ಕೈಗೆ ಸಿಕ್ಕಿರುವ ಒಳ್ಳೆಯ ಕತೆ, ಚಿತ್ರವನ್ನು ನಾಗೇಂದ್ರ ಪ್ರಸಾದ್ ಅಚ್ಚುಕಟ್ಟಾಗಿ ಕನ್ನಡಕ್ಕೆ ತಂದಿದ್ದಾರೆ. ಉತ್ತಮ ಕತೆಯ ಜೊತೆಗೆ ಪುನೀತ್ ರಾಜಕುಮಾರ್ ಕಾರಣಕ್ಕೆ ಈ ಸಿನಿಮಾ ಹೆಚ್ಚು ಆಪ್ತವಾಗುತ್ತದೆ. ಚಿತ್ರ ಮುಗಿದ ನಂತರ ‘ಬಾರೋ ರಾಜ’ ಹಾಡಿನಲ್ಲಿ ಪ್ರಭುದೇವ ಜೊತೆ ಹೆಜ್ಜೆ ಹಾಕುವ ಪುನೀತ್ ರಾಜಕುಮಾರ್ ಮತ್ತೆ ಮತ್ತೆ ಕಾಡುತ್ತಾರೆ. ಮತ್ತೆ ಮತ್ತೆ ಕಾಣುತ್ತಾರೆ!
‘ನಿಮ್ಮಪ್ಪ ಏನ್ Apple ಕಂಪನಿ ಓನರಾ? ಅವರದ್ದು ಟಾಯ್ಲೆಟ್ ಕಂಪನಿ!’ ಎಂದು ಚಿತ್ರದ ನಾಯಕ ಅರ್ಜುನ್ ತನ್ನ ಪತ್ನಿಯೊಂದಿಗೆ ಜಗಳ ಮಾಡುತ್ತಾ ಆಕೆಯ ತಂದೆಯನ್ನು ಹೀಯಾಳಿಸುತ್ತಾನೆ. ದೇವರಿಂದ ಅವನ ಬದುಕಿಗೆ ಮತ್ತೊಂದು ಛಾನ್ಸ್ ಸಿಕ್ಕ ನಂತರದ ಭೇಟಿಯಲ್ಲಿ ನಾಯಕನಿಗೆ ತನ್ನ ತಪ್ಪು ಮಾತಿನ ಅರಿವಾಗುತ್ತದೆ. ಟಾಯ್ಲೆಟ್ ಕಂಪನಿ ಮಾಲೀಕ ತನ್ನ ಹುಟ್ಟೂರಿನ ಜನರಿಗೆ ನೂರಾರು ಟಾಯ್ಲೆಟ್ ಕಟ್ಟಿಸಿರುತ್ತಾನೆ. ದೇವರಿಂದ ಸಿಗುವ ಬದುಕಿನ ಮತ್ತೊಂದು ಛಾನ್ಸ್‌ನಲ್ಲಿ ನಾಯಕನ ಬದುಕಿನ ಕುರಿತ ಗ್ರಹಿಕೆ ಬದಲಾಗುತ್ತದೆ. ಮದುವೆ, ಪ್ರೀತಿ, ಸಂಬಂಧಗಳು ಆತನಿಗೆ ಅರ್ಥವಾಗುತ್ತವೆ. ಇದು ‘ಲಕ್ಕೀ ಮ್ಯಾನ್’ ಕತೆ.
ಎರಡು ವರ್ಷಗಳ ಹಿಂದೆ ತೆರೆಕಂಡ ಯಶಸ್ವೀ ತಮಿಳು ಸಿನಿಮಾ ‘ಓಹ್ ಮೈ ಕಡವುಲೆ’ ರೀಮೇಕಿದು. ಅಶ್ವತ್ಥ್ ಮಾರಿಮುತ್ತು ಬರೆದ ‘ಓ ಮೈ ಕಡವುಲೆ’ ನಿಜಕ್ಕೂ ಸುಂದರ ಮತ್ತು ಆಪ್ತ ಕತೆ. ಚಿತ್ರದ ನಿರ್ದೇಶಕರೂ ಅವರೇ. ಭಾಷೆ, ಪ್ರಾದೇಶಿಕತೆಯ ಹಂಗಿಲ್ಲದ ಜಾಗತಿಕ ಕಥಾವಸ್ತು. ನಾಗೇಂದ್ರ ಪ್ರಸಾದ್ ಅವರು ಈ ಕತೆಯನ್ನು ‘ಲಕ್ಕೀ ಮ್ಯಾನ್’ ಶೀರ್ಷಿಕೆಯಡಿ ಕನ್ನಡಕ್ಕೆ ತಂದಿದ್ದಾರೆ. ತಮಿಳು ಸಿನಿಮಾದಲ್ಲಿ ವಿಜಯ್ ಸೇತುಪತಿ ನಟಿಸಿದ್ದ ‘ದೇವರ’ ಪಾತ್ರವನ್ನು ಇಲ್ಲಿ ಪುನೀತ್ ರಾಜಕುಮಾರ್ ನಿರ್ವಹಿಸಿದ್ದಾರೆ. ಅಕಾಲಿಕವಾಗಿ ಅಗಲಿದ ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಫೀಚರ್ ಚಿತ್ರವಿದು.
ಕೈಗೆ ಸಿಕ್ಕಿರುವ ಒಳ್ಳೆಯ ಕತೆ, ಚಿತ್ರವನ್ನು ನಾಗೇಂದ್ರ ಪ್ರಸಾದ್ ಅಚ್ಚುಕಟ್ಟಾಗಿ ಕನ್ನಡಕ್ಕೆ ತಂದಿದ್ದಾರೆ. ನಾಯಕ – ನಾಯಕಿ ಪಾತ್ರಗಳಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಸಂಗೀತಾ ಶೃಂಗೇರಿ ಉತ್ತಮವಾಗಿ ನಟಿಸಿದ್ದಾರೆ. ಉತ್ತಮ ಕತೆಯ ಜೊತೆಗೆ ಪುನೀತ್ ರಾಜಕುಮಾರ್ ಕಾರಣಕ್ಕೆ ಈ ಸಿನಿಮಾ ಹೆಚ್ಚು ಆಪ್ತವಾಗುತ್ತದೆ. ತೆರೆಯ ಮೇಲಿನ ಮತ್ತು ತೆರೆಯಾಚೆಗಿನ ಆಕರ್ಷಕ ಇಮೇಜ್‌ನ ಮೂಲಕ ಕನ್ನಡಿಗರ ಪ್ರೀತಿಗೆ ಪಾತ್ರವಾಗಿದ್ದ ಪುನೀತ್ ಪಾತ್ರ ಪ್ರೇಕ್ಷಕರನ್ನು ಕಾಡುತ್ತದೆ. ಈ ಪಾತ್ರ ಬದುಕಿನ ವಾಸ್ತವಗಳನ್ನು ಹೇಳುತ್ತದೆ. ಪುನೀತ್ ಅಗಲಿಕೆಯ ನೋವಿನಲ್ಲೇ ಪ್ರೇಕ್ಷಕರು ಅವರ ಪಾತ್ರ, ಸಂಭಾಷಣೆಗಳಿಗೆ ತಲೆದೂಗುತ್ತಾರೆ. ಈ ಪಾತ್ರದ ಯಶಸ್ಸು ಮೂಲ ತಮಿಳು ಸಿನಿಮಾದ ಬರಹಗಾರ ಅಶ್ವತ್ಥ್ ಮಾರಿಮುತ್ತು ಅವರಿಗೂ ಸಲ್ಲಬೇಕು.
ಹೀರೋ ಪಾತ್ರಕ್ಕೆ ಚಿತ್ರದಲ್ಲಿ ತುಂಬಾ ವೇರಿಯಷನ್ಸ್ ಇದೆ. ನಟನೆಗೆ ಹೆಚ್ಚು ಸ್ಕೋಪ್ ಇರುವ ಪಾತ್ರವನ್ನು ನಟ ಕೃಷ್ಣ ಸದ್ಬಳಕೆ ಮಾಡಿಕೊಂಡಿದ್ದಾರೆ. ‘ಚಾರ್ಲಿ’ ಸಿನಿಮಾದಲ್ಲಿ ಗಮನ ಸೆಳೆದಿದ್ದ ನಟಿ ಸಂಗೀತಾ ವೃತ್ತಿ ಬದುಕಿನಲ್ಲೂ ಇದು ಒಳ್ಳೆಯ ಪಾತ್ರ. ಸಾಧು ಕೋಕಿಲ ಮತ್ತು ನಾಗಭೂಷಣ್ ಪಾತ್ರಗಳ ತಮಾಷೆಯ ಮಾತುಗಳು ಚಿತ್ರದ ಓಘವನ್ನು ಸಲೀಸಾಗಿಸುತ್ತವೆ. ರಂಗಾಯಣ ರಘು ತಮ್ಮ ಪಾತ್ರವನ್ನು ಘನತೆಯಿಂದ ನಿರ್ವಹಿಸಿದ್ದಾರೆ. ಪುನೀತ್‌ರ ‘ದೇವರ’ ಪಾತ್ರಕ್ಕೆ ಬರೆದಿರುವ ಮಾತುಗಳು ಮನಸ್ಸಿಗೆ ನಾಟುತ್ತವೆ. ಚಿತ್ರ ಮುಗಿದ ನಂತರ ‘ಬಾರೋ ರಾಜ’ ಹಾಡಿನಲ್ಲಿ ಪ್ರಭುದೇವ ಜೊತೆ ಹೆಜ್ಜೆ ಹಾಕುವ ಪುನೀತ್ ರಾಜಕುಮಾರ್ ಮತ್ತೆ ಮತ್ತೆ ಕಾಡುತ್ತಾರೆ. ಮತ್ತೆ ಮತ್ತೆ ಕಾಣುತ್ತಾರೆ!