ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ ‘ಪೊನ್ನಿಯನ್ ಸೆಲ್ವನ್’ ಐತಿಹಾಸಿಕ ಸಿನಿಮಾದ ಪ್ರಮುಖ ಪಾತ್ರಗಳ ಫಸ್ಟ್‌ಲುಕ್ ಪೋಸ್ಟರ್‌ಗಳು ಬಿಡುಗಡೆಯಾಗಿವೆ. ಎರಡು ಪಾರ್ಟ್‌ಗಳಲ್ಲಿ ಸಿನಿಮಾ ತಯಾರಾಗುತ್ತಿದ್ದು, ಮೊದಲ ಪಾರ್ಟ್ ಈ ವರ್ಷ ಸೆಪ್ಟೆಂಬರ್ 30ರಂದು ತೆರೆಕಾಣಲಿದೆ.
ಲೇಖಕ ಕಲ್ಕಿ ಕೃಷ್ಣಮೂರ್ತಿ ಅವರ ಕೃತಿ ಆಧರಿಸಿ ಮಣಿರತ್ನಂ ನಿರ್ದೇಶಿಸುತ್ತಿರುವ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾದ ಫಸ್ಟ್‌ಲುಕ್ ಪೋಸ್ಟರ್‌ಗಳು ಬಿಡುಗಡೆಯಾಗಿವೆ. ಕಲ್ಕಿ ಕೃಷ್ಣಮೂರ್ತಿ ಅವರ ಈ ಕೃತಿ, ‘ಅರುಲ್‌ಮೋಝಿ ವರ್ಮನ್’ ಚರಿತ್ರೆಯ ಕುರಿತಾಗಿದೆ. ರಾಜರಾಜಚೋಳ ಎಂದು ಕರೆಸಿಕೊಂಡಿದ್ದ ತಂಜಾವೂರಿನ ಬೃಹದೇಶ್ವರ ದೇವಾಲಯ ಕಟ್ಟಿದ ಚಕ್ರವರ್ತಿ. ಇದು ಭಾರತದ ಬಹುದೊಡ್ಡ ದೇವಾಲಯಗಳಲ್ಲೊಂದು. ಮದ್ರಾಸ್ ಟಾಕೀಸ್ ಮತ್ತು ಲೈಕಾ ಪ್ರೊಡಕ್ಷನ್ಸ್ ನಿರ್ಮಿಸುತ್ತಿರುವ ಈ ಐತಿಹಾಸಿಕ ಸಿನಿಮಾದಲ್ಲಿ ಜನಪ್ರಿಯ ಕಲಾವಿದರು ಹಾಗೂ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ.
ಪೋಸ್ಟರ್‌ಗಳು ಪ್ರಮುಖ ಪಾತ್ರಗಳನ್ನು ಪರಿಚಯಿಸುತ್ತವೆ. ಕಲಾವಿದರಾದ ವಿಕ್ರಂ, ಕಾರ್ತಿ, ಐಶ್ವರ್ಯಾ ರೈ, ಜಯಂ ರವಿ ಮತ್ತು ತ್ರಿಷಾ ರಾಜಪೋಷಾಕಿನಲ್ಲಿ ಗಮನ ಸೆಳೆಯುತ್ತಿದ್ದಾರೆ. ನಿರ್ದೇಶಕ ಮಣಿರತ್ನಂ ಅವರು ಬೆಳ್ಳಿತೆರೆಯ ಮೇಲೆ ಹೊಸತೊಂದು ಲೋಕ ಸೃಷ್ಟಿಸಲಿದ್ದಾರೆ ಎನ್ನುವುದನ್ನು ಈ ಪೋಸ್ಟರ್‌ಗಳು ಸೂಚಿಸುತ್ತವೆ. ಐತಿಹಾಸಿಕ ದೇವಾಲಯಗಳಲ್ಲಿ ಚಿತ್ರೀಕರಣಕ್ಕೆ ಅನುಮತಿ ಇಲ್ಲ. ಹಾಗಾಗಿ ಚಿತ್ರದ ಬಹುಪಾಲು ಬಜೆಟ್ ದೇವಾಲಯಗಳ ಸೆಟ್‌ಗಳನ್ನು ಹಾಕಲು ವಿನಿಯೋಗಿಸಲಾಗಿದೆ. ಎ.ಆರ್.ರೆಹಮಾನ್ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ. ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ. ಎರಡು ಪಾರ್ಟ್‌ಗಳಲ್ಲಿ ಸಿನಿಮಾ ತಯಾರಾಗುತ್ತಿದ್ದು, ಈ ವರ್ಷ ಸೆಪ್ಟೆಂಬರ್ 30ರಂದು ಮೊದಲ ಪಾರ್ಟ್ ಬಿಡುಗಡೆಯಾಗಲಿದೆ.