಹಂಚಿಕೊಳ್ಳಲು ಯತ್ನಿಸಿದರೂ ಪರಿಸ್ಥಿತಿ ಅದಕ್ಕೆ ವಿರುದ್ಧವಾದ ಸನ್ನಿವೇಶವನ್ನು ಸೃಷ್ಟಿಸಿಬಿಡುತ್ತದೆ. ಪ್ರೇಮ ಮತ್ತು ಯುದ್ಧದಲ್ಲಿ ಎಲ್ಲವೂ ನ್ಯಾಯೋಚಿತ ಎಂಬ ಮಾತಿದೆ. ಆದರೆ ಶಿವ ಮತ್ತು ಅವನ ಬದುಕಿನ ವಿಷಯಕ್ಕೆ ಬಂದಾಗ, ಅವನ ಪ್ರೇಮದಲ್ಲಿಯೂ, ಬದುಕಿನಲ್ಲಿ ಹೋರಾಟದಲ್ಲಿಯೂ ನ್ಯಾಯೋಚಿತವಾಗಿದ್ದು ನಡೆಯುವುದೇ ಇಲ್ಲ’ ಎಂದು ‘ಲವ್‌ ಯು ಅಭಿ’ಯಲ್ಲಿನ ತಮ್ಮ ಪಾತ್ರದ ಕುರಿತು ವಿವರಿಸುತ್ತಾರೆ ಶಿವನ ಪಾತ್ರಧಾರಿ ವಿಕ್ರಮ್ ರವಿಚಂದ್ರನ್.

JioCinemaದ ಈ ನೂತನ ಕನ್ನಡ ವೆಬ್‌ ಸರಣಿ ಮೇ 19ರಿಂದ ಸ್ಟ್ರೀಮ್‌ ಆಗಲಿದ್ದು, ಉಚಿತವಾಗಿ ವೀಕ್ಷಿಸಬಹುದಾಗಿದೆ. ಕಾಳಿ ವೇಲಾಯುಧಂ ನಿರ್ಮಿಸಿ, ನಿರ್ದೇಶಿಸಿರುವ ಈ ಸರಣಿಯಲ್ಲಿ ವಿಕ್ರಂಗೆ ಜೋಡಿಯಾಗಿ ಅದಿತಿ ಪ್ರಭುದೇವ ನಟಿಸಿದ್ದಾರೆ. ಇದು ವಿಕ್ರಂ ರವಿಚಂದ್ರನ್‌ ಅವರಿಗೂ ಮೊದಲ ವೆಬ್‌ ಸರಣಿ. ಖ್ಯಾತ ಖಳನಟ ರವಿಶಂಕರ್‌ ಸರಣಿಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ‘ಎಲ್ಲ ಕಲಾವಿದರೂ ತಮ್ಮದೇ ಆದ ರಿದಂನಲ್ಲಿ, ಮನೋಭಾವದಲ್ಲಿ ನಟಿಸುತ್ತ ಹೋಗುತ್ತಿರುತ್ತೇವೆ. ಕಲಾವಿದರ ಜರ್ನಿ ಹಾಗೆಯೇ ಇರುತ್ತದೆ. ಒಂದೊಂದ್ಸಲ ಅದು ಬ್ರೇಕ್ ಆಗಬೇಕಾಗುತ್ತದೆ. ಅಭಿ ನನ್ನ ನಟನಾಪಯಣವನ್ನು ಹಾಗೆ ಬ್ರೇಕ್ ಮಾಡಿದಂಥ ಪಾತ್ರ. ನನ್ನ ಇಡೀ ವ್ಯಕ್ತಿತ್ವಕ್ಕೇ ಚಾಲೆಂಜ್ ಮಾಡಿದಂಥ ಪಾತ್ರ. ಆ ಪಾತ್ರದಲ್ಲಿ ನಟಿಸುತ್ತ ನನ್ನ ವ್ಯಕ್ತಿತ್ವದಲ್ಲೂ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದೀನಿ. ಅಭಿ ತುಂಬ ಜನರಿಗೆ ಇಷ್ಟ ಆಗ್ತಾಳೆ’ ಎನ್ನುತ್ತಾರೆ ಅದಿತಿ.

‘ಪ್ರೇಮ, ವಿರಹ, ಕೊಲೆ, ತನಿಖೆ ಹೀಗೆ ನೋಡುಗರನ್ನು ಕುರ್ಚಿಯ ತುದಿಯಲ್ಲಿ ಕೂಡುವಂತೆ ಮಾಡಬಲ್ಲ ಎಲ್ಲ ಅಂಶಗಳೂ ಇದರಲ್ಲಿದೆ. ಒಂದು ಸಾವಿನ ಸುತ್ತ ಬೆಳೆಯುತ್ತ ಹೋಗುವ ಈ ಕಥನದಲ್ಲಿ ಮನಸ್ಸನ್ನು ಭಾವುಕಗೊಳಿಸುವ ಸನ್ನಿವೇಶಗಳಿವೆ, ದಾಂಪತ್ಯದ ಮಧುರ ಕ್ಷಣಗಳನ್ನು ಉಣಬಡಿಸುವ ದೃಶ್ಯಗಳಿವೆ, ಪ್ರೇಮದ ವ್ಯಾಮೋಹ ಮತ್ತು ಸತ್ಯದ ಹಂಬಲದ ನಡುವಿನ ಘರ್ಷಣೆಯೂ ಇದೆ. ಅನುಮಾನ, ವಂಚನೆ, ಮುಗ್ಧ ಪ್ರೇಮ, ಒಳ್ಳೆಯತನ, ಸ್ವಾರ್ಥ, ಪ್ರಾಮಾಣಿಕತೆ ಎಲ್ಲ ಗುಣಗಳೂ ಸೇರಿ ರೂಪುಗೊಂಡ ಅಪರೂಪದ ರಸಪಾಕ ‘ಲವ್‌ ಯು ಅಭಿ’. ಮೂವತ್ತು ನಿಮಿಷಗಳ ಏಳು ಎಪಿಸೋಡ್‌ಗಳಲ್ಲಿ ಅಭಿಯ ಬದುಕಿನ ಕಥೆಯನ್ನು ಹೇಳಲಾಗಿದೆ’ ಎನ್ನುತ್ತಾರೆ ನಿರ್ದೇಶಕ ಕಾಳಿ ವೇಲಾಯುಧಂ. ವಿನಯಾ ಪ್ರಸಾದ್, ರಚಿತಾ ಮಹಾಲಕ್ಷ್ಮಿ, ಅಶೋಕ್ ಶರ್ಮ, ಶ್ರೀನಾಥ್, ಅಂಬಿಕಾ, ಶ್ರೀನಿವಾಸ ಮೂರ್ತಿ, ಸುಂದರ್‌ರಾಜ್‌ ಪ್ರಮುಖ ಪಾತ್ರಗಳಲ್ಲಿದ್ದಾರೆ. ಅರುಣ್ ಬ್ರಹ್ಮ ಕ್ಯಾಮೆರಾ, ಪ್ರದೀಪ್‌ ರಾಘವ್ ಸಂಕಲನ, ನಿಜಿಲ್‌ ದಿನಕರ್‍ ಸಂಗೀತ ಸರಣಿಗಿದೆ.

LEAVE A REPLY

Connect with

Please enter your comment!
Please enter your name here