ಕಳೆದ ವಾರ ಬಿಡುಗಡೆಯಾಗಿದ್ದ ‘ತೋತಾಪುರಿ’ ಸಿನಿಮಾದ ಸಾಂಗ್‌ ಟೀಸರ್‌ ವಿವಾದ ಸೃಷ್ಟಿಸಿತ್ತು. ಇಂದು ಪೂರ್ಣ ವೀಡಿಯೋ ಸಾಂಗ್‌ ಬಿಡುಗಡೆಯಾಗಿದೆ. ಚಿತ್ರದ ನಿರ್ದೇಶಕ ವಿಜಯಪ್ರಸಾದ್‌ ರಚಿರಿಸುವ ಕನ್ನಡ ಮತ್ತು ಉರ್ದು ಮಿಶ್ರಿತ ಗೀತೆಗೆ ಅನೂಪ್‌ ಸಿಳೀನ್‌ ಸಂಗೀತ ಸಂಯೋಜಿಸಿದ್ದಾರೆ.

ಕಳೆದ ವಾರ ಬಿಡುಗಡೆಯಾಗಿದ್ದ ‘ತೋತಾಪುರಿ’ ಸಾಂಗ್‌ ಟೀಸರ್‌ನಲ್ಲಿ ಹಿಂದಿ, ಉರ್ದು ಪದಗಳೇ ಇವೆ ಎಂದು ಕೆಲವರು ಕಟಕಿಯಾಡಿದ್ದರು. ಸೋಷಿಯಲ್‌ ಮೀಡಿಯಾದಲ್ಲಿ ಪರ – ವಿರೋಧದ ಚರ್ಚೆಗಳು ನಡೆದಿದ್ದವು. ನಟ ಜಗ್ಗೇಶ್‌ ವೀಡಿಯೋ ಟ್ವೀಟ್‌ ಮಾಡಿ ತಮ್ಮ ಚಿತ್ರದ ನಿರ್ದೇಶಕರನ್ನು ಸಮರ್ಥಿಸಿಕೊಂಡಿದ್ದರು. ಇಂದು ಪೂರ್ಣ ವೀಡಿಯೋ ಸಾಂಗ್‌ ಬಿಡುಗಡೆಯಾಗಿದೆ. ಉರ್ದು ಮತ್ತು ಕನ್ನಡ ಪದಗಳ ಗೀತೆಯನ್ನು ನಿರ್ದೇಶಕ ವಿಜಯಪ್ರಸಾದ್‌ ರಚಿಸಿದ್ದು, ಅನೂಪ್‌ ಸಿಳೀನ್‌ ಸಂಗೀತ ಸಂಯೋಜಿಸಿದ್ದಾರೆ. ಅನನ್ಯಾ ಭಟ್‌, ವ್ಯಾಸರಾಜ್‌ ಸೋಸಲೆ ಮತ್ತು ಸುಪ್ರಿಯಾ ರಾಮ್‌ ಗಾಯಕರು. ಮುರಳಿ ನೃತ್ಯ ಸಂಯೋಜನೆಯಲ್ಲಿ ಹಾಡು ಅದ್ಧೂರಿಯಾಗಿ ಮೂಡಿಬಂದಿದೆ.

ಹಾಡಿನಲ್ಲಿ ನಿರ್ದೇಶಕ ವಿಜಯಪ್ರಸಾದ್‌ ತಮ್ಮ ಎಂದಿನ ಫ್ಲೇವರ್‌ ಕಾಪಾಡಿಕೊಂಡಿದ್ದಾರೆ. ಜಗ್ಗೇಶ್‌ ಮ್ಯಾನರಿಸಂ ಚೆನ್ನಾಗಿ ವರ್ಕ್‌ ಆಗಿದ್ದು, ನಾಯಕನಟಿ ಅದಿತಿ ಪ್ರಭುದೇವ ಅವರ ಸ್ಕ್ರೀನ್‌ಪ್ರಸೆನ್ಸ್‌ ಇಷ್ಟವಾಗುತ್ತದೆ. ಗೀತರಚನೆ, ಸಂಗೀತಕ್ಕೆ ಪೂರಕವಾದ ನೃತ್ಯ ಸಂಯೋಜನೆಯಿದ್ದು ಹಾಡಿನಲ್ಲೇ ಒಂದಿಷ್ಟು ಕತೆ ರಿವೀಲ್‌ ಆಗಿದೆ. ಟೀಸರ್‌ ನೋಡಿ ಕಟಕಿಯಾಡಿದ್ದವರು ಬಿಡುಗಡೆಯಾಗಿರುವ ವೀಡಿಯೋ ಸಾಂಗ್‌ಗೆ ಯಾವ ರೀತಿ ಪ್ರತಿಕ್ರಿಯಿಸುತ್ತಾರೋ ನೋಡಬೇಕು. ವಿಜಯಪ್ರಸಾದ್‌ ಮತ್ತು ಜಗ್ಗೇಶ್‌ ‘ನೀರ್‌ದೋಸೆ’ ನಂತರ ‘ತೋತಾಪುರಿ’ಯಲ್ಲಿ ಮತ್ತೆ ಜೊತೆಯಾಗಿದ್ದಾರೆ. ಈ ಸಿನಿಮಾ ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಸುಮನ್‌ ರಂಗನಾಥ್‌, ಧನಂಜಯ, ದತ್ತಣ್ಣ, ವೀಣಾ ಸುಂದರ್‌ ಚಿತ್ರದ ಇತರೆ ಪಾತ್ರಗಳಲ್ಲಿ ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here