ನಿರ್ಮಾಪಕ ಆಂಟೋನಿ ಪೆರಂಬವೂರ್‌ ತಮ್ಮ ‘ಮರಕ್ಕರ್’ ಚಿತ್ರವನ್ನು OTTಯಲ್ಲಿ ಬಿಡುಗಡೆ ಮಾಡಲು ಯೋಜಿಸಿದ್ದರು. ಈ ಬಗ್ಗೆ ಪ್ರದರ್ಶಕರಿಂದ ವಿರೋಧ ವ್ಯಕ್ತವಾಗಿತ್ತು. ಕೇರಳ ಸಚಿವ ಸಾಜಿ ಚೆರಿಯನ್ ಮಧ್ಯಸ್ಥಿಕೆಯಿಂದ ಸಮಸ್ಯೆ ತಿಳಿಯಾಗಿದೆ. ಡಿಸೆಂಬರ್‌ 2ರಂದು ಸಿನಿಮಾ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ ಎಂದು ಖುದ್ದು ಸಚಿವರೇ ಹೇಳಿದ್ದಾರೆ.

ಮೋಹನ್ ಲಾಲ್‌ ಅಭಿನಯದ ಮಹತ್ವಾಕಾಂಕ್ಷೆಯ ಸಿನಿಮಾ ‘ಮರಕ್ಕರ್ ಅರೇಬಿಕಡಲಿಂಟೆ ಸಿಂಹಂ’ ಮಲಯಾಳಂ ಸಿನಿಮಾ ಮತ್ತೆ ಸುದ್ದಿಯಾಗಿದೆ. ಬಹುತಾರಾಗಣ, ಬಹುಕೋಟಿ ವೆಚ್ಚದ ಈ ಸಿನಿಮಾ ಕಳೆದ ವರ್ಷವೇ ತೆರೆಗೆ ಸಿದ್ಧವಾಗಿತ್ತು. ಕೋವಿಡ್‌ ಕಾರಣದಿಂದ ಸಿನಿಮಾ ಬಿಡುಗಡೆ ವಿಳಂಬವಾಗಿತ್ತು. ನೂರು ಕೋಟಿ ಬಜೆಟ್‌ನ ದುಬಾರಿ ಸಿನಿಮಾ ಆದ್ದರಿಂದ ನಿರ್ಮಾಪಕ ಆಂಟೋನಿ ಪೆರಂಬವೂರ್‌ ಹಣಕಾಸಿನ ವಿಚಾರದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರು. ಅಮೇಜಾನ್ ಪ್ರೈಮ್‌ OTT ದೊಡ್ಡ ಮೊತ್ತದ ಸ್ಟ್ರೀಮಿಂಗ್‌ ರೈಟ್ಸ್‌’ಗೆ ಸಿನಿಮಾ ಖರೀದಿಸಲು ಮುಂದಾದಾಗ ಸಹಜವಾಗಿಯೇ ಅವರು ಓಕೆ ಎಂದಿದ್ದರು. ನಿರ್ಮಾಪಕರ ಹಿತದೃಷ್ಟಿಯಿಂದ ಚಿತ್ರದ ನಿರ್ದೇಶಕ ಪ್ರಿಯದರ್ಶನ್‌ ಮತ್ತು ನಟ ಮೋಹಲ್‌ ಲಾಲ್ ಕೂಡ ಈ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದ್ದರು. ಆದರೆ ನಿರ್ಮಾಪಕರ ನಿರ್ಧಾರ ಪ್ರದರ್ಶಕರಿಗೆ ಅಸಮಾಧಾನ ತಂದಿತ್ತು. ಮತ್ತೊಂದೆಡೆ ಈ ಸಿನಿಮಾವನ್ನು ದೊಡ್ಡ ಪರದೆ ಮೇಲೆ ನೋಡಬೇಕೆನ್ನುವ ಅಭಿಮಾನಿಗಳ ಆಸೆಗೂ ತಣ್ಣೀರೆರಚಿದಂತಾಗಿತ್ತು.

ಈಗ ಅಲ್ಲಿನ ಫಿಲ್ಮ್ ಡೆವಲೆಪ್‌ಮೆಂಟ್ ಕಾರ್ಪೋರೇಷನ್‌ ಮತ್ತು ಚಲನಚಿತ್ರ ಅಕಾಡೆಮಿ ಸಚಿವ ಸಾಜಿ ಚೆರಿಯನ್ ಮಧ್ಯಸ್ಥಿಕೆಯಲ್ಲಿ ಸಮಸ್ಯೆ ತಿಳಿಯಾಗಿದೆ. “ಡಿಸೆಂಬರ್‌ 2ರಂದು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ನಿರ್ಮಾಪಕ ಮತ್ತು ಪ್ರದರ್ಶಕ ಜೊತೆಗಿನ ಮಾತುಕತೆಯ ನಂತರ ಈ ನಿರ್ಧಾರಕ್ಕೆ ಬರಲಾಗಿದೆ. ಈ ವಿಚಾರವಾಗಿ ಚಿತ್ರದ ನಿರ್ಮಾಪಕ ಆಂಟೋನಿ ಪೆರಂಬವೂರ್‌ ಹಣಕಾಸಿನ ವಿಚಾರವಾಗಿ ತಮ್ಮ ಹಿತಾಸಕ್ತಿಯನ್ನು ಬಿಟ್ಟುಕೊಟ್ಟಿದ್ದಾರೆ” ಎಂದಿದ್ದಾರೆ ಸಚಿವ ಚೆರಿಯನ್‌. ಕೋವಿಡ್‌ ಕಾರಣದಿಂದಾಗಿ ಪ್ರಸ್ತುತ ಕೇರಳದಲ್ಲಿ ಶೇ.50ರಷ್ಟು ಥಿಯೇಟರ್‌ ಆಕ್ಯುಪೆನ್ಸಿಗೆ ಅವಕಾಶವಿದೆ. ಇದರಿಂದ ‘ಮರಕ್ಕರ್‌’ನಂತಹ ದೊಡ್ಡ ಸಿನಿಮಾ ಹಣ ಗಳಿಸುವುದು ಕಷ್ಟ. ಇದೇ ಕಾರಣಕ್ಕೆ ನಿರ್ಮಾಪಕ ಆಂಟೋನಿ OTT ಮೊರೆ ಹೋಗಿದ್ದರು. ಇದೀಗ ‘ಮರಕ್ಕರ್‌’ ಸಿನಿಮಾ ವಿಚಾರವಾಗಿ ಸರ್ಕಾರ ಥಿಯೇಟರ್‌ ಆಕ್ಯುಪೆನ್ಸಿಯನ್ನು ಶೇ.75ಕ್ಕೆ ಹೆಚ್ಚಿಸುವ ಸಾಧ್ಯತೆಗಳಿವೆ. ಪ್ರಣವ್ ಮೋಹನ್‌ಲಾಲ್‌, ಅರ್ಜುನ್ ಸರ್ಜಾ, ಸುನೀಲ್ ಶೆಟ್ಟಿ, ಪ್ರಭು, ಮಂಜು ವಾರಿಯರ್, ಕೀರ್ತಿ ಸುರೇಶ್‌, ಸುಹಾಸಿನಿ ಚಿತ್ರದ ಪ್ರಮುಖ ತಾರೆಯರು. ಈ ಸಿನಿಮಾ ಅತ್ಯುತ್ತಮ ಪ್ರಾದೇ‍ಷಿಕ ಭಾಷಾ ಸಿನಿಮಾ, ಅತ್ಯುತ್ತಮ ಸ್ಪೆಷಲ್ ಎಫೆಕ್ಟ್‌, ಅತ್ಯುತ್ತಮ ವಸ್ತ್ರವಿನ್ಯಾಸಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿದೆ.

LEAVE A REPLY

Connect with

Please enter your comment!
Please enter your name here