ರಾಮ್ ಮದ್ವಾನಿ ನಿರ್ದೇಶನದ ‘ಧಮಾಕಾ’ ಹಿಂದಿ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಇದೊಂದು ನ್ಯೂಸ್‌ರೂಂ ಥ್ರಿಲ್ಲರ್ – ಡ್ರಾಮಾ. ಯುವನಟ ಕಾರ್ತಿಕ್ ಆರ್ಯನ್‌ ಅಭಿನಯದ ಚಿತ್ರ ನವೆಂಬರ್‌ 19ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ.

ಕಾರ್ತೀಕ್ ಆರ್ಯನ್‌ ನಟನೆಯ ‘ಧಮಾಕಾ’ ಹಿಂದಿ ಸಿನಿಮಾದ ಮೊದಲ ಟ್ರೈಲರ್ ಬಿಡುಗಡೆಯಾಗಿದೆ. ಕಾರ್ತೀಕ್ ಚಿತ್ರದಲ್ಲಿ ಪ್ರೈಮ್‌ಟೈಂ ನ್ಯೂಸ್ ಆಂಕರ್‌ ‘ಅರ್ಜುನ್ ಪಾಠಕ್‌’ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೈಮ್‌ಟೈಂ ಸುದ್ದಿಯ ಸಂದರ್ಭದಲ್ಲಿ ನ್ಯೂಸ್‌ರೂಂಗೆ ಬರುವ ಟೆರರಿಸ್ಟ್ ಫೋನ್ ಕಾಲ್‌ ಎಲ್ಲಾ ಬದಲಾವಣೆಗೆ ಕಾರಣವಾಗುತ್ತದೆ. ಇದೊಂದು ಪ್ರ್ಯಾಂಕ್‌ ಕಾಲ್ ಎಂದು ಆಂಕರ್‌ ಕಟ್ ಮಾಡುವ ಹೊತ್ತಿಗೆ ಆಕಸ್ಮಿಕವೊಂದು ಸಂಭವಿಸುತ್ತದೆ. ಮುಂಬಯಿಯ ತನ್ನ ನ್ಯೂಸ್‌ರೂಂನ ಕಣ್ಣಳತೆಯ ದೂರದಲ್ಲಿ ಬಾಂಬ್ ಬ್ಲಾಸ್ಟ್‌ಗೆ ಅವನು ಸಾಕ್ಷಿಯಾಗುತ್ತಾನೆ. ಚಾನೆಲ್‌ ಟಿಆರ್‌ಪಿ ಜೊತೆಗೆ ಆಂಕರ್ ತನ್ನ ಜೀವವನ್ನೂ ಪಣಕ್ಕೊಡ್ಡುವ ಸಂದರ್ಭ ಎದುರಾಗುತ್ತದೆ. ಟ್ರೈಲರ್‌ನಲ್ಲಿ ಸಾಕಷ್ಟು ಥ್ರಿಲ್ಲಿಂಗ್ ಸನ್ನಿವೇಶಗಳಿದ್ದು, ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ.

ಈ ಚಿತ್ರವನ್ನು ಮೊದಲ ಥಿಯೇಟರ್‌ಗಳಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಯೋಜಿಸಿದ್ದರು. ನಿರ್ಧಾರ ಬದಲಾಗಿದ್ದು ನವೆಂಬರ್ 19ರಂದು ಸಿನಿಮಾ ನೇರವಾಗಿ ನೆಟ್‌ಫ್ಲಿಕ್ಸ್ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಲಿದೆ. “ಆತನಲ್ಲಿ ಉತ್ತಮ ನಟನಾಗಿ ಗುರುತಿಸಿಕೊಳ್ಳುವ ಹಸಿವಿದೆ. ಇದರಿಂದಾಗಿ ಪಾತ್ರಕ್ಕೆ ಸಿಗಬೇಕಾದ ನ್ಯಾಯ ಸಿಕ್ಕಿದ್ದು, ಈ ಸಿನಿಮಾದ ನಂತರ ಕಾರ್ತೀಕ್ ಬಗ್ಗೆ ಉದ್ಯಮದಲ್ಲಿ ಖಂಡಿತ ಒಳ್ಳೆಯ ಮಾತುಗಳು ಕೇಳಿಬರಲಿವೆ” ಎಂದು ತಮ್ಮ ಚಿತ್ರದ ನಾಯಕನ ಬಗ್ಗೆ ಹೇಳುತ್ತಾರೆ ನಿರ್ದೇಶಕ ರಾಮ್‌. ಮೃಣಾಲ್ ಠಾಕೂರ್‌, ಅಮೃತಾ ಸುಭಾಷ್‌, ವಿಕಾಸ್ ಕುಮಾರ್, ವಿಶ್ವಜಿತ್ ಪ್ರಧಾನ್ ಚಿತ್ರದ ಇತರೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಟ ಕಾರ್ತೀಕ್ ಆರ್ಯನ್‌ ವೃತ್ತಿ ಬದುಕಿಗೆ ಈ ಸಿನಿಮಾ ತಿರುವು ನೀಡುವ ಸಾಧ್ಯತೆಗಳಿವೆ. ‘ಭೂಲ್‌ ಭುಲಯ್ಯಾ’ ಸರಣಿ, ‘ಫ್ರೆಡ್ಡಿ’, ಹನ್ಸಲ್ ಮೆಹ್ತಾರ ‘ಕ್ಯಾಪ್ಟನ್ ಇಂಡಿಯಾ’ ತೆರೆಗೆ ಸಿದ್ಧವಾಗುತ್ತಿರುವ ಕಾರ್ತೀಕ್‌ರ ಇತರೆ ಸಿನಿಮಾಗಳು.

LEAVE A REPLY

Connect with

Please enter your comment!
Please enter your name here