ಬೆಳದಿಂಗಳಿಗಾಗಲಿ, ಪ್ರೇಮಗೀತೆಗಳಿಗಾಗಲಿ ಕಾಲದ ಚೌಕಟ್ಟು ಇರುವುದಿಲ್ಲ. ಒಂದು ಒಳ್ಳೆಯ ಪ್ರೇಮಗೀತೆ ಎಲ್ಲಾ ಕಾಲಕ್ಕೂ ಸಲ್ಲುತ್ತಲೇ ಇರುತ್ತದೆ. ‘ಯುದ್ಧದಿಂದ ಬರೆದ ಪ್ರೇಮಕಥೆ’ ಎನ್ನುವ ಟಾಗ್‌ಲೈನ್ ಜೊತೆಗೆ ಬಂದ ‘ಸೀತಾ ರಾಮಂ’ ಸಹ ಅಂತಹುದೇ ಒಂದು ಪ್ರೇಮಗೀತೆ. ಪ್ರೈಂ ವೀಡಿಯೋದಲ್ಲಿ ಸ್ಟ್ರೀಮ್‌ ಆಗುತ್ತಿದೆ ಸಿನಿಮಾ.

Casablanca ಅನೇಕ ಕಾರಣಗಳಿಂದ ಮುಖ್ಯವಾಗುವ ಚಿತ್ರ. ಚಲನಚಿತ್ರವನ್ನು ಕಲೆ ಮತ್ತು ಕಸುಬುದಾರಿಕೆಯನ್ನಾಗಿ ಅಧ್ಯಯನ ಮಾಡುವವರು ಈ ಚಿತ್ರದ ಹೆಸರನ್ನು ಉಲ್ಲೇಖಿಸುತ್ತಾರೆ. ಈ ಚಿತ್ರದಲ್ಲಿ ಒಂದು ಹಾಡಿದೆ,
‘You must remember this
A kiss is just a kiss, a sigh is just a sigh.
The fundamental things apply
As time goes by.
And when two lovers woo
They still say `I love you’.
On that you can rely

Moonlight and love songs
Never go out of date.
ಹೌದು ಬೆಳದಿಂಗಳಿಗಾಗಲಿ, ಪ್ರೇಮಗೀತೆಗಳಿಗಾಗಲಿ ಕಾಲದ ಚೌಕಟ್ಟು ಇರುವುದಿಲ್ಲ. ಒಂದು ಒಳ್ಳೆಯ ಪ್ರೇಮಗೀತೆ ಎಲ್ಲಾ ಕಾಲಕ್ಕೂ ಸಲ್ಲುತ್ತಲೇ ಇರುತ್ತದೆ. ‘ಯುದ್ಧದಿಂದ ಬರೆದ ಪ್ರೇಮಕಥೆ’ ಎನ್ನುವ ಟಾಗ್‌ಲೈನ್ ಜೊತೆಗೆ ಬಂದ ‘ಸೀತಾ ರಾಮಂ’ ಸಹ ಅಂತಹುದೇ ಒಂದು ಪ್ರೇಮಗೀತೆ.

ಒಂದು ಸಿನಿಮಾಕ್ಕೆ ಕಥೆ ಬೇಕೆ? ಬೇಕಿದ್ದರೆ ಅದು ಎಷ್ಟು ಮುಖ್ಯ? ಆ ಚಿತ್ರವನ್ನು ಪ್ರೇಕ್ಷಕರಿಗೆ ಹತ್ತಿರಾಗಿಸುವುದರಲ್ಲಿ ಕಥೆಯ ಪಾತ್ರ ಎಷ್ಟು? – ಸಿನಿಮಾದ ಬಗ್ಗೆ ಚರ್ಚಿಸುವಾಗ ಈ ಎಲ್ಲಾ ಪ್ರಶ್ನೆಗಳೂ ಮತ್ತೆಮತ್ತೆ ಎದುರಾಗುತ್ತಲೇ ಇರುತ್ತವೆ. ಅಪ್ರತಿಮ ನಿರ್ದೇಶಕನೊಬ್ಬ ಕಥೆಯ ಹೊರತಾಗಿಯೂ ಪ್ರೇಕ್ಷಕ ತನ್ನ ಚಿತ್ರದಲ್ಲಿ ಮುಳುಗಿರುವಂತೆ ಮಾಡಬಲ್ಲ. ಅನೇಕ ಅಸಂಗತ ಚಿತ್ರಗಳು ಈ ಕೆಲಸವನ್ನು ಮಾಡಿವೆ. ಕಮರ್ಷಿಯಲ್ ಸಿನಿಮಾಗಳ ಮಟ್ಟಿಗೆ ಹೇಳುವುದಾದರೆ ಕಥೆಯೇ ಇಲ್ಲದಿದ್ದರೂ ತಮ್ಮ ನೆಚ್ಚಿನ ಹೀರೋ, ಜಬರ್‌ದಸ್ತ್ ಫೈಟ್, ಮಸ್ತ್ ಡೈಲಾಗ್ ಎನ್ನುವ ಕಾರಣಕ್ಕೆ ಚಿತ್ರಗಳು ಓಡುವುದೂ ಉಂಟು. ಹೀರೋಗಿರಿ ಸುತ್ತಲೇ ಓಡುವ ಚಿತ್ರಗಳಲ್ಲಿ ಕಥೆ ಸೇರಿದಾಗ ಅದರ ಪರಿಣಾಮ ಇಮ್ಮಡಿಯಾಗುತ್ತದೆ. ಆದರೆ ಎಲ್ಲೋ ಕೆಲವು ಚಿತ್ರಗಳಲ್ಲಿ ಹೆಸರಾಂತ ಕಲಾವಿದರು ಪಾತ್ರ ನಿರ್ವಹಿಸುವಾಗಲೂ ಯಾವುದೇ ದೃಶ್ಯವನ್ನೂ ಆ ಹೀರೋಗಾಗಿ, ಆತ ಅಥವಾ ಆಕೆಯನ್ನು ಎತ್ತರಕ್ಕೆ ಏರಿಸಲಿಕ್ಕಾಗಿ ಕಟ್ಟದೆ ಪ್ರತಿಯೊಂದು ದೃಶ್ಯವೂ ಕಥೆಯನ್ನು ಮುನ್ನಡೆಸಲು, ಚೆಂದವಾಗಿಸಲು ಕಟ್ಟಿದರೆ ಆ ಚಿತ್ರಗಳು ನೋಡುವವರ ಮನಸ್ಸಿನಲ್ಲಿ ಉಳಿದುಹೋಗಿಬಿಡುತ್ತವೆ. ಒಂದೊಮ್ಮೆ ಹೀಗೆ ಕಥಾಪ್ರಧಾನ ಚಿತ್ರಗಳು ಬರುತ್ತಿದ್ದವು. ಹೀರೋ ಎಂದರೆ ಸೂಪರ್ ಫೈಟರ್ ಮಾತ್ರ ಆಗಿರಬೇಕಿರಲಿಲ್ಲ. ಆತ ಸೂಪರ್ ಹೂಮನ್ ಬೀಯಿಂಗ್ ಕೂಡ ಆಗಿರಬಹುದಿತ್ತು. ಕುತೂಹಲದ ವಿಷಯವೆಂದರೆ ಮಹಿಳಾ ಪ್ರೇಕ್ಷಕವರ್ಗ ಪ್ರಧಾನವಾಗಿ ಥಿಯೇಟರ್‌ಗಳಿಗೆ ಬರುತ್ತಿದ್ದಾಗ ಇಂತಹ ಚಿತ್ರಗಳು ಬರುತ್ತಿದ್ದವು. ಈಗಲೂ ಒಮ್ಮೊಮ್ಮೆ ಅಂತಹ ಚಿತ್ರಗಳು ಬಂದು ಬಿಸಿಬಿಸಿ ವಿಎಫ್‌ಎಕ್ಸ್ ನಡುವೆ ತಣ್ಣನೆಯ ಗಾಳಿ ಬೀಸಿದಂತಾಗುತ್ತದೆ. ಮೊನ್ನೆಮೊನ್ನೆ ನೋಡಿದ ‘ಅಶೋಕವನಂಲೋ ಅರ್ಜುನ ಕಲ್ಯಾಣಂ’ ಸಹ ಹೀಗೆಯೇ ಒಂದು ಕಥೆಯನ್ನೇ ಆಧರಿಸಿದ ಚಿತ್ರ. ಅಂತಹುದೇ ಚಿತ್ರ ‘ಸೀತಾ ರಾಮಂ’.

1965 ರಿಂದ 1985 ಈ ಕಥೆಯ ಕಾಲಘಟ್ಟ. ಈ 20 ವರ್ಷಗಳಲ್ಲಿ ನಡೆದ ಕತೆಗೆ ಒಂದು ಕಾಲಾತೀತವಾದ ಗುಣ ಇದ್ದು ನಿರ್ದೇಶಕ ಹನು ರಾಘವಪುಡಿ ಅದನ್ನು ಕಾವ್ಯಾತ್ಮಕವಾದ ಹೆಣಿಗೆಯಲ್ಲಿ ನೇಯ್ದಿದ್ದಾರೆ. ಪ್ರಧಾನವಾಗಿ ಕಾಶ್ಮೀರ ಮತ್ತು ಹೈದರಾಬಾದ್‌ನಲ್ಲಿ ನಡೆಯುವ ಈ ಕಥೆಯಲ್ಲಿ ಋತು ಮತ್ತು ಕಾಲಗಳು ಕಥೆಯ ಮೂಡ್ ಅನ್ನು ವಿಸ್ತರಿಸುತ್ತಾ ಹೋಗುತ್ತವೆ. ಪಾಕಿಸ್ತಾನದ ಅನ್ಸಾರಿ ಕಾಶ್ಮೀರದಲ್ಲಿ ಸ್ವಹಿತಾಸಾಕ್ತಿಯಿಂದ ನಡೆಸುವ ಒಂದು ಕಾರ್ಯಾಚರಣೆಯಿಂದ ಕಥೆ ಶುರುವಾಗುತ್ತದೆ. ಒಂದಿಷ್ಟು ಮುನ್ನುಡಿಯ ನಂತರ ಕಥೆ 20 ವರ್ಷಗಳಷ್ಟು ಜಿಗಿದು 1985ರಲ್ಲಿ ಲಂಡನ್‌ನಲ್ಲಿ ಓದುತ್ತಿರುವ ಉಗ್ರ ರಾಷ್ಟ್ರಪ್ರೇಮಿ ಪಾಕಿಸ್ತಾನಿ ಆಫ್ರೀನ್‌ಳ ಕಥೆಯಾಗಿ ಬದಲಾಗುತ್ತದೆ. ಚಿತ್ರದುದ್ದಕ್ಕೂ ವರ್ತಮಾನ ಮತ್ತು ಭೂತಕಾಲಗಳು ಕಾಲಕಾಲಕ್ಕೆ ಪ್ರಧಾನವಾಗುತ್ತಾ, ಸಂಧಿಸುತ್ತಾ ಬೆಳೆಯುತ್ತವೆ. ಕಥೆ ಇಲ್ಲಿ ಎರಡೂ ನೆಲೆಗಳಲ್ಲಿಯೂ ಬೆಳೆಯುತ್ತದೆ. ಯಾವ ಭಾಗವೂ ಇಲ್ಲಿ ನಿಂತ ನೀರಾಗಿಲ್ಲ. ಕಥೆಯ ಕೊನೆಯಲ್ಲಿಆ ಎರಡೂ ಬಿಂದುಗಳೂ ಸಂಧಿಸುತ್ತವೆ. ಆ ಆರ್ಕ್ ಬಹಳ ಚೆನ್ನಾಗಿ ಕಾಣಸಿಗುತ್ತದೆ. ಚಿತ್ರದ ಮಧ್ಯಂತರದಲ್ಲಿ ಮತ್ತು ಕಡೆಯಲ್ಲಿ ಕಥೆ ಅನೂಹ್ಯವಾದ ತಿರುವನ್ನು ಪಡೆದುಕೊಳ್ಳುತ್ತದೆ. ಹಾಗೆ ನೋಡಿದರೆ ಸುಮಾರು 2.45 ಗಂಟೆಗಳ ಅವಧಿಯ ಕಥೆ ಸ್ವಲ್ಪ ದೊಡ್ಡದೇ ಅನ್ನಿಸಿದರೂ ಸಿನಿಮಾ ಎಷ್ಟು ಆಸಕ್ತಿಕರವಾಗಿ ನೋಡಿಸಿಕೊಳ್ಳುತ್ತದೆ ಎಂದರೆ ಚಿತ್ರದ ಉದ್ದವನ್ನು ಕಡಿತಗೊಳ್ಳಿಸಬಹುದು ಎಂದುಕೊಂಡರೂ ಅದು ಬಹುಶಃ 10-15 ನಿಮಿಷಗಳಿಗಿಂತ ಹೆಚ್ಚಿರುವುದಿಲ್ಲ.

ಲಂಡನ್ನಿನಲ್ಲಿರುವ ಆಫ್ರೀನ್ ಭಾರತೀಯರೊಬ್ಬರ ಕಾರ್ ಮೇಲೆ ವಿಸ್ಕಿ ಸುರಿದು ಬೆಂಕಿ ಹಚ್ಚುತ್ತಾಳೆ. ಭಾರತೀಯರೆಂದರೂ, ಹಿಂದೂಗಳೆಂದರೂ ಅವಳಿಗೆ ಸಿಟ್ಟು. ಆ ಭಾರತೀಯನಿಗೆ ಸಾರಿ ಕೇಳುವುದು ಸಾಧ್ಯವೇ ಇಲ್ಲ, ಕಾಲೇಜಿನಿಂದ ಓಡಿಸಿದರೂ ಪರವಾಗಿಲ್ಲ ಎನ್ನುವವಳಿಗೆ ಆತ ಒಂದು ಆಯ್ಕೆ ಕೊಡುತ್ತಾನೆ. ಕ್ಷಮೆ ಕೇಳುವುದು ಅಥವಾ ಕಾರಿನ ನಷ್ಟ ಸುಮಾರು 10 ಲಕ್ಷ ರುಪಾಯಿಗಳನ್ನು ಕೊಡುವುದು. ಕ್ಷಮೆಯ ಪ್ರಶ್ನೆಯೇ ಇಲ್ಲ, ಅವಳು ಹಣ ತೆಗೆದುಕೊಂಡು ಬರಲೆಂದು ಪಾಕಿಸ್ತಾನಕ್ಕೆ ತಾತನಲ್ಲಿಗೆ ತೆರಳುತ್ತಾಳೆ. ತನ್ನನ್ನು ಬಲವಂತವಾಗಿ ಓದಲೆಂದು ಇಂಗ್ಲೆಂಡಿಗೆ ಕಳಿಸಿದರು ಎಂದು ತಾತನ ಮೇಲೆ ಅವಳಿಗೆ ಎಷ್ಟು ಸಿಟ್ಟಿರುತ್ತದೆ ಎಂದರೆ ಅದುವರೆಗೂ ಅವರೊಂದಿಗೆ ಯಾವುದೇ ಸಂಪರ್ಕವನ್ನು ಉಳಿಸಿಕೊಂಡಿರುವುದಿಲ್ಲ, ಮನೆಯಿಂದ ಬಂದ ಕರೆಗಳನ್ನು ಸ್ವೀಕರಿಸುವುದಿಲ್ಲ. ಆಕೆ ಅದೆಷ್ಟು ಸ್ವಾರ್ಥಿ, ಸ್ವಕೇಂದ್ರಿತ ವ್ಯಕ್ತಿತ್ವವುಳ್ಳವಳು ಎಂದರೆ ತಾತ ಸತ್ತು ಹೋಗಿರುವ ವಿಷಯ ಸಹ ಅವಳಿಗೆ ಗೊತ್ತಿರುವುದಿಲ್ಲ. ಆದರೆ ಅದು ಗೊತ್ತಾದ ಮೇಲೂ ಅವಳಲ್ಲಿ ಅಂತಹ ದುಃಖವೇನೂ ಉಕ್ಕುವುದಿಲ್ಲ. ‘ಸರಿ ಆಸ್ತಿ ಏನಾದರೂ ಬಿಟ್ಟು ಹೋಗಿರುತ್ತಾರಲ್ಲಾ, ಅದು ಕೊಡಿ. ನನಗೆ 10 ಲಕ್ಷ ರೂ ಬೇಕು’ ಎಂದು ವಕೀಲರನ್ನು ಕೇಳುತ್ತಾಳೆ. ಅವಳ ತಾತ ಅವಳಿಗೊಂದು ಪತ್ರ ಬಿಟ್ಟು ಹೋಗಿರುತ್ತಾರೆ. ಆ ಪತ್ರದೊಂದಿಗೆ ಇನ್ನೊಂದು ಪತ್ರ ಮತ್ತು ಸೇನಾಧಿಕಾರಿಯ ಬ್ಯಾಡ್ಜ್ ಇರುತ್ತದೆ. ಆ ಇನ್ನೊಂದು ಪತ್ರದ ಮೇಲೆ ಸೀತಾಮಹಾಲಕ್ಷ್ಮಿ ಎನ್ನುವ ಹೆಸರಿದ್ದು, ಹೈದರಾಬಾದಿನ ಒಂದು ಅರಮನೆಯ ವಿಳಾಸ ಇರುತ್ತದೆ. ತಾತ ಅವಳಿಗೆ ಬರೆದ ಪತ್ರದಲ್ಲಿ ಆಸ್ತಿ ಬೇಕಾದರೆ ಅವಳೊಂದು ಕೆಲಸ ಮಾಡಬೇಕು ಎನ್ನುವ ನಿಬಂಧನೆ ಇರುತ್ತದೆ. ಆಫ್ರೀನ್ ಆ ಪತ್ರವನ್ನು ಆ ಸೀತಾಮಹಾಲಕ್ಷ್ಮಿಗೆ ತಲುಪಿಸಬೇಕು. ಅದನ್ನು ಪೋಸ್ಟ್ ಮಾಡಿ ಕಳಿಸಲಾಗುವುದಿಲ್ಲ, ಏಕೆಂದರೆ ಎರಡು ಸಲ ಆ ಪತ್ರ ‘ವಿಳಾಸದಾರರು ಸಿಕ್ಕಿಲ್ಲ’ ಎನ್ನುವ ಶರಾದೊಂದಿಗೆ ವಾಪಸ್ಸಾಗಿರುತ್ತದೆ. ಪತ್ರವನ್ನು ಅವಳೇ ಮುಟ್ಟಿಸಬೇಕು. ಅದಕ್ಕೂ ಒಂದು ಮುಖ್ಯ ಕಾರಣವಿರುತ್ತದೆ.

ಥೇಟ್ ಇದೇ ರೀತಿಯಲ್ಲಿ ಶುರುವಾಗುವ ಇನ್ನೊಂದು ಚಿತ್ರವನ್ನು ನಾನು ಬೆಂಗಳೂರಿನ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ ನಲ್ಲಿ ನೋಡಿದ್ದೆ. ಅದು Letters from Prague. ಅಲ್ಲಿಯೂ ಇದೇ ರೀತಿ ತಾಯಿ ತನ್ನ ನಂತರ ತನ್ನ ಪಾಲಿನ ಆಸ್ತಿಗಾಗಿ ಕಾದಿರುವ ಮಗಳಿಗೆ ಇಂಥದ್ದೇ ಒಂದು ಕಂಡಿಷನ್ ಹಾಕುತ್ತಾಳೆ. ಪತ್ರ ತಲುಪಿಸುವ ಯಾನ ಕೈಗೊಳ್ಳುವ ಆ ಹುಡುಗಿ ಆ ರಸ್ತೆಯ ತುದಿಯಲ್ಲಿ ತಾನೂ ಬದಲಾಗಿರುತ್ತಾಳೆ. ಇಲ್ಲಿ ಆಫ್ರೀನ್ ಸಹ ಹೀಗೆ ಬದಲಾಗುವಳೆ? ಚಿತ್ರದಲ್ಲಿ ಮುಖ್ಯ ಟ್ರ್ಯಾಕ್ ಆಗದಿದ್ದರೂ, ಆಗಿರುವ ಟ್ರ್ಯಾಕ್ ಇದು. ವಿಧಿಯಿಲ್ಲದೆ ಆ ಪತ್ರ ಮತ್ತು ಬ್ಯಾಡ್ಜ್ ಹಿಡಿದು ಅವಳು ಭಾರತಕ್ಕೆ ಬರುತ್ತಾಳೆ. ಅವಳದೇ ಕಾಲೇಜಿನಲ್ಲಿ ಓದಿ ಈಗ ಹೈದರಾಬಾದಿನಲ್ಲಿರುವ ಸೀನಿಯರ್ ಒಬ್ಬ ಅವಳ ಹುಡುಕಾಟಕ್ಕೆ ನೆರವಾಗುತ್ತಾನೆ. ಆ ಅರಮನೆಯ ವಿಳಾಸಕ್ಕೆ ಹೋದರೆ ಸೀತಾಮಹಾಲಕ್ಷ್ಮಿಯ ಇರುವಿಕೆಯೇ ಯಾರಿಗೂ ಗೊತ್ತಿಲ್ಲ. ಆ ಅರಮನೆಯನ್ನು ರಾಜಕುಮಾರಿ ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ದಾನವಾಗಿ ಕೊಟ್ಟಿದ್ದಾಳೆ. ಅರಮನೆಯ ಹಳೆಯ ದಸ್ತಾವೇಜುಗಳಲ್ಲಿ ಅವಳ ಹೆಸರಿಲ್ಲ. ರಸ್ತೆಯ ಕೊನೆಗೆ ಬಂದೆನೇನೋ ಅಂದು ಕೊಳ್ಳುವ ಅವಳು ಪತ್ರದ ಇನ್ನೊಂದು ತುದಿಯಲ್ಲಿದ್ದ ರಾಮ್ ಮೂಲಕ ಏಕೆ ಹುಡುಕಬಾರದು ಎಂದು ಹೊರಟಾಗ ಲೆಫ್ಟಿನೆಂಟ್ ರಾಮ್ ನ ಗೆಳೆಯನೊಬ್ಬನ ವಿಳಾಸ ಸಿಕ್ಕುತ್ತದೆ. ರಾಮ ಮತ್ತು ಸೀತೆಯರ ಕಥೆ ಅನಾವರಣಗೊಳ್ಳುತ್ತಾ ಹೋಗುತ್ತದೆ.

ಒಂದು ಕಾರ್ಯಾಚರಣೆಯ ಕಾರಣಕ್ಕೆ ರಾಷ್ಟ್ರೀಯ ಹೀರೋ ಆದ ರಾಮ್ ಮತ್ತು ಅವನ ಸ್ನೇಹಿತರನ್ನು ಆಕಾಶವಾಣಿಯ ಹಿರಿಯ ಸಂದರ್ಶಕಿಯೊಬ್ಬರು ಸಂದರ್ಶನ ಮಾಡಿರುತ್ತಾರೆ. ಆಗ ರಾಮ್ ತನಗಾರೂ ಇಲ್ಲ, ತಾನೊಬ್ಬ ಅನಾಥ ಎಂದು ಹೇಳಿರುತ್ತಾನೆ. ಆಕಾಶವಾಣಿಯ ಕಾರ್ಯಕ್ರಮ ಪ್ರಸಾರವಾದಾಗ ಆ ಸಂದರ್ಶಕಿ ಆ ವಿಷಯ ಪ್ರಸ್ತಾಪಿಸಿ ಒಂದೂ ಪತ್ರ ಬರದ ರಾಮ್ ಎನ್ನುವ ನನ್ನ ಮಗನಿಗೆ ನಿನ್ನೆ ನಾನೊಂದು ಪತ್ರ ಬರೆದೆ, ನೀವೂ ಬರೀತೀರಲ್ಲ ಎಂದು ಹೇಳಿರುತ್ತಾರೆ. ಪತ್ರಗಳು ಬರುತ್ತವೆ, ಬರುತ್ತವೆ, ಮೂಟೆ ತುಂಬಾ ಬರುತ್ತವೆ!

ಕೆಲವೊಂದು ದೃಶ್ಯಗಳನ್ನು ಕಾವ್ಯಮಯವಾಗಿ, ನಯನ ಮನೋಹರವಾಗಿ ಕಟ್ಟಿದ್ದರೂ ಅದು ಸಂಜಯ್ ಲೀಲಾ ಬನ್ಸಾಲಿಯ ಅತಿ ಸೌಂದರ್ಯದ ಹಪಾಹಪಿಯಿಂದ ಪಾರಾಗಿದೆ ಎನ್ನುವುದು ಪುಣ್ಯ! ಯಾರೋ ಮಗನೇ ಎಂದಿರುತ್ತಾರೆ, ಯಾರಿಗೋ ಅಣ್ಣ, ತಮ್ಮ, ಸ್ನೇಹಿತ… ರಾಧಿಕಾ ಎನ್ನುವ ಹೆಣ್ಣೊಬ್ಬಳು ಅಣ್ಣಾ ನಿನಗೊಬ್ಬ ಸೊಸೆ ಹುಟ್ಟಿದ್ದಾಳೆ, ನೀನು ಬಂದಾಗ ಅವಳಿಗೆ ಕಿವಿ ಚುಚ್ಚಿಸೋಣ ಎಂದು ಹೇಳಿ, ಡಬ್ಬಿ ತುಂಬಾ ಕಜ್ಜಾಯ ಕಳಿಸಿರುತ್ತಾಳೆ! ಇಡೀ ರಾತ್ರಿ ಅವನು ಆ ಪತ್ರಗಳಿಗೆ ಉತ್ತರ ಬರೆದಿರುತ್ತಾನೆ. ಅನಾಥ ಎಂದುಕೊಂಡವನಿಗೆ ಪತ್ರಗಳು ದೇಶದ ತುಂಬಾ ನೆಂಟರನ್ನು ಕೊಟ್ಟಿರುತ್ತವೆ.

ಮೂಟೆಯಿಂದ ಅವನು ಬಗ್ಗಿಸಿದಾಗ ಜಾರಿ ತಪ್ಪಿಸಿಕೊಂಡ ಪತ್ರವೊಂದು ಮರುದಿನ ಅವನ ಕೈಸೇರುತ್ತದೆ. ಇದು ಅವನ ಜೀವನವನ್ನೇ ಬದಲಾಯಿಸಿದ ಪತ್ರ. ಪತ್ರ ಬರೆದಾಕೆಯೇ ಸೀತಾಮಹಾಲಕ್ಷ್ಮಿ. ಅವಳು ದಬಾಯಿಸಿ ಪತ್ರ ಬರೆದಿರುತ್ತಾಳೆ! ‘ಅನಾಥ ಅಂದುಬಿಟ್ಟಿರಲ್ಲ, ಕೈ ಹಿಡಿದು ಅಗ್ನಿ ಸುತ್ತಲೂ ಏಳು ಹೆಜ್ಜೆ ನಡೆದ ಹೆಂಡತಿಯನ್ನು ಮರೆತೇ ಬಿಟ್ಟಿರುವಿರಲ್ಲ’ ಎಂದು ಜೋರು ಮಾಡಿರುತ್ತಾಳೆ. ನೋಡಿದರೆ ಪತ್ರದ ಹಿಂದೆ ಕಳಿಸಿದವರ ವಿಳಾಸವಿಲ್ಲ. ದುಲ್ಕೇರ್‌ನ ವ್ಯಕ್ತಿತ್ವದಲ್ಲೇ ಇರುವ ಚಾರ್ಮ್ ಈ ಸನ್ನಿವೇಶದಲ್ಲಿ ಅವನನ್ನು ಮತ್ತಷ್ಟು ಪ್ರೀತಿಪಾತ್ರನನ್ನಾಗಿಸುತ್ತದೆ. ಆ ಪತ್ರಗಳು ಬರುತ್ತಾ ಹೋಗುತ್ತವೆ, ಇವನು ಹುಚ್ಚಾಗುತ್ತಾ ಹೋಗುತ್ತಾನೆ. ಅವಳೊಮ್ಮೆ ತಮ್ಮಿಬ್ಬರ ಪರಿಚಯ ಹೇಗಾಯಿತು ಎಂದು ನೆನಪು ಮಾಡಿಕೊಳ್ಳುತ್ತಾ, ‘ಕುರುಕ್ಷೇತ್ರದಲ್ಲಿ ರಾವಣ ಸಂಹಾರ, ಅಗ್ನಿವರ್ಷದ ನಡುವೆ ಸೀತಾ ಸ್ವಯಂವರ’ ಎಂದು ಹೇಳಿರುತ್ತಾಳೆ. ಚಿತ್ರ ಮುಂದುವರೆದಂತೆ ಇದಕ್ಕೊಂದು ಸಮರ್ಪಕ ವಿವರಣೆಯೂ ಸಿಕ್ಕುತ್ತದೆ! ಕಡೆಗೆ ಪತ್ರದಲ್ಲಿನ ಯಾವುದೋ ಸುಳಿವನ್ನು ಹಿಡಿದು ಅವನು ಅವಳನ್ನು ಹುಡುಕಿಯೇ ಬಿಡುತ್ತಾನೆ. ಮೊದಲ ಭೇಟಿಯಲ್ಲಿ ಅವನು ಹೆಚ್ಚಿಗೇನೂ ಮಾತನಾಡುವುದಿಲ್ಲ. ಅವಳ ಕೈಗೆ ಪತ್ರಗಳ ಕಂತೆಯೊಂದನ್ನಿಡುತ್ತಾನೆ. ಪೋಸ್ಟ್ ಮಾಡದಿದ್ದರೂ ಅವಳ ಪ್ರತಿ ಪತ್ರಕ್ಕೂ ಅವನೊಂದು ಉತ್ತರದ ಪತ್ರ ಬರೆದಿರುತ್ತಾನೆ.

ಅವರಿಬ್ಬರ ಭೇಟಿಯ ಪ್ರತಿ ದೃಶ್ಯಕ್ಕೂ ಕಾವ್ಯಾತ್ಮಕ ಗುಣವಿದೆ. ಪ್ರತಿಯೊಂದೂ ಒಂದೊಂದು ಪ್ರೇಮಕವಿತೆಯೇ ಸರಿ. ಅಷ್ಟೆಲ್ಲಾ ಕನ್ನಡಿಗಳು, ಗಾಜಿನ ದೀಪಗಳು, ಕಾರ್ಪೆಟ್‌ಗಳು, ಆಂಟಿಕ್ ವಸ್ತುಗಳು ಅವರ ಭೇಟಿಗೆ ಹಿನ್ನೆಲೆ ಮತ್ತು ಚೌಕಟ್ಟು ಎರಡನ್ನೂ ನಿರ್ಮಿಸುತ್ತವೆ. ಅವರಿಬ್ಬರ ನಡುವಣ ಪ್ರೀತಿ, ಅದಕ್ಕೆ ಒದಗುವ ಆಂತರಿಕ ಮತ್ತು ಬಾಹ್ಯ ಘರ್ಷಣೆ, ಅವರಿಬ್ಬರ ತೊಳಲಾಟ ಎಲ್ಲವೂ ಕಥೆಯನ್ನು ಬೆಳೆಸುತ್ತಾ ಹೋಗುತ್ತದೆ.

ಚಿತ್ರದಲ್ಲಿ ಅತ್ಯಂತ ಶಕ್ತಿಶಾಲಿಯಾಗಿ ಬಂದಿರುವ ದೃಶ್ಯ ರಾಮ್ ಮತ್ತು ರಾಧಿಕಾರ ಭೇಟಿ. ಪತ್ರದಲ್ಲಿ ಅವಳು ಅವನನ್ನು ಅಣ್ಣಾ ಎಂದೇ ಏಕೆ ಕರೆದಳು ಎಂದು ನಮಗೆ ಅರಿವಾದಾಗ ವಿಷಾದ ಆವರಿಸಿಕೊಳ್ಳುತ್ತದೆ. ಇಲ್ಲಿ ಯಾವುದೇ ಪಾತ್ರ ಕೇವಲ ಒಂದು ದೃಶ್ಯಕ್ಕಾಗಿ, ಅಥವಾ ಎಫೆಕ್ಟ್‌ಗಾಗಿ ಸೃಷ್ಟಿಯಾಗಿಲ್ಲ. ರಾಧಿಕಾ ಮತ್ತೆ ಚಿತ್ರದ ಕಡೆಯ ಭಾಗದಲ್ಲಿ ಕಾಣಿಸಿಕೊಳ್ಳುತ್ತಾಳೆ. ಸೈನಿಕ ದಾಳಿಯಲ್ಲಿ ರಾಮ್ ಕಾಪಾಡುವ ಆ ಮಗು ಕೇವಲ ಅವನು ಒಳ್ಳೆಯವನು ಎಂದು ತೋರಿಸಲು ಸೃಷ್ಟಿಯಾಗಿದ್ದಲ್ಲ, ಕಥೆಯಲ್ಲಿ ಆ ಮಗುವಿಗೆ ಒಂದು ಮುಖ್ಯ ಪಾತ್ರವಿದೆ. ಸಣ್ಣಸಣ್ಣ ವಿಷಯಗಳ ಬಗೆಗೂ ಗಮನ ಕೊಡಲಾಗಿದೆ, ಆದರೆ ಆ ಬಗ್ಗೆ ಅಬ್ಬರ ಇಲ್ಲ. ಸೈನಿಕರ ಕ್ಯಾಂಪ್‌ಗೆ ಮೂರುದಿನಗಳಿಂದ ಆಹಾರ ಸರಬರಾಜಾಗಿಲ್ಲ ಎನ್ನುವುದನ್ನು ಕೇಳಿ, ಸೈನ್ಯಾಧಿಕಾರಿ ಪಾತ್ರದ ಗೌತಮ್ ಮೆನನ್ ಕೈಲಿರುವ ಸ್ಯಾಂಡ್‌ವಿಚ್ ಕೆಳಗೆ ಇಡುವಾಗ ಯಾವುದೇ ಸಂಗೀತದ ಸಾಥ್ ಆಗಲಿ, ಫೋಕಸ್ ಆಗಲಿ ಮಾಡುವುದಿಲ್ಲ. ಒಂದೊಮ್ಮೆ ಮೂಟೆಯಲ್ಲಿ ಬಂದ ಪತ್ರಗಳ ಸಂಖ್ಯೆ ನಿಧಾನವಾಗಿ ಕಡಿಮೆಯಾಗುತ್ತಾ ಹೋಗುತ್ತದೆ, ಅವನು ಎಲ್ಲದಕ್ಕೂ ಉತ್ತರ ಬರೆದರೂ ಕೂಡ. ರೈಲಿನ ಬೋಗಿಯಲ್ಲಿ ಟಿಸಿ ‘ಇದೇ ಕಡೆಯ ಕೂಪೆ’ ಎಂದು ಹೇಳುವಾಗ ಅವನು ಅನುಭವಿಸುವ ಹಿಂಜರಿಕೆ, ಭಯ ಎಲ್ಲವೂ ಅತ್ಯಂತ ಸೂಕ್ಷ್ಮ ಮತ್ತು ಯಾವುದೂ over rated ಅಲ್ಲ. ಚಿತ್ರದಲ್ಲಿ ಬಹುತೇಕ ಪಾತ್ರಗಳಿಗೆ ಬೆಳವಣಿಗೆ ಇದೆ. ಕೆಲವು ಪೋಷಕ ಪಾತ್ರಗಳು ಇದ್ದೇನಯ್ಯ ಇದ್ದೂ ಇಲ್ಲದಂತೆ ಎನ್ನುವಂತೆಯೂ ಇದೆ. ಆ ಪಾತ್ರಗಳಿಗೆ ಆರಿಸಿಕೊಂಡ ಕಲಾವಿದರೂ ಅದೇ ಅದೇ ನಟನೆಯನ್ನು ಹಲವಾರು ಚಿತ್ರಗಳಲ್ಲಿ ಮಾಡಿರುವುದರಿಂದ ನಮಗೆ ಅವೆಲ್ಲವೂ ಪುನರಾವರ್ತನೆ ಅನ್ನಿಸಿ ಬಿಡುತ್ತವೆ.
ಈ ಮೊದಲೇ ಹೇಳಿದಂತೆ,
Moonlight and love songs
Never go out of date.
ಸೀತಾರಾಮಂ ಒಂದು ಸುಂದರ ಪ್ರೇಮಕವಿತೆ.

LEAVE A REPLY

Connect with

Please enter your comment!
Please enter your name here