ಚಿತ್ರನಿರ್ದೇಶಕ ಮಣಿರತ್ನಂ ನಿರ್ಮಾಣದ ‘ಪ್ಯಾರಡೈಸ್’ ಮಲಯಾಳಂ ಚಿತ್ರ ಬುಸಾನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರೀಮಿಯರ್ ಆಗಲಿದೆ. ಶ್ರೀಲಂಕಾ ಮೂಲದ ಪ್ರಸನ್ನ ವಿಥನಗೆ ನಿರ್ದೇಶನದ ಚಿತ್ರದ ಪ್ರಮುಖ ಪಾತ್ರಗಳಲ್ಲಿ ರೋಷನ್ ಮ್ಯಾಥ್ಯೂಸ್ ಮತ್ತ್ ದರ್ಶನಾ ರಾಜೇಂದ್ರನ್ ನಟಿಸಲಿದ್ದಾರೆ.
ಖ್ಯಾತ ಚಿತ್ರನಿರ್ದೇಶಕ ಮಣಿರತ್ನಂ ನಿರ್ಮಿಸಿರುವ ‘ಪ್ಯಾರಡೈಸ್’ ಮಲಯಾಳಂ ಚಿತ್ರ ಬುಸಾನ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರೀಮಿಯರ್ ಆಗಲಿದೆ. ರೋಷನ್ ಮ್ಯಾಥ್ಯೂಸ್ ಮತ್ತು ದರ್ಶನಾ ರಾಜೇಂದ್ರನ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರವು ಅಕ್ಟೋಬರ್ 7ರಂದು ದಕ್ಷಿಣ ಕೊರಿಯಾದ ಚಲನಚಿತ್ರೋತ್ಸವದಲ್ಲಿ ‘ಕಿಮ್ ಜಿಸೋಕ್’ ಪ್ರಶಸ್ತಿಗಾಗಿಯೂ ಸ್ಪರ್ಧಿಸಲಿದೆ. ‘ಪ್ಯಾರಡೈಸ್’ ಸಿನಿಮಾವು ಯುವ ಮಲಯಾಳಿ ದಂಪತಿಯ ಕತೆ. ದಂಪತಿ ವಿವಾಹ ವಾರ್ಷಿಕೋತ್ಸವ ಆಚರಿಸಲು ದ್ವೀಪ ರಾಷ್ಟ್ರವೊಂದಕ್ಕೆ ಪ್ರವಾಸಕ್ಕೆ ತೆರಳುತ್ತಾರೆ. ಅನಿರೀಕ್ಷಿತ ಘಟನೆಗಳಿಂದಾಗಿ ಅವರಿಬ್ಬರ ಬದುಕಿನಲ್ಲಿ ಮನಸ್ತಾಪವಾಗಿ ಅವರ ಸಂಬಂಧಗಳು ಪರೀಕ್ಷೆಗೆ ಒಳಪಡುತ್ತವೆ. ಪ್ರೀತಿ, ವಂಚನೆ ಮತ್ತು ಅಪರಾಧದ ಕುರಿತು ಈ ಚಿತ್ರದಲ್ಲಿ ಪ್ರಸ್ತಾಪವಾಗುತ್ತದೆ.
https://x.com/MadrasTalkies_/status/1696034384942686426?s=20
ಶ್ರೀಲಂಕಾ ನಿರ್ದೇಶಕ ಪ್ರಸನ್ನ ವಿಥನಗೆ ಅವರು ಚಿತ್ರ ನಿರ್ದೇಶಿಸಿದ್ದು, ‘ಈ ಚಲನಚಿತ್ರವು ನೈಜ ಜೀವನದ ಸಂಬಂಧಗಳು ಮತ್ತು ಅವುಗಳ ಮೇಲೆ ಪರಿಣಾಮ ಬೀರುವ ಅಂಶಗಳನ್ನು ಒಳಗೊಂಡಿದೆ’ ಎಂದಿದ್ದಾರೆ. ಚಿತ್ರವನ್ನು Madras Talkies ಬ್ಯಾನರ್ ಅಡಿಯಲ್ಲಿ ಮಣಿರತ್ನಂ ನಿರ್ಮಿಸಿದ್ದಾರೆ. ಶ್ಯಾಮ್ ಫೆರ್ನಾಂಡೋ ಮತ್ತು ಮಹೇಂದ್ರ ಪೆರೇರಾ ಪೋಷಕ ಪಾತ್ರಗಳಲ್ಲಿದ್ದಾರೆ. ಚಿತ್ರವು ಇಂಗ್ಲಿಷ್, ಮಲಯಾಳಂ, ತಮಿಳು, ಹಿಂದಿ ಮತ್ತು ಸಿಂಹಳ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಪ್ರಸನ್ನ ವಿಥನಗೆ ಅವರ ನಿರ್ದೇಶನದ ‘ಡೆತ್ ಆನ್ ಎ ಫುಲ್ ಮೂನ್ ಡೇ’ (1997) ಮತ್ತು ‘ಆಗಸ್ಟ್ ಸನ್’ (2003) ಸಿನಿಮಾಗಳು ವಿಮರ್ಶಕರು ಹಾಗೂ ಪ್ರೇಕ್ಷಕರ ಅಪಾರ ಮನ್ನಣೆಗೆ ಪಾತ್ರವಾಗಿವೆ.