‘ಪ್ರೇಮಲೋಕ 2’ ಸಿನಿಮಾದ ನಾಯಕಿಯಾಗಿ ತಮಿಳು ನಟಿ ತೇಜು ಅಶ್ವಿನಿ ನಟಿಸಲಿದ್ದಾರೆ ಎನ್ನುವ ಸುದ್ದಿ ಹೊರಬಿದ್ದಿದೆ. ರವಿಚಂದ್ರನ್‌ ನಿರ್ದೇಶನದ ಮಹತ್ವಾಕಾಂಕ್ಷೆಯ ಚಿತ್ರವಿದು. ಅವರ ಹಿರಿಯ ಪುತ್ರ ಮನೋರಂಜನ್‌ ಹೀರೋ ಆಗಿ ನಟಿಸಲಿದ್ದಾರೆ. ಚಿತ್ರದ ವಿಶೇಷ ಪಾತ್ರದಲ್ಲಿ ಕಿರಿಯ ಪುತ್ರ ವಿಕ್ರಂ ಕಾಣಿಸಿಕೊಳ್ಳಲಿದ್ದಾರೆ.

ರವಿಚಂದ್ರನ್‌ ನಟಿಸಿ, ನಿರ್ದೇಶಿಸಿದ್ದ ‘ಪ್ರೇಮಲೋಕ’ ಕನ್ನಡ ಚಿತ್ರರಂಗದ ಮೈಲುಗಲ್ಲು. ತಮ್ಮ ಪುತ್ರನಿಗಾಗಿ ಅಂಥದ್ದೊಂದು ದೊಡ್ಡ ಸಿನಿಮಾ ಮಾಡಬೇಕೆನ್ನುವುದು ರವಿಚಂದ್ರನ್‌ ಅವರ ಹಲವು ವರ್ಷಗಳ ಕನಸು. ವರ್ಷಗಳ ಹಿಂದೆಯೇ ಅವರು ‘ಪ್ರೇಮಲೋಕದಲ್ಲಿ ರಣಧೀರ’ ಸಿನಿಮಾ ಶುರು ಮಾಡಿದ್ದರು. ಸಾಕಷ್ಟು ತಯಾರಿಯೂ ನಡೆದಿತ್ತು. ಕಾರಣಾಂತರಗಳಿಂದ ಸಿನಿಮಾ ಸೆಟ್ಟೇರಲಿಲ್ಲ. ಇದೀಗ ಅವರು ಚಿತ್ರದ ಶೀರ್ಷಿಕೆಯನ್ನು ‘ಪ್ರೇಮಲೋಕ 2’ ಎಂದು ಬದಲಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆಯೇ ಆದರೆ ಸಿನಿಮಾ ಇದೇ ಮೇ 30ರಂದು ಸೆಟ್ಟೇರಲಿದೆ. ಈಗ ಬಂದಿರುವ ಮಾಹಿತಿಯ ಪ್ರಕಾರ ಈ ಚಿತ್ರದ ನಾಯಕಿಯಾಗಿ ತಮಿಳು ನಟಿ ತೇಜು ಅಶ್ವಿನಿ ನಟಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

‘ಈ ಸಿನಿಮಾ ಎಲ್ಲಾ ವಯೋಮಾನದವರಿಗೂ ಕಾಡುತ್ತದೆ. ಚಿತ್ರದಲ್ಲಿ ಪ್ರೀತಿ ಇರುತ್ತದೆ, ಜಾತಿಗೆ ಜಾಗವಿಲ್ಲ. ನನಗೆ ಪ್ರೀತಿ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಚಿತ್ರದ ತುಂಬಾ ಪ್ರೀತಿಯೇ ಇರುತ್ತದೆ’ ಎನ್ನುವುದು ಚಿತ್ರದ ಕುರಿತಾದ ರವಿಚಂದ್ರನ್‌ ಮಾತು. ಸಿನಿಮಾಗಾಗಿ ಸುಮಾರು 25 ಹಾಡುಗಳನ್ನು ಮಾಡುವುದು ಅವರ ಯೋಜನೆ! ರವಿ ಅವರ ಹಿರಿಯ ಪುತ್ರ ಮನೋರಂಜನ್‌ ಹೀರೋ ಆಗಿ ನಟಿಸಲಿರುವ ಚಿತ್ರದ ವಿಶೇಷ ಪಾತ್ರದಲ್ಲಿ ಕಿರಿಯ ಪುತ್ರ ವಿಕ್ರಂ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕಾಗಿ ಇಬ್ಬರೂ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು, ಚಿತ್ರದ ನಾಯಕಿಯಾಗಿ ತೇಜು ಅಶ್ವಿನಿ ನಟಿಸುವುದು ಬಹುತೇಕ ಖಚಿತ ಎಂದು ಮೂಲಗಳು ಹೇಳುತ್ತವೆ. ಮೂಲತಃ ನೃತ್ಯ ಸಂಯೋಜಕಿ ಆದ ತೇಜು ನಟಿಯಾಗಿಯೂ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ.

LEAVE A REPLY

Connect with

Please enter your comment!
Please enter your name here