ಅಜಯ್‌ ಭೂಪತಿ ನಿದೇಶನದ ‘ಮಂಗಳವಾರಂ’ ತೆಲುಗು ಸಿನಿಮಾದ ಎರಡನೇ ಸಾಂಗ್‌ ಬಿಡುಗಡೆಯಾಗಿದೆ. ಈ ಸಿನಿಮಾ ಕನ್ನಡದಲ್ಲೂ ತೆರೆಕಾಣುತ್ತಿದೆ. ಹಾಡಿನ ಕನ್ನಡ ಅವತರಣಿಕೆಯೂ ರಿಲೀಸ್‌ ಆಗಿದ್ದು, ಹರ್ಷಿಕಾ ದೇವನಾಥ್‌ ಈ ಹಾಡಿಗೆ ದನಿಯಾಗಿದ್ದಾರೆ. ವಿ ನಾಗೇಂದ್ರ ಪ್ರಸಾದ್‌ ರಚನೆಯ ಈ ಹಾಡಿಗೆ ಬಿ ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜಿಸಿದ್ದಾರೆ.

ಟಾಲಿವುಡ್​ನಲ್ಲಿ ನಿರ್ದೇಶಕ ಅಜಯ್ ಭೂಪತಿ ಅವರು ತಮ್ಮ ಛಾಪು ಮೂಡಿಸಿದ್ದಾರೆ. ‘ಆರ್​ಎಕ್ಸ್ 100’ ತೆಲುಗು ಚಿತ್ರದಿಂದ ಅವರಿಗೆ ಜನಪ್ರಿಯತೆ ಸಿಕ್ಕಿತ್ತು. ಈಗ ಅವರು ‘ಮಂಗಳವಾರಂ’ ಸಿನಿಮಾದ ಮೂಲಕ ತೆಲುಗು ಚಿತ್ರರಂಗ ಮಾತ್ರವಲ್ಲದೇ ಇತರೆ ಭಾಷೆಗಳಲ್ಲೂ ಸದ್ದು ಮಾಡಲು ಹೊರಟಿದ್ದಾರೆ. ಈ ಸಿನಿಮಾದ ಎರಡನೇ ಸಾಂಗ್‌ ರಿಲೀಸ್‌ ಆಗಿದೆ. ‘ಮಂಗಳವಾರಂ’ ಕನ್ನಡ ಅವತರಣಿಕೆಯೂ ತೆರೆಕಾಣಲಿದ್ದು, ಸದ್ಯ ಹಾಡಿನ ಕನ್ನಡ ವರ್ಷನ್‌ ಬಿಡುಗಡೆಯಾಗಿದೆ. ವಿ ನಾಗೇಂದ್ರ ಪ್ರಸಾದ್‌ ರಚನೆಯ ‘ನಿನ್ನಲ್ಲಿ ನಾ’ ಹಾಡಿಗೆ ಅಜನೀಶ್‌ ಲೋಕನಾಥ್‌ ಸಂಗೀತವಿದ್ದು, ಹರ್ಷಿಕಾ ದೇವನಾಥ್‌ ಹಾಡಿದ್ದಾರೆ. ಪಾಯಲ್‌ ರಜಪೂತ್‌ ಮತ್ತು ಅಜ್ಮಲ್‌ ಅವರ ಮೇಲೆ ಈ ರೊಮ್ಯಾಂಟಿಕ್‌ ಹಾಡು ಪಿಕ್ಚರೈಸ್‌ ಆಗಿದೆ. ಸ್ವಾತಿ ಗುಣಪತಿ ಮತ್ತು ಸುರೇಶ್ ವರ್ಮಾ ಅವರ ‘ಮುದ್ರಾ ಮೀಡಿಯಾ ವರ್ಕ್ಸ್’ ಮತ್ತು ಅಜಯ್ ಭೂಪತಿ ಒಡೆತನದ ‘ಎ ಕ್ರಿಯೇಟಿವ್ ವರ್ಕ್ಸ್’ ಸಂಸ್ಥೆಗಳು ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸಿವೆ.

ನಿರ್ದೇಶಕನಾಗಿ ಗಮನ ಸೆಳೆದಿದ್ದ ಅಜಯ್ ಭೂಪತಿ ಅವರು ‘ಮಂಗಳವಾರಂ’ ಸಿನಿಮಾದಿಂದ ನಿರ್ಮಾಪಕರಾಗಿಯೂ ಬಡ್ತಿ ಪಡೆಯುತ್ತಿದ್ದಾರೆ. ಟೀಸರ್ ಮೂಲಕ ಗಮನಸೆಳೆದಿರುವ ಚಿತ್ರತಂಡ ಈಗ ಹಾಡುಗಳ ಮೂಲಕ ಪ್ರೇಕ್ಷಕರಲ್ಲಿ ಸಿನಿಮಾ ಕುರಿತು ಆಸಕ್ತಿ ಮೂಡಿಸುತ್ತಿದೆ. ಅಜಯ್ ಘೋಷ್, ಚೈತನ್ಯ ಕೃಷ್ಣ, ಲಕ್ಷ್ಮಣ್ ಚಿತ್ರದ ಇತರೆ ಪ್ರಮುಖ ಕಲಾವಿದರು. ದಶರಥಿ ಶಿವೇಂದ್ರ ಛಾಯಾಗ್ರಹಣ, ರಘು ಕುಲಕರ್ಣಿ ಕಲಾ ನಿರ್ದೇಶನ ಚಿತ್ರಕ್ಕಿದೆ. ಸಾಯಿಕುಮಾರ್ ಯಡವಲ್ಲಿ ಅವರು ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಅಜನೀಶ್​ ಲೋಕನಾಥ್​ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ನವೆಂಬರ್‌ 17ರಂದು ಮೂಲ ತೆಲುಗು ಸೇರಿದಂತೆ ಕನ್ನಡ, ಹಿಂದಿ, ಮಲಯಾಳಂ ಮತ್ತು ತಮಿಳಿನಲ್ಲಿ ‘ಮಂಗಳವಾರಂ’ ಸಿನಿಮಾ ಬಿಡುಗಡೆ ಆಗಲಿದೆ.

LEAVE A REPLY

Connect with

Please enter your comment!
Please enter your name here